ಮಂಗಳೂರು: “ಅನಿಲ್ ಕುಮಾರ್ ಎಂಬಾತ ನನ್ನ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ನಿರಂತರವಾಗಿ ಅಪಪ್ರಚಾರ ಮಾಡುತ್ತಿದ್ದಾನೆ. ನನ್ನ ಮೇಲೆ ಆತ ಮಾಡುತ್ತಿರುವ ಕಿಡ್ನಾಪ್, ದೌರ್ಜನ್ಯ ಮತ್ತು ಹಣ ವಸೂಲಿಯ ಆರೋಪಗಳು ಸಂಪೂರ್ಣ ಸುಳ್ಳು. ಇದರ ಹಿಂದೆ ಯಾರೋ ಇದ್ದು, ಇದನ್ನು ತನಿಖೆ ನಡೆಸಿ ಷಡ್ಯಂತ್ರವನ್ನು ಬಯಲಿಗೆಳೆಯಬೇಕು ಎಂದು ಎಂದು ಮಂಗಳೂರಿನ ‘ಅನಿ ಕೆಫೆ’ ಮಾಲೀಕಿ, ಮಂಗಳಮುಖಿ ಅನಿ ಮಂಗಳೂರು ಆಗ್ರಹಿಸಿದ್ದಾರೆ.
ಮಂಗಳೂರಿನ ಪ್ರೆಸ್ಕ್ಲಬ್ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ತಮ್ಮ ಮೇಲೆ ಬಂದಿರುವ ಆರೋಪಗಳ ಬ ಸ್ಪಷ್ಟೀಕರಣ ನೀಡಿದ ಅವರು, ಮೈಸೂರಿನ ಸಬರ್ ಬಸ್ ಸ್ಟ್ಯಾಂಡ್ನಿಂದ ಕಿಡ್ನಾಪ್ ಮಾಡಲಾಗಿದೆ ಎಂಬ ಆರೋಪವನ್ನು ತಳ್ಳಿಹಾಕಿದರು. “ಅಲ್ಲಿನ ಸಿಸಿಟಿವಿ ಚೆಕ್ ಮಾಡಿದರೆ ಸತ್ಯ ಗೊತ್ತಾಗುತ್ತದೆ. ಮಂಗಳೂರು ಅತೀ ಸೂಕ್ಷ್ಮ ಪ್ರದೇಶವಾಗಿದ್ದು, ಇಲ್ಲಿನ ಎಲ್ಲ ಸಿಸಿಟಿವಿಗಳನ್ನು ಪರಿಶೀಲಿಸಿದರೂ ಆತ ತಾನಾಗಿಯೇ ಬಂದಿರುವುದು ಸಾಬೀತಾಗುತ್ತದೆ. ಕಿಡ್ನಾಪ್ ಆಗಿದ್ದರೆ ಆತ ಬಾಡಿಗೆ ಮನೆಯ ಮಾಲೀಕರಿಗೆ ಹೇಳಬಹುದಿತ್ತು. ಕಿಡ್ನಾಪ್ ಆದವನು ಮಂಗಳೂರು-ಮೈಸೂರು ನಡುವೆ 5-6 ಬಾರಿ ಓಡಾಡಿದ್ದು ಹೇಗೆ? ಮೈಸೂರಿನಲ್ಲಿದ್ದಾಗಲೇ ಈ ಬಗ್ಗೆ ದೂರು ನೀಡಬಹುದಿತ್ತಲ್ಲವೇ?” ಎಂದು ಪ್ರಶ್ನಿಸಿದರು.
ಮಮ್ಮಿ ರೀಲ್ಸ್ ಮಾಡಬೇಕು ಎಂದು ಅನಿಲ್ ಕುಮಾರನೇ ಕೇಳುತ್ತಿದ್ದ. ನಾವು ಸಾರ್ವಜನಿಕ ಸ್ಥಳಗಳಲ್ಲಿ ರೀಲ್ಸ್ ಮಾಡಿದ್ದೇವೆ. ಆತನನ್ನು ನಿಜವಾಗಿಯೂ ಕಿಡ್ನಾಪ್ ಮಾಡಿದ್ದರೆ, ಜನನಿಬಿಡ ಪ್ರದೇಶಗಳಲ್ಲಿ ರೀಲ್ಸ್ ಮಾಡುವಾಗಲೇ ಕಿರುಚಬಹುದಿತ್ತಲ್ಲ? ಎಂದು ಪ್ರಶ್ನಿಸಿದರು.
ಸುಪ್ರೀಂ ಕೋರ್ಟ್ನ ನಲ್ಸಾ ಜಡ್ಜ್ಮೆಂಟ್ ಪ್ರಕಾರ, ಒಬ್ಬ ವ್ಯಕ್ತಿ ತನ್ನ ಲಿಂಗ ಗುರುತನ್ನು ತಾನೇ ನಿರ್ಧರಿಸುವ ಹಕ್ಕನ್ನು ಹೊಂದಿದ್ದಾನೆ. ಅನಿಲ್ ಕುಮಾರ್ 18 ವರ್ಷ ಮೇಲ್ಪಟ್ಟವನಾಗಿದ್ದು, ಆತ ಸ್ವತಃ ತಾನು ಮಂಗಳಮುಖಿ ಎಂದು ಒಪ್ಪಿಕೊಂಡು ಸಮಾಜ ಕಲ್ಯಾಣ ಇಲಾಖೆಯ ಮೂಲಕ ದಾಖಲೆಗಳನ್ನು ಮಾಡಿಸಿಕೊಂಡಿದ್ದಾನೆ. ನಲ್ಸಾ ತೀರ್ಪಿನ ಅಡಿಯಲ್ಲಿ ಸಿಗುವ ಹಕ್ಕುಗಳನ್ನು ಆತ ಸಮುದಾಯದ ಸವಲತ್ತು ಪಡೆಯಲು ಬಳಸಿಕೊಂಡಿದ್ದಾನೆ. ಆದರೆ ಈಗ ಅನಿಲ್ ಕುಮಾರ್ ಅದೇ ಕಾನೂನು ಮತ್ತು ಸಮುದಾಯದ ಹೆಸರನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾನೆ. ಆತ ಟ್ರಾನ್ಸ್ಜೆಂಡರ್ (TG) ಕಾರ್ಡ್ ಪಡೆದ ಮೇಲೆ ನನ್ನ ಬಳಿ 3 ಲಕ್ಷ ರೂಪಾಯಿಗೆ ಬೇಡಿಕೆಯಿಟ್ಟು ಬ್ಲ್ಯಾಕ್ಮೇಲ್ ಮಾಡುತ್ತಿದ್ದಾನೆ ಎಂದು ಗಂಭೀರ ಆರೋಪ ಮಾಡಿದರು.
“ಲಿಂಗ ಪರಿವರ್ತನೆಗೆ ರೂಲ್ಸ್-ರೆಗ್ಯೂಲೇಷನ್ಸ್ಗಳಿವೆ, ಅಫಿಡವಿಟ್ ಬೇಕು, ಕೌನ್ಸೆಲಿಂಗ್ ಆಗಬೇಕು ಮತ್ತು ಹೆತ್ತವರ ಸಹಿ ಇರಬೇಕು. ಇಷ್ಟೆಲ್ಲ ಕಾನೂನು ಪ್ರಕ್ರಿಯೆ ಇರುವಾಗ ಯಾರು ಸುಮ್ಮನೆ ಸರ್ಜರಿ ಮಾಡುತ್ತಾರೆ? ಸರ್ಜರಿಯೇ ಆಗದ ವ್ಯಕ್ತಿಯನ್ನು ಲಕ್ಷ ಲಕ್ಷ ಕೊಟ್ಟು ಸೆಕ್ಸ್ ವರ್ಕ್ಗೆ ಬಳಸಿಕೊಳ್ಳುತ್ತಾರೆ? ಆತನೇ ನನಗೆ ವಾಟ್ಸ್ಯಾಪ್ ಮತ್ತು ಇನ್ಸ್ಟಾಗ್ರಾಮ್ನಲ್ಲಿ ಮೆಸೇಜ್ ಮಾಡಿ ಲೊಕೇಶನ್ ಕೇಳಿದ್ದಾನೆ. ಇದಕ್ಕೆ ಸಂಬಂಧಿಸಿದ ವಾಯ್ಸ್ ನೋಟ್ ಮತ್ತು ದಾಖಲೆಗಳು ನನ್ನ ಬಳಿಯಿವೆ,” ಎಂದು ಸಾಕ್ಷ್ಯಗಳನ್ನು ಪ್ರದರ್ಶಿಸಿದರು.
ಅಪ್ಪ-ಅಮ್ಮ ಇಲ್ಲ, ಊಟಕ್ಕೆ ಗತಿ ಇಲ್ಲ ಎಂದು ಹೇಳಿದ್ದಕ್ಕೆ ಮರುಗಿ ನಾನು ಆಶ್ರಯ ಕೊಟ್ಟಿದ್ದೆ. 5-6 ತಿಂಗಳು ನಮ್ಮಲ್ಲೇ ಉಂಡು ಹೋಗಿದ್ದಾನೆ. ಈಗ ಅಪ್ಪ-ಅಮ್ಮ ಇದ್ದಾರೆ ಎಂದು ಹೇಳಿದ ಮೇಲೆಯೇ ಅವನು ಸುಳ್ಳು ಹೇಳುತ್ತಿದ್ದಾನೆ ಎಂದು ಗೊತ್ತಾಗಿದೆ ಎಂದರು.
“ಅನಿಲ್ ಕುಮಾರ್ ಮಂಗಳೂರಿಗೆ ಬರುವ ಮೊದಲೇ ಮೈಸೂರಿನಲ್ಲಿ ಮಂಗಳಮುಖಿಯರಂತೆ ಉಡುಪು ಧರಿಸಿ ಓಡಾಡುತ್ತಿದ್ದ ಎನ್ನುವುದಕ್ಕೆ ಪುರಾವೆಗಳಿವೆ. ಗಂಡಸಾಗಿದ್ದವನು ಎದೆಯುಬ್ಬಿಸಿ ಮನೆಯಲ್ಲೇ ಇರಬಹುದಿತ್ತು. ಅದನ್ನು ಬಿಟ್ಟು ನನ್ನ ಜೊತೆ ಸಾರ್ವಜನಿಕ ಸ್ಥಳಗಳಲ್ಲಿ ಯಾಕೆ ರೀಲ್ಸ್ ಮಾಡಬೇಕಿತ್ತು? ಎಂದು ಅನಿ ಪ್ರಶ್ನಿಸಿದರು.
“ಆತ ಮಂಗಳಮುಖಿ ಸಮುದಾಯದ ಆಧಾರ್ ಮತ್ತು ಟಿಜಿ ಕಾರ್ಡ್ ಮಾಡಿಸಿಕೊಂಡು ದುರುಪಯೋಗ ಪಡಿಸಿರುವ ಬಗ್ಗೆ ಸಂಶಯ ಬಂದ ತಕ್ಷಣ, ಇದೇ ತಿಂಗಳ 10ರಂದು ನಾನು ಸಂಬಂಧಪಟ್ಟ ಇಲಾಖೆಗೆ ದೂರು ನೀಡಿದ್ದೇನೆ. ನಮ್ಮ ಸಮುದಾಯದ ಸವಲತ್ತುಗಳು ದುರುಪಯೋಗವಾಗುತ್ತಿವೆ, ಆತನ ದಾಖಲೆಗಳನ್ನು ಕ್ಯಾನ್ಸಲ್ ಮಾಡಬೇಕು ಎಂದು ವಿನಂತಿಸಿದ್ದೇನೆ ಎಂದರು.
“ನನ್ನ ಸಾಧನೆಗೆ ಕಪ್ಪುಚುಕ್ಕೆ ಹಚ್ಚಬೇಡಿ”: ಕಣ್ಣೀರಿಟ್ಟ ಅನಿ
ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ ತೀವ್ರ ಭಾವುಕರಾದ ಅನಿ, “ನಾನು ಕೆಫೆ ಆರಂಭಿಸಿದಾಗ ಯಾರೂ ಸಪೋರ್ಟ್ ಮಾಡಲಿಲ್ಲ. ರಿಕ್ಷಾ ಓಡಿಸುವಾಗ ಮಂಗಳಮುಖಿಯರಿಗೆ ಮತ್ತು ಗರ್ಭಿಣಿಯರಿಗೆ ಉಚಿತವಾಗಿ ಸೇವೆ ನೀಡಿದ್ದೆ. ಆಗ ಯಾರೂ ಮೆಚ್ಚುಗೆ ಸೂಚಿಸಲಿಲ್ಲ. ನನ್ನ ಸಾಧನೆಯನ್ನು ನೋಡಿ ಮೆಚ್ಚುವ ಬದಲು, ಇಲ್ಲಸಲ್ಲದ ಆರೋಪ ಮಾಡಿ ʻಕಪ್ಪುಚುಕ್ಕೆ’ ಎಂದು ಕರೆಯುವುದು ಎಷ್ಟು ಸರಿ? ಈಗ ನನಗೆ ಹೊರಗೆ ಮುಖ ತೋರಿಸಲು ಸಾಧ್ಯವಾಗುತ್ತಿಲ್ಲ ನಾಳೆ ನನ್ನಂತೆ ದುಡಿದು ತಿನ್ನುವ ನನ್ನ ಸಮುದಾಯದ ಇತರರಿಗೂ ಆಗಬಾರದು,” ಎಂದರು.
“ನಮ್ಮ ಸಮುದಾಯದಲ್ಲಿ ಇಂದು ಅನೇಕರು ಡಾಕ್ಟರ್, ಲಾಯರ್ ಆಗಿದ್ದಾರೆ. ನಾನು ಇಂದು ಅನಿ ಕೆಫೆ ಮಾಡಿದ್ದೇನೆ. ಅದನ್ನೇ ಇತರರಿಗೂ ಮಾಡಲು ಹೇಳಲು ಸಾಧ್ಯವಿಲ್ಲ. ಅದೇ ರೀತಿ ನಾನು ಯಾಕೆ ಡಾಕ್ಟರ್ ಅಥವಾ ಪೊಲೀಸ್ ಆಗಲಿಲ್ಲ ಎಂದು ಪ್ರಶ್ನಿಸುವುದು ಕೂಡ ಸರಿಯಲ್ಲ. ಮಂಗಳಮುಖಿಯರು ಸಮಾಜದ ಮುಖ್ಯವಾಹಿನಿಗೆ ಬರಲಿ, ತಲೆ ಎತ್ತಿ ನಡೆಯಲಿ ಎಂಬ ಉದ್ದೇಶದಿಂದ ನಾನು ವಿಡಿಯೋಗಳನ್ನು ಮಾಡುತ್ತೇನೆ. ರೀಲ್ಸ್ ಮಾಡುವುದು ತಪ್ಪಾ? ನಮ್ಮ ಸಮುದಾಯದ ಏಳಿಗೆಗಾಗಿ ವಿಡಿಯೋ ಮಾಡುವುದು ತಪ್ಪಾ?” ಎಂದು ಪ್ರಶ್ನಿಸಿದರು.
“ಅನಿಲ್ ಕುಮಾರ್ ಹಿಂದೆ ನಿಂತು ಈ ರೀತಿ ಮಾಡಿಸುತ್ತಿರುವ ವ್ಯಕ್ತಿ ಯಾರು? ಆ ವ್ಯಕ್ತಿಯಿಂದಾಗಿ ಇಂದು ನಮ್ಮ ಸಮುದಾಯದವರು ತಲೆ ತಗ್ಗಿಸುವಂತಾಗಿದೆ. ಈ ಪ್ರಕರಣಕ್ಕೆ ಒಂದು ತಾರ್ಕಿಕ ಅಂತ್ಯ ಸಿಗಲೇಬೇಕು. ನನ್ನ ವಿರುದ್ಧ ಅಪಪ್ರಚಾರ ಮಾಡುತ್ತಿರುವವರ ವಿರುದ್ಧ ಮತ್ತು ಈ ಷಡ್ಯಂತ್ರದ ಹಿಂದಿರವವರ ವಿರುದ್ಧ ಪೊಲೀಸರು ಕಠಿಣ ತನಿಖೆ ನಡೆಸಬೇಕು. ನಮಗೆ ನ್ಯಾಯ ಸಿಗಬೇಕು,” ಎಂದು ಅನಿ ಒತ್ತಾಯಿಸಿದರು.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









