ಮಂಗಳೂರು : ರಾಜ್ಯ ರಾಜಧಾನಿ ಬೆಂಗಳೂರು ಹಾಗೂ ಕರಾವಳಿ ನಗರಿ ಮಂಗಳೂರು ನಡುವೆ ಅತಿವೇಗದ ರೈಲು ಸಂಪರ್ಕ ಕಲ್ಪಿಸುವ ಮಹತ್ವಾಕಾಂಕ್ಷೆಯ ಯೋಜನೆ ಈಗ ಅಂತಿಮ ಹಂತಕ್ಕೆ ತಲುಪಿದೆ. ಪ್ರಕೃತಿ ಸೌಂದರ್ಯದ ಜೊತೆಗೆ ಅತ್ಯಂತ ಕಠಿಣ ಭೂಪ್ರದೇಶವೆನಿಸಿರುವ ಸಕಲೇಶಪುರ ಮತ್ತು ಸುಬ್ರಹ್ಮಣ್ಯ ರಸ್ತೆ ನಡುವಿನ 55 ಕಿಲೋಮೀಟರ್ ಉದ್ದದ ಘಾಟಿ ವಿಭಾಗದಲ್ಲಿ ಜೂನ್ ಕೊನೆಯ ವಾರದಲ್ಲಿ ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿನ ಪ್ರಾಯೋಗಿಕ ಸಂಚಾರ (ಟ್ರಯಲ್ ರನ್) ನಡೆಸಲು ರೈಲ್ವೆ ಇಲಾಖೆ ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದೆ.
ಅತ್ಯಂತ ಕಡಿದಾದ ತಿರುವುಗಳನ್ನು ಹೊಂದಿರುವ ಹಾಸನ-ಮಂಗಳೂರು ರೈಲ್ವೆ ಮಾರ್ಗದ ಈ ಘಾಟ್ ಪ್ರದೇಶದಲ್ಲಿ ಪ್ರಸ್ತುತ ರೈಲುಗಳ ಗರಿಷ್ಠ ವೇಗವನ್ನು ಗಂಟೆಗೆ 30 ಕಿಲೋಮೀಟರ್ಗೆ ಸೀಮಿತಗೊಳಿಸಲಾಗಿದೆ. ಸುರಕ್ಷತೆಯ ದೃಷ್ಟಿಯಿಂದ ಈ ಮಾರ್ಗದಲ್ಲಿ ಚಲಿಸುವ ವಂದೇ ಭಾರತ್ ರೈಲಿಗೆ ವಿಶೇಷವಾದ ‘ಸ್ವಯಂಚಾಲಿತ ತುರ್ತು ಬ್ರೇಕಿಂಗ್’ (AEB) ತಂತ್ರಜ್ಞಾನವನ್ನು ಅಳವಡಿಸುವುದು ಕಡ್ಡಾಯವಾಗಿದೆ. ಚೆನ್ನೈನ ಇಂಟಿಗ್ರಲ್ ಕೋಚ್ ಫ್ಯಾಕ್ಟರಿಯಲ್ಲಿ (ICF) ಈ ವಿಶೇಷ ಬ್ರೇಕಿಂಗ್ ವ್ಯವಸ್ಥೆಯನ್ನು ರೈಲಿಗೆ ಅಳವಡಿಸುವ ಕಾರ್ಯ ಪ್ರಗತಿಯಲ್ಲಿದ್ದು, ಮುಂದಿನ ವಾರದಲ್ಲಿ ಈ ವಿಶೇಷ ರೇಕ್ ಕರ್ನಾಟಕಕ್ಕೆ ಬರಲಿದೆ.
ಈ ಸುರಕ್ಷತಾ ವ್ಯವಸ್ಥೆಯು ರೈಲು ನಿಗದಿತ ವೇಗದ ಮಿತಿಯನ್ನು ಮೀರಿದ ತಕ್ಷಣವೇ ಸ್ವಯಂಚಾಲಿತವಾಗಿ ಬ್ರೇಕ್ ಅನ್ವಯಿಸಿ ವೇಗವನ್ನು ನಿಯಂತ್ರಣಕ್ಕೆ ತರುತ್ತದೆ. ರೈಲ್ವೆ ಸಚಿವಾಲಯದ ಸಂಶೋಧನಾ ವಿನ್ಯಾಸ ಮತ್ತು ಗುಣಮಟ್ಟ ಸಂಸ್ಥೆಯು (RDSO) ಈ ಇಡೀ ಪ್ರಾಯೋಗಿಕ ಪರೀಕ್ಷೆಯ ಮೇಲ್ವಿಚಾರಣೆ ನಡೆಸಲಿದೆ. ಈಗಾಗಲೇ ಜೂನ್ ಎರಡನೇ ವಾರದಲ್ಲಿ ಐಸಿಎಫ್ ಮತ್ತು ಎಲ್ಹೆಚ್ಬಿ ಬೋಗಿಗಳನ್ನು ಬಳಸಿ 5 ದಿನಗಳ ಕಾಲ ಯಶಸ್ವಿಯಾಗಿ 5 ಟ್ರಿಪ್ಗಳ ತಾಂತ್ರಿಕ ಪರೀಕ್ಷೆಗಳನ್ನು ಪೂರ್ಣಗೊಳಿಸಲಾಗಿದ್ದು, ಎಲ್ಲಾ ಮಾನದಂಡಗಳು ಯಶಸ್ವಿಯಾಗಿವೆ ಎಂದು ನೈಋತ್ಯ ರೈಲ್ವೆಯ ಮೈಸೂರು ವಿಭಾಗದ ವ್ಯವಸ್ಥಾಪಕರಾದ ಮುದಿತ್ ಮಿತ್ತಲ್ ತಿಳಿಸಿದ್ದಾರೆ.
ಡಿಸೆಂಬರ್ 2025 ರಲ್ಲೇ ರೈಟ್ಸ್ (RITES) ಸಂಸ್ಥೆಯ ನೇತೃತ್ವದಲ್ಲಿ ಸಕಲೇಶಪುರದಿಂದ ಸುಬ್ರಹ್ಮಣ್ಯ ರಸ್ತೆವರೆಗಿನ ಈ ಕಠಿಣ ಮಾರ್ಗದ ವಿದ್ಯುದೀಕರಣ ಪ್ರಕ್ರಿಯೆ ಸಂಪೂರ್ಣಗೊಂಡಿತ್ತು. ಈಗ ನಡೆಯಲಿರುವ ವಂದೇ ಭಾರತ್ ಪ್ರಾಯೋಗಿಕ ಸಂಚಾರ ಯಶಸ್ವಿಯಾದರೆ, ಆರ್ಡಿಎಸ್ಒ ರೈಲ್ವೆ ಮಂಡಳಿಗೆ ಅಂತಿಮ ವರದಿ ಸಲ್ಲಿಸಲಿದೆ. ಹಸಿರು ನಿಶಾನೆ ಸಿಕ್ಕ ತಕ್ಷಣವೇ ಬೆಂಗಳೂರು-ಮಂಗಳೂರು ನಡುವಿನ ವಂದೇ ಭಾರತ್ ರೈಲು ಸೇವೆ ಅಧಿಕೃತವಾಗಿ ಆರಂಭವಾಗಲಿದ್ದು, ಕರಾವಳಿ ಜನರಿಗೆ ರಾಜಧಾನಿಯ ಪ್ರಯಾಣ ಅತ್ಯಂತ ಸುಗಮ, ವೇಗ ಮತ್ತು ಐಷಾರಾಮಿಯಾಗಲಿದೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









