ಉಡುಪಿ : ಉಡುಪಿಯ ಖ್ಯಾತ ಉದ್ಯಮಿ ಮುದರಂಗಡಿಯ ಡೇವಿಡ್ ಡಿಸೋಜ ಅವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆಯಾಗಿದ್ದು, ತನಿಖೆ ಚುರುಕುಗೊಳಿಸಿರುವ ಪೊಲೀಸರು ಬಂಧಿತ ಎಲ್ಲಾ ಆರೋಪಿಗಳ ಮೇಲೆ ಕರ್ನಾಟಕ ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆಯ (ಕೋಕಾ) ಅಡಿಯಲ್ಲಿ ಕ್ರಮ ಜರುಗಿಸಿದ್ದಾರೆ. ಈ ಕುರಿತಾದ ಸಮಗ್ರ ಕಡತ ಹಾಗೂ ಆರೋಪಿಗಳನ್ನು ಮೈಸೂರಿನಲ್ಲಿರುವ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಹಾಗೂ ವಿಶೇಷ ಕೋಕಾ ನ್ಯಾಯಾಲಯದ ಮುಂದೆ ಹಾಜರುಪಡಿಸಿ ಹಸ್ತಾಂತರಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್ ಮಾಹಿತಿ ನೀಡಿದ್ದಾರೆ.
ಕಳೆದ ಆಗಸ್ಟ್ 7ರಂದು ದ್ವಿಚಕ್ರ ವಾಹನದಲ್ಲಿ ಬಂದ ದುಷ್ಕರ್ಮಿಗಳು ಉದ್ಯಮಿ ಡೇವಿಡ್ ಡಿಸೋಜ ಅವರ ಮೇಲೆ ಪಿಸ್ತೂಲ್ನಿಂದ ಗುಂಡು ಹಾರಿಸಿ ಬರ್ಬರವಾಗಿ ಕೊಲೆಗೈದಿದ್ದರು. ಈ ಗಂಭೀರ ಕೃತ್ಯದ ಕುರಿತು ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕವಾಗಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿತ್ತು. ಪ್ರಕರಣದ ಜಾಡು ಹಿಡಿದು ಕಾರ್ಯಾಚರಣೆ ನಡೆಸಿದ ಪೊಲೀಸರು, ವಿವಿಧ ರಾಜ್ಯಗಳ ಹಾಗೂ ಸ್ಥಳೀಯ ಪ್ರಮುಖ ಆರೋಪಿಗಳಾದ ರಾಜು ಫಾಜಿ ಸುಭೋದ್, ಅನ್ನೋಲ್ ರಸ್ತೋಗಿ, ಜಿಯಾಹುಲ್ ವಜೂಲ್ ಶೇಖ್, ಚಿರಾಗ್ ಪೂಜಾರಿ, ಮಹಮ್ಮದ್ ಇರ್ಷಾದ್, ಸದಾನಂದ ದೇವಾಡಿಗ, ಕಿಶೋರ್ ರಾಮ ಪೂಜಾರಿ, ಸೂರಜ್ ಕುಮಾರ್, ಲೋಕೇಶ ತೇಜ ಕೊಠಾರಿ ಹಾಗೂ ಅನೂಜ್ ಕುಮಾರ್ ಕಮಲೇಶ್ವರ ಪ್ರಸಾದ್ ಪಟೇಲ್ ಸೇರಿದಂತೆ ಹಲವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಕೃತ್ಯದ ಮುಖ್ಯ ಸಂಚುಕೋರ ಎನ್ನಲಾದ ಭೂಗತ ಪಾತಕಿ ಹೇಮಂತ್ ಪೂಜಾರಿ ತಲೆಮರೆಸಿಕೊಂಡಿದ್ದು, ಆನ್ಲೈನ್ ಜಾಲದ ಮೂಲಕ ಕೃತ್ಯ ಎಸಗಿರುವುದು ತನಿಖೆಯಿಂದ ಬಯಲಾಗಿದೆ.
ಬಂಧಿತರು ಹಾಗೂ ತಲೆಮರೆಸಿಕೊಂಡಿರುವ ಭೂಗತ ಪಾತಕಿ ಹೇಮಂತ್ ಪೂಜಾರಿ ಪರಸ್ಪರ ಕೈಜೋಡಿಸಿ ಸಂಘಟಿತ ಅಪರಾಧ ಕೃತ್ಯ ಎಸಗಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ, ಈ ಪ್ರಕರಣಕ್ಕೆ ಕೋಕಾ ಕಾಯ್ದೆಯನ್ನು ಅನ್ವಯಿಸಲು ಕೋರಿ ಉಡುಪಿ ಎಸ್ಪಿ ಮೂಲಕ ಮಂಗಳೂರು ಪಶ್ಚಿಮ ವಲಯ ಐಜಿಪಿಯವರಿಗೆ ಮನವಿ ಸಲ್ಲಿಸಲಾಗಿತ್ತು. ಮನವಿಯನ್ನು ಪುರಸ್ಕರಿಸಿದ ಹಿರಿಯ ಅಧಿಕಾರಿಗಳು ಕೋಕಾ ಕಾಯ್ದೆಯಡಿ ತನಿಖೆ ನಡೆಸಲು ಅಧಿಕೃತ ಅನುಮತಿ ನೀಡಿದ್ದಾರೆ. ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿರುವ ಎಲ್ಲ ಆರೋಪಿಗಳ ಮತ್ತು ಕಡತದ ಮುಂದಿನ ಕಾನೂನು ಪ್ರಕ್ರಿಯೆಗಳನ್ನು ಮೈಸೂರು ವಿಶೇಷ ಕೋಕಾ ನ್ಯಾಯಾಲಯಕ್ಕೆ ವರ್ಗಾಯಿಸಲಾಗಿದ್ದು, ಈ ಪ್ರಕರಣದ ಮುಂದಿನ ತನಿಖೆಯ ಜವಾಬ್ದಾರಿಯನ್ನು ಕಾರ್ಕಳ ಸಹಾಯಕ ಪೊಲೀಸ್ ಅಧೀಕ್ಷಕಿ ಇಶಿತಾ ಗುಪ್ತಾ ಅವರಿಗೆ ವಹಿಸಲಾಗಿದೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









