ತನ್ನ ಸಾಧನೆಗೆ ಶಾಲೆ, ಅಲ್ಲಿನ ಶಿಕ್ಷಣ, ಪೋಷಕರ ತ್ಯಾಗ ಹಾಗೂ ಟ್ಯೂಷನ್‍ ಸಹಕಾರ ಕಾರಣ: ಸುದರ್ಶನ್‍

3:10 PM, Monday, May 7th, 2018
Share
1 Star2 Stars3 Stars4 Stars5 Stars
(No Ratings Yet)
Loading...

sslc-marksಬೆಂಗಳೂರು: ರಾಜ್ಯದಲ್ಲಿ 625ಕ್ಕೆ 625 ಅಂಕ ಪಡೆದಿರುವ ವಿದ್ಯಾರ್ಥಿ ಕೆ.ಎಸ್‍. ಸುದರ್ಶನ್ ಈ ತನ್ನ ಸಾಧನೆಗೆ ಶಾಲೆ, ಅಲ್ಲಿನ ಶಿಕ್ಷಣ, ಪೋಷಕರ ತ್ಯಾಗ ಹಾಗೂ ಟ್ಯೂಷನ್‍ ಸಹಕಾರ ಕಾರಣ ಎಂದು ಹೇಳಿಕೊಂಡಿದ್ದಾನೆ.

ಬೆಂಗಳೂರಿನ ಅಶೋಕನಗರದ ಹೋಲಿ ಚೈಲ್ಡ್ ಇಂಗ್ಲಿಷ್‍ ಹೈಸ್ಕೂಲ್‍ ವಿದ್ಯಾರ್ಥಿಯಾಗಿರುವ ಸುದರ್ಶನ್‍ ಕಳೆದ 10 ವರ್ಷದಿಂದ ಬೆಂಗಳೂರಿನಲ್ಲಿ ನೆಲೆಸಿದ್ದು, ವಿಶೇಷ ಅಂದರೆ ಮೊದಲ ತರಗತಿಯಿಂದಲೂ ಪ್ರಥಮ ಸ್ಥಾನ ಪಡೆಯುತ್ತಲೇ ಬಂದಿದ್ದಾನೆ. ಈ ಬಾರಿಯೂ ಕೂಡ ಹೆಚ್ಚು ಅಂಕ ನಿರೀಕ್ಷಿಸುವ ಜತೆಗೆ ಶೇ.100ರಷ್ಟು ಅಂಕ ಗಳಿಸುವ ನಿರೀಕ್ಷೆ ಹೊಂದಿದ್ದೆ ಎಂದು ಹೇಳಿಕೊಂಡಿದ್ದಾನೆ.

ತಂದೆ ಶ್ರೀನಾಥ್ ದಿಲ್ಲಿಯಲ್ಲಿ ಇಂಜಿನಿಯರ್‍ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ತಾಯಿ ಮಂಜುಳಾ ಬೆಂಗಳೂರಿನಲ್ಲಿ ಖಾಸಗಿ ಕಂಪನಿಯೊಂದರಲ್ಲಿ ಮೆಡಿಕಲ್‍ ಟ್ರಾನ್ಸ್‌‌‌ಕ್ರಿಪ್ಶನ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕೋಲಾರ ಜಿಲ್ಲೆ ಯಗುಕೋಟೆ ಮೂಲದವರಾದ ಪಾಲಕರು ಮಗನಿಗಾಗಿ ದಿನದ ದೊಡ್ಡ ಪಾಲನ್ನು ಮೀಸಲಿಟ್ಟಿದ್ದು, ಪುತ್ರನ ಸಾಧನೆಗೆ ತಾಯಿ ಮಂಜುಳಾ ಅಪಾರ ಸಂತಸ ವ್ಯಕ್ತಪಡಿಸಿದ್ದಾರೆ.

ಮಗನನ್ನು ಇಂಜಿನಿಯರ್‍ ಮಾಡುವ ಕನಸು ಕಾಣುತ್ತಿದ್ದು, ಆತನ ಆಸಕ್ತಿ ಕೂಡ ಅದೇ ಆಗಿದೆ ಎನ್ನುವ ಮಂಜುಳಾ, ಮಗನಿಗಾಗಿ ಯಾವುದೇ ತ್ಯಾಗಕ್ಕೂ ಸಿದ್ಧ. ಎಲೆಕ್ಟ್ರಾನಿಕ್ಸ್‌‌ ಇಂಜಿನಿಯರ್ ಆಗಲಿ ಎನ್ನುವುದು ನಮ್ಮ ಆಶಯವಾಗಿದ್ದು, ಆತ ಏನು ಓದುತ್ತೇನೆ ಎಂದರೂ, ಓದಿಸಲು ನಾವು ಸಿದ್ಧ ಎಂದಿದ್ದಾರೆ.

ಮಾಧ್ಯಮದ ಜತೆ ಅನುಭವ ಹಂಚಿಕೊಂಡ ಸುದರ್ಶನ್, 625ನ್ನು ನಿರೀಕ್ಷಿಸಿದ್ದೆ, ಬಂದಿದ್ದಕ್ಕೆ ಸಂತೋಷ ಆಗಿದೆ. 620ರ ಮೇಲೆ ಎಷ್ಟೇ ಬಂದಿದ್ದರೂ ಸಂತೋಷ ಅಂದುಕೊಂಡಿದ್ದೆ. ಪಿಯುಸಿಯಲ್ಲಿ ವಿಜ್ಞಾನ ಪಡೆಯುತ್ತೇನೆ. ಅದಾದ ನಂತರ ಪಾಲಕರು ನನ್ನ ಭವಿಷ್ಯವನ್ನು ನಿರ್ಧರಿಸುತ್ತಾರೆ. ಇಡೀ ವರ್ಷ ಒತ್ತಡ ತೆಗೆದುಕೊಂಡು ಓದಲಿಲ್ಲ. ಸಾಮಾನ್ಯವಾಗಿ ಓದಿದೆ. ಡಿಸೆಂಬರ್‍ ನಂತರ ಕೊಂಚ ಗಂಭೀರವಾಗಿ ಓದಿದೆ. ತುಂಬಾ ಒತ್ತಡ ತೆಗೆದುಕೊಂಡು ಓದಿದರೆ ಲಾಭ ಇಲ್ಲ. ವಿಷಯ ಅರ್ಥ ಮಾಡಿಕೊಂಡು, ಕಾನ್ಸೆಪ್ಟ್ ಅರ್ಥ ಮಾಡಿಕೊಳ್ಳಬೇಕು. ಕೊಂಚ ಕಾನ್ಫಿಡೆಂಟ್ ಆಗಿದ್ದರೆ ಹೆಚ್ಚು ಅಂಕ ತೆಗೆಯಬಹುದು. ಪಠ್ಯಪುಸ್ತಕ ಹಾಗೂ ಪಠ್ಯಕ್ರಮವನ್ನು ಸರಿಯಾಗಿ ಅರ್ಥಮಾಡಿಕೊಂಡರೆ ಎಲ್ಲವೂ ಸರಳ ಎಂದು ಅಭಿಪ್ರಾಯ ಪಟ್ಟಿದ್ದಾನೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English