ಧರ್ಮಸ್ಥಳದಲ್ಲಿ ಪೊಲೀಸ್ ಠಾಣೆಯ ನೂತನ ಕಟ್ಟಡಕ್ಕೆ ಶಿಲಾನ್ಯಾಸ

4:29 PM, Wednesday, November 10th, 2021
Share
1 Star2 Stars3 Stars4 Stars5 Stars
(No Ratings Yet)
Loading...

dharmasthala ಧರ್ಮಸ್ಥಳ : ಕರಾವಳಿ ಮೂಲಕ ನಮ್ಮ ದೇಶಕ್ಕೆ ವಿದೇಶೀಯರ ಅಕ್ರಮ ಪ್ರವೇಶ ತಡೆಗಟ್ಟಲು ಹಾಗೂ ಶಾಂತಿ, ಸುವ್ಯವಸ್ಥೆ ಕಾಪಾಡಲು ಸದೃಢ ಕರಾವಳಿ ಕಾವಲು ಪಡೆ ಮೂಲಕ ಬಿಗಿ ಬಂದೋಬಸ್ತ್ ಮಾಡಲಾಗುವುದು. ಈ ಬಗ್ಯೆ ಈಗಾಗಲೆ 30 ಬೋಟ್‌ಗಳನ್ನು ಖರೀದಿಸಲಾಗಿದೆ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಹೇಳಿದರು.

ಅವರು ಮಂಗಳವಾರ ಧರ್ಮಸ್ಥಳದಲ್ಲಿ ಎರಡು ಕೋಟಿ ಮೂವತ್ತು ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾಗುವ ಪೊಲೀಸ್ ಠಾಣೆಯ ನೂತನ ಕಟ್ಟಡಕ್ಕೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು.
ಸೆಟಲೈಟ್ ಫೋನ್ ಬಳಕೆ ಹಾಗೂ ಸೈಬರ್ ಅಪರಾಧಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾ ಮಟ್ಟದಲ್ಲಿ ಅಪರಾಧ ಪತ್ತೆ ಘಟಕಗಳನ್ನು ಪ್ರಾರಂಭಿಸಲಾಗುವುದು. ಸಂಚಾರಿ ಎಫ್.ಎಸ್.ಎಲ್. ಪ್ರಯೋಗಾಲಯ, ಸಂಚಾರಿ ವಾಹನ ಹಾಗೂ ಗಸ್ತು ಪಡೆ ನಿಯೋಜನೆಯೊಂದಿಗೆ ಅಪರಾಧ ಪ್ರಕರಣಗಳನ್ನು ತಡೆಗಟ್ಟಲಾಗುವುದು. ಈ ಬಗ್ಯೆ ಪೊಲೀಸರಿಗೆ ಸಾರ್ವಜನಿಕರ ಸಕ್ರಿಯ ಸಹಕಾರ ಅಗತ್ಯವಾಗಿದೆ ಎಂದು ಹೇಳಿದರು.

ಈಗಾಗಲೆ ಉಪನಿರೀಕ್ಷಕರ ಹುದ್ದೆಗಾಗಿ 950 ಮಂದಿಗೆ ಸಂದರ್ಶನ ನಡೆಸಿದ್ದು ಸದ್ಯದಲ್ಲೇ ನೇಮಕಾತಿ ಆದೇಶ ನೀಡಲಾಗುವುದು ಎಂದು ಅವರು ಪ್ರಕಟಿಸಿದರು.

ಎರಡು ವರ್ಷದೊಳಗೆ ಪೊಲೀಸರಿಗೆ 11,000 ಮನೆಗಳನ್ನು ನಿರ್ಮಿಸಲಾಗುವುದು. 140 ಪೊಲೀಸ್ ಠಾಣೆಗಳನ್ನು ಮೇಲ್ದರ್ಜೆಗೇರಿಸಲು ಉದ್ದೇಶಿಸಲಾಗಿದೆ. ಪೊಲೀಸರ ಮಕ್ಕಳ ಶಿಕ್ಷಣಕ್ಕೂ ವಿಶೇಷ ಸೌಲಭ್ಯ ನೀಡಲಾಗುವುದು ಎಂದು ಹೇಳಿದರು.

ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಕ್ರಾಂತಿಕಾರಿ ಸಾಮಾಜಿಕ ಪರಿವರ್ತನೆ ಮಾಡಿದ್ದಾರೆ. ಆರ್ಥಿಕ ಶಿಸ್ತು, ಮಹಿಳಾ ಸಬಲೀಕರಣ, ಪ್ರಕೃತಿ-ಪರಿಸರ ಸಂರಕ್ಷಣೆ, ಕೆರೆಗಳಿಗೆ ಕಾಯಕಲ್ಪ, ವ್ಯಸನಮುಕ್ತ ಆರೋಗ್ಯಪೂರ್ಣ ಸಮಾಜ ನಿರ್ಮಾಣ ಇತ್ಯಾದಿ ಹತ್ತು – ಹಲವು ಕಾರ್ಯಕ್ರಮಗಳ ಮೂಲಕ ಮಾಡಿದ ಸುಧಾರಣೆ ಹಾಗೂ ಪ್ರಗತಿಪರ ಸೇವಾ ಕಾರ್ಯಗಳನ್ನು ಪ್ರಧಾನಿ ನರೇಂದ್ರ ಮೋದಿಯವರೆ ಮೆಚ್ಚಿ ಅಭಿನಂದಿಸಿದ್ದಾರೆ ಎಂದು ಸಚಿವರು ಹೇಳಿದರು. ಸರ್ಕಾರ ಮಾಡಬೇಕಾದ ಕೆಲಸವನ್ನು ಹೆಗ್ಗಡೆಯವರು ಮಾಡಿದ್ದಾರೆ. ಇದರಿಂದಾಗಿ ಜನರಲ್ಲಿ ಶಿಸ್ತು, ಸಂಯಮ, ಸೇವಾ ಕಳಕಳಿ, ದಯೆ, ಅನುಕಂಪ, ಸ್ವಾವಲಂಬನೆ ಮೊದಲಾದ ಮಾನವೀಯ ಮೌಲ್ಯಗಳು ಮೂಡಿ ಬಂದಿದ್ದು ಸಮಾಜದಲ್ಲಿ ಶಾಂತಿ, ನೆಮ್ಮದಿ ಉಂಟಾಗಿದೆ.  ಅಪರಾಧಗಳು ಕಡಿಮೆಯಾಗಿವೆ ಎಂದು ಅವರು ಹೇಳಿದರು.

ಶುಭಾಶಂಸನೆ ಮಾಡಿದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಸಮಾಜದಲ್ಲಿ ಅನ್ಯಾಯ ಹಾಗೂ ಅಪರಾಧ ಪ್ರಕರಣಗಳನ್ನು ತಡೆಗಟ್ಟಿ ಶಾಂತಿ, ಸುವ್ಯವಸ್ಥೆ ಹಾಗೂ ಸಾಮಾಜಿಕ ಸಾಮರಸ್ಯ ಕಾಪಾಡಲು ಪೊಲೀಸರು ಉತ್ತಮ ಸೇವೆ ನೀಡುತ್ತಿದ್ದಾರೆ. “ಬದುಕು ಮತ್ತು ಬದುಕಲು ಬಿಡು” ಎಂಬ ತತ್ವದ ನೆಲೆಯಲ್ಲಿ ಧರ್ಮ ರಕ್ಷಣೆಯೊಂದಿಗೆ ಶಾಂತಿ, ಸುಭಿಕ್ಷೆ ಕಾಪಾಡಲು ದಂಡಾಧಿಕಾರಿಗಳಾದ ಪೊಲೀಸರು ಉತ್ತಮ ಸೇವೆ ನೀಡುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಧರ್ಮಸ್ಥಳದಲ್ಲಿ ಮಂಜುನಾಥ ಸ್ವಾಮಿಯ ಅನುಗ್ರಹದಿಂದ ಹಾಗೂ ಭೂತನಾಥನಾದ ಅಣ್ಣಪ್ಪ ಸ್ವಾಮಿಯ ಭಯದಿಂದ ಸತ್ಯ, ಧರ್ಮ, ನ್ಯಾಯ, ನೀತಿ ಸದಾ ಜಾಗೃತವಾಗಿದೆ ಎಂದು ಹೇಳಿದರು.
ಆದಷ್ಟು ಬೇಗ ನೂತನ ಪಲೀಸ್ ಠಾಣಾ ಕಟ್ಟಡ ಪೂರ್ಣಗೊಳ್ಳಲೆಂದು ಅವರು ಶುಭ ಹಾರೈಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಶಾಸಕ ಹರೀಶ್ ಪೂಂಜ ಧರ್ಮಸ್ಥಳ ಪೊಲೀಸ್ ಠಾಣೆಗೆ ಹೆಚ್ಚುವರಿ ಸಿಬ್ಬಂದಿ ನೇಮಕ ಮಾಡಬೇಕು. ಸರ್ಕಲ್ ಇನ್ಸ್ಪೆಕ್ಟರ್ ಠಾಣೆಯಾಗಿ ಮೇಲ್ದರ್ಜೆಗೇರಿಸಬೇಕು., ವಿಪತ್ತು ನಿರ್ವಹಣೆಗಾಗಿ ಅಗ್ನಿಶಾಮಕ ದಳ ಘಟಕವನ್ನು ಧರ್ಮಸ್ಥಳದಲ್ಲಿ ಪ್ರಾರಂಭಿಸಬೇಕು ಎಂದು ಮನವಿ ಮಾಡಿದರು. ಮುಖ್ಯ ಅಭಿಯಂತರ ಎನ್.ಜಿ. ಗೌಡಯ್ಯ ಮತ್ತು ಧರ್ಮಸ್ಥಳ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜಯಾ ಮೋನಪ್ಪ ಗೌಡ ಉಪಸ್ಥಿತರಿದ್ದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೋನೆವಣೆ ಋಷಿಕೇಶ್ ಭಗವಾನ್ ಸ್ವಾಗತಿಸಿದರು. ಬೆಳ್ತಂಗಡಿ ಸರ್ಕಲ್ ಇನ್ಸ್ಪೆಕ್ಟೆರ್ ಶಿವಕುಮಾರ್ ಧನ್ಯವಾದವಿತ್ತರು.

ಬಳಿಕ ಶ್ರೀ ಸನ್ನಿಧಿ ಅತಿಥಿ ಗೃಹದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗೃಹ ಸಚಿವ ಅರಗ ಜ್ಞಾನೇಂದ್ರ, ಅಕ್ರಮ ಗೋವುಗಳ ಸಾಗಾಟ ಹಾಗೂ ಅಕ್ರಮ ಕಸಾಯಿಖಾನೆ ತಡೆಗಟ್ಟಲು ಬಿಗಿಯಾದ ಕಾನೂನು ಕ್ರಮ ಅಳವಡಿಸಲಾಗುವುದು ಎಂದು ಹೇಳಿದರು.

ಅಕ್ರಮ ಮರಳು ಸಾಗಾಟ ತಡೆಯಲು ಹೊಸ ಕಾನೂನು ನೀತಿ ಜಾರಿಗೊಳಿಸಿದ್ದು, ಈ ಬಗ್ಯೆ ಗ್ರಾಮ ಪಂಚಾಯಿತಿಗೆ ಅಧಿಕಾರ ನೀಡಲಾಗಿದೆ ಎಂದರು. ಯಾರು ಕೂಡಾ ಕಾನೂನನ್ನು ಕೈಗೆತ್ತಿಕೊಳ್ಳಬಾರದು. ನೈತಿಕ ಪೊಲೀಸ್‌ಗಿರಿ ತಡೆಗಟ್ಟಲಾಗುವುದು. ಮೂಢನಂಬಿಕೆ, ಬಡತನದ ನೆಪದಿಂದ ಆಮಿಷ ಒಡ್ಡುವುದನ್ನು ತಡೆಯಲು ಮತಾಂತರ ನಿಷೇಧ ಕಾಯ್ದೆ ಜಾರಿಗೊಳಿಸಲು ಸರ್ಕಾರದಲ್ಲಿ ಚಿಂತನೆ ನಡೆಸಲಾಗುತ್ತಿದೆ ಎಂದು ಸಚಿವರು ತಿಳಿಸಿದರು.

ಬಳಿಕ ಸಚಿವರು ಕನ್ಯಾಡಿ ರಾಮಕ್ಷೇತ್ರದಲ್ಲಿ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರನ್ನು ಭೇಟಿ ಮಾಡಿದರು.  ಸುಲ್ಕೇರಿ ಶಾಲೆಗೆ ಭೇಟಿ ನೀಡಿದ ಬಳಿಕ ತೀರ್ಥಹಳ್ಳಿಗೆ ಪ್ರಯಾಣ ಮಾಡಿದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English