ಯುವ ದಸರಾದಲ್ಲಿ ಪ್ರೇಕ್ಷಕರನ್ನು ರಂಜಿಸಿದ ರಾಕಿಂಗ್‌ ಸ್ಟಾರ್ ಯಶ್, ನೇಹಾ ಕಕ್ಕರ್​​​​

10:41 AM, Thursday, October 18th, 2018
Share
1 Star2 Stars3 Stars4 Stars5 Stars
(5 rating, 1 votes)
Loading...

yashಮೈಸೂರು: ರಾಕಿಂಗ್‌ ಸ್ಟಾರ್ ಯಶ್ ಪಂಚಿಂಗ್ ಡೈಲಾಗ್ ಹಾಗೂ ಖ್ಯಾತ ಗಾಯಕಿ ನೇಹಾ ಕಕ್ಕರ್ ಗಾಯನ ಮೋಡಿಗೆ ಯುವದಸರಾಗೆ ಸೇರಿದ್ದ ಸಮೂಹ ಕುಣಿದು ಕುಪ್ಪಳಿಸಿ ಎಂಜಾಯ್ ಮಾಡಿದೆ.

ಮಹಾರಾಜ ಕಾಲೇಜು ಮೈದಾನದಲ್ಲಿ ಐದು ದಿನಗಳಿಂದ ಮಳೆ ಅಬ್ಬರದೊಂದಿಗೆ ಸಂಗೀತದ ಸಂಭ್ರಮದಲ್ಲಿ ತೇಲುತ್ತಿದ್ದ ಯುವಸಮೂಹ ಕೊನೆಯ ದಿನವಾದ ಬುಧವಾರ ಮತ್ತಷ್ಟು ಸಂಭ್ರಮವನ್ನು ಹೆಚ್ಚಿಸಿಕೊಂಡಿತು. ನಟ ಯಶ್ ಹಾಗೂ ಗಾಯಕಿ ನೇಹಾ ಕಕ್ಕರ್ ಅವರ ಆಗಮನಕ್ಕೆ ಇಡೀ ಸಾವಿರಾರು ಪ್ರೇಕ್ಷಕರು ಕಾದು ಕುಳಿತಿದ್ದರು. ತಮ್ಮ ನೆಚ್ಚಿನ ನಟ ಹಾಗೂ ಗಾಯಕಿ ಆಗಮನಕ್ಕೆ ಪ್ರೇಕ್ಷಕ ಸಮೂಹ ಶಿಳ್ಳೆ ಹಾಕಿ, ಚಪ್ಪಾಳೆ ತಟ್ಟಿ ಹರ್ಷೋದ್ಘಾರದ ಮೂಲಕ ಭವ್ಯ ಸ್ವಾಗತ ನೀಡಿದರು. ಸುಮಾರು ೫ ನಿಮಿಷಗಳ ಕಾಲ ಶಿಳ್ಳೆಯ ಸದ್ದು ಕಾರ್ಯಕ್ರಮದಲ್ಲಿ ಮಾರ್ದನಿಸಿತು.

ಮಾತು ಆರಂಭಿಸಿದ ಯಶ್, ‘ಅಣ್ತಮ್ಮಾಸ್ ಎಲ್ಲರಿಗೂ ನಮಸ್ಕಾರ’ ಎಂದೊಡನೆ ಪ್ರೇಕ್ಷಕರು ಮತ್ತೊಮ್ಮೆ ಶಿಳ್ಳೆ ಹಾಕಿ, ಚಪ್ಪಾಳೆ ತಟ್ಟಿ ಸಂಭ್ರಮಿಸಿದರು. ನಿಮ್ಮ ಶಿಳ್ಳೆ, ಚಪ್ಪಾಳೆ ನನ್ನನ್ನು ಇಲ್ಲಿಗೆ ತಂದು ನಿಲ್ಲಿಸಿದೆ. ನಾನು ಯಾವುದೇ ಸಿನಿಮಾ ಬ್ಯಾಕ್ಗ್ರೌಂಡ್ ಇಲ್ಲದೆ ಇಲ್ಲಿಗೆ ಬಂದವನು. ಆದರೆ ನಿಮ್ಮ ಶಿಳ್ಳೆ ಚಪ್ಪಾಳೆಯೇ ನನ್ನ ಬ್ಯಾಕ್ಗ್ರೌಂಡ್ ಎಂದು ಪ್ರೇಕ್ಷಕರತ್ತ ಕೈಬೀಸಿದರು. ಹಲವು ವರ್ಷಗಳಿಂದ ದಸರಾ ಕಾರ್ಯಕ್ರಮಕ್ಕೆ ಬರಬೇಕೆಂದುಕೊಂಡಿದ್ದೆ, ಆದರೆ ಬರಲಾಗಿರಲಿಲ್ಲ. ಇಂದು ಆ ಆಸೆ ಈಡೇರಿತು ಎಂದರು.

ಇದು ನನ್ನೂರು, ಕುಕ್ಕರಹಳ್ಳಿಯಲ್ಲಿ ಓಡಾಡಿ ಬೆಳೆದ ಪಡುವಾರಹಳ್ಳಿ ಹುಡುಗ ನಾನು ಎಂದು ಹೇಳಿಕೊಳ್ಳುವುದೇ ಖುಷಿ. ಜಗತ್ತಿನ ಯಾವುದೇ ಭಾಗಕ್ಕೆ ಹೋದರೂ, ಹುಟ್ಟೂರಲ್ಲಿ ಸಿಗುವ ಆನಂದ, ಸಂತೋಷ ಮತ್ತೆಲ್ಲೂ ಸಿಗುವುದಿಲ್ಲ. ಮೈಸೂರಿನಂತಹ ಊರು ಜಗತ್ತಿನಲ್ಲಿ ಎಲ್ಲೂ ಇಲ್ಲ. ಈ ನೆಲದಲ್ಲಿ ಹುಟ್ಟಿರುವುದು ನನ್ನ ಪುಣ್ಯ ಎಂದರು. ಪ್ರೇಕ್ಷಕರ ಒತ್ತಾಯದ ಮೇರೆಗೆ ತಮ್ಮ ಸಿನಿಮಾದ ಹಾಡುಗಳು ಹಾಗೂ ಡೈಲಾಗ್ಗಳನ್ನು ಹೇಳುವ ಮೂಲಕ ಪ್ರೇಕ್ಷಕರನ್ನು ರಾಕಿಂಗ್ ಸ್ಟಾರ್ ರಂಜಿಸಿದರು.

ನಟಿಯರಾದ ರಚಿತ ರಾಮ್, ಮೇಘನಾ ಗಾಂವ್ಕರ್, ಜಯಶ್ರೀ, ಕಿರುತೆರೆಯ ವೈಷ್ಣವಿ ಕನ್ನಡ ಹಾಡುಗಳಿಗೆ ನೃತ್ಯಮಾಡುವ ಮೂಲಕ ಪ್ರೇಕ್ಷಕರ ಮನತಣಿಸಿದರು. ಮೈಸೂರು ದಸರಾ ಅನುಭವದೊಂದಿಗೆ ಸಂತೋಷವನ್ನು ವ್ಯಕ್ತಪಡಿಸಿದರು.

ಮೈಸೂರು ಸೇರಿದಂತೆ ವಿವಿಧ ಕಾಲೇಜುಗಳಿಂದ ಆಗಮಿಸಿದ್ದ ವಿದ್ಯಾರ್ಥಿಗಳು ಕೂಡಾ ತಮ್ಮ ನೃತ್ಯದಿಂದ ಪ್ರೇಕ್ಷಕರನ್ನು ರಂಜಿಸಿದರು. ಹಿನ್ನೆಲೆ ಗಾಯಕಿ ನೇಹಾ ಕಕ್ಕರ್ ಅವರ ‘ಮಿಲೇ ಹೋ ತುಮ್ ಹಮ್ ಸೇ, ಬಡೇ ನಶೀಬೋ ಸೇ’ ಸೇರಿದಂತೆ ಹಿಂದಿ ಹಾಡುಗಳಿಗೆ ಪ್ರೇಕ್ಷಕರು ಹುಚ್ಚೆದ್ದು ಕುಣಿದು ಕುಪ್ಪಳಿಸಿದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English