ಪಟ್ಟಿಯಲ್ಲಿ ಹೆಸರು, ಫೋಟೋ ಇಲ್ವಾ? ಓಟು ಹಾಕಲು ಅಸಾಧ್ಯ ಗೊತ್ತಾ?

1:34 PM, Saturday, October 20th, 2012
Share
1 Star2 Stars3 Stars4 Stars5 Stars
(5 rating, 1 votes)
Loading...

Vote for electionಮಂಗಳೂರು: ಭಾರತದ ಚುನಾವಣಾ ಆಯೋಗದ ನಿರ್ದೇಶನದ ಮೇರೆಗೆ ಮತದಾರರ ಪಟ್ಟಿಯಲ್ಲಿ ಭಾವಚಿತ್ರ ಸಮೇತ ಹೆಸರು ಸೇರ್ಪಡೆಗೆ ಇದೀಗ ದ.ಕ. ಜಿಲ್ಲಾಡಳಿತ ಮತ್ತೊಮ್ಮೆ ಅವಕಾಶ ಕಲ್ಪಿಸಿದೆ. ಒಂದು ವೇಳೆ ಅಕ್ಟೋಬರ್ 31ರೊಳಗೆ ನಿಮ್ಮ ಹೆಸರನ್ನು ನೊಂದಾಯಿಸದಿದ್ದರೆ 2013ರಲ್ಲಿ ನಡೆಯುವ ರಾಜ್ಯ ವಿಧಾನ ಸಭೆ ಅಥವಾ ಲೋಕಸಭಾ ಚುನಾವಣೆಯಲ್ಲಿ ಓಟು ಹಾಕಲು ನಿಮಗೆ ಸಾಧ್ಯವಿಲ್ಲ. ನಿಮ್ಮ ನಿಮ್ಮ ಮತ ಚಲಾಯಿಸುವ ಹಕ್ಕನ್ನು ಕೈಯಾರೆ ಕಳಕೊಳ್ಳುವಿರಿ.

2013ರ ಜನವರಿ 1ಕ್ಕೆ ಅನ್ವಯವಾಗುವಂತೆ ಜಿಲ್ಲೆಯ 8 ವಿಧಾನ ಸಭಾ ಕ್ಷೇತ್ರಗಳ ಮತದಾರರ ಪಟ್ಟಿಗಳ ಸಂಕ್ಷಿಪ್ತ ಪರಿಷ್ಕರಣೆ ಈ ತಿಂಗಳಿಡೀ ನಡೆಯಲಿದೆ. ಇದೇ ವೇಳೆ ಹಕ್ಕು ಮತ್ತು ಆಕ್ಷೇಪಣೆಗಳನ್ನು ಕೂಡ ಸಲ್ಲಿಸಲು ಅವಕಾಶವಿದೆ. ಎಲ್ಲ ಪ್ರಕ್ರಿಯೆ ಮುಗಿದ ಬಳಿಕ ಅಂದರೆ 2013ರ ಜನವರಿ ತಿಂಗಳಲ್ಲಿ ಮತದಾರರ ಪಟ್ಟಿಗಳ ಅಂತಿಮ ಪಟ್ಟಿ ಪ್ರಕಟಿಸಲಾಗುತ್ತದೆ.

* ಎಲ್ಲೆಲ್ಲಿ ಆಕ್ಷೇಪಣೆ ಸಲ್ಲಿಸಬಹುದು?: ಸಾರ್ವಜನಿಕರ ಹಿತದೃಷ್ಟಿಯಿಂದ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಣಿ ಮತ್ತು ಆಕ್ಷೇಪಣೆಗಳಿಗೆ ಮತಗಟ್ಟೆಗಳಲ್ಲಿ ನೇಮಕ ಮಾಡಲಾದ ನಿರ್ಧಿಷ್ಟ ಅಧಿಕಾರಿ, ಬೂತ್ ಮಟ್ಟದ ಅಧಿಕಾರಿ, ತಹಶೀಲ್ದಾರ್ ಮಹಾನಗರ ಪಾಲಿಕೆಯ ಕಂದಾಯ ಅಧಿಕಾರಿ, ಸಹಾಯಕ ಆಯಕ್ತರ ಕಚೇರಿಗೆ ಅರ್ಜಿ ಸಲ್ಲಿಸಬಹುದು. ಅಲ್ಲದೆ ತಾಲೂಕು ಕಚೇರಿ, ಸಹಾಯಕ ಕಮಿಷನರ್ ಕಚೇರಿ, ಮನಪಾ ಕಚೇರಿಯಲ್ಲಿ ಇರಿಸಲಾದ ಡ್ರಾಪ್ ಬಾಕ್ಸ್ನಲ್ಲೂ ಹಾಕಬಹುದು.

* ಆನ್ ಲೈನ್: ಅಂತರ್ ಜಾಲದ ಮೂಲಕವೂ ನೋಂದಣಿ ಮತ್ತು ಆಕ್ಷೇಪ ಸಲ್ಲಿಸಬಹುದಾಗಿದ್ದು, ceokarnataka.kar.nic.in ಇಲ್ಲಿ ಪರಿಶೀಲಿಸಬಹುದು.

* ಮತದಾರರ ಪಟ್ಟಿಯಲ್ಲೂ ಫೋಟೊ ಕಡ್ಡಾಯ: ಕಳೆದ 2 ದಶಕದಿಂದ ಅಂದರೆ, 1992ರಿಂದ ಮತದಾರರ ಗುರುತು ಚೀಟಿ ಒದಗಿಸಲಾಗುತ್ತಿದೆ. ಮುಂದಿನ ಚುನಾವಣೆಗೆ ಗುರುತು ಚೀಟಿಯೊಂದಿಗೆ ಮತದಾರರ ಪಟ್ಟಿಯಲ್ಲೂ ಫೋಟೋ ಕಡ್ಡಾಯಗೊಳಿಸಿ ಚುನಾವಣಾ ಆಯೋಗ ಆದೇಶ ಹೊರಡಿಸಿದೆ.

ಜಿಲ್ಲೆಯ 21 ಲಕ್ಷ ಜನಸಂಖ್ಯೆಯ ಪೈಕಿ 13,91,918 ಮಂದಿ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿದ್ದಾರೆ. ಆದರೆ, 3 ಸಾವಿರ ಮತದಾರರನ್ನು ಹೊರತುಪಡಿಸಿ ಮತ್ತೆಲ್ಲರೂ ಗುರುತು ಚೀಟಿ ಹೊಂದಿದ್ದಾರೆ. ಗುರುತು ಚೀಟಿಯಲ್ಲಿ ಮಾತ್ರವಲ್ಲ, ಮತದಾರರ ಪಟ್ಟಿಯಲ್ಲೂ ಭಾವಚಿತ್ರವಿರುವುದು ಕಡ್ಡಾಯವಾಗಿದೆ. ಹಾಗಾಗಿ ಮತದಾರರ ಗುರುತು ಚೀಟಿ ಹೊಂದಿರುವವರೂ ಕೂಡ ಮತದಾರರ ಪಟ್ಟಿಯಲ್ಲಿ ಭಾವಚಿತ್ರವಿರುವುದನ್ನು ಖಚಿತಪಡಿಸಿಕೊಳ್ಳಬೇಕಾಗಿದೆ. ಮತದಾರರ ಪಟ್ಟಿಯಲ್ಲಿ ಭಾವಚಿತ್ರವಿಲ್ಲದಿರುವವರು ಹೊಸದಾಗಿ ನೋಂದಣಿ ಮಾಡಬೇಕಾಗಿದೆ.

* ಏನೇನು ಬೇಕು?: 2013ರ ಜನವರಿ 1ರಂದು 18 ವರ್ಷ ಪ್ರಾಯ ತುಂಬಿದವರು ತಮ್ಮ ಹೆಸರನ್ನು ಮತದಾರರ ಪಟ್ಟಿಯಲ್ಲಿ ನೋಂದಾಯಿಸಲು ಭರ್ತಿ ಮಾಡಿದ ನಮೂನೆ 6ರ ಸಹಿತ ಕೆಲವೊಂದು ದಾಖಲೆಪತ್ರ ಅವಶ್ಯಕ. ಅಂದರೆ, ಪಾಸ್ ಪೋರ್ಟ್ ಗಾತ್ರದ ಇತ್ತೀಚಿನ ಬಣ್ಣದ ಭಾವಚಿತ್ರ, 18 ವರ್ಷ ಪ್ರಾಯ ತುಂಬಿರುವುದಕ್ಕೆ ದೃಢೀಕರಿಸುವ ಜನನ ಪ್ರಮಾಣ ಪತ್ರ ಅಥವಾ ಎಸ್ಸೆಸ್ಸೆಲ್ಸಿ ಅಂಕಪಟ್ಟಿಯ ನಕಲು, ಸಾಮಾನ್ಯ ನಿವಾಸಿ ಎಂದು ದೃಢೀಕರಿಸಲು ಬೇಕಾದ ಪಡಿತರ ಚೀಟಿ, ದೂರವಾಣಿ ಬಿಲ್, ತೆರಿಗೆ ಪಾವತಿ ರಶೀದಿ, ಬಾಡಿಗೆ ಚೀಟಿಯ ಜೆರಾಕ್ಸ್ ಪ್ರತಿ ಕಡ್ಡಾಯ.

* ಹೆಸರು ಅಳಿಸಿ ಹಾಕಲೂ ಅವಕಾಶ : ಕರಡು ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿರುವ ಮತ್ತು ಪ್ರಕೃತ ಮೃತಪಟ್ಟ ಅಥವಾ ವಲಸೆ ಹೋದ ಮತದಾರರನ್ನು ಮತದಾರರ ಪಟ್ಟಿಯಿಂದ ತೆಗೆದು ಹಾಕಲು ನಮೂನೆ 7ರಲ್ಲಿ ಮನವಿ ಸಲ್ಲಿಸಬಹುದು.

* ತಿದ್ದುಪಡಿಗೆ ಅವಕಾಶ : ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿ ಮತದಾರರ ಭಾವಚಿತ್ರವಿರುವ ಗುರುತಿನ ಚೀಟಿಯನ್ನು ಪಡೆದಿರುವ ಮತದಾರರು ತಮ್ಮ ಹೆಸರು, ವಿಳಾಸ ತಪ್ಪಾಗಿ ಮುದ್ರಣಗೊಂಡಿದ್ದಲ್ಲಿ ಅದನ್ನು ಸರಿಪಡಿಸಲು ನಮೂನೆ 8ರಲ್ಲಿ ಸಲ್ಲಿಸಬಹುದು.

* ವರ್ಗಾವಣೆಗೂ ಅವಕಾಶ : ಒಂದು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮನೆ ಬದಲಾವಣೆ ಇತ್ಯಾದಿ ಕಾರಣದಿಂದ ಒಂದು ಕಡೆಯಿಂದ ಇನ್ನೊಂದು ಕಡೆಗೆ ವಲಸೆ ಹೋಗುವ ಮತದಾರರು ತಮ್ಮ ಹೆಸರನ್ನು ವರ್ಗಾವಣೆ ಮಾಡಿಕೊಳ್ಳಲು ನಮೂನೆ 8 ಎ-ರಲ್ಲಿ ಸಲ್ಲಿಸಬಹುದು.

* ಅಂತಿಮ ಪಟ್ಟಿಯ ಬಳಿಕ ಗುರುತಿನ ಚೀಟಿ: ಅಂತಿಮ ಮತದಾರರ ಪಟ್ಟಿಯಲ್ಲಿ ಪ್ರಕಟಗೊಂಡ ತಕ್ಷಣ ಮತದಾರರ ಭಾವಚಿತ್ರವಿರುವ ಗುರುತಿನ ಚೀಟಿಯನ್ನು ವಿತರಿಸಲಾಗುತ್ತದೆ.

* ಏನೇನು ಪ್ರಯೋಜನ ?: ಮತದಾರರ ಗುರುತು ಚೀಟಿಯಿಂದ ಬ್ಯಾಂಕ್ ಮತ್ತು ಅಂಚೆ ಕಚೇರಿಯಲ್ಲಿ ಉಳಿತಾಯ ಖಾತೆ ತೆರೆಯಲು, ಆದಾಯ ತೆರಿಗೆ ಇಲಾಖೆಯಿಂದ ಪಾನ್ ಕಾರ್ಡ್ ಪಡೆಯಲು, ಪಾಸು ಪೋರ್ಟ್ ಪಡೆಯಲು, ಸರಕಾರದ ವಿವಿಧ ಯೋಜನೆಗಳ ಸೌಲಭ್ಯ ಪಡೆಯಲು ಅನುಕೂಲವಾಗಲಿದೆ.

* ಬೂತ್ ಮಟ್ಟದ ಏಜೆಂಟ್ : ಮಾನ್ಯತೆ ಪಡೆದ ರಾಜಕೀಯ ಪಕ್ಷಗಳು ಪ್ರತಿಯೊಂದು ಬೂತ್ ಮಟ್ಟದಲ್ಲಿ ಬೂತ್ ಮಟ್ಟದ ಏಜೆಂಟ್ (ಬಿಎಲ್ಎ) ನೇಮಕ ಮಾಡಲು ಅವಕಾಶವಿದೆ. ಅಂದರೆ, ರಾಜಕೀಯ ಪಕ್ಷಗಳು ನೇಮಿಸಿದ ಬೂತ್ ಮಟ್ಟದ ಅಧಿಕಾರಿಗಳು ಪ್ರತಿ ದಿನ 10 ಅರ್ಜಿ ಪಡೆದು ದೃಢೀಕರಿಸಿ ಸಂಬಂಧಪಟ್ಟ ಮತಗಟ್ಟೆಯಲ್ಲಿ ಹಸ್ತಾಂತರಿಸಬಹುದಾಗಿದೆ.

* ವ್ಯಾಪಕ ಪ್ರಚಾರ : ಜನಸಂಖ್ಯೆಯ ಪ್ರಮಾಣಕ್ಕೆ ಹೋಲಿಸಿದರೆ ಜಿಲ್ಲೆಯಲ್ಲಿ ಶೇ.66.15 ಮತದಾರರಿದ್ದಾರೆ. ಆ ಪೈಕಿ 18-19 ವಯಸ್ಸಿನ ಮತದಾರರ ಪ್ರಮಾಣ ಶೇ.0.5. ಅಂದರೆ, ಯುವಕ-ಯುವತಿಯರ ನೋಂದಣಿ ಕಡಿಮೆ. ಈ ನಿಟ್ಟಿನಲ್ಲಿ ಮಾಹಿತಿ ಕಾರ್ಯ ಭರದಿಂದ ನಡೆಯುತ್ತಿದೆ. ಅಂದರೆ ಸಾರ್ವಜನಿಕ ಸ್ಥಳಗಳಲ್ಲಿ ಮ್ಯಾಜಿಕ್ ಶೋ, ಬೀದಿ ನಾಟಕ, ರೋಡ್ ಶೋ ನಡೆಸಿ ಪ್ರಚಾರ ನೀಡಲಾಗುತ್ತದೆ. ಅಲ್ಲದೆ, 18 ವರ್ಷ ಪ್ರಾಯದ ವಿದ್ಯಾರ್ಥಿಗಳಿಗೆ ಗಳಿಗೆ ಶಾಲಾ ಕಾಲೇಜುಗಳಲ್ಲಿ ಚರ್ಚಾಕೂಟ ನಡೆಸಲಾಗುತ್ತದೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English