ಮೂರನೇ ಏಕದಿನದ ಪಂದ್ಯದಲ್ಲಿ ಕೆ.ಎಲ್​.ರಾಹುಲ್ ಶತಕದ ನೆರವಿನೊಂದಿಗೆ ಟೀಇಂಡಿಯಾ 7 ವಿಕೆಟ್​ಗೆ 296ರನ್

4:38 PM, Tuesday, February 11th, 2020
Share
1 Star2 Stars3 Stars4 Stars5 Stars
(5 rating, 1 votes)
Loading...

KL-Rahul

ಮೌಂಟ್ ಮೌಂಗನುಯಿ : ನ್ಯೂಜಿಲ್ಯಾಂಡ್ ಪ್ರವಾಸದಲ್ಲಿರುವ ಟೀಂ ಇಂಡಿಯಾ ಮೂರನೇ ಏಕದಿನದ ಪಂದ್ಯದಲ್ಲಿ ಕೆ.ಎಲ್.ರಾಹುಲ್ ಅವರ ಶತಕದ ನೆರವಿನೊಂದಿಗೆ ಆತಿಥೇಯ ತಂಡಕ್ಕೆ 297ರನ್ಗಳ ಗೆಲುವಿನ ಗುರಿಯನ್ನು ನಿಗದಿ ಮಾಡಿದೆ.

ಕ್ರಿಕೆಟ್ ವೃತ್ತಿ ಬದುಕಿನ ನಾಲ್ಕನೇ ಶತಕ ದಾಖಲಿಸಿದ ರಾಹುಲ್ ಇನ್ನಿಂಗ್ಸ್ನಲ್ಲಿ 113 ಬಾಲ್ ಎದುರಿಸಿ 112 ರನ್ ಸೇರಿಸಿದ್ದರು. ಇದರಲ್ಲಿ ಒಂಭತ್ತು ಫೋರ್, ಎರಡು ಸಿಕ್ಸ್ ಒಳಗೊಂಡಿವೆ. ಟೀಂ ಇಂಡಿಯಾ 13ನೇ ಓವರ್ನಲ್ಲಿ ಮೂರು ವಿಕೆಟ್ ಕಳೆದುಕೊಂಡು 62 ರನ್ ಗಳಿಸಿ ಸಂಕಷ್ಟದಲ್ಲಿ ಇದ್ದಾಗ ರಾಹುಲ್ ಕ್ರೀಸ್ಗೆ ಇಳಿದಿದ್ದರು.

ಶ್ರೇಯಸ್ ಅಯ್ಯರ್ ಜತೆಗೂಡಿ ನಾಲ್ಕನೇ ವಿಕೆಟ್ಗೆ 100 ರನ್ಗಳ ಜತೆಯಾಟ ದಾಖಲಿಸಿದ ರಾಹುಲ್, ನಂತರ ಐದನೇ ವಿಕೆಟ್ ಜತೆಯಾಟದಲ್ಲಿ ಮನೀಷ್ ಪಾಂಡೆ ಜತೆಗೂಡಿ 107 ರನ್ ಕಲೆಹಾಕಿದರು. ಶ್ರೇಯಸ್ ಅಯ್ಯರ್ 63 ಬಾಲ್ ಎದುರಿಸಿ 62 ರನ್, ಪಾಂಡೆ 48 ಬಾಲ್ ಎದುರಿಸಿ 42 ರನ್ ಗಳಿಸಿದ್ದರು.

ಭಾರತ ಈ ಪಂದ್ಯದಲ್ಲೂ ಆರಂಭಿಕ ಆಘಾತ ಅನುಭವಿಸಿದೆ. ಕಳಪೆ ಆಟ ತೋರಿದ ಆರಂಭಿಕ ಆಟಗಾರರ ಪೈಕಿ ಮಯಾಂಕ್ ಅಗರ್ವಾಲ್ ಒಂದು ರನ್ಗೆ ವಿಕೆಟ್ ಕೈಚೆಲ್ಲಿದರೆ, ಕಪ್ತಾನ ವಿರಾಟ್ ಕೊಹ್ಲಿ ಕೂಡ 9 ರನ್ಗೆ ಏಳನೇ ಓವರ್ನಲ್ಲಿ ಮೂರನೇ ವಿಕೆಟ್ ರೂಪದಲ್ಲಿ ಪೆವಿಲಿಯನ್ಗೆ ಮರಳಿದರು. ಮತ್ತೋರ್ವ ಓಪನರ್ ಪೃಥ್ವಿ ಷಾ 42 ಬಾಲ್ ಎದುರಿಸಿ 40 ರನ್ ಗಳಿಸಿದರೂ 13ನೇ ಓವರ್ನಲ್ಲಿ ಇಲ್ಲದ ಎರಡನೇ ರನ್ ಗಳಿಸಲು ಓಡಿ ರನ್ಔಟ್ ಆದರು.

ಮೂರು ಪಂದ್ಯಗಳ ಸರಣಿಯಲ್ಲಿ ಎರಡು ಪಂದ್ಯಗಳನ್ನು ಗೆದ್ದು ಬೀಗುತ್ತಿರುವ ಕಿವೀಸ್ ಪಡೆಯಲ್ಲಿ ಹಮಿಷ್ ಬೆನ್ನೆಟ್ ಹತ್ತು ಓವರ್ ಎಸೆದು 64 ರನ್ ನೀಡಿ 4 ವಿಕೆಟ್ ಗಳಿಸಿ ಯಶಸ್ವಿ ಬೌಲರ್ ಎನಿಸಿಕೊಂಡರು. ಈ ಪಂದ್ಯದಲ್ಲಿ ಕಿವೀಸ್ ಪಡೆ ಎರಡು ಬದಲಾವಣೆ ಮಾಡಿಕೊಂಡಿತ್ತು. ಕ್ಯಾಪ್ಟನ್ ಕೇನ್ ವಿಲಿಯಮ್ಸನ್ ಮರಳಿ ತಂಡ ಸೇರಿದ್ದು ಮತ್ತು ಸ್ಪಿನ್ನರ್ ಮಿಚೆಲ್ ಸಾನ್ಟರ್ ಅವರು ಟಾಮ್ ಬ್ಲಂಡೆಲ್ ಅವರ ಜಾಗ ತುಂಬಿದ್ದರು. ಟೀಂ ಇಂಡಿಯಾದಲ್ಲಿ ಕೇದಾರ್ ಜಾಧವ್ ಬದಲು ಮನೀಷ್ ಪಾಂಡೆ ಸ್ಥಾನ ಪಡೆದಿದ್ದರು.

 

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English