ಗ್ರಾಮಸ್ಥರ ಕೋವಿಡ್ ಪರೀಕ್ಷೆ ನಡೆಸಲು ಬರಲಿವೆ ಮೊಬೈಲ್ ಕ್ಲಿನಿಕ್

9:58 PM, Monday, May 17th, 2021
Share
1 Star2 Stars3 Stars4 Stars5 Stars
(5 rating, 1 votes)
Loading...

R Ashoka ಬೆಂಗಳೂರು : ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ, ಕೋವಿಡ್ 19 ತಪಾಸಣೆ ಹಾಗೂ ಸಾಮಾನ್ಯ ಆರೋಗ್ಯ ಪರೀಕ್ಷೆ ಕೈಗೊಳ್ಳುವ ವೈದ್ಯಾಧಿಕಾರಿಗಳ ತಂಡವಿರುವ ಮೊಬೈಲ್ ವಾಹನಗಳು ಹಳ್ಳಿಗಳಿಗೆ ತೆರಳಲಿದ್ದು, ಈ ವಿನೂತನ ಕಾರ್ಯಕ್ರಮಕ್ಕೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯಲ್ಲಿ ಕಂದಾಯ ಸಚಿವ ಆರ್ ಅಶೋಕ್ ಅವರು ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಆರ್ ಅಶೋಕ್ ಅವರು,”ಹೆಚ್ಚುತ್ತಿರುವ ಕೋವಿಡ್ ಸೋಂಕಿನ ಪರಿಣಾಮ ಗ್ರಾಮಾಂತರ ಪ್ರದೇಶಗಳಲ್ಲಿನ ಜನರು ಆತಂಕಿತಗೊಂಡಿದ್ದು, ಅವರ ಆರೋಗ್ಯ ಕಾಳಜಿ ಮತ್ತು ಅವರಿಗೆ ನೆಮ್ಮದಿ ನೀಡುವ ನಿಟ್ಟಿನಲ್ಲಿ ವೈದ್ಯರ ನಡಿಗೆ ಹಳ್ಳಿ ಕಡೆಗೆ ಎಂಬ ಪರಿಕಲ್ಪನೆಯಲ್ಲಿ ಈ ಕಾರ್ಯಕ್ರಮವನ್ನ ಪರಿಚಯಿಸಲಾಗಿದೆ. ಈ ಮೂಲಕ ವಾರದಲ್ಲಿ ಮೂರು ದಿನ ವೈದ್ಯರು ಮತ್ತವರ ತಂಡ ಹಳ್ಳಿಗಳಿಗೆ ಬೇಟಿ ನೀಡಿ ಗ್ರಾಮಸ್ಥರ ಆರೋಗ್ಯ ಪರೀಕ್ಷೆ ನಡೆಸಲಿದ್ದಾರೆ. ಜ್ವರ, ಕೆಮ್ಮು, ನೆಗಡಿ, ಮೈಕೈನೋವು ಸೇರಿದಂತೆ ಸಾಮಾನ್ಯ ಆರೋಗ್ಯ ಪರೀಕ್ಷೆ ನಡೆಸಿ ಸೂಕ್ತ ಸಲಹೆ ಕೊಡುವುದರ ಜೊತೆಗೆ ಔಷಧೋಪಚಾರ ನೀಡಲಿದ್ದಾರೆ. ಒಂದು ವೇಳೆ ಲಕ್ಷಣಗಳಿದ್ದಲ್ಲಿ ಕೋವಿಡ್ ಪರೀಕ್ಷೆ ಕೂಡಾ ನಡೆಸಿ ಅಲ್ಲೇ ಆರೈಕೆ ಮಾಡುವುದಾಗಿರಲಿ ಅಥವಾ ಸೋಂಕು ಗಂಭೀರವಾಗಿದ್ದರೆ ಹತ್ತಿರದ ಆಸ್ಪತ್ರೆಗೆ ದಾಖಲಿಸುವ ನಿಟ್ಟಿನಲ್ಲಿಯೂ ನೆರವು ನೀಡಲಿದ್ದಾರೆ. ಈ ಮೂಲಕ ಕೋವಿಡ್ ನ್ನು ಪ್ರಾಥಮಿಕ ಹಂತದಲ್ಲಿಯೇ ಗುರುತಿಸುವ ಮೂಲಕ ಅನೇಕ ಜೀವಗಳನ್ನ ರಕ್ಷಿಸಬಹುದಾಗಿದೆ. ಇದೇ ಈ ಕಾರ್ಯಕ್ರಮದ ಉದ್ದೇಶ”, ಎಂದು ತಿಳಿಸಿದರು.

R Ashoka “ಈ ಮೊಬೈಲ್ ಕ್ಲಿನಿಕ್ ನಲ್ಲಿ ಅಗತ್ಯವಿರುವ ಎಲ್ಲಾ ವೈದ್ಯಕೀಯ ಉಪಕರಣ, ಔಷಧಿಗಳ ಕಿಟ್ ಗಳು ಇರಲಿದ್ದು, ಎಲ್ಲಾ ಪ್ರಾಥಮಿಕ ಚಿಕಿತ್ಸೆಯನ್ನ ಕೂಡಲೇ ನೀಡಲಾಗುತ್ತದೆ. ಇದರೊಂದಿಗೆ ಗ್ರಾಮಸ್ಥರಿಗೆ ಅವರ ಆರೋಗ್ಯ ರಕ್ಷಣೆಯ ಕುರಿತಂತೆ ಸಾಕಷ್ಟು ಜಾಗೃತಿ ಮೂಡಿಸುವ ಮೂಲಕ ಅವರಲ್ಲಿ ಆತ್ಮವಿಶ್ವಾಸ ತುಂಬುವ ಕೆಲಸವನ್ನ ಕೂಡಾ ಈ ಕಾರ್ಯಕ್ರಮದ ಮೂಲಕ ಮಾಡಲಾಗುತ್ತಿದೆ. ಇದೊಂದು ಮಾದರಿ ಕಾರ್ಯಕ್ರಮವಾಗಿದ್ದು, ಹಳ್ಳಿಗರ ಆರೋಗ್ಯ ರಕ್ಷಣೆಯಲ್ಲಿ ಮಹತ್ತರ ಪಾತ್ರ ವಹಿಸಲಿದೆ. ಈಗಾಗಲೇ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಿಗೆ ತಲಾ 40ರಂತೆ ಆಕ್ಸಿಜನ್ ಕಾನ್ಸ್ಂಟ್ರೇಟರ್ ಗಳನ್ನ ಒದಗಿಸಲಾಗಿದೆ. ಒಟ್ಟಿನಲ್ಲಿ ಜನರ ಜೀವ ರಕ್ಷಣೆಗೆ ಸರ್ಕಾರ ಅವಿರತ ಯತ್ನಗಳನ್ನ ಮಾಡುತ್ತಿದೆ,” ಎಂದರು.

ಕಾರ್ಯಕ್ರಮದಲ್ಲಿದ್ದ ವೈದ್ಯರು, ನರ್ಸ್ ಹಾಗೂ ಅರೆ ವೈದ್ಯಕೀಯ ಸಿಬ್ಬಂದಿಗಳನ್ನ ಉದ್ದೇಶಿಸಿ ಮಾತನಾಡಿದ ಸಚಿವರು, “ಜನರ ಪ್ರಾಣ ರಕ್ಷಣೆಯಲ್ಲಿ ವೈದ್ಯಕೀಯ ಮತ್ತು ಅರೆ ವೈದ್ಯಕೀಯ ಸಿಬ್ಬಂದಿಗಳಾದ ನೀವು ನಿಮ್ಮ ಜೀವದ ಹಂಗು ತೊರೆದು ಕಾರ್ಯನಿರ್ವಹಿಸುತ್ತಿದ್ದೀರಿ. ನೀವು ಮಾಡುತ್ತಿರುವುದು ದೇವರ ಕೆಲಸ, ಪುಣ್ಯದ ಕೆಲಸ. ನೀವೆಲ್ಲಾ ಅದನ್ನ ನಿರಪೇಕ್ಷವಾಗಿ ಮಾಡುತ್ತಿದ್ದೀರಿ. ಈ ಕಾರಣಕ್ಕೆ ನಿಮ್ಮೆಲ್ಲರಿಗೂ ನಾನು ತಲೆ ಬಾಗಿ ನಮಸ್ಕರಿಸುತ್ತೇನೆ. ಹಳ್ಳಿಯ ಜನರ ಆರೋಗ್ಯ ರಕ್ಷಣೆ ಮಾಡುವ ಮೂಲಕ ದೇಶದ ಆರೈಕೆ ಮಾಡೋಣ”, ಎಂದು ಹೇಳಿದರು.

R Ashoka ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಕೆ ಶ್ರೀನಿವಾಸ್ ಸೇರಿದಂತೆ ಇತರ ಅಧಿಕಾರಿಗಳು ಭಾಗವಹಿಸಿದ್ದರು.

ವರದಿ: ಶಂಭು.
ಮೆಗಾಮೀಡಿಯಾ ನ್ಯೂಸ್‌ ಬ್ಯೂರೋ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English