ಮಾಂಸದ ಕೋಳಿ ಗಳ ಸಾಕಾಣಿಕೆಯಲ್ಲಿ ಮುನ್ನೆಚ್ಚರಿಕೆ ಕ್ರಮ

9:22 PM, Tuesday, March 12th, 2024
Share
1 Star2 Stars3 Stars4 Stars5 Stars
(No Ratings Yet)
Loading...

ಮಂಗಳೂರು : ಕೋಳಿ ಮನೆಗಳಲ್ಲಿ ದಿನದ 24 ಗಂಟೆಗಳ ಕಾಲ ತಂಪಾದ ಮತ್ತು ಶುಚಿಯಾದ ನೀರನ್ನು ಒದಗಿಸಬೇಕು. ಒಂದು ಗಂಟೆ ನೀರು ಇಲ್ಲದಿದ್ದರೆ ಕೋಳಿಗಳು ಸಾವನ್ನಪ್ಪಬಹುದು. ಚೆನ್ನಾಗಿ ಗಾಳಿಯಾಡಲು ಅನುಕೂಲವಾಗುವಂತೆ ಎಲ್ಲಾ ತಡೆಗಳನ್ನು ತೆಗೆಯಬೇಕು. ಕೋಳಿ ಮನೆ ಮಾಡಿನ ಮೇಲ್ಭಾಗಕ್ಕೆ ಸುಣ್ಣ ಬಳಿಯಬೇಕು ಆಥವಾ ಹುಲ್ಲು ಅಡಿಕೆಗರಿ, ತೆಂಗಿನ ಗರಿಗಳಿಂದ ಹೊದಿಸಬೇಕು. ಅನುಕೂಲವಿದ್ದರೆ ಕೋಳಿ ಮನೆಯ ಮಾಡಿನ ಮೇಲೆ ಸ್ಪ್ರಿಂಕ್ಲರ್‍ನಿಂದ ನೀರು ಸಿಂಪಡಿಸಬೇಕು.

ಕೋಳಿ ಮನೆಯ ಒಳಗೆ ಫ್ಯಾನ್ ಅಥವಾ ಫಾಗರ್ಸ್‍ಗಳನ್ನು ಅಳವಡಿಸಬೇಕು. ವಿಟಮಿನ್ ಸಿ ಮತ್ತು ಇತರೆ ಎಲೆಕ್ಟ್ರೋಲೈಟ್‍ಗಳನ್ನು ಉಪಯೋಗಿಸುವುದರಿಂದ ಕೋಳಿಗಳ ಮೇಲೆ ಆಗುವ ಬಿಸಿಲಿನ ಒತ್ತಡವನ್ನು ಕಡಿಮೆ ಮಾಡಬಹುದು. ಆಥವಾ ಅಡುಗೆ ಸೋಡ 1 ಗ್ರಾಂ ನ್ನು 5 ಲೀಟರ್ ನೀರಿಗೆ ಬೆರೆಸಿ ಕೋಳಿಗಳಿಗೆ ಕುಡಿಯಲು ನೀಡಬೇಕು. ಕೋಳಿಮನೆಗಳಲ್ಲಿ ನೀರಿನ ಟ್ಯಾಂಕಿನ ಹೊರಮೈಗೆ ಬಿಳಿಬಣ್ಣ ಬಳಿಯಬೇಕು ಅಥವಾ ಗೋಣಿಯನ್ನು ಸುತ್ತಲೂ ಕಟ್ಟಿ ದಿನಕ್ಕೆರಡು ಬಾರಿ ನೀರಿನಿಂದ ಒದ್ದೆ ಮಾಡಬೇಕು ಅಥವಾ ಚಪ್ಪರ ಹಾಕಬೇಕು. ಬೇಸಿಗೆ ಅವಧಿಯಲ್ಲಿ ನೀರಿನಲ್ಲಿ ಹಾನಿಕಾರಕ ಸೂಕ್ಷ್ಮ ಜೀವಿಗಳು ಹೆಚ್ಚಿರುವುದರಿಂದ ಸೋಂಕು ನಿವಾರಕಗಳನ್ನು ಉಪಯೋಗಿಸಬೇಕು. ಅತೀ ಉಷ್ಣ ಹಾಗೂ ಮೋಡ ಕವಿದ ವಾತಾವರಣ ಇದ್ದಾಗ ಮಧ್ಯಾಹ್ನ 1 ಗಂಟೆಯಿಂದ ಸಂಜೆ 5 ಗಂಟೆ ತನಕ ಕೋಳಿಗಳ ಮೇಲೆ ನಿಗಾ ವಹಿಸಬೇಕು. ಯಾವುದೇ ಕಾರಣಕ್ಕೂ ಕೋಳಿ ಮನೆÀಗಳ ಒಳಗೆ ಬಿಸಿಲು ಬೀಳದಂತೆ ಎಚ್ಚರವಹಿಸಬೇಕು.

ಬೇಸಿಗೆಯಲ್ಲಿ ಕೋಳಿಗಳು 20 ದಿನದ ನಂತರ, ಆ ದಿನಕ್ಕೆ ನಿಗದಿಪಡಿಸಿದ ಕೋಳಿ ಆಹಾರ ತಿನ್ನುವ ಸಾಧ್ಯತೆ ಕಡಿಮೆ. ಆದದ್ದರಿಂದ ರೈತರು ದಿನದ ತಂಪಾದ ಸಮಯ ಅಂದರೆ ರಾತ್ರಿ 12 ಗಂಟೆ ತನಕ ಅಥವಾ ಬೆಳಗ್ಗೆ 4 ರಿಂದ 8 ಗಂಟೆ ಅವಧಿಯಲ್ಲಿ ಕೋಳಿಗಳಿಗೆ ಅಹಾರ ಒದಗಿಸಬೇಕು. ಮಾನವೀಯತೆ ದೃಷ್ಟಿಯಿಂದ ಇತರೆ ಪ್ರಾಣಿ ಪಕ್ಷಿಗಳಿಗೆ ಕೂಡ ತಮ್ಮ ಮನೆ ಅಥವಾ ತೋಟದ ಆಸುಪಾಸು ಸ್ವಚ್ಛ ನೀರು ಸಿಗುವಂತೆ ವ್ಯವಸ್ಥೆ ಮಾಡಬಹುದು ಎಂದು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ರೈತರು ಮತ್ತು ಕೋಳಿ ಸಾಕಾಣಿಕೆದಾರರು ವಹಿಸಬೇಕಾದ ಮುನ್ನೆಚ್ಚರಿಕೆ ಕ್ರಮ:

ಬೇಸಿಗೆಯಲ್ಲಿ ಉಷ್ಣತೆ ಹೆಚ್ಚಾಗುವುದರಿಂದ ದನಗಳನ್ನು ಬೆಳಗ್ಗೆ ಅಥವಾ ಸಂಜೆ ಮೇಯಲು ಹೊರಗಡೆ ಬಿಡಬೇಕು. ಯಾವುದೇ ಕಾರಣಕ್ಕೂ ಬೆಳಿಗ್ಗೆ 11 ರಿಂದ 4 ಗಂಟೆ ಅವಧಿಯಲ್ಲಿ ಜಾನುವಾರುಗಳನ್ನು ಹೊರಗಡೆ ಬಿಡಬಾರದು. ದಿನದ 24 ಗಂಟೆಯೂ ತಂಪಾದ ನೀರು ನೀಡಬೇಕು. ನೀರಿನ ಕೊರತೆ ಕಂಡುಬಂದರೆ ಸ್ಥಳೀಯ ಸಂಸ್ಥೆಗಳ ಮೂಲಕ ಪಡೆದುಕೊಳ್ಳುವುದು. ಜಾನುವಾರುಗಳನ್ನು ನೆರಳಿನಲ್ಲಿ ಮಾತ್ರ ಹೊರಗಡೆ ಕಟ್ಟಬೇಕು. ಜಾನುವಾರು ಶೆಡ್ ಮೇಲೆ ತೆಂಗಿನ ಅಥವಾ ಅಡಿಕೆ ಗರಿ ಹಾಕಿ ಸ್ಪಿಂಕ್ಲರ್‍ನಲ್ಲಿ ನೀರು ಚಿಮ್ಮಿಸಬಹುದು ಅಥವಾ ಬಿಳಿ ಬಣ್ಣದ ಪೇಂಟ್ ಹಾಕಬಹುದು. ಶೆಡ್ ನ ಒಳಗಡೆ ಫ್ಯಾನ್‍ಗಳನ್ನು ಅಳವಡಿಸಿದ್ದಲ್ಲಿ ಉಷ್ಣತೆ ಪ್ರಮಾಣ ತಗ್ಗಿಸಬಹುದು.. ಒದ್ದೆಯಾದ ಗೋಣಿ ಚೀಲಗಳನ್ನು ಶೆಡ್ ನ ಸುತ್ತಲೂ ಕಟ್ಟಬಹುದು.

ಪ್ರತಿ ಗಂಟೆಗೊಮ್ಮೆ ಜಾನುವಾರುಗಳ ಮೈ ಮೇಲೆ 1-2 ನಿಮಿಷ ನೀರು ಚಿಮುಕಿಸುತ್ತಿರಬೇಕು. ಜಾನುವಾರುಗಳಿಗೆ ಹೆಚ್ಚಿನ ಆಹಾರವನ್ನು ಬೆಳಿಗ್ಗೆ ಬೇಗನೇ ಮತ್ತು ರಾತ್ರಿ ಹೊತ್ತಿನಲ್ಲಿ ತಿನ್ನಿಸುವುದು ಉತ್ತಮ. ಜಾನುವಾರುಗಳಿಗೆ ಅವುಗಳ ಹಾಲಿನ ಇಳುವರಿಗನುಗುಣವಾಗಿ 20-100 ಗ್ರಾಂ ನಷ್ಟು ಲವಣ ಮಿಶ್ರಣವನ್ನು ಪ್ರತಿ ದಿನ ನೀಡಬೇಕು. ಜಾನುವಾರುಗಳಿಗೆ ಪ್ರಜ್ಞೆ ತಪ್ಪುವುದು, ತುಂಬಾ ಹಾಲಿನ ಇಳುವರಿ ಕಡಿತವಾಗುವುದು ಕಂಡುಬಂದಲ್ಲಿ ತಕ್ಷಣ ಹತ್ತಿರದ ಪಶುವೈದ್ಯಕೀಯ ಸಂಸ್ಥೆಯನ್ನು ಭೇಟಿ ಮಾಡುವುದು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English