ಮಂಗಳೂರು : ಈ ಬಾರಿ ಜಿಲ್ಲೆಯಲ್ಲಿ ಓಡಾಡಿ ತನ್ನ ಕಾರ್ಯಕರ್ತರನ್ನು ಸಂಘಟಿಸಿ ಹಲವು ಸಭೆಗಳನ್ನು ನಡೆಸಿ ಪಕ್ಷದ ಗಮನ ಸೆಳೆಯುವ ಪ್ರಯತ್ನ ಮಾಡಿ ವಿಫಲರಾದ ಸತ್ಯಜಿತ್ ಸುರತ್ಕಲ್ ಪಕ್ಷೇತರವಾಗಿ ಸ್ಪರ್ಧಿಸಿ ಬಿಜೆಪಿಗೆ ಬಂಡಾಯ ನಿಲ್ಲುವ ಸೂಚನೆ ನೀಡಿದ್ದಾರೆ.
ಅದಕ್ಕಾಗಿ ಪಕ್ಷೇತರರಾಗಿ ಶಿವಮೊಗ್ಗದಿಂದ ಸ್ಪರ್ಧಿಗೆ ಸಿದ್ಧತೆ ಮಾಡಿಕೊಂಡಿರುವ ಕೆ.ಎಸ್.ಈಶ್ವರಪ್ಪಅವರನ್ನು ಭೇಟಿಮಾಡಿದ್ದಾರೆ.
ಕೆ.ಎಸ್. ಈಶ್ವರಪ್ಪ ಅವರ ನಿವಾಸಕ್ಕೆ ಭೇಟಿ ನೀಡಿದ ಸತ್ಯಜಿತ್ ಸುರತ್ಕಲ್ ಈಶ್ವರಪ್ಪ ಅವರ ಬೆಂಬಲಕ್ಕೆ ತಾವು ಇರುವುದಾಗಿ ಬರವಸೆ ನೀಡಿದ್ದಾರೆ. ಟಿಕೆಟ್ ಕೈ ತಪ್ಪಿದ್ದಕ್ಕಾಗಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ವಿರುದ್ಧ ಆಕ್ರೋಶಗೊಂಡಿರುವ ಈಶ್ವರಪ್ಪ ಬಿ.ವೈ. ರಾಘವೇಂದ್ರ ಅವರನ್ನು ಸೋಲಿಸುವ ಪಣ ತೊಟ್ಟಿದ್ದಾರೆ.
ಸತ್ಯಜಿತ್ ತನಗೆ ಪಕ್ಷ ಹಾಗೂ ಸಂಘ ಪರಿವಾರ ಅನ್ಯಾಯ ಮಾಡಿದೆ. ‘ನನಗೆ ಟಿಕೆಟ್ ಯಾಕೆ ಕೊಡುವುದಿಲ್ಲ ಅಂತ ಕೇಳಿದ ಪ್ರಶ್ನೆಗೆ ನನಗೆ ಈ ವರೆಗೂ ಉತ್ತರ ಸಿಕ್ಕಿಲ್ಲ’ ಎಂದು ತನ್ನ ನೋವನ್ನು ಕೆ.ಎಸ್. ಈಶ್ವರಪ್ಪ ಜೊತೆ ಹೇಳಿಕೊಂಡಿದ್ದಾರೆ.
2014 ರಲ್ಲಿ ಮಂಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಕೊನೆ ತನಕ ಹೆಸರಿದ್ದ ಸತ್ಯಜಿತ್ ಅವರ ಹೆಸರು ತೆಗೆದು, ನಳಿನ್ ಹೆಸರು ಸೂಚಿಸಿದ್ದೇ ಕಲ್ಲಡ್ಕ ಪ್ರಭಾಕರ ಭಟ್ ಅನ್ನೋದು ಸತ್ಯಜಿತ್ ಆರೋಪ. ಬಳಿಕ ಹಲವು ಬಾರಿ ಚುನಾವಣೆಗೆ ಟಿಕೇಟ್ ಆಕಾಂಕ್ಷಿ ಅಂತ ಹೇಳಿದ್ದರೂ ಪಕ್ಷ ಇವರನ್ನು ಕಡೆಗಣಿಸಿತ್ತು. ಈ ಬಾರಿ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ನನಗೆ ಟಿಕೆಟ್ ಕೊಡಬೇಕು ಅಂತ ಬಹಿರಂಗವಾಗಿಯೇ ಬೇಡಿಕೆ ಇಟ್ಟಿದ್ದರು . ಈ ಬಾರಿಯೂ ಇವರಿಗೆ ಟಿಕೆಟ್ ಕೈ ತಪ್ಪಿದ್ದು, ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರಿಗೆ ಟಿಕೇಟ್ ಸಿಕ್ಕಿದೆ.
Click this button or press Ctrl+G to toggle between Kannada and English