ಮಂಗಳೂರು : ಪಡೀಲ್‌ನ ಹೋಂ ಸ್ಟೇ ದಾಳಿ ಪ್ರಕರಣದಲ್ಲಿ ಆರೋಪಿ ಎಂದು ಪರಿಗಣಿಸಿ ಬಂಧನಕ್ಕೊಳಗಾದ ಪತ್ರಕರ್ತ ನವೀನ್ ಸೂರಿಂಜೆ ಷರತ್ತುಬದ್ದ ಜಾಮೀನಿನೊಂದಿಗೆ ಮಾರ್ಚ್ 23 ಶನಿವಾರ ಮಂಗಳೂರು ಸಬ್ ಜೈಲ್‌ನಿಂದ ಬಿಡುಗಡೆಗೊಂಡಿದ್ದಾರೆ.
ಪಡೀಲ್ ಹೋಂ ಸ್ಟೇ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ನವೆಂಬರ್ 7ರಂದು ರಾತ್ರಿ ಮಂಗಳೂರು ಗ್ರಾಮಾಂತರ ಪೊಲೀಸರಿಂದ ಬಂಧಿತರಾಗಿದ್ದ ನವೀನ್ ಸೂರಿಂಜೆಯ ಬಿಡುಗಡೆಗೆ ಈವರೆಗೆ ಹಲವು ರೀತಿಯ ಹೋರಾಟಗಳು ನಡೆದಿದ್ದವು. ನಾಲ್ಕೂವರೆ ತಿಂಗಳ ಜೈಲುವಾಸವನ್ನು ಅನುಭವಿಸಿ ಇದೀಗ ಬಿಡುಗಡೆಗೊಂಡಿದ್ದಾರೆ.
ಹೋಂ ಸ್ಟೇ ಪ್ರಕರಣದ ಸಂತ್ರಸ್ತರಲ್ಲಿ ಒಬ್ಬರಾದ ವಿಜಯ್ ಕುಮಾರ್ ರ ಹೇಳಿಕೆಯನ್ನು ಆಧರಿಸಿ ಮಾರ್ಚ್ 18ರಂದು ಹೈಕೋರ್ಟ್ ನವೀನ್ ರಿಗೆ ಐದು ಲಕ್ಷ ರೂಪಾಯಿ ಬಾಂಡ್ ನ ಮೂಲಕ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿತ್ತು. ನ್ಯಾಯಾಲಯಕ್ಕೆ ಸಲ್ಲಿಸಬೇಕಿದ್ದ ಐದು ಲಕ್ಷ ರೂಪಾಯಿ ಬಾಂಡ್‌ನ್ನು ನವೀನ್‌ರ ಬಾವ ಜಗನ್ನಾಥ ಶೆಟ್ಟರು ಮಂಗಳೂರು ನ್ಯಾಯಾಲಯಕ್ಕೆ ಸಲ್ಲಿಸಿದ ಬಳಿಕ ನವೀನ್ ಬಿಡುಗಡೆಯ ಪ್ರಕ್ರಿಯೆ ಪೂರ್ಣಗೊಂಡಿತು.
ಹೋಂ ಸ್ಟೇ ದಾಳಿ ಪ್ರಕರಣದಲ್ಲಿ ಪೊಲೀಸರು ಸುಳ್ಳು ಪ್ರಕರಣ ದಾಖಲಸಿ ನವೀನ್‌ರನ್ನು ಬಂಧಿಸಿದ್ದರು. ಹೈಕೋರ್ಟ್ ಮಧ್ಯ ಪ್ರವೇಶದಿಂದ ನವೀನ್‌ಗೆ ಜಾಮೀನು ದೊರಕಿದ್ದು, ಇದು ಅವರ ಹೋರಾಟಕ್ಕೆ ದೊರೆತಿರುವ ನೈತಿಕ ಜಯ ಎಂದು ಡಿವೈಎಫ್‌ಐ ದ.ಕ. ಜಿಲ್ಲಾಧ್ಯಕ್ಷ ಮುನೀರ್ ಕಾಟಿಪಳ್ಳ ತಿಳಿಸಿದರು. ಸಬ್‌ಜೈಲ್‌ನ ಹೊರಗೆ ನವೀನ್ ರ ಬಿಡುಗಡೆಗಾಗಿ ಪತ್ರಕರ್ತರು ಹಾಗು ಇತರರು ನೆರೆದಿದ್ದು ಜಯಘೋಶಗಳೊಂದಿಗೆ ನವೀನ್‌ರನ್ನು ಸ್ವಾಗತಿಸಿದರು.
Click this button or press Ctrl+G to toggle between Kannada and English