ಬೆಳ್ತಂಗಡಿ : ಕಪ್ಪು ತಿಂಗಳ ಪ್ರಯುಕ್ತ ಪ್ರತೀ ವರ್ಷ ಬೆಳ್ತಂಗಡಿಯ 1100 ಅಡಿ ಎತ್ತರದ ಗಡಾಯಿಕಲ್ಲಿನಲ್ಲಿರುವ ಹೋಲಿ ರಿಡೀಮರ್ ಚರ್ಚ್‌ಗೆ ತೆರಳಿ ಪ್ರಾರ್ಥನೆ ಸಲ್ಲಿಸುವ ವಾಡಿಕೆ ಹೋಲಿ ರಿಡೀಮರ್ ಚರ್ಚ್‌ಗೆ ಸಂಬಂಧಪಟ್ಟ ಕ್ರೈಸ್ತ ಬಾಂಧವರಲ್ಲಿ ಇದ್ದು ಅದರಂತೆ ಭಾನುವಾರ ಹೋಲಿ ರಿಡೀಮರ್ ಚರ್ಚ್‌ಗೆ ತೆರಳಿ ಪ್ರಾರ್ಥನೆ ಸಲ್ಲಿಸಿ ಹಿಂದಿರುಗುತ್ತಿದ್ದ ವೇಳೆ ಹೆಜ್ಜೇನು ದಾಳಿ ನಡೆಸಿದ ಪರಿಣಾಮ ಅನೇಕರು ಗಾಯಗೊಂಡ ಘಟನೆ ರವಿವಾರ ಸಂಭವಿಸಿದೆ.
ಪ್ರತೀ ವರ್ಷದಂತೆ ಬೆಳ್ತಂಗಡಿಯ ಹೋಲಿ ರಿಡೀಮರ್ ಚರ್ಚ್‌ಗೆ ಸಂಬಂಧಪಟ್ಟ ಕ್ರೈಸ್ತ ಬಾಂಧವರು ಧರ್ಮಗುರು ಫಾ| ಜೇಮ್ಸ್ ಡಿಸೋಜಾ ಹಾಗೂ ಸಹಾಯಕ ಧರ್ಮಗುರು ಮೆಲ್ವಿನ್ ನೊರೊನ್ಹಾ ನೇತೃತ್ವದಲ್ಲಿ ಕಪ್ಪು ತಿಂಗಳ ಪ್ರಯುಕ್ತ ಶುಭ ಶುಕ್ರವಾರದ ಮುನ್ನ ಪ್ರಾರ್ಥನೆ ಸಲ್ಲಿಸಲು 1100 ಅಡಿ ಎತ್ತರದ ಗಡಾಯಿಕಲ್ಲಿಗೆ ತೆರಳಿದ್ದರು. ಪ್ರಾರ್ಥನೆ ಮುಗಿದ ಬಳಿಕ ಧರ್ಮಗುರುಗಳು ಎಲ್ಲರೂ ಮನೆ ಕಡೆಗೆ ತೆರಲುವಂತೆ ಸೂಚಿಸಿ ಎಲ್ಲರು ಮನೆ ಕಡೆ ಸಾಗುತ್ತಿದ್ದ ವೇಳೆ ದಿಢೀರಾಗಿ ಹೆಜ್ಜೆನು ದಾಳಿ ಆರಂಭವಾಯಿತು.
ಇಕ್ಕಟ್ಟಾದ ಹಾದಿ, ಹೆಂಗಳೆಯರು, ಮಕ್ಕಳು, ಪ್ರಾಯಸ್ಥರು ತಂಡದಲ್ಲಿ ಇದ್ದು, ಕೆಲವರು ಗಭೀರ ಗಾಯಗೊಂಡರೆ ಮತ್ತೆ ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಘಟನೆಯ ಸುದ್ದಿ ತಿಳಿಯುತ್ತಿದ್ದಂತೆ ನೂರಾರು ಮಂದಿ ಘಟನಾ ಸ್ಥಳಕ್ಕೆ ತೆರಳಿ ರಕ್ಷಣಾ ಕಾರ್ಯದಲ್ಲಿ ನಿರತರಾದರು.
ಕಳೆದ ಬಾರಿ ಕೂಡ ಇದೆ ಗುಡ್ಡದ ಮೇಲೆ ಪ್ರಾರ್ಥನೆ ಸಲ್ಲಿಸಲು ತೆರಳಿದ ಅನೇಕರು ಹೆಜ್ಜೆನು ಕಡಿದು ಅನೇಕರು ಗಾಯಗೊಂಡು ಆತಂಕದ ಸ್ಥಿತಿ ನಿರ್ಮಾಣವಾಗಿತ್ತು. ಆದ್ದರಿಂದ ಈ ಬಾರಿ ಜಾಗೃತರಾಗಿ ಮನೆಗೆ ತೆರಳಿ ಎಂದು ಧರ್ಮಗುರು ಎಚ್ಚರಿಸಿದ್ದರು.
ಗಾಯಾಳುಗಳಿಗೆ ಗುಡ್ಡದ ಬುಡದಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಲಾಯಿತು. ಕೆಲವರನ್ನು ಅಂಬುಲೆನ್ಸ್ ಮೂಲಕ, ಇತರರನ್ನು ಖಾಸಗಿ ವಾಹನಗಳಲ್ಲಿ ಆಸ್ಪತ್ರೆಗೆ ಸೇರಿಸಲಾಯಿತು.
Click this button or press Ctrl+G to toggle between Kannada and English