ಮಂಗಳೂರು : ಸಿಬಿಎಸ್ಇ ಪಠ್ಯಕ್ರಮ ಅನುಸರಿಸುವ ಶಾಲೆಯೊಂದರಲ್ಲಿ ಇತ್ತೀಚೆಗೆ 4ನೇ ಕ್ಲಾಸಿನ ಇಂಗ್ಲಿಷ್ ಭಾಷಾ ಪಠ್ಯದ ಪಾಠವೊಂದನ್ನು ಕೈಬಿಡಲು ಶಾಲೆಯಲ್ಲಿಯೇ ನಿರ್ಧರಿಸಲಾಯಿತು. ಆ ಪಾಠದ ಶೀರ್ಷಿಕೆ `ದಿ ಗೋಸ್ಟ್ ಟ್ರಬಲ್’. ವಿದ್ಯಾರ್ಥಿ ಗಳಿಗೆ ಹೋಂ ವರ್ಕ್ ಮಾಡಲು ದೆವ್ವ ಸಹಕರಿಸುವ ಕತೆ ಆ ಪಾಠದಲ್ಲಿದೆ. ದೆವ್ವಗಳು ಕೂಡ ನಮ್ಮ ಬದುಕಿನಲ್ಲಿ ನೆರವಾಗುತ್ತವೆ ಎಂಬ ವಿಚಾರವನ್ನು ಒಳಗೊಂಡ ಆ ಪಾಠ ಮಕ್ಕಳ ಮನಸ್ಸಿನ ಮೇಲೆ ಅಷ್ಟೇನೂ ಒಳ್ಳೆಯ ಪರಿಣಾಮ ಬೀರುವುದಿಲ್ಲ ಎಂಬ ಕಾರಣಕ್ಕೆ ಶಿಕ್ಷಕರು ಆ ಪಾಠವನ್ನು ಕೈ ಬಿಟ್ಟರು. ಅಲ್ಲದೆ ಆ ಬಗ್ಗೆ ಹೆಚ್ಚು ಸುದ್ದಿ ಮಾಡಬಾರದು ಎಂಬ ಕಾರಣಕ್ಕೆ ಬಹಿರಂಗವಾಗಿ ಆ ಕುರಿತು ಚರ್ಚೆ ಯೂ ಆಗಲಿಲ್ಲ.
ಶಿಕ್ಷಣ ವ್ಯವಸ್ಥೆಯಲ್ಲಿ ಪಠ್ಯ ಪುಸ್ತಕಗಳು ಮಹತ್ವದ ಪಾತ್ರ ವಹಿಸುತ್ತವೆ. ಪಾಲಕರು, ಶಿಕ್ಷಕರ ವರ್ಗ ಪಠ್ಯ ಮತ್ತು ಪರೀಕ್ಷೆಗಳಿಗೇ ಶೇ 80ರಷ್ಟು ಒತ್ತು ಕೊಡುವ ಪರಿಪಾಠ ರಾಜ್ಯ ಮತ್ತು ಕೇಂದ್ರ ಪಠ್ಯಕ್ರಮವನ್ನು ಅನುಸರಿಸುವ ಶಾಲೆಗಳಲ್ಲಿ ಸಾಮಾನ್ಯ. ಹಿಂದೆಲ್ಲ ಮೂಲ ವಿಷಯಗಳಿಗೆ ಸಂಬಂಧಿಸಿದ ನಾಲ್ಕು ಅಥವಾ ಐದು ಪಠ್ಯ ಪುಸ್ತಕಗಳಿಗೆ ಮಾತ್ರ ಸೀಮಿತವಾಗಿದ್ದ ಪ್ರಾಥಮಿಕ ಶಿಕ್ಷಣ ಇಂದು ಹತ್ತಾರು ಪುಸ್ತಕಗಳ ಪ್ರಮಾಣಕ್ಕೆ ಏರಿದೆ.
ಶಾಲೆಗಳಲ್ಲಿ ಪಠ್ಯೇತರ ಚಟುವಟಿಕೆಗಳು, ದೈಹಿಕ ಶಿಕ್ಷಣ ಮತ್ತು ಕರಕುಶಲತೆ, ಮೌಲ್ಯ ಶಿಕ್ಷಣಕ್ಕೆ ಸಂಬಂಧಿಸಿದ ತರಗತಿಗಳನ್ನೂ ಪಠ್ಯದ ಕಲಿಕೆಗಾಗಿ ತ್ಯಾಗ ಮಾಡುವುದು ಸರಿಯಾದದ್ದು ಎಂಬ ಭಾವನೆಯೇ ಇದೆ. ಅಂದ ಮೇಲೆ ರಾಜ್ಯದಲ್ಲಿರುವ ಶಾಲೆಗಳಲ್ಲಿ ಏಕ ರೂಪದ ಪಠ್ಯ ರೂಪಿಸುವ ಪ್ರಯತ್ನ ನಡೆದಿಲ್ಲ. ಸಿಬಿಎಸ್ಇ ಶಾಲೆಗಳು ರಾಜ್ಯ ಪಠ್ಯವನ್ನು ಅನುಸರಿಸುವುದಿಲ್ಲ ಎಂಬ ಕಾರಣಕ್ಕಾಗಿಯೇ ಪೋಷಕರು ಮಕ್ಕಳನ್ನು ಅಂತಹ ಶಾಲೆಗಳಿಗೆ ಹಾಕುತ್ತಾರೆ. ವಾಸ್ತವದಲ್ಲಿ ಸಿಬಿಎಸ್ಇ ಶಾಲೆಗಳನ್ನು ತೆರೆಯಲು ಆಯಾ ಪ್ರದೇಶದ ಜಿಲ್ಲಾ ವಿದ್ಯಾಂಗ ಉಪನಿರ್ದೇಶಕರು ನಿರಾಕ್ಷೇಪಣಾ ಪತ್ರ ನೀಡುವ ಮುನ್ನ ಐದನೇ ತರಗತಿಯವರೆಗೆ ಆ ಶಾಲೆಗಳು ರಾಜ್ಯದ ಪಠ್ಯಕ್ರಮವನ್ನೇ ಅನುಸರಿಸಬೇಕು ಎನ್ನುವ ಷರತ್ತನ್ನು ಹಾಕಿರುತ್ತಾರೆ. ಆದರೆ ವಾಸ್ತವದಲ್ಲಿ ಅದು ಜಾರಿಯಾಗಿರುವುದಿಲ್ಲ.
ಇನ್ನು ಸಿಬಿಎಸ್ಇ ಶಾಲೆಗಳಲ್ಲಿ ಕನ್ನಡ ಕಲಿಕೆ ಅಷ್ಟಕ್ಕಷ್ಟೆ. ಕನ್ನಡವನ್ನು ಒಂದು ಭಾಷೆಯಾಗಿ ಪರಿಪೂರ್ಣವಾಗಿ ಕಲಿಯುವುದಕ್ಕೆ ಎಲ್ಲ ಶಾಲೆಗಳೂ ಒತ್ತು ಕೊಡುವುದಿಲ್ಲ. ಬದಲಾಗಿ ಕೆಲವು ಶಾಲೆಗಳು ಎರಡನೇ ತರಗತಿಯಲ್ಲಿ ವರ್ಣಮಾಲೆ ಕಲಿಕೆಗೆ ಆದ್ಯತೆ ನೀಡಿದರೆ ಮತ್ತೆ ಕೆಲವು ಶಾಲೆಗಳಲ್ಲಿ ರಾಜ್ಯದ ಪಠ್ಯ ಪುಸ್ತಕವನ್ನೇ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಅಂದರೆ ಮಕ್ಕಳು ಒಂದು ಶಾಲೆಯಿಂದ ಮತ್ತೊಂದು ಶಾಲೆಗೆ ವರ್ಗಾವಣೆಗೊಂಡರೆ ಕನ್ನಡ ಕಲಿಕೆಯ ವಿಷಯದಲ್ಲಿ ಪೂರ್ಣವಾಗಿ ಹಿಂದೆ ಬೀಳುತ್ತಾರೆ ಅಥವಾ ತುಂಬ ಮುಂದಿರುತ್ತಾರೆ.
ಹೀಗೆ ಪಠ್ಯಗಳಲ್ಲಿನ ಏರುಪೇರುಗಳು ಸಿಬಿಎಸ್ಇ ಶಾಲೆಗಳಲ್ಲಿ ಸಾಕಷ್ಟಿದ್ದರೂ ಅವು ಚರ್ಚೆ ಯ ವ್ಯಾಪ್ತಿಗೆ ನಿಲುಕುವುದಿಲ್ಲ. ಅವುಗಳಲ್ಲಿರುವ ಹೂರಣ ಎಷ್ಟು ಸರಿ ಎಷ್ಟು ಸರಿಯಲ್ಲ ಎನ್ನುವುದಾಗಲೀ, ಎಲ್ಲ ಸಿಬಿಎಸ್ಇ ಶಾಲೆಗಳು ಕನಿಷ್ಠ ಎನ್ ಸಿಇಆರ್ ಟಿ ಪಠ್ಯ ಪುಸ್ತಕಗಳನ್ನು ಅನುಸರಿಸದೇ ಇರುವ ಬಗ್ಗೆ ಆಕ್ಷೇಪಗಳಾಗಲೀ ವ್ಯಕ್ತವಾಗುವುದಿಲ್ಲ. ಸಿಬಿಎಸ್ಇ ಪಠ್ಯ ಭಾರೀ ಕಷ್ಟ ಎನ್ನುವ ಒಂದು ಸಾಮೂಹಿಕ ಅಭಿಪ್ರಾಯವನ್ನು ಹೊರತುಪಡಿಸಿದರೆ ಪಠ್ಯಕ್ರಮದಲ್ಲಿರಬೇಕಾದ ವಿಷಯಗಳ ಏರುಪೇರುಗಳು ಬಹಿರಂಗಗೊಳ್ಳುವುದಿಲ್ಲ.
ಸಿಬಿಎಸ್ಇ ಶಾಲೆಗಳು ಸಾಮಾನ್ಯವಾಗಿ ಪ್ರತಿಷ್ಠಿತ ಹಣೆಪಟ್ಟಿಯನ್ನೇ ಅಂಟಿಸಿಕೊಂಡಿರುತ್ತವೆ. ಹಾಗಾಗಿ ಅನುಸರಿಸುವ ಪಠ್ಯಗಳು ಪುಸ್ತಕ ಉದ್ಯಮವನ್ನು ಬೆಂಬಲಿಸುವ ನಿಟ್ಟಿನಲ್ಲಿಯೇ ಇರುತ್ತವೆ ಎನ್ನುವುದು ರಹಸ್ಯ ವಿಷಯವಾಗಿ ಉಳಿದಿಲ್ಲ. ಒಂದು ಜಿಲ್ಲೆಯ ಶೈಕ್ಷಣಿಕ ವಲಯವನ್ನು ನಿಯಂತ್ರಿಸುವ ವಿದ್ಯಾಂಗ ಇಲಾಖೆಯ ವ್ಯಾಪ್ತಿಯಲ್ಲಿ ಸಿಬಿಎಸ್ಇ ಶೈಕ್ಷಣಿಕ ಗುಣಮಟ್ಟ ನಿಯಂತ್ರಣ ಸಾಧ್ಯವಿಲ್ಲ. ನಿರಾಪೇಕ್ಷಣಾ ಪತ್ರ ಪಡೆಯುವುದಕ್ಕೇ ಎಲ್ಲ ಶಾಲೆಗಳ ಎಲ್ಲ ವ್ಯವಹಾರಗಳು ಸೀಮಿತವಾಗಿರುತ್ತವೆ. ಹಾಗಾಗಿಯೇ ಖಾಸಗಿ ಶಾಲೆಗಳಲ್ಲಿ ಪ್ರಾಥಮಿಕ ತರಗತಿಯ ಪಠ್ಯಗಳಿಗೆ ಸುಮಾರು 2 ರಿಂದ ಮೂರು ಸಾವಿರ ರೂಪಾಯಿ ಗಳನ್ನು ವ್ಯಯಿಸಬೇಕಾಗುತ್ತದೆ. ಅಂತಹ ಪಠ್ಯಗಳಲ್ಲಿ ಗೋಸ್ಟ್ ಟ್ರಬಲ್ ಎನ್ನುವ ಅಭಾಸಕಾರಿ ಪಠ್ಯಗಳೂ ಸೇರಿಕೊಂಡಾಗ ಚರ್ಚೆ ಗಳು ನಡೆಯುವುದಿಲ್ಲ.
ಒಟ್ಟಿನಲ್ಲಿ ಕೇಂದ್ರ ಪಠ್ಯವಿರಲಿ, ಅಥವಾ ರಾಜ್ಯದ ಪಠ್ಯಕ್ರಮವಿರಲಿ, ಪ್ರಾದೇಶಿಕತೆಯ ಔಚಿತ್ಯ ಮಕ್ಕಳ ಕಲಿಕೆಯಲ್ಲಿ ಅತ್ಯಗತ್ಯ. ಉದ್ಯಮವಾಗಿರುವ ಶಿಕ್ಷಣದಲ್ಲಿ ಕಡಕ್ ಸಿಲೆಬಸ್ ಗಳು ಬೇಕು ಎನ್ನುವ ಪೋಷಕರು ಅದರ ಅನ್ವಯಿಸುವಿಕೆಯ ಬಗ್ಗೆಯೂ ಗಮನ ಹರಿಸುವುದು ಮಕ್ಕಳ ದೃಷ್ಟಿಯಿಂದ ಅನಿವಾರ್ಯ.
Click this button or press Ctrl+G to toggle between Kannada and English