ಮಂಗಳೂರು : ಈ ಬಾರಿ ಸ್ಥಳೀಯ ಸಂಸ್ಥೆಗಳ ಚುನಾವಣಾ ಉಸ್ತುವಾರಿಯನ್ನು ಎಂಎಲ್ ಸಿ ಮೋನಪ್ಪ ಭಂಡಾರಿ ಅವರಿಗೆ ನೀಡಿರುವುದು ಹಲವರಲ್ಲಿ ಅಸಮಾಧಾನ ಉಂಟು ಮಾಡಿತ್ತು ಎನ್ನೋದು ಎಲ್ಲರಿಗೂ ಗೊತ್ತಿರುವ ಸತ್ಯ. ಅವರು ಕಲ್ಲಡ್ಕ ಭಟ್ಟರ ನಿಷ್ಠಾವಂತ ಎಂಬ ಒಂದೇ ಮಾನದಂಡದಲ್ಲಿ ಅವರಿಗೆ ಎಂಎಲ್ ಸಿ ಸ್ಥಾನ ನೀಡಲಾಗಿತ್ತು. ಅವರಲ್ಲಿ ಯಾವುದೇ ವಿಶೇಷ ಶಕ್ತಿ-ಸಾಮರ್ಥ್ಯ ಇಲ್ಲ ಎಂಬುದು ಈ ಚುನಾವಣಾ ಫಲಿತಾಂಶವೇ ಸಾರಿ ಹೇಳಿದೆ. ಅದರಲ್ಲೂ ಕಳೆದ ಬಾರಿ ಶಾಸಕ ಕೃಷ್ಣ ಜೆ.ಪಾಲೆಮಾರ್ ನೇತೃತ್ವದಲ್ಲಿ ಚುನಾವಣೆ ನಡೆದಿತ್ತು ಮತ್ತು ಉತ್ತಮ ಫಲಿತಾಂಶವೂ ಸಿಕ್ಕಿತ್ತು. ಅವರ ಏಳಿಗೆ ಸಹಿಸದ ಕೆಲವರು ಅವರನ್ನು ಪಕ್ಷದಲ್ಲಿ ಮೂಲೆಗುಂಪು ಮಾಡಲು ಶ್ರಮಿಸುತ್ತಿದ್ದಾರೆ. ಇದೇ ನೋವಿನಿಂದ ಪಾಲೇಮಾರ್ ಬಿಜೆಪಿ ಬಿಟ್ಟು ಇತರ ಪಕ್ಷಗಳಿಗೆ ಹೋಗುತ್ತಾರೆ ಎನ್ನುವ ಮಾತು ಸುರತ್ಕಲ್ ವಲಯದಲ್ಲಿಯೇ ಕೇಳಿಸಿಕೊಳ್ಳಲು ಆರಂಭವಾಗಿದೆ. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ಸತ್ಯಜೀತ್ ಸುರತ್ಕಲ್ ಅವರಿಗೆ ಟಿಕೇಟ್ ನೀಡಬೇಕು ಎಂದು ಕಲ್ಲಡ್ಕದ ಭಟ್ಟರು ಪಣ ತೊಟ್ಟಿರುವ ಕಾರಣ ಪಾಲೇಮಾರ್ ಅವರಿಗೆ ಬಿಜೆಪಿಯಿಂದ ಟಿಕೇಟ್ ಸಿಗೋದು ಕಷ್ಟವಾಗುತ್ತಿದೆ.
ಬಿಜೆಪಿಯಲ್ಲಿ ತನ್ನದೇ ಪೇಮೆಂಟ್ ಕೋಟಾದಲ್ಲಿ ಗುರುತಿಸಿಕೊಳ್ಳುತ್ತಿರುವ ಪಾಲೇಮಾರ್ ಕಲ್ಲಡ್ಕ ಭಟ್ಟರ ಜತೆಯಲ್ಲಿ ಅನ್ಯೋನ್ಯತೆಯಿಂದ ಇಲ್ಲ ಎನ್ನಲಾಗುತ್ತಿದೆ. ಇದೇ ಕಾರಣದಿಂದಲೇ ಪಾಲೇಮಾರ್ ನೀಲಿಚಿತ್ರದ ಹಗರಣದಲ್ಲಿ ಸಿಕ್ಕಿಕೊಂಡಾಗ ಅವರನ್ನು ಮಂತ್ರಿ ಪದವಿಯಿಂದ ಕಿತ್ತು ಮೂಲೆಗುಂಪು ಮಾಡಿದರಲ್ಲಿ ಭಟ್ಟರ ಕೈವಾಡ ಕೂಡ ಇದೆ ಎನ್ನೋದು ರಾಜಕೀಯ ಮೂಲಗಳಿಂದ ಹರಿದು ಬರುತ್ತಿರುವ ಸತ್ಯ. ಆದರೂ ಪಾಲೇಮಾರ್ ಈ ಎಲ್ಲ ವಿಚಾರಗಳಿಂದ ದೂರ ಸರಿಯಲು ಯೋಚನೆ ಮಾಡಿದ್ದು ಮಂಗಳೂರಿನ ಸುರತ್ಕಲ್ ಕ್ಷೇತ್ರದಿಂದ ಈ ಬಾರಿ ಟಿಕೇಟ್ ಲಭಿಸದೇ ಹೋದರೆ ಇತರ ಪಕ್ಷಗಳಿಂದ ಟಿಕೇಟ್ ಪಡೆದುಕೊಂಡು ಚುನಾವಣೆಗೆ ನಿಲ್ಲುವ ಕುರಿತು ಯೋಜನೆ ರೂಪಿಸಿದ್ದಾರೆ ಎನ್ನಲಾಗುತ್ತಿದೆ. ಈಗಾಗಲೇ ಜನಪರವಾದ ಕಾರ್ಯಗಳಿಂದ ಗುರುತಿಸಿಕೊಂಡಿರುವ ಪಾಲೇಮಾರ್ ಸುರತ್ಕಲ್ ವಲಯದಲ್ಲಿ ಸಾಕಷ್ಟು ಕೆಲಸ ಮಾಡಿದ್ದಾರೆ. ಅದಕ್ಕೂ ಮುಖ್ಯವಾಗಿ ಉತ್ತಮ ಸಂಘಟನಾ ಶಕ್ತಿಯ ಜತೆಯಲ್ಲಿ ಆರ್ಥಿಕವಾಗಿ ಬಲವಾಗಿರುವ ಪಾಲೇಮಾರ್ ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿಯಿಂದ ಸಿಡಿದು ಬೀಳುವ ಲಕ್ಷಣಗಳನ್ನು ತಮ್ಮ ವಲಯದಲ್ಲಿ ಬಿಟ್ಟಿದ್ದಾರೆ.
ಮನಪಾ ಚುನಾವಣೆಯಲ್ಲಿ ಬಿಜೆಪಿ ಸೋಲಲು ಭಂಡಾರಿ ಅವರೇ ಮೂಲ ಕಾರಣ ಎನ್ನುವ ಮಾತುಗಳು ಚಾಲ್ತಿಗೆ ಬಂದಿದೆ. ಯಾಕೆಂದರೆ ಪಾಲೆಮಾರ್ ರಲ್ಲಿ ನಾಯಕತ್ವ ಮತ್ತು ಸಂಘಟನೆಯ ಶಕ್ತಿ ಇದೆ. ಒಂದೊಮ್ಮೆ ಅವರಿಗೆ ಚುನಾವಣಾ ಉಸ್ತುವಾರಿ ನೀಡಿರುತ್ತಿದ್ದರೆ ಫಲಿತಾಂಶದ ರೂಪವೇ ಬೇರೆಯಾಗುತ್ತಿತ್ತು. ತನ್ನ ಕ್ಷೇತ್ರದಲ್ಲಿ ಈಗಲೂ ಜನಪ್ರಿಯತೆ ಉಳಿಸಿಕೊಂಡಿರುವ ಅವರನ್ನು ಬಿಜೆಪಿ ವಿನಾಕಾರಣ ನಿರ್ಲಕ್ಷಿಸುವಂತೆ ಕಂಡು ಬರುತ್ತಿದೆ. ಬಿಜೆಪಿಯ ಇಂಥ ಕೆಲವು ಹೆಜ್ಜೆಗಳೇ ಅದಕ್ಕೆ ಮಾರಕವಾಗುತ್ತಿದೆ. ಆರ್ ಎಸ್ ಎಸ್ ನ ಅತಿಯಾದ ಹಿಡಿತವೂ ಆ ಪಕ್ಷದ ಬೆಳವಣಿಗೆ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ. ಇನ್ನಾದರೂ ಬಿಜೆಪಿ ನಾಯಕರು ಚಿಂತಿಸಬೇಕಾಗಿದೆ ಎಂದು ಹೇಳುತ್ತಿದ್ದಾರೆ ಪಾಲೆಮಾರ್ ಕ್ಷೇತ್ರದ ಜನತೆ.
ಮಂಗಳೂರು ಮಹಾ ನಗರ ಪಾಲಿಕೆ ಅಸ್ತಿತ್ವಕ್ಕೆ ಬಂದ ಎರಡು ದಶಕಗಳಲ್ಲಿ ಮೊದಲ ಬಾರಿಗೆ ಕಳೆದ ಅವಧಿ ಯಲ್ಲಿ ಬಿಜೆಪಿ ಅಧಿಕಾರದ ರುಚಿ ಕಂಡಿತ್ತು. ಅಧಿಕಾರ ಯಾವ ರೀತಿ ಸದುಪಯೋಗ ಪಡಿಸಿಕೊಂಡಿತು ಎಂಬುದು ಬೇರೆ ಮಾತು. ಆದರೆ ಮನಪಾ ಅಧಿಕಾರದ ಗದ್ದುಗೆ ಏರಲು ಮಾಜಿ ಸಚಿವ ಕೃಷ್ಣ ಪಾಲೇಮಾರ್ ಕೊಡುಗೆ ಮಹತ್ವದ್ದು ಎಂಬುದನ್ನು ಮರೆಯುವಂತಿಲ್ಲ.
ಕಳೆದ ಮನಪಾ ಚುನಾವಣೆಯ ಅವಧಿಯಲ್ಲಿ ಚುನಾವಣೆಯ ಹೊಣೆಗಾರಿಕೆಯನ್ನು ಕೃಷ್ಣ ಪಾಲೇಮಾರರಿಗೆ ವಹಿಸಲಾಗಿತ್ತು. ಅಳೆದು ತೂಗಿ ಅಭ್ಯರ್ಥಿ ಗಳ ಆಯ್ಕೆ ಅಂತಿಮಗೊಳಿಸಿ ಅನಿರೀಕ್ಷಿತ ಫಲಿತಾಂಶ ತಂದು ಕೊಟ್ಟಿದ್ದ ಪಾಲೇಮಾರ್ ದೆಸೆಯಿಂದಾಗಿ ಬಿಜೆಪಿ ಐದು ವರ್ಷಗಳ ಆಡಳಿತ ಮನಪಾ ದಲ್ಲಿ ನಡೆಸುವಂತಾಗಿತ್ತು.
ಈಗ ಮತ್ತೆ ಚುನಾವಣೆ ಬಂದಿದೆ. ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಮನಪಾ ಚುನಾವಣೆಯ ಹೊಣೆಗಾರಿಕೆ ಯನ್ನು ಬಿಜೆಪಿ ವರಿಷ್ಠರು ವಿಧಾನ ಪರಿಷತ್ ಸದಸ್ಯ ಮೋನಪ್ಪ ಭಂಡಾರಿಯವರಿಗೆ ವಹಿಸಿದ್ದಾರೆ. ಪಕ್ಷದ ಜಿಲ್ಲಾ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿರುವ ಮೋನಪ್ಪ ಭಂಡಾರಿ ಪಕ್ಷದ ಸಂಘಟನೆಯಲ್ಲಿ ತಮ್ಮ ಚಾಕಚಕ್ಯತೆ ತೋರಿಸಿದ್ದಾರೆ. ಪಕ್ಷ ಸಂಕಷ್ಟದಲ್ಲಿದ್ದಾಗ ಅದನ್ನು ಸಮರ್ಥಿಸಿಕೊಳ್ಳುವ ಕಾರ್ಯವನ್ನೂ ಚೆನ್ನಾಗಿಯೇ ನಿಭಾಯಿಸಿದ್ದಾರೆ. ಮೊದಲ ಬಾರಿ ಚುನಾವಣೆಯ ಹೊಣೆ ಹೊತ್ತಿದ್ದಾರೆ. ಪಾಲೇಮಾರರ ಕೃಪೆಯಿಂದಾಗಿ ಬಿಜೆಪಿ ಮನಪಾದಲ್ಲಿ ಅಧಿಕಾರಕ್ಕೆ ಬಂದಿತು ಎಂದು ಪಾಲೇಮಾರರ ವಿರೋಧಿಗಳೂ ಹೇಳುವುದು ಸುಳ್ಳಲ್ಲ. ಆದರೆ ಈ ಬಾರಿ ಪಾಲೇಮಾರರನ್ನು ಚುನಾವಣೆಯ ಹೊಣೆಗಾರಿಕೆಯಿಂದ ದೂರ ಇಡಲಾಗಿದೆ. ಇದರ ನಷ್ಟ ಈ ಬಾರಿಯ ಮನಪಾ ಚುನಾವಣೆಯಲ್ಲಿ ಬಿಜೆಪಿ ಅನುಭವಿಸಲಿದೆ ಎನ್ನುತ್ತಾರೆ ಪಾಲೇಮಾರರ ಆತ್ಮೀಯರು.
ಮೋನಪ್ಪ ಭಂಡಾರಿ ತಮ್ಮ ಪಾಲಿನ ಕಾರ್ಯ ಸಮರ್ಥವಾಗಿ ನಿಭಾಯಿಸಬಲ್ಲವರಾಗಿದ್ದಾರೆ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಮೋನಪ್ಪ ಭಂಡಾರಿಯವರ ವರ್ಚಸ್ಸಿನಿಂದ ಮಾತ್ರ ಚುನಾವಣೆ ಎದುರಿಸುವ ಶಕ್ತಿ ಗಳಿಸಿದವರಲ್ಲ. ಬಿಜೆಪಿಯ ಸಾಂಪ್ರದಾಯಿಕ ಮತಗಳ ಹೊರತಾದ ಮತಗಳನ್ನು ಮುಖ್ಯವಾಗಿ ಮುಸ್ಲಿಮರ ಮತಗಳನ್ನು ಬಿಜೆಪಿಗೆ ಸೆಳೆಯುವಲ್ಲಿ ಪಾಲೇಮಾರರು ಯಶಸ್ವಿಯಾದವರು. ಅವರು ಸ್ಪರ್ಧೆ ಯಲ್ಲಿದ್ದರೆ, ಸುರತ್ಕಲ್ ವಲಯದ ಮುಸ್ಲಿಂ ಕಾರ್ಯಕರ್ತರ ದಂಡೇ ಅವರಿಗಿರುತ್ತದೆ. ಕಳೆದ ಮನಪಾ ಚುನಾವಣೆಯಲ್ಲಿ ಅತಿ ಹೆಚ್ಚು ಸ್ಥಾನಗಳು ಬಿಜೆಪಿ ಪಡೆಯುವಂತಾಗಿದ್ದು ಸುರತ್ಕಲ್ ವಲಯದಲ್ಲಿ. ಇದು ಪಾಲೇಮಾರರು ಶಾಸಕರಾಗಿ ಪ್ರತಿನಿಧಿಸುವ ಪ್ರದೇಶ ಎಂಬುದು ಗಮನಿಸಬೇಕಾದ ಅಂಶ.
ಈಗ ಪಾಲೇಮಾರರ ಸ್ಥಿತಿಗತಿಯೂ ಬದಲಾಗಿದೆ, ರಾಜಕೀಯ ಪರಿಸ್ಥಿತಿಯೂ ಬದಲಾಗಿದೆ. ಪಾಲೇಮಾರರು ತಮ್ಮ ವ್ಯಾಪಾರ ವಹಿವಾಟಿನತ್ತ ಹೆಚ್ಚಿನ ಗಮನ ಹರಿಸಿದ್ದಾರೆ. ಶಾಸಕನಾಗಿ ಜನರ ಸೇವೆ ಮಾಡುತ್ತಿದ್ದಾರೆ. ಪಕ್ಷದ ಚಟುವಟಿಕೆಗಳಲ್ಲಿ ಸಕ್ರಿಯರಾಗಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಚುನಾವಣೆಯ ಹೊಣೆಗಾರಿಕೆ ಹೊತ್ತಿರುವ ಮೋನಪ್ಪ ಭಂಡಾರಿ ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರುವಲ್ಲಿ ಸಫಲರಾಗುತ್ತಾರೆಯೇ ಎಂಬುದೀಗ ಬಿಜೆಪಿಗರಲ್ಲಿರುವ ಕುತೂಹಲದ ವಿಷಯ.
ಕಳೆದ ಬಾರಿಯ ಮನಪಾ ಚುನಾವಣೆಯಲ್ಲಿ ಕೃಷ್ಣ ಜೆ.ಪಾಲೇಮಾರ್ ಪ್ರಭಾವದಿಂದಾಗಿಯೇ ಬಿಜೆಪಿ ಅಧಿಕಾರಕ್ಕೆ ಬಂದಿತ್ತು. ಮನಪಾ ಇತಿಹಾಸದಲ್ಲೇ ಬಿಜೆಪಿ ಆಡಳಿತದ ಗದ್ದುಗೆಗೆ ಬಂತು. ಕಾಂಗ್ರೆಸ್ ಪ್ರಾಬಲ್ಯ ಇರುವ ಬಹುತೇಕ ವಾರ್ಡ್ ಗಳಲ್ಲಿ ಬಿಜೆಪಿ ಗೆದ್ದುಕೊಂಡಿತ್ತು. ಗಣೇಶ್ ಹೊಸಬೆಟ್ಟು, ರಜನಿ ದುಗ್ಗಣ್ಣ, ಶಂಕರ್ ಭಟ್, ಪ್ರವೀಣ್ ಇವರೆಲ್ಲರೂ ಪಾಲೇಮಾರ್ ಕೃಪೆಯಿಂದಲೇ ಮೇಯರ್ ಹುದ್ದೆ ಅಲಂಕರಿಸಿದ್ದರು. ಆದರೆ ಕೊನೆಯ ಅವಧಿಯಲ್ಲಿ ಮೇಯರ್ ಆಯ್ಕೆ ಸಂಘರ್ಷದಲ್ಲಿ ಪಾಲೇಮಾರ್ ಅವರನ್ನು ದೂರ ಇಟ್ಟ ಪರಿಣಾಮ ಮೇಯರ್ ಹುದ್ದೆಯನ್ನೆ ಕಳೆದುಕೊಳ್ಳುವ ಸ್ಥಿತಿ ನಿರ್ಮಾ ಣವಾಗಿತ್ತು. ಈ ಬಾರಿಯೂ ಪಾಲೇಮಾರ್ ಚುನಾವಣಾ ಉಸ್ತುವಾರಿ ವಹಿಸಿದ್ದರೆ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುವ ಸಾಧ್ಯತೆ ಇತ್ತು ಎನ್ನುತ್ತಾರೆ ಬಿಜೆಪಿ ಬೆಂಬಲಿಗರು.
Click this button or press Ctrl+G to toggle between Kannada and English