ಮಂಗಳೂರು : ಗ್ಲ್ಯಾಮ್ ಲುಕ್ ಯಾವ ಕಡೆನೂ ನೋಡಿದರೂ ಮಿಂಚು ಹರಿಸುವ ಬ್ಯೂಟಿ. ಜಾಸ್ತಿ ಬಾಡಿ ವೈಟ್ ಇಲ್ಲದ ಈ ಹುಡುಗಿ ಕಾಲಿವುಡ್ ನಲ್ಲಿ ಓಡಲು ರೆಡಿಯಾದ ಚಿಗರೆ. ಕನ್ನಡದ ನೀರು ಕುಡಿದು ಬೆಳೆದ ಹುಡುಗಿ ಈಗ ಕಾಲಿವುಡ್ ಸಿನ್ಮಾ ರಂಗದಲ್ಲಿ ಮೃಷ್ಟಾನ್ನ ಭೋಜನ ಸವಿಯುವ ಚಾನ್ಸ್ ಸಿಕ್ಕಿದೆ. ಆದರೆ ಕನ್ನಡದಲ್ಲಿ ಸಿಗಬೇಕಾದ ಮಣೆ ಈಗ ಕಾಲಿವುಡ್ ಸಿನ್ಮಾ ಇಂಡಸ್ಟ್ರಿ ಕೊಟ್ಟಿದೆ ಎನ್ನೋದು ಗಮನಿಸಬೇಕಾದ ವಿಷ್ಯಾ ಅಲ್ವಾ.. ಮಾರಾಯ್ರೆ..?
ಕನ್ನಡದ ಬಹುತೇಕ ಯುವ ನಟಿಯರು ಇದೀಗ ಪರಭಾಷೆ ಚಿತ್ರಗಳಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ! ಅದಕ್ಕೆ ಕಾರಣ, `ಕನ್ನಡದಲ್ಲಿ ಸಿಗದ ಅವಕಾಶ’ ಎಂಬುದು ಅಲ್ಲಿಗೆ ಹೊರಟವರ ಮಾತು. ಈಗಾಗಲೇ ಕನ್ನಡದ ಬೆರಳೆಣಿಕೆಯಷ್ಟು ನಟಿಮಣಿಗಳು ತಮಿಳು, ತೆಲುಗು ಚಿತ್ರರಂಗದತ್ತ ಮುಖಮಾಡಿರುವುದುಂಟು. ಅಷ್ಟೇ ಅಲ್ಲ, ಅಲ್ಲಿ ತಕ್ಕಮಟ್ಟಿಗೆ ಒಂದಷ್ಟು ಸುದ್ದಿಯಾಗಿರುವುದೂ ದಿಟ.
ಈಗ ಕುಡ್ಲದ ಪೊಣ್ಣು( ಹೆಣ್ಣು) ಕನ್ನಡತಿ ಸಂಚಿತಾ ಶೆಟ್ಟಿ ಮೆಲ್ಲನೆ ಸುದ್ದಿಯಾಗುತ್ತಿರುವ ಬೆಡಗಿ. ಕನ್ನಡದಲ್ಲೇ ಒಳ್ಳೆಯ ಕಲಾವಿದೆಯಾಗಿ ಗುರುತಿಸಿಕೊಳ್ಳಬೇಕೆಂಬ ಮಹಾದಾಸೆಯಲ್ಲಿದ್ದ ಸಂಚಿತಾ ಶೆಟ್ಟಿಗೆ ಇಲ್ಲಿ, ಅಷ್ಟೇನೂ ಅದೃಷ್ಟ ಹುಡುಕಿ ಬರಲಿಲ್ಲ. ಹಾಗೊಮ್ಮೆ ತಮಿಳು ಚಿತ್ರರಂಗದತ್ತ ಮುಖ ಮಾಡಿದ್ದೇ ತಡ, ಅವಕಾಶಗಳು ಒಂದರ ಮೇಲೊಂದರಂತೆ ಹರಿದು ಬರುತ್ತಿವೆ ಎನ್ನೋದು ಅವರ ಮಾತು.
ಇಷ್ಟಕ್ಕೂ ಯಾರೂ ಈ ಸಂಚಿತಾ ಶೆಟ್ಟಿ ಎಂಬ ಪ್ರಶ್ನೆ ಮೂಡೋದು ಸಹಜ. ಸಂಚಿತಾ ಶೆಟ್ಟಿ ಅಪ್ಪಟ ಕನ್ನಡತಿ. ಈ ಹಿಂದೆ ಬಿಡುಗಡೆಯಾದ `ಉಡ’ ಮತ್ತು `ಭಯ ಡಾಟ್ ಕಾಮ್’ ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಇನ್ನೂ ಬಿಡುಗಡೆಯಾಗದ `ಗಗನ ಚುಕ್ಕಿ’ ಎಂಬ ಚಿತ್ರದಲ್ಲೂ ಸಂಚಿತಾ ಶೆಟ್ಟಿ ನಾಯಕಿ. ಸಂಚಿತಾ ಶೆಟ್ಟಿ ಕಾಲಿವುಡ್ ನ `ಕೊಲೈಕಾರನ್’ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಯಶಸ್ವಿ`ಮೈನಾ’ ಚಿತ್ರದ ನಾಯಕ ವಿದಾರ್ಥ್ ನಾಯಕ. ಇನ್ನು ತಮಿಳ್ ಸೆಲ್ವನ್ ನಿರ್ದೇಶಕರು.
ಈ ಚಿತ್ರ ಸಂಕ್ರಾಂತಿ ದಿನದಂದು ತೆರೆಕಂಡು ತಮಿಳುನಾಡಿನಾದ್ಯಂತ ಸಿಕ್ಕಾಪಟ್ಟೆ ಸುದ್ದಿ ಮಾಡಿದೆ. ಈ ಮೂಲಕ ಸಂಚಿತಾ ಶೆಟ್ಟಿಗೆ ತಮಿಳು ಚಿತ್ರರಂಗದಲ್ಲಿ ಇನ್ನಿಲ್ಲದ ಹೊಗಳಿಕೆಗಳ ಮಹಾಪೂರವೇ ಹರಿದುಬಂದಿದೆ. ಅಷ್ಟೇ ಅಲ್ಲ, ಇದೀಗ ಒಂದಷ್ಟು ಅವಕಾಶಗಳು ಹುಡುಕಿ ಬರುತ್ತಿವೆಯಂತೆ.
`ನಟಿಯಾಗಿ ಸಿನಿಮಾ ರಂಗಕ್ಕೆ ಎಂಟ್ರಿಯಾಗಿದ್ದಕ್ಕೂ ಈಗ ಸಾರ್ಥಕವಾಗಿದೆ’ ಎಂದು ಖುಷಿಯಿಂದಲೇ ಹೇಳಿಕೊಳ್ಳುವ ಸಂಚಿತಾ ಶೆಟ್ಟಿ, ನನಗೆ, ಕನ್ನಡದಲ್ಲೇ ಕಲಾವಿದೆಯಾಗಿ ಗುರುತಿಸಿಕೊಳ್ಳುವ ಹಂಬಲವಿದೆ. ಆದರೆ, ಇಲ್ಲಿ ನನಗೆ ಸರಿಯಾದ ಅವಕಾಶಗಳೇ ಸಿಗಲಿಲ್ಲ. ಸಿಕ್ಕರೂ ಹೇಳಿಕೊಳ್ಳುವಂತಹ ಗೆಲುವು ಸಿಗಲಿಲ್ಲ. ತಮಿಳು ಚಿತ್ರದಲ್ಲಿ ನಟಿಸುವ ಅವಕಾಶ ಒದಗಿ ಬಂತು. ಕಥೆಯೂ ಚೆನ್ನಾಗಿತ್ತು. ಅಲ್ಲಿಯೂ ಅದೃಷ್ಟ ಪರೀಕ್ಷೆಗಿಳಿಯೋಣ ಅಂದುಕೊಂಡು ಎಂಟ್ರಿಕೊಟ್ಟೆ. ಅದೃಷ್ಟ ನನ್ನ ಪಾಲಿಗಿತ್ತು. ಈಗ ಚಿತ್ರಕ್ಕೆ ಒಳ್ಳೆಯ ಪ್ರತಿಕ್ರಿಯೆ ದೊರೆಯುತ್ತಿದೆ. ನನಗೂ ಹಲವು ನಿರ್ದೇಶಕರಿಂದ ಕರೆ ಬರುತ್ತಿದೆ. ಸದ್ಯಕ್ಕೆ, ಮತ್ತೊಂದು ಚಿತ್ರವನ್ನೂ ಒಪ್ಪಿಕೊಂಡಿದ್ದೇನೆ. ಕಥೆ ಮತ್ತು ಪಾತ್ರ ಚೆನ್ನಾಗಿದೆ. ಫೆಬ್ರವರಿಯಲ್ಲಿ ಶುರುವಾಗಲಿದೆ ಎಂದಷ್ಟೇ ಹೇಳುತ್ತಾರೆ ಸಂಚಿತಾ ಶೆಟ್ಟಿ.
ನಾನು ತಮಿಳು ಚಿತ್ರಗಳಲ್ಲಿ ನಟಿಸಿದ್ದರೂ, ಅಲ್ಲಿ ಎಷ್ಟೆ ಬ್ಯುಜಿಯಾದರೂ, ನನ್ನ ಮಾತೃಭಾಷೆ ಮರೆಯೋದಿಲ್ಲ. ಕನ್ನಡ ಚಿತ್ರದಲ್ಲಿ ನಟಿಸುವ ಅವಕಾಶಸಿಕ್ಕರೆ ಖಂಡಿತ ಬಿಡುವುದಿಲ್ಲ. ನಾನು ಮೊದಲು ನಟಿ ಆಗಿ ಗುರುತಿಸಿಕೊಂಡಿದ್ದು ಕನ್ನಡ ಚಿತ್ರದ ಮೂಲಕ. ನನಗೇ ಕನ್ನಡವೇ ಕಂಫರ್ಟ್. ತಮಿಳು ಗೊತ್ತಿರದ ಭಾಷೆ. ಕೊಂಚ ಕಷ್ಟವಾಗುತ್ತಿದೆ. ಆದರೂ, ನೆಲೆ ಕಂಡುಕೊಳ್ಳುವ ಉದ್ದೇಶದಿಂದ ತಮಿಳು ಭಾಷೆ ಕಲಿತುಕೊಂಡಿದ್ದೇನೆ. ಅದೇನೆ ಇದ್ದರೂ ಕನ್ನಡವೇ ನನಗೆ ಅಚ್ಚುಮೆಚ್ಚು ಎನ್ನುತ್ತಲೇ ಇಲ್ಲಿನ ಅವಕಾಶವನ್ನು ಎದುರು ನೋಡುತ್ತಾರೆ ಸಂಚಿತಾ. ಟೋಟಲಿ ಕನ್ನಡದ ಹುಡುಗಿ ಸಂಚಿತಾ ಪಕ್ಕದ ಕಾಲಿವುಡ್ ನಲ್ಲಿ ಮಿಂಚುತ್ತಿರುವುದು ಮಾತ್ರ ಗ್ರೇಟ್ ವಿಷ್ಯಾ ಅಲ್ವಾ..?
ಮಣಿರತ್ನಂ ಎಂದರೆ ಇಷ್ಟ :
ದಕ್ಷಿಣ ಭಾರತದ ಖ್ಯಾತ ಚಿತ್ರ ನಿರ್ದೇಶಕ ಮಣಿರತ್ನಂ ಎಂದರೆ ಸಂಚಿತಾಳಿಗೆ ತುಂಬಾನೇ ಇಷ್ಟ. ಯಾವುದೇ ಚಿತ್ರದ ಶೂಟಿಂಗ್ ಇಲ್ಲದ ಸಮಯದಲ್ಲಿ ಮನೆಯಲ್ಲಿ ಕೂತಿ ಮಣಿ ನಿರ್ದೇಶನದ ಚಿತ್ರಗಳನ್ನು ನೋಡುವುದು ಎಂದರೆ ಸಂಚಿತಾಳಿಗೆ ಬರೀ ಖುಷಿ. ಅದರಲ್ಲೂ ಬಾಂಬೆ, ರೋಜಾ, ದಳಪತಿ ಚಿತ್ರಗಳನ್ನು ಹತ್ತು ಹತ್ತು ಬಾರಿ ನೋಡಿಕೊಂಡು ಆ ಚಿತ್ರಗಳ ಪಾತ್ರಗಳಂತೆ ನಟಿಸುವುದಿದೆ. ಸಿನ್ಮಾ ಬದುಕಿನಲ್ಲಿ ಮಣಿರತ್ನಂರ ಒಂದು ಚಿತ್ರದಲ್ಲಾದರೂ ಬಣ್ಣ ಹಾಕಬೇಕು ಎನ್ನುವ ಉದ್ದೇಶ ಇಟ್ಟುಕೊಂಡಿರುವ ಸಂಚಿತಾಳಿಗೆ ಇತ್ತೀಚೆಗಿನ ಚಿತ್ರ ನಿರ್ದೇಶಕರಾದ ಮುರುಗದಾಸ್, ಗೌತಮ್ ಮೆನನ್ ಚಿತ್ರಗಳಲ್ಲೂ ಪಾತ್ರ ಮಾಡಬೇಕು ಎನ್ನುವ ಕನಸ್ಸಿದೆ.
ಜಲಪಾತದ ಕೆಳಗೆ ನಿಲ್ಲಬೇಕು:
ಸಂಚಿತಾ ಶೆಟ್ಟಿ ತುಂಬಾನೇ ಫ್ರಿ ಟೈಮ್ ಇದ್ದಾಗ ಸಂಗೀತ ಕೇಳುತ್ತಾರೆ. ಚಾಟಿಂಗ್, ವಿಡಿಯೋ ಗೇಮ್ಸ್ ಅಂತ ಹೇಳಿಕೊಂಡು ಬ್ಯುಸಿಯಾಗಿರಲು ಬಯಸುತ್ತಾರೆ. ಇನ್ನೂ ಟೈಮ್ ಉಳಿದರೆ ಡ್ಯಾನ್ಸ್ ಮಾಡಲು ರೆಡಿಯಾಗುತ್ತಾರೆ. ಥ್ರಿಲ್ಲರ್ ಕಾದಂಬರಿಗಳನ್ನು ಓದುವುದು ಎಂದರೆ ಸಂಚಿತಾಳಿಗೆ ಬರೀ ಖುಷಿ. ಚಿತ್ರರಂಗದಲ್ಲಿ ನಟ ಸೂರ್ಯ ಹಾಗೂ ನಟಿ ರೇವತಿ ಎಂದರೆ ಅಪಾರ ಇಷ್ಟ. ಶಾಲಾ ಪ್ರವಾಸದ ಟೈಮ್ ನಲ್ಲಿ ಜಲಪಾತದ ಕೆಳಗೆ ನಿಂತು ಸ್ನಾನ ಮಾಡುತ್ತಿದ್ದರಂತೆ. ಆದರೆ ಈಗ ಅಂತಹ ಚಾನ್ಸ್ ಸಿಗುತ್ತಿಲ್ಲ ಎನ್ನುವುದು ಅವರ ಕೊರಗು.
Click this button or press Ctrl+G to toggle between Kannada and English