ಮಂಗಳೂರು : ಪಕ್ಷದಿಂದ ಉಚ್ಛಾಟಿಸಲಾಗಿದೆ ಎಂದು ಮಾಧ್ಯಮಗಳಲ್ಲಿ ಪ್ರಕಟವಾಗಿದೆ ಆದರೆ ಈ ಬಗ್ಗೆ ಯಾವುದೇ ಮಾಹಿತಿ ತನಗೆ ಲಭಿಸಿಲ್ಲ ಮತ್ತು ಯಾವುದೇ ಆದೇಶದ ಪ್ರತಿ ನನ್ನ ಕೈ ಸೇರಿಲ್ಲ ಮಾದ್ಯಮಗಳಲ್ಲಿ ಪ್ರಕಟವಾದ ವರದಿಯಿಂದಲೇ ಈ ಬಗ್ಗೆ ತಿಳಿದಿದ್ದೇನೆ ಎಂದು ಜೆಡಿಎಸ್ ದ.ಕ.ಜಿಲ್ಲಾ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಡಿ.ಎಂ.ಅಸ್ಲಂ ಹೇಳಿದ್ದಾರೆ. ಈ ಕುರಿತು ಗುರುವಾರ ಪತ್ರಿಕಾ ಘೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ನನ್ನನ್ನು ಪಕ್ಷದಿಂದ ಅಮಾನತು ಗೊಳಿಸಿರುವ ಬಗ್ಗೆ ಹೇಳಿಕೆ ನೀಡಿರುವ ಪಕ್ಷದ ಜಿಲ್ಲಾಧ್ಯಕ್ಷ ಎಂ.ಬಿ.ಸದಾಶಿವ ಪಕ್ಷಕ್ಕಾಗಿ ಯಾವುದೇ ರೀತಿಯ ಅಭಿವೃದ್ದಿ ಕಾರ್ಯಗಳನ್ನು ಮಾಡಿಲ್ಲ, ತಮ್ಮ ಸ್ವಹಿತಾಸಕ್ತಿಗಾಗಿ ಪಕ್ಷವನ್ನು ಬಳಕೆ ಮಾಡಿಕೊಳ್ಳುತ್ತಿದ್ದಾರೆ.
‘ನಗರದ ಬೆಂದೂರ್ ವೆಲ್‌ನಲ್ಲಿ ಪಕ್ಷದ ಜಿಲ್ಲಾ ಕಚೇರಿಯಿದ್ದರೂ ಅಲ್ಲಿ ಕಾರ್ಯಚಟುವಟಿಕೆ ನಡೆಸಲು ವ್ಯವಸ್ಥೆಯಿಲ್ಲ. ಕಚೇರಿಯ 70 ಸಾವಿರ ರೂಪಾಯಿ ಬಾಡಿಗೆ ಕಟ್ಟಲು ಬಾಕಿಯಿದೆ. ವಿದ್ಯುತ್ ಸಂಪರ್ಕವೂ ಇಲ್ಲ. ಹೀಗಿರುವಾಗ ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಅಭ್ಯರ್ಥಿಯಾಗಿದ್ದ ಸದಾನಂದ ಶೆಟ್ಟಿ ಸ್ವಂತ ಖರ್ಚಿನಲ್ಲಿ ಫಳ್ನೀರ್‌ನಲ್ಲಿ ಕಚೇರಿ ತೆರೆದರಲ್ಲದೆ, ಎಲ್ಲ ವ್ಯವಸ್ಥೆಯನ್ನೂ ಮಾಡಿದ್ದರು.
ಮಂಗಳೂರು ಮಹಾನಗರ ಪಾಲಿಕೆ ಚುನಾವಣೆಗೆ ನಾಗರಾಜ ಶೆಟ್ಟಿ, ಸದಾನಂದ ಶೆಟ್ಟಿ, ಚಿತ್ತರಂಜನ್ ರೈ, ಡಾ. ಉದಯ ಕುಮಾರ್, ಎಂ.ಜಿ. ಹೆಗಡೆ ಹಾಗು ಕೆಲವು ನಾಯಕರು ಫಳ್ನೀರ್ ಕಚೇರಿಯಲ್ಲಿ ೪೮ ಅಭ್ಯರ್ಥಿಗಳ ಪಟ್ಟಿಯನ್ನು ತಯಾರಿಸಿ ಇದಕ್ಕಾಗಿ ತಮ್ಮ ವೈಯಕ್ತಿಕ ಹಣವನ್ನು ಖರ್ಚು ಮಾಡಿದ್ದಾರೆ. ಅಲ್ಲಿಗೆ ಬಂದು ‘ಬಿ’ ಫಾರ್ಮ್ ತಂದು ಕೊಟ್ಟ ಜಿಲ್ಲಾಧ್ಯಕ್ಷ ಎಂ.ಬಿ. ಸದಾಶಿವ ಮತ್ತೆ ಅತ್ತ ತಲೆ ಹಾಕಲಿಲ್ಲ. ಪಕ್ಷಕ್ಕೆ ಯಾವುದೇ ಹಣಕಾಸಿನ ನೆರವು ನೀಡಿಲ್ಲ. ಇವರ ಅಧ್ಯಕ್ಷತೆಯಲ್ಲಿರುವ ಪಕ್ಷವು ಇನ್ನು ಕೆಲವೇ ದಿನಗಳಲ್ಲಿ ಕರಾವಳಿಯಲ್ಲಿ ನೆಲೆ ಕಳೆದುಕೊಳ್ಳುತ್ತದೆ ಎಂದವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಪಿ.ಎಚ್.ಎಂ. ರಫಿಕ್ ಕಾಟಿಪಳ್ಳ, ಅಬೂಬಕರ್ ಕುಪ್ಪೆಪದವು, ನಾಸಿರ್ ಬಂದರ್, ತಮೀಮ್ ವಾಮಂಜೂರು, ಇಮ್ರಾನ್ ಉಪಸ್ಥಿತರಿದ್ದರು.
Click this button or press Ctrl+G to toggle between Kannada and English