ಮಂಗಳೂರು : ಸ್ಥಳೀಯ ಕೇಬಲ್ ಟಿ.ವಿ. ಚಾನೆಲ್‌ಗಳಲ್ಲಿ ಪ್ರಸಾರವಾಗುವ ಚುನಾವಣಾ ಸಂಬಂಧಿತ ವರದಿ ಹಾಗು ಜಾಹಿರಾತುಗಳ ಬಗ್ಗೆ ಗಮನ ಹರಿಸಲು ಮೀಡಿಯಾ ಸರ್ಟಿಫಿಕೇಶನ್ ಅಂಡ್ ಮಾನಿಟರಿಂಗ್ ಕಮಿಟಿ (ಎಂಸಿಎಂಸಿ) ಯೊಂದನ್ನು ಜಾರಿಗೆ ತರಲಾಗಿದೆ. ಮಂಗಳೂರಿನ ಜಿಲ್ಲಾ ವಾರ್ತ ಇಲಾಖೆ ಕಛೇರಿ ಸಭಾಂಗಣದಲ್ಲಿ ಪ್ರಾರಂಭಗೊಂಡಿರುವ ಈ ವ್ಯವಸ್ಥೆ ದಿನದ 24 ಗಂಟೆಗಳ ಕಾಲವೂ ಕಾರ್ಯಾಚರಿಸಲಿದ್ದು, ತಾತ್ಕಾಲಿಕ ಎರವಲು ಸೇವೆಯಲ್ಲಿ ಬೇರೆ ಬೇರೆ ಇಲಾಖೆಗಳ ಸಿಬ್ಬಂದಿಗಳನ್ನು ಈ ಕಮಿಟಿಯಲ್ಲಿ ಕಾರ್ಯನಿರ್ವಹಿಸಲು ನೇಮಕ ಮಾಡಲಾಗಿದೆ.
ಈ ಕಮಿಟಿಯಲ್ಲಿನ ಸಿಬ್ಬಂದಿಗಳು ಮಂಗಳೂರಿನಲ್ಲಿ ಸ್ಥಳೀಯವಾಗಿ ಕಾರ್ಯನಿರ್ವಹಿಸುವ ಕೇಬಲ್ ಟಿವಿ ಗಳಲ್ಲಿ ಪ್ರಸಾರವಾಗುವ ಚುನಾವಣಾ ಸಂಬಂಧಿ ಸಂದರ್ಶನ, ಜಾಹಿರಾತುಗಳು, ಲೇಖನಗಳು, ಹಾಗು ಸುದ್ದಿಚಿತ್ರ ಮೊದಲಾದವುಗಳನ್ನು ವೀಕ್ಷಿಸಿ ಈ ಬಗ್ಗೆ ಟಿಪ್ಪಣಿಗಳನ್ನು ತಯಾರಿಸಿ ಚುನಾವಣಾ ಆಯೋಗಕ್ಕೆ ವರದಿ ಸಲ್ಲಿಸುವರು. ಕೇವಲ ಕೇಬಲ್ ಟಿವಿಗಳಲ್ಲಿ ಮಾತ್ರವಲ್ಲದೆ ಚುನಾವಣಾ ಸಂಬಂದಿ ಎಲ್ಲ ಪತ್ರಿಕೆಗಳಲ್ಲಿ ಪ್ರಕಟವಾಗುವ ಲೇಖನಗಳು ಹಾಗು ಸುದ್ದಿಗಳ ಬಗ್ಗೆಯು ಇದು ವರದಿ ಸಲ್ಲಿಸುತ್ತದೆ.
ರವಿವಾರ ಈ ಎಂಸಿಎಂಸಿ ಕೇಂದ್ರಕ್ಕೆ ಭೇಟಿ ನೀಡಿದ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾ ಅಧಿಕಾರಿ ಹರ್ಷ ಗುಪ್ತ ಅವರು ವ್ಯವಸ್ಥೆಯ ಕಾರ್ಯವೈಖರಿಯ ಬಗ್ಗೆ ಪರಿಶೀಲಿಸಿದರು. ಮಹಾನಗರ ಪಾಲಿಕೆ ಆಯುಕ್ತ ಡಾ| ಹರೀಶ್ ಕುಮಾರ್, ಜಿಲ್ಲಾ ಪಂಚಾಯತ್ ಸಿಇಒ ಡಾ| ಕೆ.ಎನ್. ವಿಜಯ ಪ್ರಕಾಶ್ ಅವರು ಜತೆಗಿದ್ದರು. ಮಂಗಳೂರಿನ ಸ್ಥಳೀಯ 8 ಕೇಬಲ್ ಟಿವಿಗಳನ್ನು ದಿನದ 24 ಗಂಟೆ ಕಾಲವೂ ವೀಕ್ಷಿಸಲು ವ್ಯವಸ್ಥೆ ಮಾಡಲಾಗಿದೆ. ಅಭ್ಯರ್ಥಿಗಳು ಚುನಾವಣೆಗಾಗಿ ವ್ಯಯಿಸುವ ಖರ್ಚು ವೆಚ್ಚಗಳ ಮೇಲೆ ನಿಗಾ ವಹಿಸುವುದು ಕೂಡ ಈ ವ್ಯವಸ್ಥೆಯ ಮುಖ್ಯ ಉದ್ದೇಶ ಎಂದು ಜಿಲ್ಲಾಧಿಕಾರಿ ಹರ್ಷ ಗುಪ್ತ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಚುನಾವಣೆ ಸಂಬಂಧಿತ ಜಾಹೀರಾತು ನೀಡಲು ಬರುವವರ ಬಗ್ಗೆ ಮಾಧ್ಯಮದವರು ಜಿಲ್ಲಾಧಿಕಾರಿಯವರ ಗಮನಕ್ಕೆ ತರಬೇಕೆಂದು ಹಾಗು ಮಾದ್ಯಮಗಳಲ್ಲಿ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಆಗಿರುವುದು ಕಂಡು ಬಂದಲ್ಲಿ ಸಂಬಂದಪಟ್ಟ ಅಭ್ಯರ್ಥಿಗೆ ಮತ್ತು ಪ್ರಸಾರ ಮಾಡಿದ ಮಾಧ್ಯಮಕ್ಕೆ ಆಯೋಗ ನೋಟಿಸು ಜಾರಿಗೊಳಿಸುವುದಾಗಿ ಅವರು ತಿಳಿಸಿದರು.
Click this button or press Ctrl+G to toggle between Kannada and English