ಏಪ್ರಿಲ್ 14, ತೌಡುಗೋಳಿಯಲ್ಲಿ, ವಿಷು ಪೂಜೆ, ಧಾರ್ಮಿಕ ಸಭೆ

5:34 PM, Friday, April 12th, 2013
Share
1 Star2 Stars3 Stars4 Stars5 Stars
(No Ratings Yet)
Loading...

Durgadevi Temple Toudugoliತೌಡುಗೋಳಿ : ಶ್ರೀ ದುರ್ಗಾದೇವಿ ದೇವಸ್ಥಾನ ಹಾಗೂ ಶ್ರೀ ಅಯ್ಯಪ್ಪ ಸ್ವಾಮಿ ಮಂದಿರದಲ್ಲಿ ತಾ 14-04-2013 ರಂದು ಸೌರಯುಗಾದಿಯ ವಿಷು ಕಾರ್ಯಕ್ರಮದ ಅಂಗವಾಗಿ ಸಾರ್ವಜನಿಕ ವಿಷು ಪೂಜೆ, ಧಾರ್ಮಿಕ ಪ್ರವಚನ, ಧಾರ್ಮಿಕ ಸಭಾ ಕಾರ್ಯಕ್ರಮ, ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.

ಈ ಬಾರಿಯ ಧಾರ್ಮಿಕ ಸಭಾಕಾರ್ಯಕ್ರಮದ ಅಧ್ಯಕ್ಷತೆಯನ್ನು ಕನ್ನಡ ಸಾಹಿತ್ಯ ಪರಿಷತ್, ಬೆಂಗಳೂರು. ಇದರ ಮಾಜಿ ಅಧ್ಯಕ್ಷರಾದ ಧರ್ಮದರ್ಶಿ  ಹರಿಕೃಷ್ಣ ಪುನರೂರು ವಹಿಸಲಿರುವರು. ಧಾರ್ಮಿಕ ಉಪನ್ಯಾಸವನ್ನು ವಿಶ್ವ ಹಿಂದೂ ಪರಿಷತ್, ಮಂಗಳೂರು. ಇದರ ಕಾರ್ಯಧ್ಯಕ್ಷರಾದ ಜಗದೀಶ ಶೇಣವ ನೀಡಲಿರುವರು. ರಾತ್ರಿ 7:15ಕ್ಕೆ ಧಾರ್ಮಿಕ ಸಭೆ ನಡೆಯಲಿದೆ. ಮಖ್ಯ ಅತಿಥಿಳಾಗಿ ಚಂದ್ರಹಾಸ ಉಳ್ಳಾಲ್ ಅಧ್ಯಕ್ಷರು ಶ್ರೀ ಚಿರುಂಭ ಭಗವತೀ ದೆವಸ್ಥಾನ, ಉಳ್ಳಾಲ. ಶ್ರೀ ಗಣೇಶ್ ನಾಯಕ್, ಅನಂತಗಿರಿ ಉಪಾಧ್ಯಕ್ಷರು, ಶ್ರೀ ಭಗವತಿ ಸಹಕಾರ ಬ್ಯಾಂಕ್ ನಿ. ಮಂಗಳೂರು.ಶ್ರೀ ಲಕ್ಷಿನಾರಾಯಣ ಹೊಳ್ಳ ಮೊಕ್ತೇಸರರು : ಶ್ರೀ ಮಡಿಕಾತ್ತಯ ಕ್ಷೇತ್ರ ಮರಿಕಾಪು, ವರ್ಕಾಡಿ. ಶ್ರೀ ಚಂದ್ರಹಾಸ ಶೆಟ್ಟಿ ಮೋರ್ಲ ಆಡಳಿತ ಮೊಕ್ತೇಸರರು ಶ್ರೀ ಮಿತ್ತಮೊಗರಾಯ ದೈವಸ್ಥಾನ, ಶಾಂತಿಪಳಿಕೆ, ಶ್ರೀ ಬಿ.ಎನ್ ಶೆಟ್ಟಿ ಅಧ್ಯಕ್ಷರು : ಜೀಣೋದ್ದಾರ ಸಮಿತಿ ಶ್ರೀ ದುರ್ಗಾಪರಮೇಶ್ವರೀ ಮಠ, ನರಿಂಗಾನ, ಶ್ರೀ ಐತಪ್ಪ ಶೆಟ್ಟಿ ಕಾರ್ಯದರ್ಶಿ ಶ್ರೀ ಮಾಹವಿಷ್ಣು ದೇವಸ್ಥಾನ, ದೇವಂದಪಡ್ಪು, ಶ್ರೀ ವಿ.ವಿಶ್ವನಾಥ ರೈ ಅಡ್ಕ ಕುಂಜತ್ತೂರು, ಮಾಲಕರು, ಶ್ರೀ ಕಟೀಲ್ ಟ್ರಾವೆಲ್ಸ್, ಶ್ರೀ ಹರೀಶ್ ಕನ್ನಿಗುಳಿ ಅಧ್ಯಕ್ಷರು ಶ್ರೀ ಮಿತ್ತಮೊಗರಾಯ ಸೇವಾ ಸಮಿತಿ, ಶಾಂತಿಪಳಿಕೆ, ಶ್ರೀ ಗಿರೀಶ್ ಆಳ್ವ ಮೋರ್ಲ, ಕೋಶಾಧಿಕಾರಿ ಸೂರ್ಯ-ಚಂದ್ರ ಜೋಡುಕರೆ ಕಂಬಳ ಸಮಿತಿ, ತಲಪಾಡಿ, ಶ್ರೀ ನವೀನ್ ಶೆಟ್ಟಿ ಮಂಗಲ್ಪಾಡಿ ಅಧ್ಯಕ್ಷರು, ಯುವಕ ಮಂಡಲ (ರಿ) ನರಿಂಗಾನ, ತೌಡುಗೊಳಿ ಇವರುಗಳು ಭಾಗವಹಿಸಲಿದ್ದಾರೆ.

ರಾತ್ರಿ 8 : 00 ಕ್ಕೆ ಶ್ರೀ ದುರ್ಗಾದೇವಿಗೆ ಹಾಗೂ ಶ್ರೀ ಅಯ್ಯಪ್ಪ ಸ್ವಾಮಿಗೆ ವಿಷು ವಿಶೇಷ ಪೂಜೆ ನಡೆಯಲಿದೆ. ಆ ಬಳಿಕ ವಿಷು ಹಬ್ಬದ ಸಾಂಸ್ಕೃತಿಕ ಕಾರ್ಯಕ್ರಮದ ಪ್ರಯುಕ್ತ ರಾತ್ರಿ ಗಂಟೆ 8:30 ರಿಂದ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸಹಯೋಗದೊಂದಿಗೆ ವಜ್ರ ಆಟ್ರ್ಸ ಕುಡ್ಲ ಇವರಿಂದ ಸಂತೋಷ್ ಕೂಳೂರು ರಚಿಸಿ, ನಟಿಸಿರುವ ಎನ್ನಿದಿನೊಂಜಿ, ಆಯಿನೊಂಜಿ ಎಂಬ ತುಳು ನಾಟಕ ಹಾಗೂ ಸ್ಥಳೀಯ ಪ್ರತಿಭೆಗಳಿಂದ ನೃತ್ಯ ಕಾರ್ಯಕ್ರಮ ನಡೆಯಲಿರುವುದು.

ಕ್ಷೇತ್ರ ಪರಿಚಯ :

ಕರ್ನಾಟಕ ಮತ್ತು ಕೇರಳ ರಾಜ್ಯಗಳ ಗಡಿಭಾಗದ ಪ್ರಕೃತಿ ಸೌಂದರ್ಯವಿರುವ ಸುಂದರ ತಾಣದಲ್ಲಿ  ಶ್ರೀ ದುರ್ಗಾ ಮಾತೆ ನೆಲೆ ನಿಂತಿದ್ದಾಳೆ, ಸನಿಹದಲ್ಲೇ ಶ್ರೀ ಅಯ್ಯಪ್ಪ ಸ್ವಾಮಿಯ ಸಾನಿದ್ಯವಿದೆ. ಪರಿವಾರದಲ್ಲಿ ನಾಗನ ಸ್ಥಾನವಿದೆ. ಕ್ಷೇತ್ರದ  ರಕ್ಷಣೆಗಾಗಿ ಗುಳಿಗ, ಪಂಜುರ್ಲಿ, ಭೈರವ, ರಕ್ತೇಶ್ವರಿ ದೈವಗಳು ನೆಲೆನಿಂತಿದ್ದಾರೆ.

ಶ್ರೀ ಕ್ಷೇತ್ರವು ಕರ್ನಾಟಕ ರಾಜ್ಯದ ಬಂಟ್ವಾಳ ತಾಲೂಕಿನ ನರಿಂಗಾನ ಗ್ರಾಮಕ್ಕೂ, ಕೇರಳದ ಮಂಜೇಶ್ವರ ತಾಲೂಕಿನ ವರ್ಕಾಡಿ ಗ್ರಾಮಕ್ಕೂ ಹಂಚಿಹೋಗಿದೆ. ರಾಷ್ಟ್ರೀಯ ಹೆದ್ದಾರಿ 17 ರಲ್ಲಿ ಹಾದುಹೋಗುವ ಮಂಜೇಶ್ವರದಿಂದ ಕೆದುಂಬಾಡಿ ಮೂಲಕ ಇಲ್ಲಿಗೆ 11 ಕಿ.ಮೀ ಕ್ರಮಿಸಬೇಕು. ಮಂಗಳೂರಿನಿಂದ ತೊಕ್ಕೊಟು ಮೂಲಕ ಮಂಜನಾಡಿ ಮಾರ್ಗದಲ್ಲಿ ತೌಡುಗೋಳಿಗೆ ಇರುವ ದೂರ 20 ಕಿಲೊ ಮೀಟರ್.

ಶ್ರೀ ಕ್ಷೇತ್ರಕ್ಕೆ ಸಾತ್ವಿಕ ಮಹತ್ವದ ಶಕ್ತಿಯಿದೆ. 1973 ರಲ್ಲಿ ಶ್ರೀ ಗೋವಿಂದ ಸ್ವಾಮಿಯವರ ನೇತೃತ್ವದಲ್ಲಿ ಶ್ರೀ ದುರ್ಗಾದೇವಿ ಮಂದಿರ ನಿರ್ಮಾಣದ ಕೆಲಸವನ್ನು ಆರಂಭಿಸಿ, ಅಂದಿನಿಂದಲೇ ಕೇರಳದ ಪ್ರಸಿದ್ಧ ಧರ್ಮಕ್ಷೇತ್ರ ಶ್ರೀ ಶಬರಿಮಲೆಗೆ ಯಾತ್ರೆಯನ್ನು ಪ್ರಾರಂಭಿಸಲಾಯಿತು.

ಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸವನ್ನು ಮಂಗಳಾದೇವಿಯ ಅರ್ಚಕರಾದ ಶ್ರೀಯುತ ಐತಾಳರಿಂದ ಮತ್ತು ಕಲ್ಬಾವಿ ದೇವಸ್ಥಾನದ ಮೊಕ್ತೇಸರರಿಂದ ನೆರವೇರಿಸಲಾಯಿತು. 1947 ರ ಏಪ್ರಿಲ್ ತಿಂಗಳಿನಲ್ಲಿ ಬ್ರಹ್ಮಕಲಶಾಭಿಷೇಕಗೊಂಡು ವರ್ಕಾಡಿಯ ಕಾವಿ ಸುಬ್ರಹ್ಮಣ್ಯ ದೇವಸ್ಥಾನದ ಅರ್ಚಕರಾದ ಶ್ರೀಮಾನ್ ಸೀತಾರಾಮ ಮಯ್ಯರಿಂದ ಪ್ರಥಮ ಪೂಜೆಯೊಂದಿಗೆ ಶ್ರೀ ದುರ್ಗಾದೇವಿಯ ಆರಾಧನೆಯು ಪ್ರಾರಂಭಗೊಡಿತು.

ಶ್ರೀ ದುರ್ಗಾದೇವಿಯ ಮಂದಿರ ನಿರ್ಮಾಣ ಆದಂದಿನಿಂದ ಶಬರಿಮಲೆ ಯಾತ್ರಾರ್ಥಿಗಳ ಸಂಖ್ಯೆಯು ಗಣನೀಯವಾಗಿ ಹೆಚ್ಚಿತು. ಶ್ರೀ ಕ್ಷೇತ್ರವು ಊರ ಹಾಗೂ ಪರವೂರ ಭಕ್ತಾದಿಗಳ ಪೂಜೆ ಪುರಸ್ಕಾರಗಳಿಂದಾಗಿ ಇಡೀ ಗ್ರಾಮದಲ್ಲೇ ಹೆಸರುವಾಸಿಯಾಗಿ ಭಕ್ತರ ಅಭೀಷ್ಟಗಳು ನೆರವೇರುತ್ತಾ ಬಂದು ಬಹಳ ಪ್ರಖ್ಯಾತಿ ಪಡೆಯಿತು. 1985 ರಲ್ಲಿ ಮಧೂರು ಶ್ರೀರಂಗ ಭಟ್ಟರ ನೇತೃತ್ವದಲ್ಲಿ ನಡೆದ ಅಷ್ಟಮಂಗಳ ಪ್ರಶ್ನೆಯಲ್ಲಿ ಕಂಡುಬಂದಂತೆ, ಇಲ್ಲಿಯ ಪರಿಸರದಲ್ಲಿ ಗುಳಿಗ ಪಂಜುರ್ಲಿ ಭೈರವ ರಕ್ತೇಶ್ವರಿ ದೈವಗಳನ್ನು ಆರಾಧಿಸಿಕೊಂಡು ಬಂದು ವರ್ಷಂಪ್ರತಿ ಪರ್ವಗಳನ್ನು ಸಲ್ಲಿಸಲಾಗುತಿದೆ.

ಶಬರಿಮಲೆಗೆ ಹೋಗುವ ಭಕ್ತಾಭಿಮಾನಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಅಧಿಕವಾಗುತ್ತಾ ಬರುತ್ತಿದ್ದಂತೆ ಶ್ರೀ ಗುರು ಗೋವಿಂದ ಸ್ವಾಮಿಗಳ ನೇತ್ರತ್ವದಲ್ಲಿ ಸಭೆ ಸೇರಿ ಶ್ರೀ ದೇವಿಯ ಗುಡಿಯ ಸನಿಹದಲ್ಲಿ ಅಯ್ಯಪ್ಪ ಸ್ವಾಮಿಯ ಮಂದಿರ ನಿರ್ಮಿಸುವ ಯೋಜನೆಯೊಂದನ್ನು ಹಾಕಿಕೊಳ್ಳಲಾಯಿತು. ಅದರಂತೆ 1984 ರಲ್ಲಿ ಶ್ರೀ ಗುರು ಗೋವಿಂದ ಸ್ವಾಮಿಯವರ ದಿವ್ಯಹಸ್ತದಿಂದ ಮಂದಿರದ ಕೆಲಸಕ್ಕೆ ಶಿಲಾನ್ಯಾಸ ಮಾಡಲಾಯಿತು. 1985 ರ ಡಿಸೆಂಬರ್ ತಿಂಗಳಲ್ಲಿ ಮಂದಿರದ ಕೆಲಸ ಪೂರ್ಣಗೊಂಡು. ಎಡನೀರು ಮಠಾಧೀಶರಾದ ಶ್ರೀ ಶ್ರೀ ಶ್ರೀ ಕೇಶವಾನಂದ ಭಾರತೀ ಸ್ವಾಮಿಗಳ ದಿವ್ಯಹಸ್ತದಿಂದ ಉದ್ಘಾಟನೆಗೊಂಡಿತು. ಈ ಸಂದರ್ಭದಲ್ಲಿ ನೆರೆದಿದ್ದ ಭಕ್ತ ಜನರನ್ನುದ್ದೇಶಿಸಿ ಕಟೀಲು ದೇವಸ್ಥಾನದ ಪ್ರಧಾನ ಅರ್ಚಕರು ಮತ್ತು ಮೊಕ್ತೇಸರರೂ ಆದ ಶ್ರೀ ಗೋಪಾಲಕೃಷ್ಣ ಅಸ್ರಣ್ಣನವರು ಆಶೀರ್ವದಿಸಿ ಶ್ರೀ ಕ್ಷೇತ್ರಕ್ಕೆ ಬರುವ ಭಕ್ತಾಧಿಗಳ ಸಕಾಲಾಭೀಷ್ಟವನ್ನೂ ಶ್ರೀ ದೇವಿ ಹಾಗೂ ಅಯ್ಯಪ್ಪ ಸ್ವಾಮಿಯು ನೆರೆವೇರಿಸಲಿ ಎಂದು ಶುಭ ಹಾರೈಸಿದರು.

ನಾಗರಾಧನೆಯೂ ಶ್ರೀ ಕ್ಷೇತ್ರದಲ್ಲಿ ನಡೆಯಬೇಕೆಂದು ಕಂಡು ಬಂದುದರಿಂದ ಅಯ್ಯಪ್ಪ ಸ್ವಾಮಿಮಂದಿರದ ಸನಿಹದಲ್ಲೇ ನಾಗ ದೇವರ ಗುಡಿಯೊಂದನ್ನು ನಿರ್ಮಿಸಿ ಪೂಜಿಸಿಕೊಂಡು ಬರಲಾಯಿತು. 1983 ರಲ್ಲಿ ಶ್ರೀ ಅಯ್ಯಪ್ಪ ಭಕ್ತವೃಂದ ಎಂಬ ಸಂಘ ಸ್ಥಾಪನೆಗೊಂಡು ಪ್ರತಿವರ್ಷ ಯಕ್ಷಗಾನ, ನಾಟಕ, ಭಜನೆ ಮುಂತಾದ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದು ಹಲವಾರು ಧಾರ್ಮಿಕ ಕ್ಷೇತ್ರಗಳಲ್ಲಿ ತಾಲೀಮು ಪ್ರದರ್ಶನ ನೀಡಿ ಶ್ರೀ ಕ್ಷೇತ್ರಕ್ಕೆ ಉತ್ತಮ ಹೆಸರು ತಂದಿದೆ.

1992 ರಲ್ಲಿ ಕ್ಷೇತ್ರದ ಸ್ಥಾಪಕರೂ, ಗುರುಸ್ವಾಮಿಯೂ ಆದ ಶ್ರೀ ಗೋವಿಂದಸ್ವಾಮಿಯವರು 18 ನೇ ವರ್ಷದ ಶಬರಿಮಲೆ ಯಾತ್ರೆಯನ್ನು ಕೈಗೊಂಡ ಸಂದರ್ಭದಲ್ಲಿ “ಅಯ್ಯಪ್ಪ ವಿಳಕ್” ನಡೆಸಲಾಯಿತು. ಕೋಟೆಕಲ್ ವಿಜಯನ್ ತಂಡದವರಿಂದ ಅಯ್ಯಪ್ಪ ವಿಳಕ್, ಕೆಂಡಸೇವೆ, ಅಯ್ಯಪ್ಪ ಸ್ವಾಮಿಯ ದರ್ಶನ, ಪೂಜೆ, ಉತ್ಸವ ಮೊದಲಾದ ಧಾರ್ಮಿಕ ಕಾರ್ಯಕ್ರಮಗಳು ನೆರೆವೇರಿದವು. ಈ ಸಂದರ್ಭದಲ್ಲಿ ಶ್ರೀ ಎಡನೀರು ಮಠಾಧೀಶರು, ಖ್ಯಾತ ಯಕ್ಷಗಾನ ಕಲಾವಿದ ಶೇಣಿ ಗೋಪಾಲಕೃಷ್ಣ ಭಟ್, ನಿವೃತ ನ್ಯಾಯಾಧೀಶ ನಾರಾಯಣ ರೈ ಕುಡೂರು ಹಾಗೂ ಊರ ಪರವೂರ ಅನೇಕ ಗಣ್ಯರು ಭಾಗವಹಿಸಿದ್ದರು.

ಶ್ರೀ ದುರ್ಗಾದೇವಿಗೆ ಕಲಶಾಭೀಷೇಕವು ಪ್ರತಿವರ್ಷವು ಜನವರಿ ಮೊದಲ ವಾರದಲ್ಲಿ ಶಬರಿಮಲೆಯಾತ್ರಾ ಸಂದರ್ಭದಲ್ಲಿ ಉಜಾರ್ ಹೊಸಮನೆ ಶ್ರೀ ವಾಸುದೇವ ತಂತ್ರಿಗಳಿಂದ ನಡೆಯುತ್ತದೆ. ಶ್ರೀ ದೇವಿಗೆ ನಿತ್ಯಪೂಜೆ, ನವರಾತ್ರಿ, ಸಂಕ್ರಮಣ, ವಿಷು, ಹಾಗೂ ನಾಗರಪಂಚಮಿ ಮೊದಲಾದ ಪರ್ವ ದಿನಗಳಲ್ಲಿ ವಿಶೇಷ ಪೂಜೆಗಳು ಭಕ್ತವೃಂದದ ಸಹಕಾರದಿಂದ ನಡೆಯುತ್ತಿದೆ. ಶ್ರೀ ಕ್ಷೇತ್ರದಿಂದ ಪ್ರತಿವರ್ಷವೂ ಶಬರಿಮಲೆ ಯಾತ್ರೆಯನ್ನು ಕೈಗೊಳ್ಳಲಾಗುತ್ತಿದ್ದು, ಅಂದು ಸಾರ್ವಜನಿಕ ಅನ್ನ ಸಂತರ್ಪಣೆ ನಡೆಸಲಾಗುತ್ತಿದೆ.

ಜೀರ್ಣೋದ್ದಾರ:

ಇದೀಗ ಶ್ರೀ ಕ್ಷೇತ್ರದ ಜೀರ್ಣೋದ್ಧಾರ ಕೆಲಸ ಕಾರ್ಯಗಳು ಆರಂಭಗೊಂಡಿದ್ದು ದೇಗುಲದ ಅಂಗಣಕ್ಕೆ ಕಾಂಕ್ರೀಟು ಚಪ್ಪರ ಶಿಲೆ ಹಾಸುವಿಕೆ, ಸುತ್ತು ಗೋಪುರ ಹಾಗೂ ಬೇಸಿಗೆ ಕಾಲಕ್ಕೆ ನೀರಿನ ವ್ಯವಸ್ಥೆ, ರಂಗಮಂದಿರ ಮೊದಲಾದ ಕೆಲಸಗಳು ನಡೆಯುತ್ತಿದೆ. ಈಗಾಗಲೇ ಶ್ರೀ ಕ್ಷೇತ್ರದ ಕೆಲಸಗಳಿಗೆ ಕಾರ್ಯಕ್ಕೆ ರೂ. 5 ಲಕ್ಷ ವೆಚ್ಚವಾಗಿದ್ದು, ಇನ್ನುಳಿದ ಕೆಲಸಗಳನ್ನು ಒಟ್ಟು ರೂ. 95 ಲಕ್ಷ ಅಂದಾಜು ವೆಚ್ಚದಲ್ಲಿ ನಡೆಸಲಾಗುತ್ತಿದೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English