ಕ್ಷೇತ್ರ-ಪುರಾಣ: ಶ್ರೀ ಸದಾಶಿವ ಗಣಪತಿ ದೇವಾಲಯ, ಸುರತ್ಕಲ್.
ಮಂಗಳೂರು : ಸೃಷ್ಟಿಕರ್ತನಾದ ಪ್ರಜಾಪತಿಯು ಜಗತ್ತನ್ನು ನಿರ್ಮಿಸಿ ಅದರಲ್ಲಿ ಪ್ರಜಾಕೋಟಿಯನ್ನು ಸೃಷ್ಟಿಸುವುದರೊಂದಿಗೆ ಹಲವು ಯಜ್ಞವಿಧಾನಗಳನ್ನೂ ರೂಪೀಕರಿಸಿ, “ಈ ಯಜ್ಞಕಾರ್ಯಗಳನ್ನು ನೀವು ಶ್ರದ್ಧಾಪೂರ್ವಕ ನಡೆಸಿಕೊಂಡು ಬನ್ನಿ, ಇದರಿಂದ ನಿಮ್ಮ ಇಷ್ಟಾರ್ಥ ಸಿದ್ಧಿಯಾಗುತ್ತದೆ” ಎಂದು ಹೇಳಿದನಂತೆ ಅದರಂತೆ ಈ ಕರ್ಮಭೂಮಿಯಲ್ಲಿ ಜನಿಸಿದ ಪ್ರತಿಯೊಬ್ಬನೂ ಇದು ತನ್ನ ಕರ್ತವ್ಯ ವೆಂದು ಭಾವಿಸಿ, ತ್ಯಾಗಭೂಯಿಷ್ಟವಾದ ಯಜ್ಞ ಯಾಗಾದಿಗಳನ್ನು ನಡೆಸುತ್ತಾ ಕುಲ ಕ್ರಮಾಗತವಾದ ಧರ್ಮಕರ್ಮಗಳಲ್ಲಿಆಸಕ್ತನಾಗಿ ಜೀವನದ ಪರಮಲಕ್ಷ್ಯ ವನ್ನು ಸಾಧಿಸುತ್ತಿದ್ದನು. ಭೌತಿಕ ಸುಖಕ್ಕಿಂತಲೂ ಶ್ರೇಷ್ಟವಾದ ಆಧ್ಯಾತ್ಮಿಕ ಸುಖವೊಂದಿದೆ ಎಂದು ತಿಳಿದು ಅದಕ್ಕೆ ಬೇಕಾದ ಸಾಧನೆಗಳನ್ನು ಮಾಡುತ್ತಿದ್ದನು.
ಅದಕ್ಕಾಗಿಯೇ ದೇವ, ದಾನವ, ಮಾನವ, ಪ್ರತಿನಿಧಿಗಳು ತಮ್ಮ ಅಭ್ಯುದಯಕ್ಕೆ ಏನು ಮಾಡಬೇಕೆಂದು ಬ್ರಹ್ಮ ನನ್ನು ಪ್ರಶ್ನಿಸಿದಾಗ ಅವನು `ದ’ ಎಂಬ ಒಂದಕ್ಷರವನ್ನು ಉಚ್ಚರಿಸಿದನಂತೆ. ಇದನ್ನು ಕೇಳಿದ ಮಾನವರು ಲೋಭಮೂಲವಾದ ಜೀವನಪದ್ಧತಿ ತಮ್ಮದಾದುದರಿಂದ `ದ’ ಎಂದರೆ ದಾನವೆಂದು ಅರ್ಥಮಾಡಿಕೊಂಡರಂತೆ. ಕ್ರೂರಿಗಳಾದ ಮಾನವರು ಬ್ರಹ್ಮದೇವನು ಉಚ್ಚರಿಸಿದ `ದ’ ಕಾರಕ್ಕೆ ದಯೆ ಎಂಬರ್ಥವಿರಬೇಕೆಂದು ಊಹಿಸಿದರಂತೆ, ಭೋಗಾಸಕ್ತರಾಗಿ ಸುಖಾನುಭವದಲ್ಲೇ ಮಗ್ನರಾದ ದೇವತೆಗಳು `ದ’ ಎಂದರೆ ದಮ ಅರ್ಥಾತ್ ಇಂದ್ರಿಯನಿಗ್ರಹವೇ ಆಗಿರಬೇಕೆಂದು ತಕರ್ಿಸಿದರಂತೆ. ದಾನ, ದಯೆ, ದಮ ಈ ಮೂರು ತತ್ವಗಳೂ ಯಜ್ಞದಲ್ಲಿರುವುದರಿಂದ ಯಜ್ಞಕರ್ಮವು ಸರ್ವ ಶ್ರೇಷ್ಟವಾದುದೆಂದು ವಿವೇಕಿಗಳು ನಂಬಿದರು. ಇಷ್ಟಪ್ರಾಪ್ತಿ ಹಾಗೂ ಅನಿಷ್ಟ ನಿವೃತ್ತಿಗೆ ಯಜ್ಞಗಳನ್ನು ಶ್ರದ್ಧೆಯಿಂದ ನಡೆಸಲಾರಂಭಿಸಿದರು. ಈ ಅರ್ಥದಿಂದಲೇ ಯಜಮಾನ ಯಜಮಾನಿ (ಯಜ್ಞಮಾಡುವವನು) ಎಂಬ ಶಬ್ದಗಳು ರೂಢಿಗೆ ಬಂದವು. ಇಂದ್ರಾದಿಗಳು ಯಜ್ಞಗಳನ್ನು ನಡೆಸಿಯೇ ಸ್ವರ್ಗವನ್ನು ಪಡೆದರೆಂದು ಪುರಾಣಿಕರು ಹೇಳುತ್ತಾರೆ. ಪ್ರತಿಯೊಂದು ಕರ್ಮವನ್ನೂ ಯಜ್ಞ ಕರ್ಮವೆಂದು ತಿಳಿದು ಶ್ರದ್ಧೆಯಿಂದ ನಡೆಸಿದಾಗ ಸರ್ವತೋಮುಖವಾದ, ಸರ್ವಾಂಗೀಣವಾದ ಔನ್ನತ್ಯವು ಸಿದ್ಧಿಸುತ್ತದೆ ಎಂಬ ನಂಬಿಕೆಯು ಪುರಾತನವಾದುದುವು. ಈಗ ಜ್ಞಾನಯಜ್ಞ, ತಪೋಯಜ್ಞ, ದ್ರವ್ಯಯಜ್ಞ ವೆಂಬ ಯಜ್ಞತ್ರಯದೊಂದಿಗೆ ಭೂದಾನಯಜ್ಞವೂ ಸಮಾವೇಶವಾಗಿದೆ.
ಸಾಕ್ಷಾರಾ ಎಂಬ ಶಬ್ದವನ್ನು ಹಿಂದು ಮುಂದಾಗಿ ಓದಿದರೆ ರಾಕ್ಷಸಾ ಎಂದಾಗುತ್ತದೆ. ಹೀಗೆ ಹಿಂದು ಮುಂದಾಗಿ ಗುರುತಿಸಲ್ಪಡುವ ರಾಕ್ಷಸರು ಆಧಿಭೌತಿಕ, ಆಧಿದೈವಿಕ, ಆಧ್ಯಾತ್ಮಿಕ ಎಂಬ ತಾಪತ್ರಯದ ನಿವಾರಣೆಗೆ ಯಾವುದು ಸಹಕಾರಿಯೋ ಅಂತಹ ಯಜ್ಞಕಾರ್ಯವನ್ನೇ ವಿರೋಧಿಸಿ, ತಾವು ಮಾತ್ರ ಸುಖಿಗಳಾಗಿರಬೇಕು ಎಂಬ ಸ್ವಾರ್ಥಬುದ್ಧಿಯಿಂದಲೇ ಯಜ್ಞಕಂಟಕರಾಗಿ ಯಜ್ಞಭಂಜಕರಾಗಿ ಉನ್ಮತ್ತರಂತೆ ನಡೆಯಲಾರಂಭಿಸಿದರು. ತಪಸ್ಸನ್ನು, ದಾನವನ್ನು ವಿರೋಧಿಸದ ಖಳರು ಯಾಗಗಳನ್ನೂ ಮಾತ್ರ ನಾಶಪಡಿಸುತ್ತಿದ್ದರು. ದೇವತೆಗಳನ್ನು ಜ್ಞಾತಿಗಳೆಂದು ತಿಳಿದು ಅವರ ಬಲವರ್ಧನೆಗೆ ಯಜ್ಞವೇ ಕಾರಣವೆಂದೂ, ಪರಿಣಾಮವಾಗಿ ಸಂಪದ್ಭರಿತವಾದ ಸ್ವರ್ಗವು ತಮಗೆ ಸಿಗುವುದಿಲ್ಲವೆಂದೂ ಭಾವಿಸುತ್ತಿದ್ದರು.
ಕಾಲಕೇಯರೆಂಬ ರಾಕ್ಷಸರು ಯಜ್ಞಗಳನ್ನು ಕೆಡಿಸುತ್ತಾ ಸಾಧು ಸಜ್ಜನರನ್ನು ಪೀಡಿಸಿ ಜನಜೀವನವನ್ನು ವಿಧ್ವಸ್ತಗೊಳಿಸುತ್ತಿದ್ದರು. ಲೋಕಪಾಲಕನಾಗಿ ಕರ್ತವ್ಯ ಪ್ರಜ್ಞೆಯುಳ್ಳ ದೇವೇಂದ್ರನು ಲೋಕ ಕಂಟಕರಾದ, ಧರ್ಮವಿರೋಧಿಗಳಾದ ಕಾಲಕೇಯರನ್ನು ಯಜ್ಞಗಳನ್ನು ಕೆಡಿಸುವಾಗ ತಡೆದು, ಹೊಡೆದು ಓಡಿಸುತ್ತಿದ್ದನು. ಕಾಲಕೇಯರು ಹಗಲಿಡೀ ಸಾಗರದಲ್ಲಿ ಅಡಗಿ ರಾತ್ರಿ ಕಾಲದಲ್ಲಿ ಮೇಲೆ ಬಂದು ಮುನಿಗಳನ್ನು ಪೀಡಿಸಲಾರಂಭಿಸಿದರು. ಖಳರ ಭಾದೆಯಿಂದ ಕಂಗೆಟ್ಟವರನ್ನು ಕಾಪಾಡಲು ಹೋದಾಗಲೆಲ್ಲ ಓಡಿ ಹೋಗಿ ಸಮುದ್ರದಲ್ಲಿ ಮುಳುಗುತ್ತಿದ್ದರು. ಕೊನೆಗೊಮ್ಮೆ ಇಂದ್ರನು ಇವರ ಉಪಟಳವನ್ನು ಪರಿಹರಿಸಲು ಶ್ರೀಮನ್ನಾರಾಯಣನಲ್ಲಿ ಮೊರೆ ಇಟ್ಟನು. ಲೋಕಕಂಟಕರ ವಧೆ ಅನಿವಾರ್ಯತೆಯನ್ನು ವಿವರಿಸಿದನು. ಎಲ್ಲವನ್ನೂ ಕೇಳಿದ ವಿಷ್ಣುವು ಧೈರ್ಯ ಹೇಳಿ, ಅಗಸ್ತ್ಯ ಮಹಷರ್ಿಯ ತಪೋಬಲವನ್ನು ವಿವರಿಸಿ ಆತನಿಂದ ಕಷ್ಟ ನಿವಾರಣೆಯಾಗುವುದೆಂದೂ, ನೀವೆಲ್ಲಾ ಅವನಲ್ಲಿ ಕೇಳಿ ಕೊಳ್ಳಿರೆಂದೂ ಅಭಯವನ್ನಿತ್ತು ಕಳುಹಿಸಿದನು. ಅಗಸ್ತ್ಯಾಶ್ರಮವನ್ನು ಸೇರಿದ ಇಂದ್ರಾದಿಗಳು ಕಾಲಕೇಯರ ದೌಷ್ಟ್ಯವನ್ನೂ, ಶ್ರೀ ಹರಿಯ ಸೂಚನೆಯನ್ನೂ ಆತನಲ್ಲಿ ಭಿನ್ನವಿಸಿಕೊಂಡರು. ಕುಂಭಜನಾದ ಅಗಸ್ತ್ಯನು ದೇವತೆಗಳೊಂದಿಗೆ ಸಮುದ್ರತೀರಕ್ಕೆ ಬಂದು ಶಿಲಾಮಯ ಪ್ರದೇಶವನ್ನು ಕಂಡು ಧ್ಯಾನಮಗ್ನನಾಗಿ ಶಿಲೆಯೊಂದರ ಮೇಲೆ ಶಿವಲಿಂಗವನ್ನು ಸ್ಥಾಪಿಸಿ, ಪೂಜಿಸಿ, ಸಮುದ್ರದ ನೀರನ್ನೆಲ್ಲಾ ಏಕಾಪೋಶನದಿಂದ ಕುಡಿದು ಸಮುದ್ರವೇ ಇಲ್ಲದಂತೆ ಮಾಡಿದನು. ಇದರಿಂದ ತಮ್ಮ ಅಡಗುದಾಣವೇ ಇಲ್ಲದೆ ಕಂಗೆಟ್ಟ ಕಾಲಕೇಯರನ್ನು ಇಂದ್ರಾದಿಗಳು ಸದೆಬಡಿದರು. ಕಣ್ತೆರೆದ ಅಗಸ್ತ್ಯನು ಲೋಕಕಂಟಕರ ನಾಶವನ್ನು ಕಂಡು ಸಂತಸಗೊಂಡನು. ಸಮುದ್ರವನ್ನು ಮೊದಲಿದ್ದಂತೆ ನೀರಿನಿಂದ ತುಂಬಿಸಿಬೇಕೆಂದು ಅವನನ್ನು ಪ್ರಾಥರ್ಿಸಿದಾಗ, “ಧ್ಯಾನಸ್ಥಿತಿಯಲ್ಲಿ ಕಡಲ ನೀರನ್ನು ಕುಡಿದೆನೆಂದು ಆ ನೀರನ್ನೇ ಪುನಃ ಹೊರಗೆಡಹಿದರೆ ಅದು ಅಪವಿತ್ರವಾಗುವುದೆಂದು” ಹೇಳಿ ಇದಕ್ಕಾಗಿ ನಾವೆಲ್ಲರೂ ಒಂದಾಗಿ ಉಮಾಮಹೇಶ್ವರರನ್ನು ಪ್ರಾರ್ಥಿಸೋಣವೆಂದೂ ಭಕ್ತಿಯಿಂದ ಪ್ರಾಥರ್ಿಸಿ ಶಿವಶಿವೆಯರನ್ನು ಸಾಕ್ಷಾತ್ಕರಿಸಿದನು. ಪಾರ್ವತಿಯು ಅಗಸ್ತ್ಯನಿಗೆ ಕಡಲ ನೀರನ್ನು ಉತ್ಸರ್ಜನ ಮಾಡೆಂದು ಹೇಳಿದಳು. ಮಾತ್ರವಲ್ಲ ಈ ಸ್ಥಳದಲ್ಲಿ ಶ್ರದ್ಧಾ ಭಕ್ತಿಯಿಂದ ಸಮುದ್ರ ಸ್ನಾನ ಮಾಡಿದರೆ ಸಕಲ ಪಾಪ ದೋಷಗಳು ನಿವಾರಣೆಯಾಗುವುದೆಂದೂ, ಸಕಲ ವ್ಯಾಧಿಗಳು ಪರಿಹಾರವಾಗುವುದೆಂದೂ ಅನುಗ್ರಹವಚನವನ್ನು ಹೇಳಿದಳು. ಆಗ ಅಗಸ್ತ್ಯನು, “ಗಿರಿಜಾ ಕಲ್ಯಾಣವನ್ನು ನೋಡುವ ಬಯಕೆಯಿಂದ ಈ ಕಡೆಗೆ ಬಂದಿದ್ದೆ. ಇಲ್ಲಿ ಎಲ್ಲರೂ ಜಗತ್ತಿನ ಸಮತೋಲವನ್ನು ಉಳಿಸಲೆಂದು ದಕ್ಷಿಣಕ್ಕೆ ಕಳುಹಿಸಿದರು. ಆ ಸಂಭ್ರಮದಲ್ಲಿ ಪಾಲ್ಗೊಳ್ಳುವ ಅವಕಾಶ ತಪ್ಪಿತು. ಆದ್ದರಿಂದ ನನ್ನಿಂದ ಸ್ಥಾಪಿಸಲ್ಪಟ್ಟ ಶಿವಲಿಂಗದಲ್ಲಿ ಉಮೆಯು ಅಂತರ್ಗತಳಾಗಿದ್ದು ಪರ್ವಕಾಲಗಳಲ್ಲಿ ಈ ಕ್ಷೇತ್ರಗಳಲ್ಲಿ ಸಂಭ್ರಮದ ವಾತಾವರಣವಿರಲೆಂದೂ, ಇಂದ್ರಾದಿಗಳು ತಮ್ಮ ಸಾನಿಧ್ಯವನ್ನು ಇಲ್ಲಿ ನೆಲೆಗೊಳಿಸಬೇಕೆಂದೂ” ಪ್ರಾರ್ಥಿಸಿದಾಗ ಉಮಾಮಹೇಶ್ವರರು “ತಥಾಸ್ತು” ಎಂದರು. ಅಗಸ್ತ್ಯ ರೂ , ಇಂದ್ರಾದಿಗಳು ಉಮಾಮಹೇಶ್ವರರನ್ನು ಪೂಜಿಸಿ, ಶ್ರೀ ಸದಾಶಿವನ ದಿವ್ಯ ಸಾನಿಧ್ಯವೂ ಸದಾಕಾಲವೂ ಇಲ್ಲಿರಬೇಕೆಂದು ಪ್ರಾರ್ಥಿಸಿ ಅಲ್ಲಿಂದ ತೆರಳುತ್ತಾರೆ. ಕಡಲತೀರದ ಈ ಕ್ಷೇತ್ರ “ಶ್ರೀ ಸದಾಶಿವ ಕ್ಷೇತ್ರ”ವಾಗುತ್ತದೆ.
ಕಾಲಾಂತರದಲ್ಲಿ ಹೊಯಿಗೆಯ ರಾಶಿಯಲ್ಲಿ ಶಿವಲಿಂಗವು ಮುಚ್ಚಿ ಹೋಗಿ, ಸುತ್ತಲೂ ಜಲಾವೃತವಾಗಿ ಇಲ್ಲೊಂದು ಚಿಕ್ಕ ಎತ್ತರದ ಪ್ರದೇಶ `ಕುದುರು’ ನಿರ್ಮಾಣವಾಗುತ್ತದೆ. ಕೆಳಗೆ ಶಿಲೆಗಳ ಮಧ್ಯದಲ್ಲಿ ಗುಹೆಗಳೂ ನಿರ್ಮಾಣವಾಗುತ್ತದೆ. ಮಾನವರ ದೃಷ್ಟಿಗೆ ಅಗೋಚರರಾಗಿ, ದೇವತೆಗಳಿಂದ ಪೂಜಿತರಾಗಿ ಉಮಾಮಹೇಶ್ವರರು ಇಲ್ಲಿ ನೆಲೆ ನಿಂತಿದ್ದಾರೆ. ಸುತ್ತಲೂ ಕಿರುಚಲು ಮರಗಳು, ಪೊದೆಗಳು ತುಂಬಿ ಮನುಷ್ಯ ಸಂಚಾರಕ್ಕೆ ಅಸಾಧ್ಯವಾದ ತಾಣವು ಇದಾಗುತ್ತದೆ. ಅಗಸ್ತ್ಯರಿಂದ ಸ್ಥಾಪಿಸಲ್ಪಟ್ಟ ಶಿವಲಿಂಗದರ್ಶನಕ್ಕೆ ಅವಕಾಶವೇ ಇಲ್ಲದಂತಾಗುತ್ತದೆ. ಇದಿಷ್ಟು ಈಗ ಸುರತ್ಕಲ್ನಲ್ಲಿರುವ ಶ್ರೀ ಗಣೇಶ ಸದಾಶಿವ ದೇವಾಲಯದ ಇತಿಹಾಸವಾಗಿದೆ.
ಪೌರಾಣಿಕ ಹಿನ್ನೆಲೆ.
ಜಮದಗ್ನಿ ಮಹರ್ಷಿಗಳ ಆಶ್ರಮದಲ್ಲಿ ಆತಿಥ್ಯವನ್ನು ಪಡೆದ ಕಾರ್ತವೀರ್ಯನು ಲೋಭ ಬುದ್ದಿಯಿಂದ ಹೋಮಧೇನುವನ್ನು ಬಲಾತ್ಕಾರದಿಂದ ಕೊಂಡುಹೋದಾಗ ಪರಶುರಾಮನಿಂದ ಹತನಾಗುತ್ತಾನೆ. ಮರಣಕಾಲದಲ್ಲಿ ರಾ! ಭೋ! ಎಂದು ಆತನ ಬಾಯಿಂದ ಆರ್ತನಾದ ಹೊರಟಾಗ ಅವನ ದೇಹದಿಂದ ಒಬ್ಬ ಬಾಲಕನು ಹುಟ್ಟಿಕೊಳ್ಳುತ್ತಾನೆ. ಅವನಿಗೆ ರಾಮಭೋಜನೆಂದು ಹೆಸರಿಟ್ಟು ಪರಶುರಾಮನು ರಕ್ಷಿಸುತ್ತಾನೆ. ಕಾರ್ತವೀರ್ಯನ ಮಕ್ಕಳು ಜಮದಗ್ನಿಯನ್ನು ಕೊಂದು ಸೇಡು ತೀರಿಸಿಕೊಳ್ಳುತ್ತಾನೆ. ಪತಿಯ ಕೊಲೆಯನ್ನು ಕಂಡು ದುಃಖದಿಂದ ತಲೆಹೊಡೆದು ಇಪ್ಪತೊಂದು ಬಾರಿ ಭೂಮಿಯಲ್ಲಿ ಹೊರಳಿದ ತಾಯಿಗೆ ಸಮಾಧಾನ ಹೇಳಿ ಭಾರ್ಗವರಾಮನು ಇಪ್ಪತ್ತೊಂದು ಬಾರಿ ಭೂಮಿಯನ್ನು ಸುತ್ತಿ ಕ್ಷತ್ರಿಯರನ್ನು ಸಂಹಾರ ಮಾಡಲು ಹೊರಡುತ್ತಾನೆ. ಖರನೆಂಬ ರಾಕ್ಷಸನು ಕಪಟದಿಂದ ಪರಶುರಾಮನಲ್ಲಿ, `ತಾನು ಕಾಶ್ಯಪ ಕುಲದವನೆಂದೂ ತನ್ನನ್ನು ರಕ್ಷಿಸಬೇಕೆಂದೂ’ ಬೇಡಿಕೊಳ್ಳುತ್ತಾನೆ. ಆತನನ್ನು ಅನುಗ್ರಹಿಸಿದ ಪರಶುರಾಮನು, ಮದುವೆಗೆ ಕಂಕಣಕಟ್ಟಿದವನನ್ನು ಯಜ್ಞದಲ್ಲಿ ದೀಕ್ಷಿತನಾದವನನ್ನು ಬಿಟ್ಟು ಉಳಿದ ಎಲ್ಲಾ ಕ್ಷತ್ರಿಯರನ್ನು ಕೊಂದು ಸ್ಯಮಂತಪಂಚಕದಲ್ಲಿ ತಂದೆಗೆ ತರ್ಪಣವಿತ್ತು, ತೃಪ್ತನಾಗಿ ಭೂಮಿಯನ್ನು ಕಾಶ್ಯಪ ಗೋತ್ರದವರಿಗೆ ದಾನ ಕೊಡುತ್ತಾನೆ. ಧನಕನಕಾಧಿಗಳ ತಮಗೆ ಅವಶ್ಯವೆಂದು ಬ್ರಾಹ್ಮಣರು ಹೇಳಿದಾಗ, ಅನುಗ್ರಹ ಪಡೆದ ನಹುಷನನ್ನು ರಕ್ಷಕನಾಗಿ ನಿಯಮಿಸುತ್ತಾನೆ. ತಪಸ್ಸಿಗೆಂದು ಹೋದಾಗ ಮಾನಸಿಕ ತುಮುಲದಿಂದ ಏಕಾಗ್ರತೆ ಸಿದ್ದಿಸದೆ, ಕಾರಣವೇನೆಂದು ಕೇಳಲು ಶಿವನಲ್ಲಿಗೆ ಬರುತ್ತಾನೆ. ಕೈಲಾಸದಲ್ಲಿ ಪಾರ್ವತಿದೇವಿಯು ಶಿವನೊಂದಿಗೆ ಚತುರಂಗವಾಡುತ್ತಿರುವಾಗ ಹೊರಗಿನವರು ಬರಕೂಡದು ಎಂದು ದ್ವಾರದಲ್ಲಿ ಗಣಪತಿಯನ್ನು ಇಬ್ಬರು ಗಣಗಳೊಂದಿಗೆ ನಿಲ್ಲಿಸಿ ಒಳಗೆ ಸೇರುತ್ತಾಳೆ.
ದ್ರುತಗತಿಯಿಂದ ಬಂದ ಪರಶುರಾಮನನ್ನು ಗಣಪತಿಯು ತಡೆಯುತ್ತಾನೆ. ಗುರುದೇವನನ್ನು ಕಾಣುವ ಅವಸರವಿದೆ ಎಂದು ದಾರಿಬಿಡಬೇಕೆಂದೂ ಹೇಳಿದಾಗ, ತಾಯಿಯ ಒಪ್ಪಿಗೆ ಇಲ್ಲದೆ ಒಳಗೆ ಬಿಡಲಾಗುವುದಿಲ್ಲವೆಂದು ಗಣಪತಿಯು ಅವನನ್ನು ತಡೆಯುತ್ತಾನೆ. ಗುರುವನ್ನು ಸಂದಶರ್ಿಸಲು ನನಗೆ ಯಾರ ಅನುಮತಿಯೂ ಬೇಕಾಗಿಲ್ಲವೆಂದು ಮುಂದೆ ನುಗ್ಗಿದಾಗ ಗಣಪತಿಯು ಅವನನ್ನು ತನ್ನ ಬಲ ದಾಡೆಯಿಂದ ಎತ್ತಿ ದೂರಕ್ಕೆ ಎಸೆಯುತ್ತಾನೆ. ಕೆರಳಿದ ಪರಶುರಾಮನು ತನ್ನ ಪರಶುವಿನಿಂದ ಗಣಪತಿಯ ಬಲ ದಾಡೆಗೆ ಹೊಡೆಯುತ್ತಾನೆ. ದ್ವಾರದಲ್ಲಿ ದೊಡ್ಡ ಕೋಲಾಹಲ ಉಂಟಾಗುತ್ತದೆ. ಇದನ್ನರಿತು ಶಿವಪಾರ್ವತಿಯರು ಹೊರಗೆ ಬಂದು ನೋಡಿದಾಗ ಶಿವಗಣಗಳೂ ಪರಶುರಾಮನೂ ಪರಸ್ಪರ ಹೊಡೆದಾಡಿಕೊಂಡಿರುತ್ತಾರೆ. ರಕ್ತ ಸೋರುತ್ತಿರುವ ತನ್ನ ಮಗನ ಮುಖವನ್ನು ಕಂಡ ಉಮೆಯು ಭದ್ರಕಾಳಿಯಾಗಿ ಲೋಕವನ್ನು ಸುಡಲು ಮುಂದಾಗುತ್ತಾಳೆ. ಆಗ ಶಿವನು ಎಲ್ಲರನ್ನೂ ಸಮಾಧಾನಿಸುತ್ತಾನೆ. ಪರಶುರಾಮನಿಗೆ ತನ್ನ ತಪ್ಪಿನ ಅರಿವಾಗಿ ಶಿವ ಪಾರ್ವತಿ ಹಾಗೂ ಗಣಪತಿಯಲ್ಲಿ ಕ್ಷಮೆಯಾಚಿಸುತ್ತಾನೆ. ಚಿತ್ತೈಕಾಗ್ರತೆಯಿಲ್ಲದೆ ಹೀಗಾಯಿತೆಂದು ಹೇಳಿದನು. ಅದಕ್ಕೆ ಶಿವನು ನಿನ್ನ ಮನದ ಮೂಲೆಯಲ್ಲಿದ್ದ ನಾನು ಎಂಬ `ಅಹಂ’ ನಾನೆಂಬ ಅಹಂಕಾರವನ್ನು ಬಿಟ್ಟು ಬಿಡು ಆಗ ಮನಸ್ಸು ಏಕಾಗ್ರವಾಗುತ್ತದೆ. ಎಂದು ಉಪದೇಶಿಸುತ್ತಾನೆ. ಅದರೊಂದಿಗೆ “ಮುಂದೆ ಕಡಲತೀರದಲ್ಲಿ ಶಿವಲಿಂಗವನ್ನು ಸ್ಥಾಪಿಸು” ಎಂದೂ ಆಜ್ಞೆಮಾಡುತ್ತಾನೆ. ಆಗ ಪರಶುರಾಮನು “ನಾನು ಸ್ಥಾಪಿಸಿದ ಶಿವಲಿಂಗವಿರುವಲ್ಲಿ ಉಮಾದೇವಿಯೂ, ಗಣಪತಿಯೂ, ಶಾಸ್ತಾರರೂ ಮತ್ತು ಇತರ ಗಣಗಳೂ ಸನ್ನಿಹಿತರಾಗಬೇಕು. ಭದ್ರಕಾಳಿಯಾದ ಗೌರೀದೇವಿಯು ಕ್ಷೇತ್ರದಲ್ಲಿ ಅಪ್ರಕಟಿತಳಾಗಿ ಸಾನ್ನಿಧ್ಯವನ್ನಿರಿಸಬೇಕು” ಎಂದು ಪ್ರಾರ್ಥಿಸುತ್ತಾನೆ. ಈ ಪ್ರಾರ್ಥನೆಗೆ ಉಮಾಮಹೇಶ್ವರರು `ತಥಾಸ್ತು’ ಎಂದು ಮನ್ನಿಸುತ್ತಾರೆ.
ಕೈಲಾಸದಿಂದ ಮರಳಿ ಬಂದು ಕುಟಜಾದ್ರಿಯಲ್ಲಿ ನಿಂತ ಪರಶುರಾಮನು, ತಾನು ಭೂಮಿಯನ್ನು ಕಾಶ್ಯಪ ಗೋತ್ರದವರಿಗೆ ದಾನವಾಗಿ ಕೊಟ್ಟದ್ದರಿಂದ, ಉಳಿದ ಗೋತ್ರದವರಿಗೆ ತಪಸ್ಸಿಗೆ ಅನುಕೂಲವಾದ ಭೂ ಪ್ರದೇಶವನ್ನು ಒದಗಿಸಬೇಕೆಂದು ಯೋಚಿಸಿ ವರುಣನಲ್ಲಿ ಭೂಭಾಗ ಬೇಕೆಂದು ಯೋಚಿಸುತ್ತಾನೆ ಆಗ ವರುಣನು “ನಿನ್ನ ಕೈಯಲ್ಲಿರುವ ಕೊಡಲಿಯನ್ನು ಬೀಸಿ ಎಸೆ. ಅದು ಬೀಳುವಷ್ಟು ದೂರದವರೆಗಿನ ಭೂಭಾಗವನ್ನು ಬಿಟ್ಟು ಕೊಡುತ್ತೇನೆ” ಎಂದು ಹೇಳುತ್ತಾನೆ. ಪರಶುರಾಮನು ಕೊಡಲಿಯನ್ನು ಪೂಜಿಸಿ ವಿಶ್ರಮಿಸಿದಾಗ ಬ್ರಹ್ಮನು ಕೊಡಲಿಗೆ ಗೆದ್ದಲು ಹಿಡಿಯುವಂತೆ ಮಾಡುತ್ತಾನೆ. ಸೂರ್ಯೋದಯದಲ್ಲಿ ಇದನ್ನು ನೋಡಿದ ಪರಶುರಾಮನು, “ಒರಳಿಗೆ ರೆಕ್ಕೆ ಬಂದಾಗ ಸಾಯಲಿ” ಎಂದು ಶಪಿಸಿ ಕೊಡಲಿಯನ್ನು ಬೀಸಿ ಎಸೆಯುತ್ತಾನೆ. ಗೋಕರ್ಣದಿಂದ ಕನ್ಯಾಕುಮಾರಿವರೆಗಿನ ಭೂಮಿಯನ್ನು ವರುಣ ಬಿಟ್ಟುಕೊಡುತ್ತಾನೆ. ಸುಮೇಧಾದಿ ಋಷಿಗಳಿಗೆ ಬೇರೆ ಬೇರೆ ಸ್ಥಳಗಳನ್ನು ತಪಸ್ಸಿಗೆಂದು ತೋರಿಸಿ, ಉದಯಪುರವೆಂಬ ರಾಜ್ಯವನ್ನು ನಿರ್ಮಾಣಮಾಡಿ, ಅಲ್ಲಿ ರಾಮಬೋಜನನ್ನು ಅರಸನನ್ನಾಗಿ ಮಾಡಿ, ಅವನಿಗೆ ಪರಶುರಾಮ ಕ್ಷೇತ್ರದ ರಕ್ಷಣೆಯನ್ನು ವಹಿಸಿಕೊಟ್ಟು ಧ್ಯಾನಮಗ್ನನಾಗಿ, ಅಗಸ್ತ್ಯನು ಸ್ಥಾಪಿಸಿದ ಶಿವಲಿಂಗವು ಸೈಕತರಾಶಿಯಲ್ಲಿ ಅಡಗಿರುವುದನ್ನು ತಿಳಿದು ಆ ಕ್ಷೇತ್ರದ ಮಹಿಮಾತಿಶಯವನ್ನು ಮನಗಂಡು ಅಲ್ಲಿಗೆ ಮೇಲ್ಭಾಗದಲ್ಲಿ ನೂತನವಾಗಿ ಮತ್ತೊಂದು ಶಿವಲಿಂಗವನ್ನು ಸ್ಥಾಪಿಸಿ, ಗಣಪತಿ ಶಾಸ್ತಾರ ರುಧ್ರಗಣಗಳನ್ನು ನೆಲೆಗೊಳಿಸಿ ರಾಮಭೋಜನಿಂದ ಪಶ್ಚಿಮಾಭಿಮುಖವಾಗಿ ದೇಗುಲವನ್ನು ನಿರ್ಮಾಣಮಾಡಿಸಿ, ಹೊರಗಿನ ಆವರಣದಲ್ಲಿ ಅದೃಶ್ಯಳಾಗಿದ್ದು ಭಕ್ತರನ್ನು ಕ್ಷೇತ್ರವನ್ನೂ ಪಾಲಿಸಬೇಕೆಂದೂ ಭದ್ರಕಾಳಿಯನ್ನೂ ಪ್ರಾರ್ಥಿಸಿ ತಪಸ್ಸಿಗೆ ಹೋಗುತ್ತಾನೆ.
ಸದಾಶಿವ ಕ್ಷೇತ್ರದ ಅಸುಪಾಸಿನಲ್ಲಿ ಜನವಸತಿಗಳಾಗಿ ಜನರ ಸಂಪರ್ಕವು ಹೆಚ್ಚಾಯಿತು. ರಾಮಭೋಜನು ದೇವಸ್ಥಾನಕ್ಕೆ ಧನಕನಕಾದಿಗಳನ್ನಿತ್ತು ಅರ್ಚಕರನ್ನು ನೇಮಿಸಿ ಬೇಕಾದ ಎಲ್ಲಾ ವ್ಯವಸ್ಥೆಗಳನ್ನು ಮಾಡಿಸುತ್ತಾನೆ.
ರಾಮಭೋಜನ ಕಾಲಾನಂತರ ಅಲ್ಲಲ್ಲಿ ತುಂಡರಸರು ತಲೆ ಎತ್ತಿ ಸ್ವಾರ್ಥಿಗಳಾಗಿ ಪರಸ್ವರ ದ್ವೇಷಾಸೂಯೆಗಳಿಂದ ಸ್ವಚ್ಛಂದವಾಗಿ ವ್ಯವಹರಿಸಲಾರಂಭಿಸಿದರು. ಕಡಲ್ಗಳ್ಳರು ಸದಾಶಿವ ದೇವಸ್ಥಾನವನ್ನು ನಾಶ ಮಾಡಿ, ಅರ್ಚಕನನ್ನೂ ಓಡಿಸಿ ಊರವರನ್ನು ಕೊಂದು ಧನಕನಕಾದಿಗಳನ್ನು ದೋಚಿದರು. ಇದಿಷ್ಟು ಈ ಕ್ಷೇತ್ರವು ಜೀರ್ಣಾವಸ್ಥೆಯನ್ನು ತಳೆದ ಐತಿಹ್ಯ.
ಐತಿಹಾಸಿಕ ಹಿನ್ನೆಲೆ.:
ಪರಶುರಾಮನು ತಪಸ್ಸಿಗೆ ಹೋದುದನ್ನೂ, ರಾಮಭೋಜನು ಕಾಲಗತಿಯನ್ನೈದಿರುವನೆಂದೂ ತಿಳಿದ ಖರಾಸುರನು ಗೋ, ಸ್ತ್ರೀ, ಬ್ರಾಹ್ಮಣ, ಸರ್ಪ, ಶಿಶು ಇತ್ಯಾದಿ ಹತ್ಯೆಗಳನ್ನು ನಡೆಸುತ್ತಿದ್ದನು. ಖರನ ಹೆಸರು ಕೇಳಿದ ಮಾತ್ರಕ್ಕೆ ಜನರು ಭೀತರಾಗುವಂತೆ ಮಾಡಿ, ಇದರ ಪರಿಣಾಮವೋ ಎಂಬಂತೆ ನಾನಾ ವ್ಯಾಧಿಗಳಿಂದ ಬಳಲಿ, ಎಲ್ಲರಿಂದಲೂ ತಿರಸ್ಕೃತನಾಗಿ ತನ್ನ ದುಷ್ಕೃತ್ಯಗಳಿಗೆ ಪಶ್ಚಾತ್ತಾಪ ಪಟ್ಟು ಪರಶುರಾಮನ್ನು ಧ್ಯಾನಿಸುತ್ತಾಣೆ. ಖರನ ಮೊರೆಯನ್ನಾಲಿಸಿ ಬಂದ ಪರಶುರಾಂನು ದುಃಖಿಯಾದ ಖರನಿಗೆ ತಪೋದೀಕ್ಷೆಯನ್ನಿಟ್ಟು, ತೀರ್ಥಸ್ನಾನ, ಕ್ಷೇತ್ರ ದರ್ಶನ ಮಾಡೆಂದೂ, ಸಮುದ್ರ ತೀರದಲ್ಲಿ ಶೀವಲಿಂಗಗಳನ್ನು ಸ್ಥಾಪಿಸೆಂದು, ರೋಗಮುಕ್ತನಾಗಿ ನನ್ನ ಬಳಿಗೆ ಬಾರೆಂದು ತಿಳಿಸುತ್ತಾನೆ.
ಪರಶುರಾಮನು ನಿರ್ಗಮಿಸಿದ ಮೇಲೆ ಖರಾಸುರನು ತೀರ್ಥಕ್ಷೇತ್ರಗಳನ್ನು ಸಂದರ್ಶಿಸುತ್ತಾ ಕಾಶಿಗೆ ಹೋಗಿ ಗಂಗೆಯಲ್ಲಿ ಮಿಂದು ವಿಶ್ವನಾಥನ ದರ್ಶನ ಮಾಡಿ, ಕಾಶಿಯಿಂದ ಶಿವಲಿಂಗಗಳನ್ನು ತಂದು ಅಲ್ಲಲ್ಲಿ ಅವುಗಳನ್ನು ಸ್ಥಾಪಿಸುತ್ತಾ, ರೋಗವು ಪೂರ್ಣವಾಗಿ ಗುಣವಾಗದೆ ಕೊನೆಗೆ, ಆಲಿಂಗಗಳನ್ನು ಹಿಡಿದುಕೊಂಡು ಸಮುದ್ರಮಾರ್ಗವಾಗಿ ಬರುತ್ತ ಅಗಸ್ತ್ಯ ಮತ್ತು ಪರಶುರಾಮರಿಂದ ಶಿವಲಿಂಗ ಸ್ಥಾಪಿತವಾದ ಸಮುದ್ರತೀರಕ್ಕೆ ಬಂದಾಗ ತಲೆಯ ಮೇಲಿದ್ದ ಶಿವಲಿಂಗವು ತಾನಾಗಿ ಆಕರ್ಷಿಸಲ್ಪಟ್ಟು ಕೆಳಗೆ ಬೀಳುತ್ತದೆ. ಅದನ್ನೆತ್ತಲಾಗದೆ ಅಲ್ಲಿಯೇ ಆ ಲಿಂಗವನ್ನು ಸ್ಥಾಪಿಸಿ, ಸಮುದ್ರ ಸ್ಥಾನವನ್ನು ಮಾಡಿದಾಗ ಸಂಪೂರ್ಣ ರೋಗಮುಕ್ತನಾಗಿ, ಹರದಾರಿಗಳ ದೂರದಲ್ಲಿ ಕೈಯಲ್ಲಿದ್ದ ಲಿಂಗಗಳನ್ನು ಸ್ಥಾಪಿಸಿ ಪರಶುರಾಮನ ಬಳಿಗೆ ಹೋಗುತ್ತಾನೆ ಖರನ ತಲೆಯಿಂದ ಮೊದಲು ಬಿದ್ದ ಲಿಂಗವನ್ನು ಕಂಡ ತುಳುವರು, “ಸುರತ್ತ ಕಲ್” ಎನ್ನುತ್ತಾರೆ. ಮುಂದೆ ಅದುವೇ ಸುರತ್ಕಲ್ ಎಂದಾಗುತ್ತದೆ.
ಕಾಲಾಂತರದಲ್ಲಿ ಭೂತಾಳ ಪಾಂಡ್ಯನ ಆಶ್ರಿತನಾದ ಕಿನ್ನರಿ ಅರಸು ಪೈವ ಹೆಗಡೆ ಶ್ರೀ ಸದಾಶಿವ ದೇವಸ್ಥಾನವನ್ನು ಪೂವರ್ಾಭಿಮುಖವಾಗಿ ನಿರ್ಮಿಸಿ ಯುವಕನಾದ ಅರ್ಚಕನೊಬ್ಬನನ್ನು ನೇಮಿಸಿ ಪೂಜಾದಿಗಳು ನಡೆಯುವಂತೆ ಮಾಡುತ್ತಾನೆ. ಆ ಅರ್ಚಕನು ಕ್ಷುದ್ರೋಪಾಸನೆಯನ್ನು ನಡೆಸಿ, ಕ್ಷುದ್ರ ದೇವತೆಗೆ ಬಲಿಯಾಗುತ್ತಾನೆ. ಈ ವಿಚಾರವನ್ನು ತಿಳಿದ ಪೈವ ಹೆಗಡೆಯು ನಾರಾವಿ ಬಳಿಯ ಮಾಂಟ್ರಾಡಿಯಿಂದ ವೇದಜ್ಞರಾದ, ಸಾತ್ವಿಕರಾದ ಮಯ್ಯ ದಂಪತಿಗಳನ್ನು ಕರೆತಂದು ಉಚಿತ ಉಂಬಳಿಗಳನ್ನು ಕೊಟ್ಟು ಕಟ್ಟು ಕಟ್ಟಲೆಗಳನ್ನು ತಿಳಿಸಿ ಶ್ರೀ ಸದಾಶಿವ ದೇವಸ್ಥಾನದ ಅರ್ಚಕರನ್ನಾಗಿ ಅವರನ್ನು ನೇಮಿಸುತ್ತಾಣೆ.
ಮೂನರ್ಾಡು ಮಾಗಣೆ 16-18 ಗ್ರಾಮಗಳ ಜನರು ಸೇರಿ ಜಾತ್ರೆ ಉತ್ಸವಾದಿಗಳನ್ನು ನಡೆಸುತ್ತಾ ಬರುತ್ತಾರೆ. ಕಜೆರಿಸ್ಥಾನದಲ್ಲಿ ಕೋಲ ನಡೆಯುವಾಗ, ಮಾರಿಗುಡಿಗಳಲ್ಲಿ ಉತ್ಸವಾದಿಗಳು ನಡೆಯುವಾಗ ಮೊದಲಿಗೆ ಮಾಗಣೆ ದೇವಸ್ಥಾನಕ್ಕೆ ಬಂದು ಒಂದು ಕಾಣಿಕೆ ಒಪ್ಪಿಸಿ ಪ್ರಸಾದವನ್ನು ಸ್ವೀಕರಿಸುವ ಪದ್ದತಿ ಇದೆ. ಪಡ್ರೆ ಸ್ಥಾನದಲ್ಲಿ ದೂಮಾವತಿ, ಬಂಟರಕೋಲ ಆಗುವಾಗ ದೈವಗಳ ಶ್ರೀ ಸದಾಶಿವ ದೇವಸ್ಥಾನಕ್ಕೆ ಬಂದು ದರ್ಶನವನ್ನು ಪಡೆದು ಪ್ರಸಾದವನ್ನು ಪಡೆಯುತ್ತಿದ್ದವು. ಖಂಡಿಗೆ, ಚೇಳ್ಯಾರು, ಮುಕ್ಕ, ಕುತ್ತೆತ್ತೂರು ಗುತ್ತಿನವರು ಮೇಲ್ವಿಚಾರಕರಾಗಿದ್ದರು. ಮೂನರ್ಾಡು ಮಾಗಣೆ ಗ್ರಾಮಗಳಲ್ಲಿ ವಿಶೇಷವಾದ ಯಾವುದೇ ಕಾರ್ಯಕ್ರಮ ನಡೆಯುತ್ತಿದ್ದರೂ (ಜಾತ್ರೆ ಕೋಲ ಇತ್ಯಾದಿ) ಶ್ರೀ ಸದಾಶೀವ ದೇವಸ್ಥಾನದಿಂದ ಪ್ರಸಾದ ಸ್ವೀಕರಿಸಿಯೇ ನಡೆಸುತ್ತಿದ್ದರು.
ಉಮಾಮಹೇಶ್ವರ, ಗಣಪತಿ, ಶಾಸ್ತಾರ, ಜೈನ ಬಬ್ಬರ್ಯ, ನಾಗಬ್ರಹ್ಮ ಅದೃಶ್ಯಳಾಗಿ ರಕ್ಷಾ ಸ್ಥಾನದಲ್ಲಿರುವ ಭದ್ರಕಾಳಿ, ರುದ್ರಗಣಗಳು ಹೀಗೆ ಆರಾಧನೆಗೊಂಡು ಭಕ್ತರ ಪಾಪ ದೋಷ, ರೋಗ ಸಂಕಟ ದಾರಿದ್ರ್ಯಾದಿಗಳನ್ನು ಹಾಗೂ ವಿವಾಹಪೇಕ್ಷಿಗಳಿಗೆ ವಿವಾಹಸಿದ್ದಿಯನ್ನೂ, ಸಂತಾನಪೇಕ್ಷಿಗಳಿಗೆ ಸಂತಾನವನ್ನೂ ಕರುಣಿಸುವ ಶ್ರೀ ಸದಾಶಿವನು ಕಡಲತಡಿಯ ಸುರತ್ಕಲ್ ನಲ್ಲಿ ರಾರಾಜಿಸುತ್ತಿದ್ದಾನೆ.
ಉತ್ಸವಾದಿಗಳಿಗೆ ಅರ್ಚಕರು ನಾಲ್ಕು ಗುತ್ತಿನವರಿಗೆ, ಮಿತ್ತೋಡಿ ಜಂತೊಟ್ಟು ಅರಮನೆಗೆ ಐದು ಪಟ್ಟಣಗಳ ಗುರಿಕಾರರರಿಗೆ ಗ್ರಾಮದ ಪ್ರಮುಖ ಹೇಳಿಕೆ ಮಾಡಬೇಕು. ಹೇಳಿಕೆಗೆ ಬರುವ ಅರ್ಚಕನಿಗೆ ಹರಿವಾಣದಲ್ಲಿ ಒಂದು ಬಳ್ಳ ಅಕ್ಕಿ, ಎರಡು ತೆಂಗಿನಕಾಯಿ, ಎಲೆ ಅಡಿಕೆ ಮತ್ತು ಒಂದು ವರಹ ಕೊಡಬೇಕು. ಅರಮನೆಯವರ ಮೇಲ್ನೋಟದಲ್ಲಿ ಗುತ್ತಿನವರು ಗುರಿಕಾರರು ಸೇರಿ, ಊರಿನವರು ಒಂದಾಗಿ ಜಾತ್ರೆ ಉತ್ಸವವಾದಿಗಳಲ್ಲಿ ಪಾಲ್ಗೊಳ್ಳಬೇಕು. ತಪ್ಪೋತ್ಸವಕ್ಕೆ ದೋಣಿ ಒದಗಿಸಿ ಎಲ್ಲವನ್ನೂ ಮಾಡಿಸಲು ಐದು ಪಟ್ಟಣದವರು ಬದ್ದರು. ದೇವಸ್ಥಾನದ ಮುಂದೆ ತೋರಣ ಕಟ್ಟುವ ಕೆಲಸ ಕಚೆರಿಸ್ತಾನದವರಿಗೆ. ಚಪ್ಪರದ ಹೊಣೆ ಗುತ್ತಿನವರಿಗೆ, ಊಟ ಇತ್ಯಾದಿಗಳ ವ್ಯವಸ್ಥೆ ಅರಮನೆಗೆ – ಹೀಗೆ ಬೇರೆ ಬೇರೆ ಕಟ್ಟುಪಾಡುಗಳನ್ನು ಪೈವ ಹೆಗಡೆ ಮಾಡಿದ್ದ. ಆರಂಭಕಾಲದಲ್ಲಿ ಇದು ಅನೂಚಾನವಾಗಿ ನಡೆದು ಬರಬೇಕೆಂದು ನಿರ್ಣಯಗಳನ್ನು ಎಲ್ಲರೂ ಒಂದಾಗಿ ಸಮಾಲೋಚಿಸಿ ಏರ್ಪಡಿಸಿದ್ದರು.
Click this button or press Ctrl+G to toggle between Kannada and English