ಹಿಂದೂ ಸಂಸ್ಕೃತಿ ನಿಧಾನವಾಗಿ ನಾಶವಾಗುತ್ತಿದೆ ಎಚ್ಚರ-ಜಗದೀಶ್ ಶೇಣವ

5:18 PM, Monday, April 15th, 2013
Share
1 Star2 Stars3 Stars4 Stars5 Stars
(No Ratings Yet)
Loading...

Thoudugoli Vishu ಮಂಗಳೂರು : ಶಾಲಾ ಕಾಲೇಜುಗಳಲ್ಲಿ ಅನ್ಯ ಧರ್ಮೀಯರು ಹಿಂದೂ ಧರ್ಮದ ಸಂಸ್ಕೃತಿಯ ಮೇಲೆ ಸವಾರಿ ಮಾಡುತ್ತಿದ್ದು ಆ ಮೂಲಕ ಹಿಂದೂ ಸಂಸ್ಕೃತಿಯನ್ನು ಸಂಪೂರ್ಣ ನಾಶಪಡಿಸುವ ಹುನ್ನಾರ ನಡೆಸುತ್ತಿದ್ದು ಪೋಷಕರೇ ಎಚ್ಚರ ಎಂದು ವಿಶ್ವಹಿಂದೂ ಪರಿಷತ್ ಮಂಗಳೂರು ವಿಭಾಗ ಕಾರ್ಯಾಧ್ಯಕ್ಷ  ಜಗದೀಶ್ ಶೇಣವ ಅಭಿಪ್ರಾಯಪಟ್ಟರು.

ಅವರು ಭಾನುವಾರ ವರ್ಕಾಡಿ ತೌಡುಗೋಳಿಯ ಶ್ರೀ ದುರ್ಗಾದೇವಿ ದೇವಸ್ಥಾನದಲ್ಲಿ ವಿಷು ಪೂಜೆ ಪ್ರಯುಕ್ತ ನಡೆದ ಧಾರ್ಮಿಕ ಸಭೆಯಲ್ಲಿ ವಿಶೇಷ ಉಪನ್ಯಾಸ ನೀಡಿದರು.

ಸಂಸ್ಕೃತಿ ಗೌರವಿಸದ ಸಂಸ್ಕಾರ ನಮ್ಮದಾಗದಂತೆ ಪೋಷಕರು ಎಚ್ಚೆತ್ತುಕೊಳ್ಳಬೇಕು. ಹಿಂದೂ ಹಬ್ಬ ಹರಿದಿನಗಳಲ್ಲಿ, ಧಾರ್ಮಿಕ ಸಭೆ ಸಮಾರಂಭಗಳಲ್ಲಿ ಹಿಂದೂಗಳ ಪಾಲ್ಗೊಳ್ಳುವಿಕೆ ಹೆಚ್ಚಿಸಬೇಕು. ಮೋಜಿನ ಕಾರ್ಯಕ್ರಮ ನಿರ್ಬಂಧಿಸಬೇಕು. ತಲತಲಾಂತರದಿಂದ ಆಚರಣೆಯಲ್ಲಿರುವ ಧರ್ಮವನ್ನು ಸಂಘಟಿಸುವ ವಿಭಜನೆ ತಪ್ಪಿಸುವ ಶ್ರೇಷ್ಠ ಸಂಸ್ಕಾರವಾದ ಭಜನೆಯನ್ನು ಪ್ರತಿ ಮನೆಯಲ್ಲಿ ನಡೆಸಬೇಕು. ಇನ್ನು ಅಸಹಾಯಕತೆ, ಕಷ್ಟವಾಗ್ತದೆ ಎಂಬ ನೆಪದಲ್ಲಿ ಕೇವಲ ಒಂದು ಅಥವಾ ಎರಡು ಮಕ್ಕಳಿಗೆ ಜನ್ಮ ನೀಡುವ ಮೂಲಕ ಜಾರಿಕೊಳ್ಳುವ ತಂದೆ ತಾಯಂದಿರು ಕಷ್ಟವಾದರೂ ಕುಟುಂಬ ವೃದ್ಧಿಸುವ ಮೂಲಕ ಹಿಂದೂ ಧರ್ಮೀಯರ ಜನಸಂಖ್ಯೆ ಹೆಚ್ಚಿಸುವತ್ತ ಗಮನ ಹರಿಸಬೇಕು ಎಂದರು.

Thoudugoli Vishu ನಮ್ಮ ಸಂಸ್ಕಾರ, ಸಂಸ್ಕೃತಿ, ಆಚಾರ, ವಿಚಾರ, ಪದ್ಧತಿಗಳು, ಪೌರಾಣಿಕ ಜ್ಞಾನ ಹೊಂದಿಸಿಕೊಳ್ಳಬೇಕಾದ ದಿನಗಳಲ್ಲಿ ಅದರ ಕಡೆಗೆ ಗಮನ ಹರಿಸಿದೆ ಮುಪ್ಪಿನ ಕಾಲದಲ್ಲಿ ಆ ಬಗ್ಗೆ ವ್ಯಥೆ ಪಟ್ಟರೆ ಯಾವ ಪ್ರಯೋಜನವೂ ಇಲ್ಲ. ಹಿಂದೂ ಧರ್ಮ ಇಂತಹದ್ದೇ ಇಸವಿಯಲ್ಲಿ ಹುಟ್ಟಿದೆ ಎಂಬ ಬಗ್ಗೆ ನಿಖರತೆ ಇಲ್ಲ. ಪ್ರಪಂಚದ ಇತರ ಎಲ್ಲ ಮತಗಳಿಗಿಂತ ಹಿಂದು ಧರ್ಮ ಭಿನ್ನ ಎಂಬುದು ನಮಗೆ ಮಾತ್ರ ತಿಳಿದರೆ ಸಾಲದು. ಇತರರಿಗೂ ನಿರೂಪಿಸಲು ಆ ಬಗ್ಗೆ ನಾವು ಜ್ಞಾನ ಪಡೆದಿರಬೇಕು. ಹಾಗೆಯೇ ಹಿಂದೂಗಳು ಧಾರ್ಮಿಕ ಮಂದಿರಗಳಿಗೆ ದಾನವಿತ್ತಾಗ ಅಲ್ಲಿ ನಾಮಫಲಕದಲ್ಲಿ ತಮ್ಮ ಹೆಸರು ಕಾಣುತ್ತಿಲ್ಲ ಎಂಬ ಬಗ್ಗೆ ಚಿಂತಿಸದೆ ಆ ಬಗ್ಗೆ ಅನ್ಯ ಮತಗಳಿಂದ ಕಲಿಯಬೇಕಿದೆ ಎಂದು ಸಲಹೆ ನೀಡಿದರು.

ಇತರ ಧರ್ಮವನ್ನು ದೂಷಿಸುವುದಕ್ಕಿಂತ ಸ್ವಧರ್ಮದಲ್ಲಿನ ಲೋಪಗಳನ್ನು ತಿದ್ದುವತ್ತ ಮನಸ್ಸು ಮಾಡಬೇಕು. ಹಿಂದೂ ಧರ್ಮೀಯರ ಜನಸಂಖ್ಯೆ ಕುಂಠಿತಗೊಳ್ಳುವುದಕ್ಕೆ ವಿದ್ಯಾವಂತ ಹೆಣ್ಮಕ್ಕಳು ಅದರಲ್ಲೂ ಗ್ಲ್ಯಾಮರ್ ಕಳೆದುಕೊಳ್ಳುವ ಆತಂಕದಿಂದ ಮಕ್ಕಳನ್ನು ಪ್ರಸವಿಸಲು ಹಿಂದೇಟು ಹಾಕಲು ಒಂದು ಕಾರಣವಾದರೆ ಕೈಹಿಡಿದ ಪತ್ನಿಗೆ ಭದ್ರತೆ ನೀಡುವಲ್ಲಿ ಪುರುಷನು ವಿಫಲವಾಗುತ್ತಿರುವುದು ಕೂಡಾ ಗಮನಿಸಬೇಕಾಗಿದೆ ಎಂದು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ವರ್ಕಾಡಿ ಮರಿಕಾಪು ಶ್ರೀ ಮಡಿಕತ್ತಾಯ ದೈವಸ್ಥಾನದ ಆಡಳಿತ ಮೊಕ್ತೇಸರ ಲಕ್ಷ್ಮೀನಾರಾಯಣ ಹೊಳ್ಳ ಅಭಿಪ್ರಾಯಪಟ್ಟರು.

ಪ್ರಸ್ತುತ ದಿನಗಳಲ್ಲಿ ನಮ್ಮಲ್ಲಿ ಶ್ರೀಮಂತಿಕೆ ಪ್ರಮಾಣ ಹೆಚ್ಚಾಗಿದೆ ಹೊರತು ನೆಮ್ಮದಿ ಮರೆಯಾಗಿದೆ. ಕುಟುಂಬ ವೃದ್ಧಿಗೆ ವೈದ್ಯರ ಮೊರೆ ಹೋಗುವುದು ಅನಿವಾರ್ಯವಾದರೆ, ಯಾವುದೇ ಸಂಸಾರದಲ್ಲಿ ಶಾಂತಿ ನೆಮ್ಮದಿ ಇದ್ದಾಗ ಮಾತ್ರ ಕುಟುಂಬ ವೃದ್ಧಿ ಸಾಧ್ಯ ಎಂಬ ಅರಿವು ನಮ್ಮಲ್ಲಿರಬೇಕು. ಎರಡು ಮನಸ್ಸುಗಳು ಒಂದಾದರೆ ಮಾತ್ರ ಸಂತೋಷಭರಿತ ಸಂಸಾರ ಕಾಣಲು ಸಾಧ್ಯ ಎಂದರು.

Thoudugoli Vishu ಕಾರ್ಯಕ್ರಮ ಉದ್ಘಾಟಿಸಿದ ಧರ್ಮಧರ್ಷಿ ಹರಿಕೃಷ್ಣ ಪುನರೂರು ಅವರು ವಿಷು ಹಾಗೂ ವಿಜಯ ನಾಮ ಸಂವತ್ಸರ ಎಲ್ಲರಿಗೂ ಒಳಿತನ್ನು ತರಲಿ ಎಂದು ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಉಳ್ಳಾಲ ಶ್ರೀ ಚೀರುಂಭ ಭಗವತೀ ಕ್ಷೇತ್ರದ ಅಧ್ಯಕ್ಷ ಚಂದ್ರಹಾಸ್ ಉಳ್ಳಾಲ್, ಭಗವತೀ ಸಹಕಾರ ಬ್ಯಾಂಕಿನ ಉಪಾಧ್ಯಕ್ಷ ಸುರೇಶ್ ಭಟ್ನಗರ, ಶ್ರೀ ದುರ್ಗಾದೇವಿ ದೇವಸ್ಥಾನದ ಆಡಳಿತ ಮೊಕ್ತೇಸರ ಗೋವಿಂದ ಗುರುಸ್ವಾಮಿ, ಶಾಂತಿಪಳಿಕೆ ಶ್ರೀ ಮಿತ್ತಮೊಗರಾಯ ದೈವಸ್ಥಾನದ ಆಡಳಿತ ಮೊಕ್ತೇಸರ ಚಂದ್ರಹಾಸ್ ಶೆಟ್ಟಿ ಮೋರ್ಲಗುತ್ತು, ಸೇವಾ ಸಮಿತಿ ಅಧ್ಯಕ್ಷ ಹರೀಶ್ ಕನ್ನಿಗುಳಿ, ನರಿಂಗಾನ ಮಠ ಶ್ರೀ ದುರ್ಗಾಪರಮೇಶ್ವರೀ ಮಠದ ಜೀಣೋದ್ಧಾರ ಸಮಿತಿ ಅಧ್ಯಕ್ಷ ಬಿ.ನಾರಾಯಣ ಶೆಟ್ಟಿ ಬಲೆತ್ತೋಡು, ವರ್ಕಾಡಿ ದೇವಂದಪಡ್ಪು ಶ್ರೀ ಮಹಾವಿಷ್ಣು ದೇವಸ್ಥಾನದ ಕಾರ್ಯದರ್ಶಿ ಐತಪ್ಪ ಶೆಟ್ಟಿ ದೇವಂದಪಡ್ಪು, ಉದ್ಯಮಿ ವಿಶ್ವನಾಥ ರೈ ಕುಂಜತ್ತೂರು, ನರಿಂಗಾನ ಯುವಕ ಮಂಡಲದ ಅಧ್ಯಕ್ಷ ನವೀನ್ ಶೆಟ್ಟಿ ಮಂಗಲ್ಪಾಡಿ ಉಪಸ್ಥಿತರಿದ್ದರು.

ಶ್ರೀ ಕ್ಷೇತ್ರ ಆಡಳಿತ ಸಮಿತಿಯ ಅಧ್ಯಕ್ಷ ಶಿವಪ್ರಸಾದ್ ತೌಡುಗೋಳಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.

ಪತ್ರಕರ್ತ ಸತೀಶ್ ಕುಮಾರ್ ಪುಂಡಿಕಾ ಕಾರ್ಯಕ್ರಮ ನಿರೂಪಿಸಿದರು.

ನರಿಂಗಾನ ಯುವಕ ಮಂಡಲದ ಉಪಾಧ್ಯಕ್ಷ ಚಂದ್ರಹಾಸ್ ಎಲ್. ಸರ್ಕುಡೇಲು ವಂದಿಸಿದರು.

ಬಳಿಕ ವಿಷು ವಿಶೇಷ ಪೂಜೆ ಹಾಗೂ ವಜ್ರ ಆರ್ಟ್ಸ್ ಕುಡ್ಲ ತಂಡದಿಂದ “ಎನ್ನಿದಿನೊಂಜಿ ಆಯಿನೊಂಜಿ” ತುಳು ನಾಟಕ ಪ್ರದರ್ಶನ ನಡೆಯಿತು.
Thoudugoli Vishu

Thoudugoli Vishu

Thoudugoli Vishu

Thoudugoli Vishu

Thoudugoli Vishu

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English