ಮಂಗಳೂರು : ವಿಧಾನಸಭಾ ಚುನಾವಣೆಯು ಮುಂದಿನ ಲೋಕಸಭಾ ಚುನಾವಣೆಯ ದಿಕ್ಸೂಚಿಯಾಗಿದ್ದು ಗೆಲ್ಲುವ ಹಾಗು ಸಮರ್ಥ ಅಭ್ಯರ್ಥಿಗಳನ್ನು ಈ ಚುನಾವಣೆಯಲ್ಲಿ ಆಯ್ಕೆ ಮಾಡಲಾಗಿದ್ದು ಪ್ರಸ್ತುತ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದೇಬರುತ್ತದೆ ಎಂಬ ವಿಶ್ವಾಸವನ್ನು ಮಾಜಿ ಕೇಂದ್ರ ಸಚಿವ ಬಿ.ಜನಾರ್ಧನ ಪೂಜಾರಿ ವ್ಯಕ್ತಪಡಿಸಿದರು. ಶುಕ್ರವಾರ ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಚಾರ ಕಚೇರಿಯಲ್ಲಿ ಪತ್ರಿಕಾಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಅವರು, ಬಿಜೆಪಿ ಪಕ್ಷದ ಆಡಳಿತದಿಂದ ಸೋತಿರುವ ಜನ ಈ ಬಾರಿ ಬಿಜೆಪಿ ಯನ್ನು ಅಧಿಕಾರದಿಂದ ಕೆಳಗಿಳಿಸಿ ಕಾಂಗ್ರೆಸ್ಸನ್ನು ಅಧಿಕಾರಕ್ಕೆ ತರುತ್ತಾರೆ ಎಂದರು.
ಬಿಜೆಪಿ ಯ ಚುನಾವಣಾಪ್ರಣಾಳಿಕೆಯಲ್ಲಿನ ಅಂಶಗಳು ಕೇವಲ ಪೊಳ್ಳು ಭರವಸೆಗಳಾಗಿದ್ದು ಪ್ರಣಾಳಿಕೆಯಲ್ಲಿ ೨೪ ಗಂಟೆಗಳ ಕಾಲ ವಿದ್ಯುತ್ ನೀಡುವುದಾಗಿ ತಿಳಿಸಿದ್ದು ಪಕ್ಷದ ಅಧಿಕಾರವಾಧಿಯಲ್ಲಿ ರಾಜ್ಯವು ತೀವ್ರ ತೆರನಾದ ವಿದ್ಯುತ್ ಅಭಾವನ್ನು ಎದುರಿಸಿದ್ದು ಇವರ ಈ ಹೇಳಿಕೆ ಹಾಸ್ಯಾಸ್ಪದವಾಗಿದೆ ಎಂದರು.
ಬಿಜೆಪಿಯ ೫ ವರ್ಷಗಳ ಆಡಳಿತಾವಧಿಯಲ್ಲಿ ವಿವಿಧ ಹಗರಣ ಮತ್ತು ಭ್ರಷ್ಟಾಚಾರಗಳಿಂದಾಗಿ ರಾಜ್ಯದ ಘನತೆಗೆ ಕುಂದುಂಟಾಗಿದೆ. ಪಕ್ಷವು ಅಧಿಕಾರವಧಿಯಲ್ಲಿ ನುಡಿದಂತೆ ನಡೆದಿಲ್ಲ ಎಂದರು. ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಜೆ.ಆರ್.ಲೋಬೊ ಅವರ ವಿರುದ್ದ ಬಿಜೆಪಿ ಚುನಾವಣಾಧಿಕಾರಿಗಳಿಗೆ ನೀಡಿದ ದೂರು ಬಾಲಿಶವಾದುದು. ಲೋಬೊರವರು ಅಧಿಕಾರಿಯಾಗಿದ್ದ ವೇಳೆ ಕಾನೂನು ಪಾಲನೆ ಮಾಡಿದ್ದಾರೆ. ಕಾನೂನಿಗೆ ವಿರುದ್ದವಾದ ಯಾವುದೇ ಕಾರ್ಯವನ್ನು ಅವರು ಮಾಡಿಲ್ಲ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಜೆ.ಆರ್.ಲೋಬೊ, ಹರಿಕೃಷ್ಣ ಪುನರೂರು, ನಾಗೇಂದ್ರ, ಟಿ.ಕೆ.ಸುಧೀರ್, ಬಲರಾಜ ರೈ , ಹರಿಕೃಷ್ಣ ಬಂಟ್ವಾಳ ಹಾಗೂ ಇನ್ನಿತರರು ಉಪಸ್ಥಿತರಿದ್ದರು.
Click this button or press Ctrl+G to toggle between Kannada and English