ಬೆಳ್ತಂಗಡಿ : ಸೋಮವಾರ ಉಜಿರೆಯ ಚೆಕ್ ಪೋಸ್ಟ್ ಬಳಿ ಬೆಳ್ತಂಗಡಿ ಪೊಲೀಸರು ಮೂವರು ಅಂತಾರಾಜ್ಯ ಕಳ್ಳರನ್ನು ಬಂಧಿಸಿದ್ದಾರೆ. ಬೆಂಗಳೂರಿನ ಕಮಲಾನಗರದ ಗೋಪಿ ಯಾನೆ ಗೋಪಿನಾಥ್(29), ಬೆಂಗಳೂರು ಕುರುಬರ ಹಳ್ಳಿಯ ಸೂರಿ ಯಾನೆ ಸುರೇಂದ್ರ(29), ಹಾಗೂ ಚಿಕ್ಕಬಳ್ಳಾಪುರದ ಗೌರಿಬಿದನೂರು ನಿವಾಸಿ ಮಣಿ ಯಾನೆ ಮಣಿಕಂಠ (23)ಬಂಧಿತ ಆರೋಪಿಗಳು.
ಬೆಳ್ತಂಗಡಿ ಎಸ್‌ಐ ಯೋಗೀಶ್ ಕುಮಾರ್ ಮತ್ತು ತಂಡ ಉಜಿರೆಯಲ್ಲಿ ಚುನಾವಣಾ ಸಂಬಂಧಿ ಕರ್ತವ್ಯದಲ್ಲಿದ್ದ ವೇಳೆ ಬೆಂಗಳೂರು ನೋಂದಣಿಯ ಕ್ವಾಲಿಸ್ ಕಾರ್‌ನಲ್ಲಿದ್ದವರನ್ನು ತಡೆದು ನಿಲ್ಲಿಸಿ ವಿಚಾರಿಸಿದ ಸಂದರ್ಭ ಆರೋಪಿಗಳು ಕಳ್ಳತನದ ಬಗ್ಗೆ ಬಾಯ್ಬಿಟ್ಟಿದ್ದಾರೆ. ಆರೋಪಿಗಳಿಂದ ೪೯,೯೫೦ ಮೌಲ್ಯದ ನಿಕೋನ್ ಎಸ್‌ಎಲ್‌ಆರ್ ಕೆಮಾರಾ ಹಾಗೂ ಕ್ವಾಲಿಸ್ ಕಾರನ್ನು ವಶಪಡಿಸಿಕೊಳ್ಳಲಾಗಿದೆ.
ಆರೋಪಿಗಳು ಕರ್ನಾಟಕ ಹಾಗೂ ಇತರ ರಾಜ್ಯಗಳಲ್ಲಿ ಕಳ್ಳತನ ನಡೆಸುತ್ತಿದ್ದು, ಯಾತ್ರಿಗಳ ವೇಷದಲ್ಲಿ ಹೋಗಿ ಕಳ್ಳತನ ಗೈಯುವುದು ಇವರ ಕಸುಬಾಗಿದ್ದು, ಧರ್ಮಸ್ಥಳದಲ್ಲಿ ಪ್ರವಾಸಿ ವಾಹನಗಳ ಗಾಜು ಒಡೆದು ಕಳ್ಳತನ ನಡೆಸಿರುವುದು ಹಾಗೂ ಚಿನ್ನಾಭರಣ ಕದ್ದಿರುವುದನ್ನು ಒಪ್ಪಿಕೊಂಡಿದ್ದಾರೆ. ಆರೋಪಿಗಳನ್ನು ಸೋಮವಾರ ನ್ಯಾಯಾಲಯಕ್ಕೆ ಹಾಜರು ಪಡಿಸಿ ಪುನಃ ಹೆಚ್ಚಿನ ವಿಚಾರಣೆಗೆ ಕಸ್ಟಡಿಗೆ ತೆಗೆದುಕೊಳ್ಳಲಾಗಿದ್ದು, ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Click this button or press Ctrl+G to toggle between Kannada and English