ಮಂಗಳೂರು : ಬಿಜೆಪಿ, ಜೆಡಿಎಸ್, ಕೆಜೆಪಿ, ಪಕ್ಷೇತರ ಅಭ್ಯರ್ಥಿಗಳು ಸೇರಿದಂತೆ ವಿವಿಧ ಪಕ್ಷದ ಕಾರ್ಯಕರ್ತರು ಗುರುವಾರ ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಚುನಾವಣಾ ಕಚೇರಿಯಲ್ಲಿ, ಕಾಂಗ್ರೆಸ್ ಮುಖಂಡರಾದ ಆಸ್ಕರ್ ಫರ್ನಾಂಡಿಸ್, ಜನಾರ್ಧನ ಪೂಜಾರಿಯವರ ಸಮ್ಮುಖದಲ್ಲಿ ಅಧಿಕೃತವಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.
ಈ ವೇಳೆ ಮಾತನಾಡಿದ ಮಾಜಿ ಕೇಂದ್ರ ಸಚಿವ ಜನಾರ್ಧನ ಪೂಜಾರಿ ವಿವಿಧ ಪಕ್ಷಗಳಿಂದ ಕಾಂಗ್ರೆಸ್ ಗೆ ಸೇರ್ಪಡೆಗೊಂಡ ಕಾರ್ಯಕರ್ತರು ಕಾಂಗ್ರೆಸ್ ಪಕ್ಷದ ತತ್ವ ಸಿದ್ದಾಂತಗಳಿಗೆ ಬದ್ದವಾಗಿ ಕಾರ್ಯನಿರ್ವಹಿಸುವುದರಿಂದ ಪಕ್ಷ ಬಲಗೊಳ್ಳುವುದಲ್ಲದೆ, ಬಿಜೆಪಿ ಸರ್ಕಾರದ ಆಡಳಿತದಿಂದ ಬೇಸತ್ತ ಜನ ಬದಲಾವಣೆಯನ್ನು ಬಯಸಿದ್ದು, ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಣಾಳಿಕೆಯಲ್ಲಿನ ಅಂಶಗಳನ್ನು ಕಾರ್ಯಕರ್ತರು ಪ್ರತಿಯೊಬ್ಬ ಜನಸಾಮಾನ್ಯನಿಗೆ ತಿಳಿಯುವಂತೆ ಮಾಡಿ ಆ ಮೂಲಕ ಪಕ್ಷದ ಗೆಲುವಿಗೆ ಪ್ರತಿಯೊಬ್ಬ ಕಾರ್ಯಕರ್ತನು ಶ್ರಮಿಸಬೇಕು ಎಂದರು.
ಬಳಿಕ ಮಾತನಾಡಿದ ಆಸ್ಕರ್ ಫೆರ್ನಾಂಡಿಸ್, ರಾಜ್ಯದಲ್ಲಿ ಕಾಂಗ್ರೆಸ್ ಪರವಾದ ಅಲೆಯಿದ್ದು ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಖಂಡಿತವಾಗಿಯೂ ಅಧಿಕಾರಕ್ಕೆ ಬರುವುದು. ಅಧಿಕಾರಕ್ಕೆ ಬಂದಲ್ಲಿ ಸಾಮಾನ್ಯ ಜನರು ಮೆಚ್ಚುವಂತಹ ಹಿತಕಾರಿ ಯೋಜನೆಗಳನ್ನು ಹಾಗೂ ಪ್ರಣಾಳಿಕೆಯಲ್ಲಿರುವ ಎಲ್ಲಾ ವಾಗ್ದಾನಗಳನ್ನು ಪೂರೈಸಲಿದೆ ಎಂದರು.
ಮಂಗಳೂರು ಮಹಾನಗರ ಪಾಲಿಕೆಗೆ ಪಕ್ಷೇತರ ಸದಸ್ಯರಾದ ಬಜಿಲಕೇರಿ ಕಮಲಾಕ್ಷ, ಬಿಜೆಪಿ ತೊರೆದು ಜೆಡಿಎಸ್ ಸೇರಿದ್ದ ಮಾಜಿ ಕಾರ್ಪೊರೇಟರ್ ಮೋಹನ್ ಪಡೀಲ್, ಜೆಡಿಎಸ್ ನಾಯಕ ಶಶಿರಾಜ್ ಶೆಟ್ಟಿ ಕಾವೂರು, ಮಾಜಿ ಕಾರ್ಪೋರೇಟರ್ ಶರ್ಮಿಳ ಡಿ ಕರ್ಕೇರ, ಪಿ.ಬಿ.ಬಷೀರ್, ಉಮೇಶ್ ಶೆಟ್ಟಿ, ಜಗದೀಶ್ ಹಾಗೂ ಇನ್ನಿತರ 160 ಕ್ಕೂ ಹೆಚ್ಚಿನ ಕಾರ್ಯಕರ್ತರು ಈ ಸಂದರ್ಭ ಪಕ್ಷಕ್ಕೆ ಸೇರ್ಪಡೆಗೊಂಡರು.
ಸಮಾರಂಭದಲ್ಲಿ ಜೆ.ಆರ್ ಲೋಬೊ, ಜಿಲ್ಲಾ ಕಾಂಗ್ರೆಸ್ ಹಂಗಾಮಿ ಅಧ್ಯಕ್ಷ ಇಬ್ರಾಹಿಂ ಕೋಡಿಜಾಲ್, ಬಲರಾಜ ರೈ, ಜೆ.ಆರ್.ಲೋಬೊ, ಮಾಜಿ ಮೇಯರ್ ಅಶ್ರಫ್, ಅರುಣ್ ಕುವೆಲ್ಲೊ, ಎಂ.ಎ.ಗಫೂರ್, ನಾಗೇಂದ್ರ, ಕೃಪಾ ಅಮರ್ ಆಳ್ವ, ಮಾಜಿ ಸಚಿವ ಬಿ.ಎ.ಮೊಯ್ದಿನ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.
Click this button or press Ctrl+G to toggle between Kannada and English