ಮಂಗಳೂರು : ವಿಧಾನ ಸಭಾ ಚುನಾವಣೆಗೆ ಇನ್ನು ಕೆಲವೇ ದಿನಗಳು ಬಾಕಿ ಇರುವಂತೆ ಕಾಂಗ್ರೆಸ್, ಬಿಜೆಪಿ ಪಕ್ಷದ ಹಿರಿಯ ನಾಯಕರು ಸೇರಿದಂತೆ ಚಿತ್ರ ನಟ ನಟಿಯರು ಚುನಾವಣಾ ಪ್ರಚಾರ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದು ಶುಕ್ರವಾರ ಕಾಂಗ್ರೆಸ್ ಪರ ನಗರದಲ್ಲಿ ಮತಯಾಚನೆ ಸಲುವಾಗಿ ಆಗಮಿಸಿದ ಕನ್ನಡ ಚಿತ್ರ ನಟಿ ರಮ್ಯ ಮಂಗಳೂರಿನ ತೊಕ್ಕೋಟು ಆಸುಪಾಸಿನಲ್ಲಿ ಕಾಂಗ್ರೆಸ್ ಪರ ಬಿರುಸಿನ ಪ್ರಚಾರ ಕೈಗೊಂಡರು.
ಪ್ರಚಾರಕ್ಕು ಮುನ್ನ ಕಾಂಗ್ರೆಸ್ ಜಿಲ್ಲಾ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಉತ್ತಮ ಆಡಳಿತ ಹಾಗು ಸೌಲಭ್ಯ ಗಳನ್ನು ಒದಗಿಸುವಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಮುಂಚೂಣಿಯಲಿದ್ದು ಈ ಬಾರಿ ಕೂಡ ರಾಜ್ಯದಲ್ಲಿ ಕಾಂಗ್ರೆಸ್ ಮತ್ತೆ ಆಡಳಿತಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಕಳೆದ ಬಾರಿ ಉಡುಪಿ ಕ್ಷೇತ್ರದಿಂದ ಸ್ಪರ್ಧಿಸಿದ ಕಾಂಗ್ರೆಸ್ ಅಭ್ಯರ್ಥಿ ಜಯಪ್ರಕಾಶ್ ಪರ ಪ್ರಚಾರ ಕೈಗೊಂಡಿದ್ದು ಅವರು ಜಯಗಳಿಸಿದ್ದು ಈ ಬಾರಿ ಕೂಡ ಜಿಲ್ಲೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಹಂಗಾಮಿ ಅಧ್ಯಕ್ಷ ಇಬ್ರಾಹಿಂ ಕೋಡಿಜಾಲ್, ಮಾಜಿ ರಾಜ್ಯ ಸಭಾ ಸದಸ್ಯ ಬಿ.ಇಬ್ರಾಹಿಂ, ನಝೀರ್ ಬಜಾಲ್, ಫಾರೂಕ್ ಉಳ್ಳಾಲ್, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಮಮತಾ ಗಟ್ಟಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು.
ಪತ್ರಿಕಾಗೋಷ್ಟಿ ಬಳಿಕ ಮಂಗಳೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಯು.ಟಿ.ಖಾದರ್ ಪರವಾಗಿ ತೊಕ್ಕೊಟ್ಟು ಪರಿಸರದಲ್ಲಿ ಮತಯಾಚನೆ ನಡೆಸಿದರು. ಮಂಗಳೂರಿನಿಂದ ತೊಕ್ಕೊಟ್ಟು ಜಂಕ್ಷನ್ ಗೆ ಆಗಮಿಸಿದ ರಮ್ಯ ಪ್ರಾರಂಭದಲ್ಲಿ ವಾಹನದಿಂದಿಳಿದು ಕಾಲ್ನಡಿಗೆಯಲ್ಲಿ ಪ್ರಚಾರದಲ್ಲಿ ತೊಡಗಿಕೊಂಡರೂ ಅಭಿಮಾನಿಗಳ ನೂಕು ನುಗ್ಗಲಿನಿಂದಾಗಿ ಮತ್ತೆ ಕಾರನ್ನೇರಿ ರೋಡ್ ಶೋ ನಡೆಸುವ ಮುಖಾಂತರ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡರು.
ಈ ಸಂದರ್ಭದಲ್ಲಿ ರಮ್ಯಾ ಜತೆ ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಈಶ್ವರ ಉಳ್ಳಾಲ್, ಉಳ್ಳಾಲ ಪುರಸಭೆ ಮಾಜಿ ಅಧ್ಯಕ್ಷ ಬಾಝಿಲ್ ಡಿಸೋಜ, ಕೃಷ್ಣ ಗಟ್ಟಿ ಕೋಟೆಕಾರ್, ಉಳ್ಳಾಲ ಪುರಸಭೆ ಕೌನ್ಸಿಲರ್ ಗಳಾದ ಅಶ್ರಫ್ ಬಾನಕೋಡಿ ಹಾಗೂ ಫಾರೂಕ್ ಉಳ್ಳಾಲ್ ಮತ್ತಿತರರು ಉಪಸ್ಥಿತರಿದ್ದರು.
Click this button or press Ctrl+G to toggle between Kannada and English