ಉಡುಪಿ : ಮುದರಂಗಡಿಯಲ್ಲಿ ದುಷ್ಕರ್ಮಿಗಳಿಂದ ಗುಂಡಿಕ್ಕಿ ಕೊಲ್ಲಲ್ಪಟ್ಟ ಕಾಂಗ್ರೆಸ್ ನಾಯಕ ಹಾಗೂ ಮಾಜಿ ಗ್ರಾ.ಪಂ. ಅಧ್ಯಕ್ಷ ಡೇವಿಡ್ ಡಿ’ಸೋಜಾ ಅವರ ಭೀಕರ ಹತ್ಯೆಯಿಂದ ಕುಟುಂಬಸ್ಥರು ತೀವ್ರ ಆಘಾತಕ್ಕೊಳಗಾಗಿದ್ದಾರೆ. ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಅವರ ಪತ್ನಿ ಪ್ರಿಯಾ ಡೇವಿಡ್, ತಮ್ಮ ಪತಿಯ ರಕ್ತ ಹರಿಸಿದ ಕೊಲೆಗಾರರಿಗೆ ಹಾಗೂ ಈ ಪಿತೂರಿಯ ಹಿಂದೆ ಇರುವ ಎಲ್ಲಾ ಆರೋಪಿಗಳಿಗೆ ಕಠಿಣಾತಿಕಠಿಣ ಶಿಕ್ಷೆಯಾಗಬೇಕು ಎಂದು ಕಣ್ಣೀರಿಡುತ್ತಾ ಆಗ್ರಹಿಸಿದ್ದಾರೆ. ಡೇವಿಡ್ ಅವರು ವ್ಯವಹಾರದ ವಿಷಯಗಳನ್ನು ಎಂದಿಗೂ ಮನೆಯಲ್ಲಿ ಹಂಚಿಕೊಳ್ಳುತ್ತಿರಲಿಲ್ಲ. ಎಂದಿನಂತೆ ಊಟ ಮುಗಿಸಿ ಆಫೀಸ್ಗೆ ತೆರಳಿದ್ದಾಗ ಈ ದುರಂತ ಸಂಭವಿಸಿದೆ. ವಿಷಯ ತಿಳಿದ ತಕ್ಷಣ ಆಸ್ಪತ್ರೆಗೆ ಸಾಗಿಸಿದರೂ ಅವರ ಜೀವ ಉಳಿಸಲು ಸಾಧ್ಯವಾಗಲಿಲ್ಲ ಎಂದು ಅವರು ದುಃಖ ತೋಡಿಕೊಂಡರು. ಪೊಲೀಸರ ತ್ವರಿತ ಕಾರ್ಯಾಚರಣೆಗೆ ಸಮಾಧಾನ ವ್ಯಕ್ತಪಡಿಸಿದ ಅವರು, ಪ್ರದೇಶದ ಅಭಿವೃದ್ಧಿಗೆ ಶ್ರಮಿಸಿದ ಉದ್ಯಮಿ ಹಾಗೂ ನಾಯಕನ ಅಗಲಿಕೆ ತುಂಬಲಾರದ ನಷ್ಟ ಎಂದಿದ್ದಾರೆ.
ಮೃತ ಡೇವಿಡ್ ಡಿ’ಸೋಜಾ ಅವರ ಅಂತಿಮ ಸಂಸ್ಕಾರವು ಆಗಸ್ಟ್ 9ರ ಭಾನುವಾರದಂದು ನೆರವೇರಲಿದೆ. ಸಾರ್ವಜನಿಕರ ಅಂತಿಮ ದರ್ಶನಕ್ಕಾಗಿ ಬೆಳಿಗ್ಗೆ 10.45ಕ್ಕೆ ಕಾಪುವಿನ ರಾಜೀವ್ ಭವನದಲ್ಲಿ, ಬೆಳಿಗ್ಗೆ 11.15ಕ್ಕೆ ಮುದರಂಗಡಿ ಗ್ರಾಮ ಪಂಚಾಯತ್ನಲ್ಲಿ ಹಾಗೂ ಮಧ್ಯಾಹ್ನ 12 ಗಂಟೆಗೆ ಪಿಲಾರ್ನ ಕುಂಜಿಗುಡ್ಡೆ ಕಾಲೋನಿಯಲ್ಲಿ ಪಾರ್ಥಿವ ಶರೀರವನ್ನು ಇಡಲಾಗುವುದು. ಬಳಿಕ ಮಧ್ಯಾಹ್ನ 12.30ಕ್ಕೆ ಪಿಲಾರ್ನ ‘ಪ್ರಿನ್ಸ್ ಪಾಯಿಂಟ್’ ನಿವಾಸಕ್ಕೆ ಕೊಂಡೊಯ್ಯಲಾಗುವುದು. ಮಧ್ಯಾಹ್ನ 2.45ಕ್ಕೆ ನಿವಾಸದಿಂದ ಮೆರವಣಿಗೆಯ ಮೂಲಕ ಪಿಲಾರ್ನ ಇನ್ಫೆಂಟ್ ಜೀಸಸ್ ಚರ್ಚ್ಗೆ ಪಾರ್ಥಿವ ಶರೀರವನ್ನು ತರಲಿದ್ದು, ಮಧ್ಯಾಹ್ನ 3ರಿಂದ 4 ಗಂಟೆಯವರೆಗೆ ಚರ್ಚ್ನಲ್ಲಿ ಸಾರ್ವಜನಿಕ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುತ್ತದೆ. ತದನಂತರ ಸಂಜೆ 4 ಗಂಟೆಗೆ ಧಾರ್ಮಿಕ ವಿಧಿವಿಧಾನಗಳೊಂದಿಗೆ ಅಂತ್ಯಕ್ರಿಯೆ ನಡೆಯಲಿದೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









