ಬೆಂಗಳೂರು : ಬಿಜೆಪಿ ಪಕ್ಷದಲ್ಲಿನ ಒಳಜಗಳ ಹಾಗು ಭ್ರಷ್ಟಾಚಾರದ ಆರೋಪಗಳು ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲಲು, ಮತ್ತು ಪ್ರತಿಪಕ್ಷವಾದ ಕಾಂಗ್ರೆಸ್ ನ ಗೆಲುವಿಗೆ ಪಮುಖ ಕಾರಣವಾಯಿತೆಂದು ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹೇಳಿದರು. ಅವರು ಬುಧವಾರ ರಾಜ್ಯ ವಿಧಾಸಭಾ ಚುನಾವಣೆಯ ಫಲಿತಾಂಶ ಹೊರಬೀಳುತ್ತಿದ್ದಂತೆಯೆ ಸಂಜೆ 7 ಗಂಟೆಗೆ ರಾಜಭವನಕ್ಕೆ ತೆರಳಿ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ರವರಿಗೆ ತಮ್ಮ ರಾಜೀನಾಮೆಯನ್ನು ಸಲ್ಲಿಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಬಿಜೆಪಿ ಯ ವಿರುದ್ದ ನಡೆದ ವ್ಯಾಪಕ ಅಪಪ್ರಚಾರ ಮತ್ತು ಸರ್ಕಾರದ ಅಭಿವೃದ್ಧಿ ಕಾರ್ಯಗಳು ಸಮರ್ಪಕ ರೀತಿಯಲ್ಲಿ ಪ್ರಚಾರಗೊಳ್ಳದಿರುವುದು ಬಿಜೆಪಿಯ ಸೋಲಿಗೆ ಕಾರಣವಾದ ಅಂಶಗಳಲ್ಲಿ ಒಂದಾಗಿದೆ. ಕಳೆದ 5 ವರ್ಷಗಳ ಆಡಳಿತಾವಧಿಯಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದು, ತಾವು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಸ್ವಚ್ಚ ಸರ್ಕಾರ ಹಾಗು ಉತ್ತಮ ಆಡಳಿತವನ್ನು ನೀಡಿದ ಸಂತಸ ತಮಗಿದೆ ಎಂದರು.
ಮುಂದಿನ ದಿನಗಳಲ್ಲಿ ಪಕ್ಷವನ್ನು ಸುಧಾರಿಸುವುದರ ಜೊತೆಗೆ ವಿರೋಧ ಪಕ್ಷವಾಗಿ ಸಮರ್ಪಕ ಕಾರ್ಯ ನಿರ್ವಹಿಸುವುದಾಗಿ ತಿಳಿಸಿದ ಅವರು ತಮ್ಮ ಅಧಿಕಾರಾವಧಿಯಲ್ಲಿ ತಮಗೆ ಸಹಕರಿಸಿದ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಮತ್ತು ಬಿಜೆಪಿಯ ರಾಷ್ಟೀಯ, ರಾಜ್ಯ ನಾಯಕರಿಗೆ ಮತ್ತು ಕಾರ್ಯಕರ್ತರಿಗೆ ಧನ್ಯವಾದ ಸಲ್ಲಿಸಿದರು.
ರಾಜಿನಾಮೆ ಸ್ವೀಕರಿಸಿದ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ನೂತನ ಸರ್ಕಾರ ಅಸ್ತಿತ್ವಕ್ಕೆ ಬರುವವರೆಗೆ ಶೆಟ್ಟರ್ ರಿಗೆ ತಮ್ಮ ಸ್ಥಾನದಲ್ಲಿ ಮುಂದುವರಿಯುವಂತೆ ಸೂಚಿಸಿದ್ದಾರೆ.
Click this button or press Ctrl+G to toggle between Kannada and English