ಪಡುಬಿದ್ರೆ : ಮಂಗಳವಾರ ಮದ್ಯಾಹ್ನ 2;30 ರ ಸುಮಾರಿಗೆ ಪಡುಬಿದ್ರೆ ಮತ್ತು ಕಾಪು ನಡುವಿನ ರಾಷ್ಟ್ರೀಯ ಹೆದ್ದಾರಿ ಬೀಡಿನಕೆರೆ ಬಳಿ ಕಾರು ಮತ್ತು ಟ್ಯಾಂಕರ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ದಂಪತಿ ಸೇರಿದಂತೆ ಒಟ್ಟು ಮೂವರು ಮೃತಪಟ್ಟಿದ್ದಾರೆ. ಮೃತರನ್ನು ಮಜೂರು ಗ್ರಾಮ ಪಂಚಾಯತ್ ಕಾರ್ಯದರ್ಶಿ, ನಿಟ್ಟೆ ನಿವಾಸಿ ಅರುಣಾ ಸತೀಶ್ ರೈ(55), ಆಕೆಯ ಪತಿ ಸತೀಶ್ ರೈ(57) ಹಾಗು ಸತೀಶ ರೈ ರ ಗೆಳೆಯ, ಕಾರು ಚಾಲಕ ಸುರತ್ಕಲ್ ಕೃಷ್ಣಾಪುರ 7 ನೇ ಬ್ಲಾಕ್ ನಿವಾಸಿ ಸತೀಶ್ ಕುಮಾರ್(43).
ಅರುಣಾ ರೈ ರವರು ಮೇ 22 ರಂದು ಕುಂಬ್ಳೆಯಲ್ಲಿನ ತನ್ನ ತಂದೆಯ ಹೊಸಮನೆ ಗೃಹಪ್ರವೇಶ ಕ್ಕೆಂದು ಹೊರಟ್ಟಿದ್ದು, ಮಾರುತಿ 800 ಕಾರಿನಲ್ಲಿ ನಿಟ್ಟೆಯಿಂದ ಪಡುಬಿದ್ರಿ ಮಾರ್ಗವಾಗಿ ಬೀಡಿನಕೆರೆ ಬಳಿ ಹೋಗುತ್ತಿರುವಾಗ ಮಂಗಳೂರಿನಿಂದ ಉಡುಪಿ ಕಡೆ ಸಾಗುತ್ತಿದ್ದ ಹೆಚ್ .ಪಿ ಗ್ಯಾಸ್ ಟ್ಯಾಂಕರ್ ಡಿಕ್ಕಿ ಹೊಡೆಯಿತು. ಡಿಕ್ಕಿಯ ರಭಸಕ್ಕೆ ಕಾರು ರಸ್ತೆಯಲ್ಲೇ ನಾಲ್ಕು ಸುತ್ತು ತಿರುಗಿ ಎಡ ಭಾಗಕ್ಕೆ ಚಲಿಸಿ ನಿಂತಿದೆ.
ಅಪಘಾತದ ರಭಸಕ್ಕೆ ಕಾರು ಚಾಲಕ ಸತೀಶ್ ಕುಮಾರ್ ಸ್ಥಳದಲ್ಲೇ ಮೃತಪಟ್ಟರೆ, ತೀವ್ರವಾಗಿ ಗಾಯಗೊಂಡ ಅರುಣಾ ರೈ ಮತ್ತು ಸತೀಶ್ ರೈ ರವರನ್ನು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ಸಾಗಿಸಲಾಯಿತಾದರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು.
ಅರುಣ ರೈ, ಸತೀಶ್ ದಂಪತಿಗಳು ತಮ್ಮ ಏಕೈಕ ಪುತ್ರ ಸನತ್ ರೈ ಯನ್ನು ಅಗಲಿದ್ದು, ಸನತ್ ನಿಟ್ಟೆ ಕಾಲೇಜಿನಲ್ಲಿ ಎಂಜಿನಿಯರಿಂಗ್ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಅರುಣಾ ರೈ ಕಾಪು ಗ್ರಾಮಪಂಚಾಯತ್ ನಲ್ಲಿ 10 ವರ್ಷ ಹಾಗು ಮಜೂರು ಗ್ರಾಮಪಂಚಾಯತ್ ನಲ್ಲಿ 5 ವರ್ಷಗಳಿಂದ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಸತೀಶ್ ರೈ ಮತ್ತು ಅವರ ಗೆಳೆಯ ಸತೀಶ್ ಕುಮಾರ್ ನಿಟ್ಟೆಯ ಲೆಮಿನಾ ಫೌಂಡ್ರೀಸ್ ನಲ್ಲಿ ಸೇವೆ ಸಲ್ಲಿಸುತ್ತಿದ್ದರು.
Click this button or press Ctrl+G to toggle between Kannada and English