ಮಂಗಳೂರು : ಮುಂಗಾರು ಶೀಘ್ರವೇ ಜಿಲ್ಲೆಗೆ ಕಾಲಿಡಲಿದ್ದು, ಅದಕ್ಕೂ ಮುನ್ನ ಪಾಲಿಕೆ ವ್ಯಾಪ್ತಿಯಲ್ಲಿನ ಚರಂಡಿ ಮತ್ತು ಕಾಲುವೆಗಳನ್ನು ಶುಚಿಗೊಳಿಸಿ ಕೃತಕ ನೆರೆ ಉಂಟಾಗದಂತೆ ಎಚ್ಚರವಹಿಸಿ ಎಂದು ಜಿಲ್ಲಾಧಿಕಾರಿ ಎನ್. ಪ್ರಕಾಶ್ ಹೇಳಿದರು. ಅವರು ಬುಧವಾರ ತಮ್ಮ ಕಚೇರಿಯಲ್ಲಿ ಆಯೋಜಿಸಿದ್ದ ಜಿಲ್ಲಾಮಟ್ಟದ ಹಾಗು ತಾಲೂಕು ಮಟ್ಟದ ಅಧಿಕಾರಿಗಳ ಸಭೆಯನ್ನುದ್ದೇಶಿಸಿ ಮಾತನಾಡಿದರು.
ಪಾಲಿಕೆ ಮತ್ತು ತಾಲೂಕು ವ್ಯಾಪ್ತಿಯಲ್ಲಿ, ಮುಂಬರುವ ಮುಂಗಾರು ಮಳೆಯಿಂದ ಸಂಭವಿಸಬಹುದಾದ ಪ್ರಾಕೃತಿಕ ವಿಕೋಪದ ಬಗ್ಗೆ ಮುಂಜಾಗ್ರತೆ ವಹಿಸುವಂತೆ ತಿಳಿಸಿದ ಅವರು ಮೇ 25 ರೊಳಗೆ ಸಹಾಯಕ ಕಮೀಷನರ್ ಅಧ್ಯಕ್ಷತೆಯಲ್ಲಿ ರಚಿಸಲಾದ ತಾಲೂಕು ಮಟ್ಟದ ಸಮಿತಿ ಸಭೆಯನ್ನು ನಡೆಸುವಂತೆ ತಿಳಿಸಿದರು.ಕಡಲು ಪ್ರದೇಶದಲ್ಲಿ ಸಮುದ್ರ ಕೊರೆತ ತಡೆಗೆ ಮುಂದಿನ ಎಂಟು ದಿನಗಳೊಳಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಹಾಗು ಇದರ ಉಸ್ತುವಾರಿಯನ್ನು ಬಂದರು ಇಲಾಖೆಯ ಅಧಿಕಾರಿಗಳು ವಹಿಸುವಂತೆ ತಿಳಿಸಿದರು. ಜೊತೆಗೆ ಜಿಲ್ಲೆಯಲ್ಲಿನ ಗ್ರಾಮಾಂತರ ಪ್ರದೇಶಗಳಲ್ಲಿ ಕುಡಿಯುವ ನೀರಿನ ಪೂರೈಕೆಗೆ ಉಪವಿಭಾಗಾಧಿಕಾರಿಗಳು ಮತ್ತು ತಹಸೀಲ್ದಾರ್ ರು ಹೆಚ್ಚಿನ ಗಮನ ನೀಡಿ ಸಮಸ್ಯೆ ಪರಿಹರಿಸಲು ಕ್ರಮಕೈಗೊಳ್ಳುವಂತೆ ಅವರು ಸೂಚಿಸಿದರು.
ಪಾಲಿಕೆ ಪೊಲೀಸ್ ಇಲಾಖೆ ಮತ್ತು ತಾಲೂಕು ಕಚೇರಿಗಳಲ್ಲಿ ದಿನದ 24 ಗಂಟೆ ಕಾರ್ಯನಿರ್ವಹಿಸುವ ಕಂಟ್ರೋಲ್ ರೂಮ್ ತೆರೆದು ಕಾರ್ಯನಿರ್ವಹಿಸಬೇಕೆಂದ ಅವರು ಯಾವುದೇ ಸಮಸ್ಯೆ ಇದ್ದಲ್ಲಿ 1077 ಮತ್ತು ಮೆಸ್ಕಾಂ ಸಂಬಂದ ಸಮಸ್ಯೆಗಳಿಗೆ 18004251917 ಗೆ ಸಂಪರ್ಕಿಸುವಂತೆ ಸೂಚಿಸಿದರು. ನದಿ ನೀರಿನ ಮಟ್ಟದಬಗ್ಗೆ ಮತ್ತು ಮಳೆಯ ವಿವರಗಳನ್ನು ಪ್ರತಿದಿನ ಬೆಳಗ್ಗೆ 9 ಗಂಟೆಯೊಳಗೆ ಜಿಲ್ಲಾಧಿಕಾರಿಗಳ ಕಚೇರಿಗೆ ತಲುಪಿಸಲು ಸೂಚನೆ ನೀಡಿದರು.
ಸಭೆಯಲ್ಲಿ ಪಾಲಿಕೆ ಆಯುಕ್ತ ಡಾ ಹರೀಶ್ ಕುಮಾರ್, ಅಪರ ಜಿಲ್ಲಾಧಿಕಾರಿ ಶ್ರೀ ದಯಾನಂದ ಕೆ.ಎ ಉಪಸ್ಥಿತರಿದ್ದರು.
Click this button or press Ctrl+G to toggle between Kannada and English