ಮಂಗಳೂರು : ತುಳುವ ಮಹಾಸಭೆ ಇಂಟರ್ನ್ಯಾಷನಲ್ ಅಧ್ಯಕ್ಷ ಸರ್ವೋತ್ತಮ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಮಂಗಳೂರಿನ ಮಲ್ಲಿಕಟ್ಟೆ ಇನ್ಸ್ಪೆಕ್ಷನ್ ಬಂಗಲೆಯಲ್ಲಿ ತುಳು ವರ್ಲ್ಡ್ ಫೌಂಡೇಶನ್ನ ಸಭೆ ಜರುಗಿತು. 1928ರ ಸೆಪ್ಟೆಂಬರ್ 23ರಂದು ಅಸ್ತಿತ್ವಕ್ಕೆ ಬಂದ ತುಳುವ ಮಹಾಸಭೆಯು ಶತಮಾನ ಪೂರೈಸುತ್ತಿರುವ ಹಿನ್ನೆಲೆಯಲ್ಲಿ 2028ರಲ್ಲಿ ಉಡುಪಿಯಲ್ಲಿ ವಿಶ್ವ ತುಳುವ ಮಹಾಸಭೆಯನ್ನು ಅತ್ಯಂತ ವಿಜೃಂಭಣೆಯಿಂದ ಸಂಘಟಿಸಲು ಸಭೆಯಲ್ಲಿ ನಿರ್ಧರಿಸಲಾಯಿತು. ಜಗತ್ತಿನಾದ್ಯಂತ ನೆಲೆಸಿರುವ ತುಳುವರನ್ನು ಒಂದೇ ಸೂರಿನಡಿ ತಂದು ತುಳು ಭಾಷೆ, ಲಿಪಿ, ಸಾಹಿತ್ಯ, ಕಲೆ, ದೈವಾರಾಧನೆ ಹಾಗೂ ಸಾಂಪ್ರದಾಯಿಕ ಜ್ಞಾನವನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುವುದು ಈ ಬೃಹತ್ ಸಮಾವೇಶದ ಪ್ರಮುಖ ಆಶಯವಾಗಿದೆ.
ಈ ಶತಮಾನೋತ್ಸವ ಸಂಭ್ರಮವು ಕೇವಲ ಒಂದು ಸಮಾರಂಭಕ್ಕೆ ಸೀಮಿತವಾಗದೆ, ಮುಂದಿನ ಶತಮಾನಕ್ಕೆ ತುಳು ಸಂಸ್ಕೃತಿಯ ಬಲವರ್ಧನೆಗೆ ಅಡಿಪಾಯವಾಗಬೇಕು ಎಂಬ ಅಭಿಪ್ರಾಯ ವ್ಯಕ್ತವಾಯಿತು. ಇದರ ಭಾಗವಾಗಿ ತುಳು ಸಾಹಿತ್ಯ ದಾಖಲಾತಿ, ಪಾಡ್ದನ, ಕಳರಿ, ಬನ ಸಂರಕ್ಷಣೆ ಹಾಗೂ ತುಳು ಡಿಜಿಟಲ್ ಗ್ರಂಥಾಲಯ ನಿರ್ಮಾಣದಂತಹ ವೈವಿಧ್ಯಮಯ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ತೀರ್ಮಾನಿಸಲಾಯಿತು. ಜೊತೆಗೆ ದೇಶ-ವಿದೇಶಗಳಲ್ಲಿರುವ ತುಳುವ ಮಹಾಸಭೆಯ ಘಟಕಗಳನ್ನು ಸಕ್ರಿಯಗೊಳಿಸಿ ನೂರು ಪೂರ್ವಭಾವಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಯೋಜಿಸಲಾಗಿದೆ. ಈ ಶತಮಾನೋತ್ಸವದ ಸಮಾರೋಪ ಮಹೋತ್ಸವಕ್ಕೆ ಉಡುಪಿ ಮಠದ ಪೇಜಾವರ ಶ್ರೀಗಳು ರಾಜಾಂಗಣವನ್ನು ವೇದಿಕೆಯಾಗಿ ನೀಡಲು ಸಮ್ಮತಿಸಿದ್ದಾರೆ ಎಂದು ಸಂಸ್ಥೆಯ ರಾಜ್ಯಾಧ್ಯಕ್ಷ ದೇವೇಂದ್ರ ಹೆಗ್ಡೆ ಕೊಕ್ರಾಡಿ ಸ್ಪಷ್ಟಪಡಿಸಿದರು.
ಇದೇ ವೇಳೆ ಐತಿಹಾಸಿಕ ಬಸ್ರೂರಿನ ಶ್ರೀ ತುಳುವೇಶ್ವರ ದೇವಸ್ಥಾನ ಹಾಗೂ ಪಡುಬಿದ್ರಿಯ ನಿನ್ನಿಕಲ್ಲು ಪಾದೆ ಪುನರುತ್ಥಾನದ ಕುರಿತು ಸುದೀರ್ಘ ಚರ್ಚೆ ನಡೆಯಿತು. ಬಸ್ರೂರು ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಗಳನ್ನು ಚುರುಕುಗೊಳಿಸಲು ಪ್ರಾದೇಶಿಕ ಸಮಿತಿಯನ್ನು ಶೀಘ್ರವೇ ರಚಿಸುವುದಾಗಿ ದೇವಾನಂದ ಶೆಟ್ಟಿ ಬಸ್ರೂರು ಮತ್ತು ಬಿ. ದಿನಕರ ಶೆಟ್ಟಿ ಭರವಸೆ ನೀಡಿದ್ದು, ವಿಶ್ವದಾದ್ಯಂತ ಇರುವ ತುಳುವರು ಇದಕ್ಕೆ ಸಹಕರಿಸಬೇಕಾಗಿ ವಿನಂತಿಸಿದರು.
ಸಭೆಯ ಪ್ರಾರಂಬದಲ್ಲಿ ತುಳು ವರ್ಲ್ಡ್ ಫೌಂಡೇಶನ್ ಅಧ್ಯಕ್ಷೆ ಭಾನುಮತಿ ಶೆಟ್ಟಿ ಕಕ್ವಗುತ್ತು ಸ್ವಾಗತಿಸಿದರು. ಪ್ರಮುಖರಾದ ಪ್ರವೀಣ್ ಕುಮಾರ್ ಕೊಡಿಯಾಲ್ ಬೈಲ್, ಪ್ರಭಾಕರ ಎಸ್ ಹೆಗ್ಡೆ, ಡಾ. ರಾಜೇಶ್ ಕೃಷ್ಣ ಆಳ್ವ, ಶಿವಪ್ರಸಾದ್ ಅಜಿಲ, ಉದಯ ಕುಮಾರ್ ಹೆಗ್ಡೆ, ಪ್ರಮೋದ್ ಸಪ್ರೆ, ಅರವಿಂದ ಬೆಲ್ಚಡ, ಮನೋಹರ್ ರೈ ಮನವಲಿಕೆ ಸೇರಿದಂತೆ ಹಲವು ಪದಾಧಿಕಾರಿಗಳು ಭಾಗವಹಿಸಿದ್ದರು. ಕಾರ್ಯದರ್ಶಿ ವಸಂತ ರೈ ಕುತೇತ್ತೂರು ಧನ್ಯವಾದ ಸಮರ್ಪಿಸಿದರು.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









