ಪುತ್ತೂರು : ರವಿವಾರ ಸಂಜೆ ಪುತ್ತೂರು ಸುಳ್ಯ ಹೆದ್ದಾರಿಯ ಸಂಟ್ಯಾರು ಎಂಬಲ್ಲಿ ಕೆ ಎಸ್ ಆರ್ ಟಿಸಿ ಮತ್ತು ಜೀಪ್ ನಡುವೆ ಸಂಭವಿಸಿದ ಅಪಘಾತದಲ್ಲಿ ಒಂದೇ ಕುಂಟುಂಬದ ನಾಲ್ವರು ಮೃತಪಟ್ಟು, ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಸಂಭವಿಸಿದೆ.
ಅಪಘಾತದಲ್ಲಿ ಪುತ್ತೂರಿನ ಬೈಪಾಸ್ ತೆಂಕಿಲ ನಿವಾಸಿ ಹಾಗೂ ಪುರಸಭಾ ಸದಸ್ಯೆ ಲೀನಾ ಮಸ್ಕರೇನ್ಜಸ್(46), ಆಕೆಯ ಪತಿ ಪುತ್ತೂರಿನ ಸಂತ ಫಿಲೋಮಿನಾ ಪ್ರೌಢಶಾಲೆಯ ಸಿಬ್ಬಂಧಿ ಪೀಟರ್ ಮಸ್ಕರೇನ್ಜಸ್(50), ಪುತ್ರ ಪ್ರಿತೇಶ್ ಮಸ್ಕರೇನ್ಜಸ್ (13) ಮತ್ತು ಪೀಟರ್ ಮಸ್ಕರೇನ್ಜಸ್ ರ ಸಹೋದರ ಅಂಥೋನಿ ಮಸ್ಕರೇನ್ಜಸ್(42) ಮೃತಪಟ್ಟರೆ, ಲೀನಾ ಮಸ್ಕರೇನ್ಜಸ್ ರ ಇನ್ನೋರ್ವ ಪುತ್ರ ಪ್ರೀತಮ್ ಮಸ್ಕರೇನ್ಜಸ್ (17) ಮತ್ತು ಪೀಟರ್ ರ ಸಹೋದರ ಜೋಸೆಫ್ ಮಸ್ಕರೇನ್ಜಸ್ ರ ಪುತ್ರಿ ಜೋಸ್ಲಿನ್ ಮಸ್ಕರೇನ್ಜಸ್ ಈ ಇಬ್ಬರು ತೀವ್ರವಾಗಿ ಗಾಯಗೊಂಡಿದ್ದು ಅವರನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕೆ ಎಸ್ ಆರ್ ಟಿಸಿ ಬಸ್ಸೊಂದು ಪುತ್ತೂರಿನಿಂದ ಸುಳ್ಯ ಕಡೆಗೆ ತೆರಳುತ್ತಿದ್ದು, ಈ ವೇಳೆ ಒಳಮೊಗ್ರು ಗ್ರಾಮದ ಪರ್ಪುಂಜದಲ್ಲಿ ನಡೆದ ವಿವಾಹ ಸಮಾರಂಭವೊಂದರಲ್ಲಿ ಪಾಲ್ಗೊಂಡು ಅಲ್ಲಿಂದ ಪುತ್ತೂರು ಕಡೆಗೆ ಹಿಂದಿರುಗುತ್ತಿದ್ದ ಲೀನಾ ಮಸ್ಕರೇನ್ಜಸ್ ರ ಜೀಪ್ ನಡುವೆ ಸಂಟ್ಯಾರು ಸೇತುವೆಯ ಬಳಿ ಡಿಕ್ಕಿ ಸಂಭವಿಸಿತು ಡಿಕ್ಕಿಯ ರಭಸಕ್ಕೆ ಜೀಪು ಸಂಪೂರ್ಣ ನಜ್ಜುಗುಜ್ಜಾಗಿದ್ದು ಜೀಪ್ ಚಲಾಯಿಸುತ್ತಿದ್ದ ಪೀಟರ್ ಮಸ್ಕರೇನ್ಜಸ್ ಸ್ಥಳದಲ್ಲೇ ಮೃತಪಟ್ಟರೆ ಇನ್ನುಳಿದವರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದರು.
ಅಪಘಾತ ನಡೆದ ಬಳಿಕ ಸುಮಾರು2 ಗಂಟೆಗಳ ಕಾಲ ರಸ್ತೆಯಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿತ್ತು. ಈ ಸಂದರ್ಭ ಮೃತರ ಕುಟುಂಬಸ್ತರು ಹಾಗು ವಿವಿಧ ರಾಜಕೀಯ ಮುಖಂಡರು ಆಸ್ಪತ್ರೆಗೆ ಆಗಮಿಸಿ ಮೃತರ ಅಂತಿಮ ದರ್ಶನ ಪಡೆದರು. ಮೃತರ ಕುಟುಂಬಸ್ಥರ ರೋದನ ಮನಕರಗುವಂತಿತ್ತು.
Click this button or press Ctrl+G to toggle between Kannada and English