ಪುತ್ತೂರು: ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಲು ಸಾಲಾಗಿ ನಿಲ್ಲಿಸುವ ಸರಕು ವಾಹನಗಳನ್ನು ಗುರಿಯಾಗಿಸಿಕೊಂಡು ಡೀಸಲ್ ಕದಿಯುತ್ತಿದ್ದ ಕಳ್ಳರ ಜಾಲವೊಂದನ್ನು ಉಪ್ಪಿನಂಗಡಿ ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದಾರೆ. ಮಂಡ್ಯ ಜಿಲ್ಲೆಯ ಮದ್ದೂರು ಮೂಲದ ಜೈಮುತ್ತಾ (23) ಹಾಗೂ ಮುತ್ತು (28) ಬಂಧಿತ ಆರೋಪಿಗಳಾಗಿದ್ದಾರೆ.
ಸೆಪ್ಟೆಂಬರ್ 3ರಂದು ರಾತ್ರಿ ವೇಳೆಯಲ್ಲಿ ಗಸ್ತು ತಿರುಗುತ್ತಿದ್ದ ಪೊಲೀಸರು ಕಡಬ ತಾಲೂಕಿನ ಕೌಕ್ರಾಡಿ ಗ್ರಾಮದ ಅಲಂಪಾಡಿ ಕ್ರಾಸ್ ಸಮೀಪ ತಪಾಸಣೆ ನಡೆಸುತ್ತಿದ್ದರು. ಈ ವೇಳೆ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ನಿಲ್ಲಿಸಲಾಗಿದ್ದ ಟ್ಯಾಂಕರ್ ಒಂದರ ಬಳಿ ಬೊಲೆರೋ ಪಿಕ್ಅಪ್ ವಾಹನವಿಟ್ಟು ಮೂವರು ವ್ಯಕ್ತಿಗಳು ಅನುಮಾನಾಸ್ಪದವಾಗಿ ನಿಂತಿರುವುದು ಕಂಡುಬಂದಿದೆ.
ಪೋಲಿಸ್ ಸಿಬ್ಬಂದಿಯನ್ನು ನೋಡುತ್ತಿದ್ದಂತೆಯೇ ಆರೋಪಿಗಳು ಅಲ್ಲಿಂದ ಕಾಲ್ಮೊರೆ ಇಡಲು ಯತ್ನಿಸಿದ್ದಾರೆ. ತಕ್ಷಣ ಜಾಗೃತರಾದ ಪೊಲೀಸರು ಇಬ್ಬರನ್ನು ಬೆನ್ನಟ್ಟಿ ಹಿಡಿದು ವಿಚಾರಣೆ ನಡೆಸಿದಾಗ, ಹೆದ್ದಾರಿ ಬದಿ ನಿಲ್ಲಿಸಿದ್ದ ವಾಹನಗಳ ಟ್ಯಾಂಕ್ನಿಂದ ಡೀಸಲ್ ಕದಿಯುತ್ತಿದ್ದ ಸತ್ಯ ಬಯಲಾಗಿದೆ.
ಕಾರ್ಯಾಚರಣೆ ವೇಳೆ ಪೊಲೀಸರು ಆರೋಪಿಗಳಿಂದ ಸುಮಾರು 20 ಲೀಟರ್ ಡೀಸಲ್ ತುಂಬಿದ್ದ ಕ್ಯಾನ್, ಹಲವು ಖಾಲಿ ಕ್ಯಾನ್ಗಳು, ಇಂಧನ ತೆಗೆಯಲು ಬಳಸುತ್ತಿದ್ದ ರಬ್ಬರ್ ಪೈಪ್ ಹಾಗೂ ಕೃತ್ಯಕ್ಕೆ ಬಳಸಿದ್ದ ಬೊಲೆರೋ ಪಿಕ್ಅಪ್ ವಾಹನವನ್ನು ವಶಕ್ಕೆ ಪಡೆದಿದ್ದಾರೆ.
ಈ ಅಕ್ರಮ ಕೃತ್ಯಕ್ಕೆ ಸಂಬಂಧಿಸಿದಂತೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಬಿಎನ್ಎಸ್ಎಸ್ ಮತ್ತು ಬಿಎನ್ಎಸ್ ಕಾನೂನು ಕಾಯ್ದೆಗಳಡಿ (ಅ.ಕ್ರ: 118/2026) ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









