ಮಂಗಳೂರು : ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಚಿವ ಯು.ಟಿ. ಖಾದರ್, 108 ಆ್ಯಂಬುಲೆನ್ಸ್ ನೌಕರರ ಸಾಮೂಹಿಕ ರಾಜೀನಾಮೆ ಹಾಗೂ ಪ್ರತಿಭಟನಾ ನಿರ್ಧಾರದ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನೌಕರರ ಸೇವಾ ಸಮಸ್ಯೆಗಳಿಗಿಂತಲೂ ರೋಗಿಗಳ ಜೀವ ರಕ್ಷಣೆ ಮತ್ತು ಆರೈಕೆಗೆ ಸರ್ಕಾರದ ಮೊದಲ ಆದ್ಯತೆಯಾಗಿದ್ದು, ಮುಷ್ಕರದಿಂದಾಗಿ ಸಾರ್ವಜನಿಕರಿಗೆ ಅಥವಾ ರೋಗಿಗಳಿಗೆ ತೊಂದರೆಯಾದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪಷ್ಟವಾಗಿ ಎಚ್ಚರಿಸಿದ್ದಾರೆ.
ಆ್ಯಂಬುಲೆನ್ಸ್ ಸಿಬ್ಬಂದಿಯ ನೇಮಕಾತಿ, ವೇತನ, ತರಬೇತಿ ಮತ್ತು ಸಮವಸ್ತ್ರ ಸೇರಿದಂತೆ ಯಾವುದೇ ಆಡಳಿತಾತ್ಮಕ ವಿಷಯಗಳನ್ನು ನಿರ್ವಹಿಸುವುದು ಆಯಾ ಗುತ್ತಿಗೆ ಕಂಪನಿಗಳ ಜವಾಬ್ದಾರಿಯಾಗಿದೆ. ಸಿಬ್ಬಂದಿಗೆ ನಿಗದಿತ ವೇತನ ನೀಡದಿರುವುದು ಅಥವಾ ಇತರ ಸಮಸ್ಯೆಗಳಿದ್ದಲ್ಲಿ ಅವರು ಗುತ್ತಿಗೆದಾರರೊಂದಿಗೆ ಮಾತುಕತೆ ನಡೆಸಿ ಬಗೆಹರಿಸಿಕೊಳ್ಳಬೇಕು ಅಥವಾ ಸರ್ಕಾರದ ಗಮನಕ್ಕೆ ತರಬೇಕು. ಕಂಪನಿಗೆ ತನ್ನ ಉದ್ಯೋಗಿಗಳನ್ನು ಸರಿಯಾಗಿ ನಿರ್ವಹಿಸಲು ಸಾಧ್ಯವಾಗದಿದ್ದರೆ ಗುತ್ತಿಗೆಯಿಂದ ಹೊರನಡೆಯಲಿ, ಸರ್ಕಾರದಿಂದ ಹೊಸ ಟೆಂಡರ್ ಪ್ರಕ್ರಿಯೆ ನಡೆಸಲಾಗುವುದು ಎಂದು ಖಾದರ್ ಹೇಳಿದ್ದಾರೆ.
ಆ್ಯಂಬುಲೆನ್ಸ್ ಸಿಬ್ಬಂದಿಯ ಜತೆ ನಮಗೆ ಭಿನ್ನಾಭಿಪ್ರಾಯವಿಲ್ಲದಿದ್ದರೂ, ಸೇವೆಯಲ್ಲಿ ವ್ಯತ್ಯಯ ಉಂಟಾಗಿ ರೋಗಿಗಳಿಗೆ ತೊಂದರೆಯಾದರೆ ಜವಾಬ್ದಾರಿಯುತ ನೌಕರರು ಹಾಗೂ ಕಂಪನಿಯ ವಿರುದ್ಧ ಯಾವುದೇ ಮುಲಾಜಿಲ್ಲದೆ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಅವರು ಒತ್ತಿ ಹೇಳಿದ್ದಾರೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









