ಪ್ರಿಯಕರನ ಜೊತೆಗೂಡಿ ಪತ್ನಿಯಿಂದ ಗಂಡನ ಕೊಲೆ

12:02 PM, Friday, June 28th, 2013
Share
1 Star2 Stars3 Stars4 Stars5 Stars
(No Ratings Yet)
Loading...

Scrape Merchant Murder ಪಣಂಬೂರು : ಕುದ್ರೋಳಿಯ ಗುಜರಿ ವ್ಯಾಪಾರಿ ಅಬ್ದುಲ್‌ ರಶೀದ್‌ ನಿಗೂಢ ಸಾವು ಪ್ರಕರಣ ಕೊಲೆ ಪ್ರಕರಣವಾಗಿ ತಿರುವು ಪಡೆದಿದ್ದು  ಪೊಲೀಸರು ಪತ್ನಿ ಸಹಿತ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ರಶೀದ್‌ ಪತ್ನಿ ನಸೀಮಾ (36),ಆಕೆಯ ಪ್ರಿಯಕರ ಮಹಮ್ಮದ್‌ ಇಮ್ರಾನ್‌(32) ಹಾಗೂ ನಸೀಮಾಳ ತಂಗಿಯ ಗಂಡ ಸಲೀಂ (38) ಬಂಧಿತರು. ಆರೋಪಿಗಳಾದ ಅಬ್ದುಲ್ಲಾ ಯಾನೆ ಕಾಲಿಯಾ ಮತ್ತು ಮುಕ್ರಿ ಸಿದ್ದಿಕ್‌ ಪರಾರಿಯಾಗಿದ್ದಾರೆ.

ಜೂನ್‌ 21ರಂದು ತಣ್ಣೀರುಬಾವಿ ಬಳಿ ಅಬ್ದುಲ್‌ ರಶೀದ್‌ ಅವರ ಮೃತ ದೇಹ ಪತ್ತೆಯಾಗಿತ್ತು. ಸೆಂಟ್ರಲ್‌ ಮಾರ್ಕೆಟ್‌ ಬಳಿ ಗುಜರಿ ವ್ಯಾಪಾರ ಮಾಡುತ್ತಿದ್ದ ರಶೀದ್‌ ನಿಗೂಢ ಸಾವು ಪ್ರಕರಣ ವ್ಯಾಪಕ ಕುತೂಹಲಕ್ಕೆ ಕಾರಣವಾಗಿತ್ತು. ದೇಹದಲ್ಲಿ ಶಂಕಾಸ್ಪದವಾಗಿ ಹಲವು ಗಾಯಗಳು ಕಂಡು ಬಂದ ಹಿನ್ನೆಲೆಯಲ್ಲಿ ಸ್ಥಳೀಯರು ಇದೊಂದು ಕೊಲೆ ಎಂದು ಸಂಶಯಗಳನ್ನು ವ್ಯಕ್ತ ಪಡಿಸಿದ್ದರು.

ಪಣಂಬೂರು ಪೊಲೀಸ್‌ ಸಬ್‌ ಇನ್ಸ್‌ಪೆಕ್ಟರ್‌ ಭಾರತಿ ಅವರು ಪ್ರಕರಣ ದಾಖಲಿಸಿ ತನಿಖೆಗೆ ಚಾಲನೆ ನೀಡಿದ್ದರು. ಮಂಗಳವಾರ ರಾತ್ರಿ ಸಬ್‌ ಇನ್ಸ್‌ಪೆಕ್ಟರ್‌ ಭಾರತಿ ಮತ್ತು ಸಿಬಂದಿ ಅಬ್ದುಲ್‌ ರಶೀದ್‌ ಅವರ ಕುದ್ರೋಳಿಯಲ್ಲಿರುವ ಮನೆಗೆ ತೆರಳಿ ಪರಿಶೀಲನೆ ನಡೆಸಿ ರಶೀದ್‌ ಪತ್ನಿ ನಸೀಮಾ ಸಹಿತ ಮೂವರನ್ನು ವಿಚಾರಣೆಗಾಗಿ ವಶಕ್ಕೆ ತೆಗೆದುಕೊಂಡಿದ್ದರು.

ತನಿಖೆ ನಡೆಸಿದಾಗ ಪತ್ನಿ ನಸೀಮಾ ಅವರೇ ಒಂದು ಲಕ್ಷ ರೂಪಾಯಿ ಸುಪಾರಿ ನೀಡಿ ಗಂಡ ರಶೀದ್‌ನನ್ನು ಕೊಲೆ ಮಾಡಿಸಿರುವುದು ರುಜುವಾತಾದ ಹಿನ್ನೆಲೆಯಲ್ಲಿ ಆಕೆಯ ಬಂಧನಕ್ಕೆ ಮುಂದಾದರು.

ಗುಜರಿ ವ್ಯಾಪಾರಿಯಾಗಿದ್ದ ಅಬ್ದುಲ್‌ ರಶೀದ್‌ ನನ್ನು ಜೂ.21ರಂದು ಸುಮಾರು 1.30ಕ್ಕೆ ಕುದ್ರೋಳಿಯಲ್ಲಿರುವ ನಡುಪಳ್ಳಿಯ ಮನೆಯಲ್ಲಿ ಆರೋಪಿಗಳು ಕಬ್ಬಿಣದ ಸಲಾಕೆಯಿಂದ ಹೊಡೆದು ಕೊಲೆ ಮಾಡಿ ಸಮೀಪದ ಗುರುಪುರ ನದಿಗೆ ಮೃತ ದೇಹವನ್ನು ಎಸೆದು ಪರಾರಿಯಾಗಿದ್ದರು.

ಪತಿ- ಪತ್ನಿಯ ವಿರಸ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದಂತೆಯೇ ಪತ್ನಿ ನಸೀಮಾ ತನ್ನ ತಂಗಿಯ ಗಂಡ ಸಲೀಂ ಬಳಿ ತನ್ನ ಕಷ್ಟವನ್ನು ಹೇಳಿ ಅವಲತ್ತುಕೊಂಡಿದ್ದಳು.ಇದಕ್ಕೆ ಪೂರಕವಾಗಿ ಸಲೀಂ ತನ್ನ ಬಾವ ರಶೀದ್‌ ಕೊಲೆಗೆ ಇಮ್ರಾನ್‌ ಜತೆ ಸೇರಿ ಸಂಚು ರೂಪಿಸಿದ್ದ. ಇದಕ್ಕಾಗಿ ಕುಖ್ಯಾತ ಆರೋಪಿಗಳಾದ ಮಂಜೇಶ್ವರದ ಅಬ್ದುಲ್ಲಾ ಯಾನೆ ಕಾಲಿಯ ಗೆ ಒಂದು ಲಕ್ಷ ರೂಪಾಯಿ ಸುಪಾರಿ ನೀಡಿ ಕೊಲ್ಲುವಂತೆ ಹೇಳಿದ್ದಾರೆ. ಇದನ್ನು ಕಾರ್ಯರೂಪಕ್ಕೆ ಇಳಿಸಲು ಜೂ.21ರಂದು ಮುಹೂರ್ತ ನಿಗದಿ ಪಡಿಸಿದ್ದರು. ಅದರಂತೆ ಆ ದಿನ ನಸೀಮಾ ರಶೀದ್‌ಗೆ ಎರಡು ನಿದ್ರೆ ಮಾತ್ರೆ ನೀಡಿ ಎಚ್ಚರಗೊಳ್ಳದಂತೆ ಮಾಡಿದ್ದಳು. ಮಧ್ಯ ರಾತ್ರಿ ಮನೆ ಬಾಗಿಲು ತೆರೆದು ಆರೋಪಿಗಳಿಗೆ ತನ್ನ ಗಂಡನನ್ನು ಕೊಲೆ ಮಾಡಲು ಸಹಕರಿಸಿದ್ದಾಳೆ.

ಪತ್ನಿಗೆ ಬೇರೆ ವ್ಯಕ್ತಿಗಳ ಜತೆ ಲೈಂಗಿಕ ಸಂಬಂಧವಿರುವುದನ್ನು ತಿಳಿದ ಬಳಿಕ ಹಲವು ಬಾರಿ ಬುದ್ಧಿ ಹೇಳಿ ಪತ್ನಿ ಜತೆ ಜಗಳ ಕಾಯ್ದಿದ್ದ ರಶೀದ್‌, ಅವಳನ್ನು ಉಮ್ರಾಗೆ ಕರೆದುಕೊಂಡು ಹೋಗಿ ತಪ್ಪು ಕಾಣಿಕೆ ಹಾಕಿಸುವ ಮೂಲಕ ಸರಿದಾರಿಗೆ ತರಲು ವ್ಯವಸ್ಥೆ ಮಾಡಿದ್ದ. ಪತ್ನಿಗೆ ಪಾಸ್‌ಪೋರ್ಟ್‌, ಟಿಕೇಟ್‌ ಎಲ್ಲಾ ಮಾಡಿಸಿ ಜೂ.25ರ ಮಂಗಳವಾರ ಉಮ್ರಾಗೆ ಹೋಗಲು ರೆಡಿಯಾಗಲೂ ಹೇಳಿದ್ದ. ಆದರೆ ಗಂಡನ ಜತೆ ಸಂಸಾರವೇ ಬೇಡ ಎಂದು ನಿರ್ಧರಿಸಿದ್ದ ನಸೀಮಾ ಈತನನ್ನು ಮುಗಿಸಿ ಬಿಡಲು ನಿರ್ಧರಿಸಿಯೇ ಬಿಟ್ಟಿದ್ದಳು.

ಮನೆಯಲ್ಲಿ ಕೊಲೆ ಮಾಡಿದ ಬಳಿಕ ಮನೆಯನ್ನೆಲ್ಲಾ ಗುಡಿಸಿ ಅಚ್ಚುಕಟ್ಟಾಗಿ ಇರಿಸಿ ಯಾವುದೇ ರಕ್ತದ ಕಲೆಗಳೂ ಇರದಂತೆ ಸ್ವತ್ಛ ಗೊಳಿಸಿದ್ದರು. ಆದರೆ ಪೊಲೀಸರು, ಬೆರಳಚ್ಚುಗಾರರು ಕೂಲಂಕುಷವಾಗಿ ಮನೆಯನ್ನು ತಪಾಸಣೆಗೆ ಒಳಪಡಿಸಿ ತಡಕಾಡಿದಾಗ ಬೆಡ್‌ ಒಳಗೆ ಹತ್ತಿ ಹೀರಿಕೊಂಡಿದ್ದ ರಕ್ತ ಕಂಡು ಬಂದಿತ್ತು.

ಆರೋಪಿ ಅಬ್ದುಲ್ಲಾ ಯಾನೆ ಕಾಲಿಯಾ ನಟೋರಿಯಸ್‌ ಕ್ರಿಮಿನಲ್‌ ಆಗಿದ್ದು, ಮಂಜೇಶ್ವರ ಬಳಿ ನಡೆದಿದ್ದ ರೈಲು ದರೋಡೆಯಲ್ಲಿ ಆರೋಪಿಯಾಗಿದ್ದಾನೆ ಎಂದು ತಿಳಿದು ಬಂದಿದೆ.

ಪೊಲೀಸ್‌ ಆಯುಕ್ತ ಮನೀಶ ಕರ್ಬೀಕರ್‌, ಡಿಸಿಪಿಗಳಾದ ಎಂ. ಮುತ್ತೂರಾಯ ಮತ್ತು ಡಿ. ಧರ್ಮಯ್ಯ ಅವರ ಮಾರ್ಗದರ್ಶನದಲ್ಲಿ ಹಾಗೂ ಉತ್ತರ ಉಪ ವಿಭಾಗದ ಎಸಿಪಿ ರವಿ ಕುಮಾರ್‌ ನಿರ್ದೇಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಪಣಂಬೂರು ಪೊಲೀಸ್‌ ಇನ್ಸ್‌ಪೆಕ್ಟರ್‌ ಚಲುವರಾಜು ಬಿ. ಸಬ್‌ ಇನ್ಸ್‌ಪೆಕ್ಟರ್‌ ಭಾರತಿ ಜಿ. ಅವರ ನೇತೃತ್ವ ವಹಿಸಿದ್ದು, ಸಿಬಂದಿ ಕುಶಲ ಮಣಿಯಾಣಿ, ಪುರುಷೋತ್ತಮ, ಮಂಜುನಾಥ, ದೇವಶೆಟ್ಟಿ, ರಘು ಎನ್‌., ಅಬ್ದುಲ್‌ ಜಬ್ಟಾರ್‌, ಸತೀಶ್‌, ಸುಜನ್‌, ಚಂದ್ರಹಾಸ ಆಳ್ವ, ಡೇವಿಡ್‌ ಡಿ’ಸೋಜಾ, ಪಿ. ಎಸ್‌. ಪಿರೇರಾ, ಉದಯ ಕುಮಾರ್‌, ಚಂದ್ರ ಮೋಹನ್‌, ಶ್ರೀಲತಾ, ನಯನ, ಶಾಂಭ ಅವರು ಭಾಗವಹಿಸಿದ್ದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English