ಮಂಗಳೂರು (ಕುಡ್ಲ) : ತುಳುನಾಡಿನ ಇತಿಹಾಸವೆಂದರೆ ಕೇವಲ ಅರಮನೆಗಳು, ಕೋಟೆಗಳು ಮತ್ತು ರಾಜರ ಕಥೆಯಲ್ಲ. ಇಲ್ಲಿನ ಪ್ರತಿಯೊಂದು ಊರು, ಪೇಟೆ, ನದಿ, ಬೆಟ್ಟ, ಕಾಡು ಮತ್ತು ಕಡಲತೀರಕ್ಕೂ ತನ್ನದೇ ಆದ ತುಳು ಭಾಷೆಯ ಹೆಸರು, ಸ್ಥಳೀಯ ಇತಿಹಾಸ ಮತ್ತು ಸಾಂಸ್ಕೃತಿಕ ನೆನಪುಗಳಿವೆ. ಕಾಲಕ್ರಮೇಣ ಆಡಳಿತಾತ್ಮಕ ಬದಲಾವಣೆ, ಭಾಷಾ ಪರಿವರ್ತನೆ ಮತ್ತು ಬಳಕೆಯ ಬದಲಾವಣೆಯಿಂದ ಹಲವು ಸ್ಥಳಗಳ ಮೂಲ ತುಳು ಹೆಸರುಗಳು ಜನಬಳಕೆಯಿಂದ ಮರೆಯಾಗಿವೆ.
ಉದಾಹರಣೆಗೆ ಉಬಾರ್–ಉಪ್ಪಿನಂಗಡಿ, ತಿಬಾರ್–ಶಿಬರೂರು, ಒಡಿಪು–ಉಡುಪಿ, ಅರುವ–ಅಳೆದಂಗಡಿ. ಬೆದ್ರ- ಮುಂತಾದ ಹೆಸರುಗಳನ್ನು ಸ್ಥಳೀಯ ಹಿರಿಯರ ನೆನಪು, ಜನಪದ ಪರಂಪರೆ ಮತ್ತು ಐತಿಹಾಸಿಕ ದಾಖಲೆಗಳ ಆಧಾರದ ಮೇಲೆ ಅಧ್ಯಯನ ಮಾಡಬೇಕಾಗಿದೆ. ಇವುಗಳಲ್ಲಿ ಯಾವುದು ಯಾವ ಕಾಲದಲ್ಲಿ ಯಾವ ರೂಪದಲ್ಲಿ ಬಳಕೆಯಲ್ಲಿತ್ತು ಎಂಬುದನ್ನು ದಾಖಲೆಗಳೊಂದಿಗೆ ಪರಿಶೀಲಿಸುವುದು ಅಗತ್ಯ. ಕಾರಣ, ಸ್ಥಳನಾಮಗಳು ಕೇವಲ ಹೆಸರುಗಳಲ್ಲ; ಅವು ಒಂದು ಪ್ರದೇಶದ ಭಾಷೆ, ಭೂಗೋಳ, ಜನಜೀವನ ಮತ್ತು ಇತಿಹಾಸದ ಜೀವಂತ ಗುರುತುಗಳಾಗಿವೆ.
ಇಂದು ತುಳುವಿನ ಮೂಲ ಸ್ಥಳನಾಮಗಳನ್ನು ಹುಡುಕುವ ಜವಾಬ್ದಾರಿ ಕೇವಲ ಭಾಷಾ ಸಂಶೋಧಕರದ್ದಲ್ಲ. ಪ್ರತಿಯೊಂದು ಮನೆಯ ಹಿರಿಯರ ನೆನಪು, ಕುಟುಂಬದ ಹಳೆಯ ದಾಖಲೆಗಳು, ತಾಮ್ರಪತ್ರಗಳು, ದೇವಸ್ಥಾನಗಳ ದಾಖಲೆಗಳು, ದೈವಾರಾಧನೆಯ ಪಾಡ್ದನಗಳು, ಹಳೆಯ ಭೂದಾಖಲೆಗಳು ಮತ್ತು ಜನಪದ ಹಾಡುಗಳಲ್ಲಿ ಉಳಿದಿರುವ ಹೆಸರುಗಳನ್ನು ಯುವಕರು ಸಂಗ್ರಹಿಸಬೇಕಾಗಿದೆ. ಹಿರಿಯರು ಹೇಳುವ ಒಂದು ಮರೆತುಹೋದ ಊರಿನ ಹೆಸರು ನಾಳೆ ತುಳುನಾಡಿನ ಇತಿಹಾಸದ ಮಹತ್ವದ ದಾಖಲೆಯಾಗಬಹುದು.
ಆದ್ದರಿಂದ “ನಮ್ಮ ಊರಿನ ಮೂಲ ತುಳು ಹೆಸರು ಯಾವುದು?” ಎಂಬ ಪ್ರಶ್ನೆ ಪ್ರತಿಯೊಂದು ತುಳು ಮನೆಯಲ್ಲೂ ಕೇಳಿಬರಬೇಕಾಗಿದೆ. ಅಜ್ಜ-ಅಜ್ಜಿ, ಹಿರಿಯರು, ಸ್ಥಳೀಯ ಪಾಡ್ದನಕಾರರು, ದೈವಾರಾಧಕರು, ದೇವಸ್ಥಾನದ ಅರ್ಚಕರು ಹಾಗೂ ಊರಿನ ಇತಿಹಾಸ ತಿಳಿದವರಿಂದ ಮಾಹಿತಿ ಪಡೆದು, ಅದರ ಕಾಲಘಟ್ಟ ಮತ್ತು ಮೂಲವನ್ನು ದಾಖಲಿಸುವ ಕೆಲಸವನ್ನು ಯುವಜನತೆ ಕೈಗೆತ್ತಿಕೊಳ್ಳಬೇಕಾಗಿದೆ.
ಮನೆಮನೆಯಿಂದ ಒಂದು ಹೆಸರು, ಊರೂರಿನಿಂದ ಒಂದು ಇತಿಹಾಸ — ಹೀಗೆ ಸಂಗ್ರಹವಾದಾಗಲೇ ತುಳುನಾಡಿನ ಮರೆತುಹೋದ ಸ್ಥಳನಾಮಗಳ ದೊಡ್ಡ ಇತಿಹಾಸ ಹೊರಬರಲು ಸಾಧ್ಯ.
ತುಳುವಿನ ಮೂಲ ಹೆಸರುಗಳನ್ನು ಹುಡುಕೋಣ. ದಾಖಲಿಸೋಣ. ಮುಂದಿನ ಪೀಳಿಗೆಗೆ ಉಳಿಸೋಣ. ತುಳುನಾಡಿನ ಗತವೈಭವವನ್ನು ಇತಿಹಾಸದ ದಾಖಲೆಗಳ ಮೂಲಕ ಮರುಪರಿಚಯಿಸೋಣ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ತುಳುನಾಡು, ಸುದ್ದಿಗಳು









