ಮಂಗಳೂರು : ವಿಶ್ವ ತಂಬಾಕುರಹಿತ ದಿನದಂದು ಗುಟ್ಕಾ ನಿಷೇಧಿಸುವ ಮೂಲಕ ರಾಜ್ಯ ಸರಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಆರೋಗ್ಯದ ಮೇಲೆ ಮಾರಕ ಪರಿಣಾಮ ಬೀರುವ ಹಾಗೂ ಲಕ್ಷಾಂತರ ಮಂದಿಯ ಸಾವಿಗೆ ಕಾರಣವಾಗಿದ್ದ ಗುಟ್ಕಾ ನಿಷೇಧಿಸಲು ಮುಂದಾಗಿರುವುದು ಸ್ವಾಗತಾರ್ಹ ಬೆಳವಣಿಗೆ. ಜನರ ಆರೋಗ್ಯದ ಹಿತದೃಷ್ಟಿ ಯಿಂದಲೇ ಸುಪ್ರೀಂ ಕೋರ್ಟ್ ಗುಟ್ಕಾ ನಿಷೇಧಕ್ಕೆ ನಿರ್ದೇಶನ ನೀಡಿತ್ತು.
ನೆರೆಯ ತಮಿಳುನಾಡು ಸೇರಿದಂತೆ ಅನೇಕ ರಾಜ್ಯಗಳು ಕೋರ್ಟ್ ಆದೇಶವನ್ನು ಚಾಚೂ ತಪ್ಪದೆ ಪಾಲಿಸಿದ್ದರೂ ರಾಜ್ಯ ಸರಕಾರ ಮೀನಮೇಷ ಎಣಿಸುತ್ತಿತ್ತು. ಕೊನೆಗೂ ಸುಪ್ರೀಂಕೋರ್ಟ್ ಆದೇಶ ಪಾಲಿಸಲು ಮುಂದಾಗಿರುವುದು ಸಮಾಧಾನಕರ ಸಂಗತಿ. ನಿಷೇಧದ ನಿರ್ಧಾರದ ಬೆನ್ನಲ್ಲೇ ಸರಕಾರದ ಈ ಕ್ರಮದಿಂದ ಅಡಕೆ ಬೆಳೆಗಾರರು ಸಂಕಷ್ಟಕ್ಕೆ ಸಿಲುಕುತ್ತಾರೆ, ಬೆಳೆಗಾರರ ಹಿತದೃಷ್ಟಿಯಿಂದ ನಿಷೇಧ ಬೇಡ ಎಂಬ ಪ್ರತಿರೋಧವೂ ವ್ಯಕ್ತವಾಗುತ್ತಿದೆ. ಕೆಲ ಚುನಾಯಿತ ಪ್ರತಿನಿಧಿಗಳೂ ಗುಟ್ಕಾ ಪರ ವಾದ ಮಂಡಿಸುತ್ತಿದ್ದಾರೆ.
ಆದರೆ ಗುಟ್ಕಾ ವ್ಯಾಪಾರ ಬೆಂಬಲಿಸುತ್ತಿರುವ ಯಾರೊ ಬ್ಬರೂ ಅದರ ಸೇವನೆಯಿಂದ ಆಗುತ್ತಿರುವ ಹಾನಿಗಳ ಬಗ್ಗೆ ಚಿಂತನೆ ನಡೆಸಿದಂತೆ ಕಾಣುತ್ತಿಲ್ಲ. ಗುಟ್ಕಾ ಚಟ ಕಲಿತ ಮನುಷ್ಯನ ದೇಹಸ್ಥಿತಿಯಲ್ಲಿ ಆಗುವ ಬದಲಾವಣೆ, ಕ್ರಮೇಣ ಕ್ಯಾನ್ಸ್ರ್ ಆಗಿ ಪರಿವರ್ತನೆ ಯಾಗಿ ಸಾವಿನಲ್ಲಿ ಅಂತ್ಯ ಗೊಳ್ಳುತ್ತಿರುವುದನ್ನೂ ಗಮನಿಸಿದಂತಿಲ್ಲ. ರಾಜ್ಯದಲ್ಲಿ ಗುಟ್ಕಾ ಸೇವಿಸುತ್ತಿರುವ ಲಕ್ಷಾಂತರ ಮಂದಿ ಪೈಕಿ ಶೇಕಡಾ 80ರಷ್ಟು ಯುವಜನರು ಎಂಬುದು ಗಮನಾರ್ಹ.
ವಿಶೇಷವಾಗಿ ಉತ್ತರ ಕರ್ನಾಟಕ ಭಾಗದ ಬಹುತೇಕ ಜಿಲ್ಲೆಗಳಲ್ಲಿ ಗುಟ್ಕಾ ಸೇವನೆಯಿಂದ ಆಗಿರುವ ಹಾನಿಗಳು ಅಷ್ಟಿಷ್ಟಲ್ಲ. ಮತ್ತೊಂದೆಡೆ ಪರಿಸರದ ಮೇಲೆ ಆಗುತ್ತಿರುವ ಹಾನಿಯನ್ನೂ ಗುಟ್ಕಾ ಮಾರಾಟ ಸಮರ್ಥಿಸುವವರು ಗಂಭೀರವಾಗಿ ಪರಿಗಣಿಸಿದಂತಿಲ್ಲ. ಸಾರ್ವ ಜನಿಕ ಸ್ಥಳ ಮತ್ತು ಕಚೇರಿಗಳಲ್ಲಿ ಗುಟ್ಕಾ ಸೇವಿಸಿ ಉಗಿಯುತ್ತಿರು ವುದರಿಂದ ಉಂಟಾ ಗುತ್ತಿರುವ ಅನೈರ್ಮಲ್ಯದ್ದೇ ದೊಡ್ಡ ಕತೆ.
ಗುಟ್ಕಾದಲ್ಲಿ ಅಡಕೆಗಿಂತ ಮರದ ಹೊಟ್ಟು ಹಾಗೂ ಅಪಾಯಕಾರಿ ರಾಸಾಯನಿಕಗಳ ಬಳಕೆ ಹೆಚ್ಚು ಎಂಬ ವರದಿಗಳೂ ಸಹ ಆತಂಕ ಮೂಡಿಸಿವೆ. ಹಾಗಾಗಿ ಗುಟ್ಕಾ ನಿಷೇಧದ ಸಾಧಕ, ಬಾಧಕಗಳ ಬಗ್ಗೆ ಅವಲೋಕಿಸಿದಾಗ ಅನನುಕೂಲಕ್ಕಿಂತ ಅನುಕೂಲವೇ ಹೆಚ್ಚು. ಲಕ್ಷಾಂತರ ಮಂದಿಯ ಆರೋಗ್ಯ ಸುಧಾರಣೆ ಮತ್ತು ಪರಿಸರವನ್ನು ಸ್ವಚ್ಛವಾಗಿಟ್ಟು ಕೊಳ್ಳಲು ಇದು ನೆರವಾಗುತ್ತದೆ ಎಂಬುದನ್ನು ಮನಗಾಣಬೇಕು. ಇನ್ನು ನಿಷೇಧದಿಂದ ಅಡಕೆ ಬೆಳೆಗಾ ರರ ಮೇಲೆ ಪ್ರತಿಕೂಲ ಪರಿಣಾಮ ಆಗುತ್ತದೆ ಎಂಬ ಅಂಶವನ್ನು ಸರಕಾರ ಗಂಭೀರವಾಗಿ ಪರಿಶೀಲಿಸಬೇಕು.
ಒಂದು ವೇಳೆ ಬೆಳೆಗಾರರಿಗೆ ದೊಡ್ಡ ಪ್ರಮಾಣದಲ್ಲಿ ನಷ್ಟವಾಗುತ್ತದೆ, ಹಾನಿಗೊಳಗಾಗುತ್ತಾರೆ ಎಂದಾದಲ್ಲಿ ಅದಕ್ಕೆ ತಕ್ಕ ಪರಿಹಾರವನ್ನೂ ನೀಡಬೇಕು. ಬೆಳಗಾರರ ನೆರವಿಗಾಗಿ ಗೋರಖ್ ಸಿಂಗ್ ಸಮಿತಿ ಶಿಫಾರಸುಗಳ ಜಾರಿಗೆ ಕೇಂದ್ರದ ಮೇಲೆ ಒತ್ತಡ ಹೇರಬೇಕು. ಬೆಲೆ ಕುಸಿತದಂಥ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಲು ಕ್ಯಾಂಷ್ಕೋದಂಥ ಸಂಸ್ಥೆಗೆ ದೊಡ್ಡ ಮೊತ್ತದ ಅನುದಾನ ನೀಡಿ ಮಾರುಕಟ್ಟೆ ಮಧ್ಯಪ್ರವೇಶಿಸಲು ವ್ಯವಸ್ಥೆ ಮಾಡಬೇಕು.
ಬೆಳೆಗಾರರ ಸಂಕಷ್ಟಕ್ಕೆ ಕಾರಣವಾಗುತ್ತಿರುವ ತುಂಡೆರೋಗ, ಹಳದಿರೋಗ, ಕೊಳೆರೋಗ, ನುಸಿರೋಗ, ತಿರುಪಲುಗಣ್ಣುವಿನಂಥ ಬೆಳೆ ಹಾನಿಕಾರಕ ರೋಗಗಳ ನಿಯಂತ್ರಣಕ್ಕೆ ಉಚಿತವಾಗಿ ಔಷಧ ವಿತರಿಸಬೇಕು. ಈಗಾಗಲೇ ನಿಷೇಧಿಸಿರುವ ರಾಜ್ಯಗಳಲ್ಲಿ ಬೆಳೆಗಾರರ ನೆರವಿಗೆ ಕೈಗೊಂಡಿರುವ ಕ್ರಮಗಳನ್ನೂ ಅಧ್ಯಯನ ಮಾಡಿ ರೈತರಿಗೆ ಯಾವುದೇ ತೊಂದರೆ ಆಗದಂತೆ ನೋಡಿ ಕೊಳ್ಳುವುದು ಸರಕಾರದ ಜವಾಬ್ದಾರಿ.
Click this button or press Ctrl+G to toggle between Kannada and English