
ಮಂಗಳೂರು : ಪ್ರೇಕ್ಷಕರಲ್ಲಿ ಹಾಗೂ ವಿದ್ಯಾರ್ಥಿಗಳಲ್ಲಿ ಶಾಸ್ತ್ರೀಯ ನೃತ್ಯದ ಗ್ರಹಿಕೆಯನ್ನು ಹೆಚ್ಚಿಸುವ ಮತ್ತು ನೃತ್ಯ ಕಲೆಯ ವೈಚಾರಿಕತೆಯನ್ನು ಮೂಡಿಸುವ ನಿಟ್ಟಿನಲ್ಲಿ ಗ್ರಹಿಕೆ-ತಿಳಿಕೆ-ಮೆಚ್ಚಿಕೆಯ ಶೀರ್ಷಿಕೆ ಹೊತ್ತ “ಆಸ್ವಾದ” ಎಂಬ ವಿಶೇಷ ಕಾರ್ಯಕ್ರಮವು ನಗರದ ಹಿಂದಿ ಪ್ರಚಾರ ಭವನದಲ್ಲಿ ಸೆಪ್ಟೆಂಬರ್ 26 ಶನಿವಾರ ಸಂಜೆ ನಡೆಯಿತು.
ನಾದನೃತ್ಯ ಸ್ಕೂಲ್ ಆಫ್ ಡಾನ್ಸ್ ಎಂಡ್ ಕಲ್ಚರಲ್ ಟ್ರಸ್ಟ್ (ರಿ) ನೇತೃತ್ವದಲ್ಲಿ, ಬೆಂಗಳೂರಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ಈ ತಿಂಗಳ ಸರಣಿ ನೃತ್ಯ ಕಾರ್ಯಕ್ರಮ ಹಾಗೂ ಸಂವಾದವನ್ನು ಆಯೋಜಿಸಲಾಗಿತ್ತು.
ಈ ಕಾರ್ಯಕ್ರಮವನ್ನು ಮಣಿಪಾಲದ ಎಂ.ಪಿ.ಇ.ಎ.ಎಸ್ ಟ್ರಸ್ಟ್ ಅಧ್ಯಕ್ಷರಾದ ಡಾ. ವರದೇಶ್ ಹಿರೇಗಂಗೆ ಅವರು ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮೊದಲು ನಡೆದ ಡಾ. ಭ್ರಮರಿ ಶಿವಪ್ರಕಾಶ್ ಅವರ ಭರತನಾಟ್ಯ ಪ್ರದರ್ಶನವು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು.
ನಂತರ ಸಂವಾದ ಕಾರ್ಯಕ್ರಮ ನಡೆಯಿತು. ಕಳೆದ ಸುಮಾರು 25 ವರ್ಷಗಳಿಂದ ಕಲಾ ಸೇವೆಯಲ್ಲಿ ತೊಡಗಿರುವ ಸಂಸ್ಥೆಯ ಗುರು ವಿದುಷಿ ಡಾ. ಭ್ರಮರಿ ಶಿವಪ್ರಕಾಶ್ ಅವರು ನೃತ್ಯವನ್ನು ವಿಶಿಷ್ಟ ಹಾಗೂ ವ್ಯವಸ್ಥಿತ ಶೈಲಿಯಲ್ಲಿ ಯುವ ಪೀಳಿಗೆಗೆ ಧಾರೆ ಎರೆಯುತ್ತಿರುವುದನ್ನು ಈ ಸಂದರ್ಭದಲ್ಲಿ ಸ್ಮರಿಸಿ, ಅಭಿನಂದಿಸಿದರು.
ಕಾರ್ಯಕ್ರಮವನ್ನು ನಿರೂಪಿಸಿದ ಪ್ರೊ. ಸ್ಮಿತಾ ಶೆಣೈ ಮಾತನಾಡಿ, “ಸಂಸ್ಕೃತಿಯನ್ನು ಕೇವಲ ಕಲಿಸುವುದಷ್ಟೇ ಅಲ್ಲದೆ, ಮಕ್ಕಳಲ್ಲಿ ಆಲೋಚನಾ ಪ್ರೌಢತೆ ಮೂಡಿಸುವಲ್ಲಿ ಭ್ರಮರಿಯವರ ಶ್ರಮ ಶ್ಲಾಘನೀಯ” ಎಂದರು. ಇದಕ್ಕೆ ಪೂರಕವಾಗಿ ಮಾತನಾಡಿದ ವಿದುಷಿ ಡಾ. ಭ್ರಮರಿ ಶಿವಪ್ರಕಾಶ್, “ಸಂವಾದಾತ್ಮಕ ಕಲಿಕೆಯು ಮಕ್ಕಳಲ್ಲಿ ಕಲೆಯ ಆಳವಾದ ಅರಿವು ಮತ್ತು ವೈಚಾರಿಕ ಬೆಳವಣಿಗೆಗೆ ನೆರವಾಗುತ್ತದೆ” ಎಂದು ಪ್ರತಿಪಾದಿಸಿದರು.
ಇದೇ ಸಂವಾದ ಗೋಷ್ಠಿಯಲ್ಲಿ ಕೊನೆಯ ಭಾಗವಾಗಿ ವಿನುತಾ ಭಟ್, ಅಂಜಲಿ ಶೋನ್ಶ, ಪ್ರೊ. ಎ.ಪಿ. ರಾವ್ ಹಾಗೂ ಪ್ರೀತಾ ನಾಯಕ್ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









