ಕಾಸರಗೋಡು ಯುವಕನ ಕೊಲೆ, 7ಮಂದಿಯ ವಿರುದ್ಧ ದೂರು ದಾಖಲು ; ಒಂದು ವಾರ ನಿಷೇಧಾಜ್ಞೆ ಜಾರಿ

12:51 PM, Monday, July 8th, 2013
Share
1 Star2 Stars3 Stars4 Stars5 Stars
(5 rating, 5 votes)
Loading...

Kasaragod youth Murderಕಾಸರಗೋಡು : ಕಾಸರಗೋಡು ಸಮೀಪದ ವಿದ್ಯಾನಗರ, ನುಳ್ಳಿಪಾಡಿಯ ಜೆಪಿ ನಗರ ನಿವಾಸಿ ಟಿ.ಎ. ಸಾಬೀದ್(18) ತನ್ನ ಸ್ನೇಹಿತನ ಬೈಕಿನಲ್ಲಿ ಹೋಗುತ್ತಿದ್ದ ವೇಳೆ ದುಷ್ಕರ್ಮಿಗಳು ಇರಿದು  ಕೊಲೆ ಮಾಡಿದ  ಘಟನೆ ಭಾನುವಾರ ನಡೆದಿದೆ.

ಟಿ.ಎ. ಸಾಬೀದ್ ಕಾಸರಗೋಡು ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದು, ಭಾನುವಾರ ಬೆಳಗ್ಗೆ ಗೆಳೆಯ ರಶೀದ್ ಬೈಕ್ ನಲ್ಲಿ ಹೋಗುತ್ತಿದ್ದ ವೇಳೆ ಇನ್ನೊಂದು ಬೈಕ್‌ನಲ್ಲಿ ಬಂದ ತಂಡವೊಂದು ಇರಿದು ಪರಾರಿಯಾಗಿದೆ. ತೀವ್ರವಾಗಿ ಗಾಯಗೊಂಡ ಸಾಬೀದ್ ನನ್ನು ಸ್ಥಳೀಯರು ಕೂಡಲೇ ಕಾಸರಗೋಡು ಆಸ್ಪತ್ರೆಗೆ ದಾಖಲಿಸಿದರು. ಆದರೆ ಚಿಕಿತ್ಸೆಗೆ ಸ್ಪಂದಿಸಿದೆ ಭಾನುವಾರ ಮಧ್ಯಾಹ್ನ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ.

ಸಾಬೀದ್ ನ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಕಾಸರಗೋಡು ನಗರದಲ್ಲಿ ಅಘೋಷಿತ ಬಂದ್‌ನ ವಾತಾವರಣ ಕಂಡು ಬಂತು. ಅಂಗಡಿ ಮುಂಗಟ್ಟುಗಳು ಮುಚ್ಚಿದ್ದವು. ಬಸ್ ಹಾಗೂ ಇನ್ನಿತರ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತು.

ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಉದ್ರಿಕ್ತ ಗುಂಪು ಆಸ್ಪತ್ರೆ ಮುಂದೆ ಪ್ರತಿಭಟನೆ ನಡೆಸಿತು. ಇದೇ ವೇಳೆ ನುಳ್ಳಿಪ್ಪಾಡಿಯಲ್ಲಿ ಬಸ್ ಮತ್ತು ಕಾರಿಗೆ ಕಲ್ಲು ತೂರಾಟ ನಡೆಸಲಾಗಿದೆ. ಆಕ್ರೋಶಿತ ಗುಂಪೊಂದು ಬಲವಂತವಾಗಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿಸಿದ್ದು, 10ಕ್ಕೂ ಅಧಿಕ ಬಸ್ ಹಾಗೂ ಇನ್ನಿತರ ವಾಹನಗಳನ್ನು ಪುಡಿ ಮಾಡಿದ ಘಟನೆ ನಡೆಯಿತು. ನುಳ್ಳಿಪ್ಪಾಡಿಯಲ್ಲಿ ಗುಂಪನ್ನು ಚದುರಿಸಲು ಪೊಲೀಸರು ಲಾಠಿಚಾರ್ಜ್ ಮಾಡಿದರು.

ಕಾಸರಗೋಡು ಹೊಸ ಬಸ್ ನಿಲ್ದಾಣದ ಬಳಿ ಸಿಕ್ಕಸಿಕ್ಕ ಅಂಗಡಿಗಳಿಗೆ ನುಗ್ಗಿದ ತಂಡ ಸಾಮಗ್ರಿಗಳನ್ನು ಹೊರಕ್ಕೆಸೆದಿದೆ. ಇದೇ ವೇಳೆ ಕಾಸರಗೋಡು-ಕಣ್ಣೂರು ಮಧ್ಯೆ ಓಡುವ ಬಸ್ ನ ಚಾಲಕನಿಗೆ ಹಲ್ಲೆ ಮಾಡಲಾಗಿದೆ. ಬಸ್ ನಿಲ್ದಾಣದಲ್ಲಿದ್ದ ಕಾರುಗಳಿಗೆ ಕಲ್ಲೆಸೆದು ಹಾನಿಗೊಳಿಸಲಾಗಿದೆ. ಚೆರ್ಕಳ, ವಿದ್ಯಾನಗರ, ನುಳ್ಳಿಪಾಡಿ ಹೊಸ ಬಸ್ ನಿಲ್ದಾಣಗಳಿಗೆ ಕಲ್ಲೆಸೆದು ಹಾನಿಗೊಳಿಸಲಾಗಿದೆ. ಕೆಎಸ್ ಆರ್ ಟಿಸಿ ಬಸ್ಸು ಕಲ್ಲೆಸೆತದಿಂದ ಹಾನಿಗೊಳಿಸಲಾಗಿದೆ.

ಅನರೀಕ್ಷಿತ ಘಟನೆಯಿಂದ ಕಾಸರಗೋಡಿನಲ್ಲಿ ಸಾರ್ವಜನಿಕರು ಪರದಾಡುವಂತಾಯಿತು. ಘಟನೆಯಿಂದ ಕಾಸರಗೋಡು ನಗರ ಹಾಗೂ ಹೊರ ವಲಯದಲ್ಲಿ ಬಿಗುವಿನ ವಾತಾವರಣ ಕಂಡು ಬಂದಿದೆ. ಮುಂಜಾಗೃತ ಕ್ರಮವಾಗಿ ಹಲವರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸರನ್ನು ನೇಮಿಸಲಾಗಿದ್ದು, ಕಣ್ಣೂರು ಜಿಲ್ಲೆಯ ಹೆಚ್ಚುವರಿ ಪೊಲೀಸರನ್ನು ಕರೆಸಿಕೊಳ್ಳಲಾಗಿದೆ. ಕೊಲೆಗೆ ಸಬಂಧಪಟ್ಟಂತೆ ಜೆಪಿ ಕಾಲನಿಯ ಅಕ್ಷಯ್ ಮತ್ತು  7ಮಂದಿಯ ವಿರುದ್ಧ ನಗರ ಪೋಲಿಸರು ದೂರು ದಾಖಲಿಸಿಕೊಂಡಿದ್ದಾರೆ.

ಮಂಜೇಶ್ವರ ಬಾವುಟ ಮೂಲೆ ವಾರ್ಡ್ ಹಾಗೂ ಚೆಮ್ಮನಾಡ್ ಪಂಚಾಯತ್‌ನ ಪರವನಡ್ಕ ವಾರ್ಡ್‌ನಲ್ಲಿ ಚುನಾವಣೆ ಮುಂದೂಡಲಾಗಿದೆ ಎಂದು ಜಿಲ್ಲಾಧಿಕಾರಿ ಮುಹಮ್ಮದ್ ಸಗೀರ್ ಆದೇಶ ನೀಡಿದ್ದಾರೆ. ಚುನಾವಣೆಯ ದಿನಾಂಕವನ್ನು ಮುಂದಿನ ದಿನಗಳಲ್ಲಿ ಪ್ರಕಟಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ಕಾಸರಗೋಡು ಮತ್ತು ವಿದ್ಯಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದು ವಾರಗಳ ಕಾಲ 144 ಸೆಕ್ಷನ್ ಜಾರಿಗೊಳಿಸಲಾಗಿದೆ. ದ್ವಿಚಕ್ರ ವಾಹನಗಳಿಗೆ ಸಂಜೆ 6ರಿಂದ ಬೆಳಗ್ಗೆ 6ರ ತನಕ ನಿರ್ಭಂಧ ಹೇರಲಾಗಿದೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English