ಮಂಗಳೂರು : ರಾಜ್ಯ ಸರ್ಕಾರದ ಅನ್ನಭಾಗ್ಯ ಯೋಜನೆಗೆ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಅವರು ಇಂದು ಬೆಳಗ್ಗೆ ನಗರದ ಪುರಭವನದಲ್ಲಿ ಬಡಕುಟುಂಬವೊಂದಕ್ಕೆ 30 ಕೆ.ಜಿ. ಅಕ್ಕಿಯನ್ನು ನೀಡುವುದರ ಮೂಲಕ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು ಬಿಪಿಎಲ್ ಪಟ್ಟಿಯಲ್ಲಿರುವ ಪ್ರತಿಯೊಂದು ಕುಟುಂಬಕ್ಕೆ ತಿಂಗಳಿಗೆ 30 ಕೆ.ಜಿ. ಅಕ್ಕಿಯನ್ನು ಕೆ.ಜಿ.ಗೆ ಒಂದು ರೂಪಾಯಿಯಂತೆ ನೀಡಲಾಗುವುದು. ಈ ಯೋಜನೆ ಬಡವರಿಗೆ ತಲುಪುವಂತೆ ಮಾಡಲು ಎಲ್ಲಾ ರೀತಿಯ ಕ್ರಮ ಕೈಗೊಳ್ಳಲಾಗುವುದು ಎಂದು ರೈ ಹೇಳಿದರು. ರಾಷ್ಟ್ರದಲ್ಲಿ ಈ ಯೋಜನೆಯನ್ನು ಜಾರಿಗೆ ತಂದ ಮೊದಲ ರಾಜ್ಯ ಕರ್ನಾಟಕ, ಚುನಾವಣಾ ಪೂರ್ವದಲ್ಲಿ ನುಡಿದಂತೆ ನಡೆದಿದೆ ಎಂದು ಹೇಳಿದರು.
ದ.ಕ. ಜಿಲ್ಲೆಯಲ್ಲಿ 1,79,139 ಕುಟುಂಬಗಳು ಇದರ ಲಾಭ ಪಡೆಯಲಿದೆ. ರಾಜ್ಯದಲ್ಲಿ 7 ಸಾವಿರ ಮೆಟ್ರಿಕ್ ಟನ್ ಅಕ್ಕಿ ಈ ಯೋಜನೆಯಡಿ ಪ್ರತೀ ತಿಂಗಳು ವಿತರಿಸಲಾಗುವುದು. ಈ ಯೋಜನೆಯಿಂದ ರಾಜ್ಯದ ಬೊಕ್ಕಸಕ್ಕೆ 400 ಕೋಟಿ ಸಾವಿರ ಹೊರೆ ಬೀಳಲಿದೆ ಎಂದರು.
ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕರಾದ ಜೆ. ಆರ್. ಲೋಬೊ, ಮಂಗಳೂರು ಉತ್ತರ ಕ್ಷೇತ್ರದ ಶಾಸಕರಾದ ಮೊಯ್ದಿನ್ ಬಾವ, ಜಿಲ್ಲಾಧಿಕಾರಿ ಎನ್. ಪ್ರಕಾಶ್, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಕೆ.ಎನ್. ವಿಜಯ್ ಪ್ರಕಾಶ್, ಆಹಾರ ಮತ್ತು ಸರಬರಾಜು ಇಲಾಖೆ ದ.ಕ.ಜಿಲ್ಲೆಯ ಸಹನಿರ್ದೇಶಕ ಶರಣಬಸಪ್ಪ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
Click this button or press Ctrl+G to toggle between Kannada and English