ಮಂಗಳೂರು : ಮಂಗಳೂರಿನ ಅತ್ತಾವರದ ಹಾರ್ಮನಿ ವಸತಿ ಸಂಕೀರ್ಣದ ನಿವಾಸಿಯಾಗಿರುವ ಇಬ್ರಾಹಿಂ ಶೆರೀಫ್ ಎಂಬಾತ ಬಾಡಿಗೆ ಮನೆಯ ಹುಡುಕಾಟದಲ್ಲಿರುವವರನ್ನು ಸಂಪರ್ಕಿಸಿ ಬಾಡಿಗೆ ಮನೆಯನ್ನು ತಾನೇ ಗೊತ್ತು ಮಾಡಿಕೊಟ್ಟು ಪ್ರತೀ ತಿಂಗಳ ಬಾಡಿಗೆಯನ್ನು ತಾನೇ ಪಾವತಿಸುತ್ತೇನೆ ಎಂದು ನಂಬಿಸಿ ಅದಕ್ಕಾಗಿ ತನ್ನಲ್ಲಿ ನಿರ್ಧಿಷ್ಟ ಮೊತ್ತವನ್ನು ಠೇವಣಿಯಾಗಿ ಇಡಬೇಕು ಎಂಬ ಕರಾರಿನಂತೆ ಒಪ್ಪಂದ ಪತ್ರವನ್ನು ಮಾಡಿಕೊಂಡು ಹಲವಾರು ವ್ಯಕ್ತಿಗಳಿಂದ ಲಕ್ಷಾಂತರ ರೂಪಾಯಿಯನ್ನು ಪಡೆದು ಈಗ ಏಕಾಏಕಿ ಮನೆ ಬಾಡಿಗೆಯನ್ನು ಪಾವತಿಸದೆ ಠೇವಣಿಯನ್ನು ಹಿಂದಿರುಗಿಸದೆ ಪರಾರಿಯಾಗಿರುತ್ತಾನೆ.
ಏರುತ್ತಿರುವ ನಿವೇಶನ ಮತ್ತು ಮನೆ ಬಾಡಿಗೆಯ ದರದಿಂದಾಗಿ ಪ್ರತೀ ತಿಂಗಳು ಮನೆ ಬಾಡಿಗೆ ಪಾವತಿಸುವುದು ಅಸಾಧ್ಯ ಎಂಬಂತಹ ಪರಿಸ್ಥಿತಿಯಿಂದಾಗಿ ಇಬ್ರಾಹಿಂ ಶೆರೀಫ್ ಪ್ರತೀ ತಿಂಗಳು ತಾನೇ ಬಾಡಿಗೆ ಪಾವತಿಸುವ ಯೋಜನೆಗೆ ಆಮಿಷ ತೋರಿಸಿ. ಲಕ್ಷಾಂತರ ರೂಪಾಯಿ ಠೇವಣಿ ಇರಿಸಿರುವ ನೂರರಷ್ಟು ಮನೆ ಬಾಡಿಗೆದಾರರು ವಂಚನೆಗೊಳಗಾಗಿ ಇಂದು ಅತಂತ್ರ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಈತ ಮಾಡಿಕೊಟ್ಟ ಮನೆಗಳಿಗೆ ಈಗ ಪ್ರತೀ ತಿಂಗಳ ಬಾಡಿಗೆಯನ್ನು ಪಾವತಿಸಲಾಗದೆ, ತಮ್ಮ ಜೀವಮಾನದ ಸಂಗ್ರಹವಾದ ಲಕ್ಷಾಂತರ ರೂಪಾಯಿಯನ್ನು ಕಳೆದುಕೊಂಡು ಬೀದಿಗೆ ಬೀಳುವ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಮನೆಯ ಮಾಲಿಕರು ಈ ರೀತಿಯ ಬಾಡಿಗೆದಾರರನ್ನು ಈಗ ತಮ್ಮ ಮನೆಗಳಿಂದ ಹೊರದಬ್ಬುತ್ತಿದ್ದಾರೆ.
ಈ ರೀತಿ ಇಬ್ರಾಹಿಂ ಶೆರೀಫ್ ಕೋಟ್ಯಾಂತರ ರೂಪಾಯಿ ಸಂಗ್ರಹಿಸಿ ವ್ಯವಸ್ಥಿತ ರೀತಿಯಲ್ಲಿ ಕುಟುಂಬ ಸಮೇತ ಪರಾರಿಯಾಗಿರುತ್ತಾನೆ. ಲೀಸಿನ ದುಡ್ಡು ಕೊಟ್ಟು ವಂಚನೆಗೊಳಗಾದವರು ಡಿವೈಎಪ್ಐ ಮೊರೆ ಹೋಗಿದ್ದು ಇಂದು 38 ಕ್ಕೂ ಅಧಿಕ ಮಂದಿ ಪೊಲೀಸ್ ಕಮಿಷನರ್ ಸೀಮಂತ್ ಕುಮಾರ್ ಸಿಂಗ್ ಅವರಿಗೆ ದೂರು ನೀಡಿದ್ದಾರೆ.
ಡಿವೈಎಪ್ಐ ಜಿಲ್ಲಾ ಸಮಿತಿಯ ಮುಖಂಡರಾದ ಮುನೀರ್ ಕಾಟಿಪಳ್ಳ, ವಿ.ಕೆ ಇಮ್ತಿಯಾಜ್, ಯಾದವ್ ಶೆಟ್ಟಿ ಮೊದಲಾದವರು ಕಮಿಷನರ್ ಸೀಮಂತ್ ಕುಮಾರ್ ಸಿಂಗ್ ಅವರಿಗೆ ಮೌಖಿಕ ಹಾಗೂ ಲಿಖಿತ ದೂರು ನೀಡಿದ್ದಾರೆ.
Click this button or press Ctrl+G to toggle between Kannada and English