ಮಂಗಳೂರು: ದ.ಕ. ಜಿ. ಪಂ. ಸಭಾಂಗಣದಲ್ಲಿ ಜಿಲ್ಲಾ ತ್ತೈಮಾಸಿಕ ಕೆಡಿಪಿ ಸಭೆ ಗುರುವಾರ ಸಚಿವ ರಮಾನಾಥ ರೈ ಅವರ ಅಧ್ಯಕ್ಷತೆಯಲ್ಲಿ ಜರಗಿತು.
ಬಸವ ವಸತಿ ಯೋಜನೆ, ಅಂಬೇಡ್ಕರ್ ವಸತಿ ಯೋಜನೆ ಸೇರಿದಂತೆ ವಿವಿಧ ಯೋಜನೆಗಳಲ್ಲಿ ಪ್ರಗತಿ ತೀರಾ ಕಡಿಮೆಯಾಗಿದೆ. ಅಧಿಕಾರಿಗಳು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಿ ವಸತಿಗಳು ಬಡವರಿಗೆ ಸಕಾಲದಲ್ಲಿ ಲಭ್ಯವಾಗುವಂತೆ ನೋಡಿಕೊಳ್ಳಬೇಕು. ಇದರಲ್ಲಾಗುವ ಲೋಪಕ್ಕೆ ಅಧಿಕಾರಿಗಳೇ ಹೊಣೆಗಾರರು ಎಂದು ರಾಜ್ಯ ಅರಣ್ಯ, ಪರಿಸರ ಖಾತೆ ಮತ್ತು ದ. ಕ.ಜಿಲ್ಲಾ ಉಸ್ತುವಾರಿ ಸಚಿವಬಿ. ರಮಾನಾಥ ರೈ ಎಚ್ಚರಿಸಿದ್ದಾರೆ.
ರಾಜೀವ ಗಾಂಧಿ ಗ್ರಾಮೀಣ ವಸತಿ ನಿಗಮದ ಆಡಳಿತ ನಿರ್ದೇಶಕರ ಉಪಸ್ಥಿತಿಯಲ್ಲಿ ಸಭೆ ನಡೆಸಿ ಬಸವ ವಸತಿ ಯೋಜನೆಯಲ್ಲಿ ತಾಂತ್ರಿಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುಲಾಗುವುದು ಎಂದು ಅವರು ಹೇಳಿದರು.
ಬಹುಗ್ರಾಮ ಕುಡಿಯುವ ನೀರು ಯೋಜನೆ ಅನುಷ್ಠಾನದ ಪ್ರಗತಿ ಕೇಳಿದರೆ ಅಧಿಕಾರಿಗಳು ಕಳೆದ 3 ವರ್ಷಗಳಿಂದ ಬರೇ ಪಿಎಸ್‌ಆರ್, ಡಿಎಸ್‌ಆರ್ ಎಂದು ಹೇಳುತ್ತಿದ್ದಾರೆ ವಿನಹಃ ಕಾಮಗಾರಿ ಪ್ರಾರಂಭಿಸುವುದು ಕಾಣುತ್ತಿಲ್ಲ ಎಂದು ಸಚಿವರು ಅಸಮಾಧಾನ ವ್ಯಕ್ತಪಡಿಸಿದರು.
ದ. ಕ. ಜಿಲ್ಲೆಯಲ್ಲಿ ಕುಡಿಯುವ ನೀರು ಪೂರೈಕೆಗೆ ಅತ್ಯಂತ ಆವಶ್ಯವಾಗಿರುವ ಬಹುಗ್ರಾಮ ಯೋಜನೆಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಅನುಷ್ಠಾನಗೊಳಿಸುವ ಬಗ್ಗೆ ಅಧಿಕಾರಿಗಳು ಮುತುವರ್ಜಿ ವಹಿಸಬೇಕು. ಬಂಟ್ವಾಳದ 6 ಬಹುಗ್ರಾಮ ಯೋಜನೆಗಳು ಅನುಷ್ಠಾನ ಹಂತದಲ್ಲಿವೆ. ಜಿಲ್ಲೆಯಲ್ಲಿ 324 ಕೋ. ರೂ. ವೆಚ್ಚದಲ್ಲಿ 20 ಯೋಜನೆಗಳಿವೆ ಎಂದು ಜಿ. ಪಂ. ಎಂಜಿನಿಯರಿಂಗ್ ಇಲಾಖೆ ಅಧಿಕಾರಿಗಳು ತಿಳಿಸಿದರು.
ಜಿಲ್ಲೆಯಲ್ಲಿ ಎನ್‌ಪಿಆರ್, ಆಧಾರ್ ಕಾರ್ಡ್ ಜನರಲ್ಲಿ ಗೊಂದಲ ನಿರ್ಮಿಸಿದೆ. ಈ ಬಗ್ಗೆ ಅಧಿಕಾರಿಗಳು ಜನರಿಗೆ ಸರಿಯಾದ ಮಾಹಿತಿ ನೀಡಬೇಕು ಎಂದು ಸಚಿವರು ಸೂಚಿಸಿದರು.
ಈ ಬಗ್ಗೆ ವಿವರಣೆ ನೀಡಿದ ಅಪರ ಜಿಲ್ಲಾಧಿಕಾರಿ ದಯಾನಂದ ಅವರು, ಎನ್‌ಪಿಆರ್ ಮತ್ತು ಆಧಾರ್ ಎರಡು ಬೇರೆಬೇರೆ ಸಾಫ್ಟ್ವೇರ್‌ಗಳು. ಗ್ರಾಮೀಣ ಪ್ರದೇಶದಲ್ಲಿ ಪ್ರಸ್ತುತ ಎನ್‌ಪಿಆರ್ ಪ್ರಕ್ರಿಯೆ ನಡೆಯುತ್ತಿದೆ. ಆಧಾರ್ ಕಾರ್ಡ್ ಸಾಫ್ಟ್ವೇರ್‌ನಲ್ಲಿ ಎನ್‌ಪಿಆರ್ ಮಾಡಿಸಿಕೊಳ್ಳಲು ಆಗುವುದಿಲ್ಲ. ಈಗಾಗಲೇ ಆಧಾರ್ ಕಾರ್ಡ್ ಮಾಡಿಸಿರುವರು ಮತ್ತೆ ಎನ್‌ಪಿಆರ್ ಮಾಡಿಸಬೇಕಾಗುತ್ತದೆ. 2011ರ ಜನಗಣತಿಯಂತೆ ಜಿಲ್ಲೆಯ ಜನಸಂಖ್ಯೆ 20 ಲಕ್ಷ ಆಗಿದ್ದು, ಇದರಲ್ಲಿ 5 ವರ್ಷಕ್ಕಿಂತ ಮೇಲ್ಪಟ್ಟ ಸುಮಾರು 18 ಲಕ್ಷ ಮಂದಿ ಎನ್‌ಪಿಆರ್‌ಗೆ ಆರ್ಹರಾಗುತ್ತಾರೆ. ಈ ವರೆಗೆ 5,63,200 ಮಂದಿ ಎನ್‌ಪಿಆರ್ ಪ್ರಕ್ರಿಯೆ ಮುಗಿಸಿದ್ದಾರೆ ಎಂದು ಅವರು ವಿವರಿಸಿದರು.
ಸರಕಾರದ ಯೋಜನೆಗಳಿಗೆ ಆಧಾರ್ ಕಾರ್ಡ್ ಕಡ್ಡಾಯ ಮಾಡುವುದನ್ನು ಕನಿಷ್ಠ 6 ತಿಂಗಳು ಮುಂದೂಡಬೇಕು ಎಂದು ಕೋರಿ ಸರಕಾರಕ್ಕೆ ಪತ್ರಬರೆಯಲಾಗಿದೆ ಎಂದು ಅವರು ಹೇಳಿದರು.
ದ. ಕ. ಜಿಲ್ಲೆಯಲ್ಲಿ ಈ ಬಾರಿ ಮಳೆ ಹಾಗೂ ಸಿಡಿಲು ಸೇರಿದಂತೆ ಪ್ರಕೃತಿ ವಿಕೋಪದಿಂದ 17 ಮಂದಿ ಮೃತಪಟ್ಟಿದ್ದು, 16 ಜಾನುವಾರುಗಳು ಸಾವನ್ನಪ್ಪಿವೆ. 595 ಮನೆಗಳಿಗೆ ಹಾನಿಯಾಗಿವೆ. ಪರಿಹಾರ ವಿತರಣೆ ಕಾರ್ಯ ನಡೆಯುತ್ತಿದೆ ಎಂದು ಅಪರ ಜಿಲ್ಲಾಧಿಕಾರಿ ವಿವರಿಸಿದರು.
ಪ್ರಕೃತಿ ವಿಕೋಪದಿಂದ ಆಗಿರುವ ಹಾನಿಗೆ ಸಮರ್ಪಕ ಪರಿಹಾರ ವಿತರಣೆ ಆಗಬೇಕು ಹಾಗೂ ಇದಕ್ಕೆ ಹೆಚ್ಚುವರಿ ಅನುದಾನ ನೀಡಲು ಸರಕಾರಕ್ಕೆ ಕೋರಿಕೆ ಸಲ್ಲಿಸಬೇಕು ಎಂದು ಶಾಸಕ ಜೆ.ಆರ್. ಲೋಬೋ ಆಗ್ರಹಿಸಿದರು.
ಮಳೆ ಹಾಗೂ ನೆರೆಯಿಂದ ಕೃಷಿಗೂ ಸಾಕಷ್ಟು ಹಾನಿಯಾಗಿದ್ದು, ಪರಿಹಾರ ವಿತರಿಸಬೇಕು ಎಂದು ಶಾಸಕ ಮೊದೀನ್ ಬಾವಾ ಒತ್ತಾಯಿಸಿದರು. ಗ್ರಾಮೀಣ ರಸ್ತೆಗಳಿಗೆ ಹೆಚ್ಚಿನ ಅನುದಾನ ಒದಗಿಸುವಂತೆ ಜಿ.ಪಂ. ಸಿಇಒ ಡಾ| ಕೆ.ಎನ್. ವಿಜಯಪ್ರಕಾಶ್ ಮನವಿ ಮಾಡಿದರು.
ಸಹಕಾರಿ ಸಂಘವೊಂದಕ್ಕೆ ಹೋಗಿ ಪರಿಶೀಲಿಸಿದಾಗ ಡಿಎಪಿ ರಸಗೊಬ್ಬರ 50 ಕಿಲೋ ಚೀಲದಲ್ಲಿ ನಮೂದಿತ ಪ್ರಮಾಣಕ್ಕಿಂತ ಕಡಿಮೆ ರಸಗೊಬ್ಬರ ಇರುವುದು ಪತ್ತೆಯಾಗಿದೆ ಎಂದು ಬಿ.ಎ. ಮೊದೀನ್ ಬಾವ ವಿವರಿಸಿದರು.
ಸಹಕಾರಿ ಸಂಘಗಳಿಗೆ ಸರಬರಾಜು ಆದ ಚೀಲಗಳಲ್ಲಿ ಈ ಲೋಪ ಕಂಡುಬಂದಿದೆ. ಆದುದರಿಂದ ಗೊಬ್ಬರ ಖರೀದಿಸುವ ಸಂದರ್ಭ ತೂಕ ಮಾಡಿಸಿ ತೆಗೆದುಕೊಳ್ಳುವಂತೆ ರೈತರಿಗೆ ಮಾಹಿತಿ ನೀಡಲಾಗಿದೆ ಎಂದು ಕೃಷಿ ಇಲಾಖೆ ಅಧಿಕಾರಿ ಹೇಳಿದರು.
12 ಕೋ. ರೂ. ವೆಚ್ಚದ ತಣ್ಣೀರುಬಾವಿ ತೂಗುಸೇತುವೆ ಮಂಜೂರುಗೊಂಡು 3 ವರ್ಷಗಳಾಗಿವೆ. ಬಿಡುಗಡೆಯಾಗಿದ್ದು ಕೇವಲ 1 ಕೋ. ರೂ. ಮಾತ್ರ. ನಿಯಮಗಳ ಪ್ರಕಾರ ಟೆಂಡರ್ ಕರೆಯಬೇಕಾದರೆ ಯೋಜನಾ ಮೊತ್ತದ ಮೂರನೇ ಒಂದಂಶ ಬಿಡುಗಡೆಯಾಗಬೇಕು. ಆದರೂ ಟೆಂಡರ್ ಕರೆದು ಕೆಲಸ ಪ್ರಾರಂಭವಾಗಿದೆ. ಕಾಮಗಾರಿ ಪೂರ್ಣಗೊಳಿಸಲು 12 ತಿಂಗಳ ಅವಧಿ ನೀಡಲಾಗಿದೆ. ಮೂರನೇ ಒಂದಂಶ ಮೊತ್ತ ಬಿಡುಗಡೆಯಾಗದೆ ಹೇಗೆ ಟೆಂಡರ್ ಕರೆಯಲಾಗಿದೆ. ಈ ಬಗ್ಗೆ ಸಮಗ್ರ ಪರಿಶೀಲನೆ ನಡೆಸಬೇಕು ಎಂದು ಜೆ.ಆರ್. ಲೋಬೊ ಒತ್ತಾಯಿಸಿದರು.
ಈ ಬಗ್ಗೆ ಪರಿಶೀಲನೆ ನಡೆಸುವಂತೆ ಜಿಲ್ಲಾಧಿಕಾರಿ ಎನ್. ಪ್ರಕಾಶ್ ಅವರಿಗೆ ಸಚಿವರು ಸೂಚಿಸಿದರು.
ಜಿ. ಪಂ. ಅಧ್ಯಕ್ಷ ಕೊರಗಪ್ಪ ನಾಯ್ಕ, ಸ್ಥಾಯಿ ಸಮಿತಿ ಅಧ್ಯಕ್ಷೆ ಜಯಶ್ರೀ, ಎಸ್‌ಪಿ ಅಭಿಷೇಕ್ ಗೋಯಲ್, ಪೊಲೀಸ್ ಆಯುಕ್ತ ಮನೀಷ್ ಕರ್ಬಿಕರ್, ಮನಪಾ ಆಯುಕ್ತ ಅಜಿತ್ ಕುಮಾರ್ ಹೆಗ್ಡೆ ಮೊದಲಾದವರು ಉಪಸ್ಥಿತರಿದ್ದರು.
Click this button or press Ctrl+G to toggle between Kannada and English