ಬಂಟ್ವಾಳ : ಸುಪರ್ ಮಾರ್ಕೆಟ್ ಉದ್ಯೋಗಿಯೊಬ್ಬ ತನ್ನ ತಾಯಿ ಹಾಗೂ ಪತ್ನಿಯನ್ನು ಬರ್ಬರವಾಗಿ ಕತ್ತಿಯಿಂದ ಕಡಿದು ಕೊಲೆಗೆ ಯತ್ನಿಸಿ ಬಳಿಕ ತಾನು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಾಣಿಯ ಕೊಡಾಜೆ ಪಂತ್ತಡ್ಕ ಎಂಬಲ್ಲಿ ಗುರುವಾರ ರಾತ್ರಿ ನಡೆದಿದೆ.
ಕೊಡಾಜೆ ಪಂತಡ್ಕ ನಿವಾಸಿ ಅಬ್ದುಲ್ ಹಮೀದ್ ಎಂಬಾತನೇ ಈ ಕೃತ್ಯ ವೆಸಗಿ, ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಕತ್ತಿಯಿಂದ ಹಲ್ಲೆಗೀಡಾಗಿ ತೀವ್ರ ಗಾಯಗಳಾಗಿರುವ ಹಮೀದ್ ಪತ್ನಿ ಅಸ್ಮಾ(28) ಹಾಗೂ ತಾಯಿ ಮರಿಯಮ್ಮ(55) ರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದು ಬಂದಿದೆ.
ಆತ್ಮಹತ್ಯೆ ಮಾಡಿದ ಹಮೀದ್ ಮಂಗಳೂರಿನ ಸುಪರ್ ಮಾರ್ಕೆಟ್ ವೊಂದರಲ್ಲಿ ಕೆಲಸ ಮಾಡುತ್ತಿದ್ದ. ಈ ಹಿಂದೆ ಈತ ವೃತ್ತಿಯಲ್ಲಿ ಮುಸ್ಲಿಂ ಧರ್ಮದ ಮೊಯ್ಲರ್ ಆಗಿದ್ದ. ಬಳಿಕ ಮಂಗಳೂರಿನಲ್ಲಿ ಕೆಲಸಕ್ಕೆ ಸೇರಿದ್ದ ಎನ್ನಲಾಗಿದೆ. ಒಂದು ವಾರಗಳ ಬಳಿಕ ಅಂದರೆ ನಿನ್ನೆ ಸಂಜೆ ಹೊತ್ತಿಗೆ ಮಂಗಳೂರಿನಿಂದ ಕೆಲಸ ಮುಗಿಸಿಕೊಂಡು ತನ್ನ ಮನೆಗೆ ಬಂದ್ದಿದ್ದ. ಮನೆಗೆ ಬಂದದ್ದೇ ತಡ ತನ್ನ ಹೆಂಡತಿಯೊಂದಿಗೆ ಕ್ಷುಲ್ಲಕ ವಿಚಾರಕ್ಕೆ ಜಗಳವಾಡಲಾಂಭಿಸಿದ್ದಾನೆ.
ಗಂಡ ಹೆಂಡಿರ ಜಗಳ ತಾರಕಕ್ಕೇರಿ ಬಳಿಕ ಆತ ತನ್ನ ಪತ್ನಿಯನ್ನು ಕತ್ತಿಯಿಂದ ಕಡಿದಿದ್ದಾನೆ. ಅದನ್ನು ತಡೆಯಲು ಬಂದ ತನ್ನ ತಾಯಿ ಮರಿಯಮ್ಮ ಅವರ ತಲೆಗೆ ಬರ್ಬರವಾಗಿ ಕಡಿದಿದ್ದಾನೆ. ಇದರ ಗಾಬರಿಗೆ ಆತನ ಅಣ್ಣನ ಪತ್ನಿ ಹೊರಗಡೆ ಬೊಬ್ಬೆ ಹಾಕಿಕೊಂಡು ಓಡಿದ್ದಾರೆ. ಇಬ್ಬರು ಮಹಿಳೆಯರು ತೀವ್ರ ಗಾಯದ ಪರಿಣಾಮ ಪ್ರಜ್ಞಾಹೀನರಾಗಿ ನೆಲಕ್ಕುರುಳಿ ಬಿದ್ದಿದ್ದರು. ಬಳಿಕ ಆತ ಸ್ವಲ್ಪ ಹೊತ್ತಲ್ಲಿ ಮನೆಯ ಕೋಣೆಯೊಂದರಲ್ಲಿ ಸೀರೆಯಿಂದ ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ತಿಳಿದು ಬಂದಿದೆ.
ಆತನ ಇಬ್ಬರು ಸಹೋದರರು ಕೊಡಾಜೆ ಸಮೀಪದ ಮಸೀದಿಗೆ ತೆರಳಿದ್ದ ಹಿನ್ನೆಲೆಯಲ್ಲಿ ಘಟನೆ ವಿಷಯ ತಿಳಿದ ಸ್ಥಳೀಯ ನಿವಾಸಿ ಉಮ್ಮರ್ ಅವರು ಮಸೀದಿಗೆ ಹೋಗಿ ಮಸೀದಿಯಲ್ಲಿ ಅರ್ಧ ನಮಾಜ್ ನಲ್ಲಿದ್ದ ಅವರಿಗೆ ಮಾಹಿತಿ ನೀಡಿದರು. ಬಳಿಕ ಮಸೀದಿಯಿಂದ ನಾಲ್ವರು ಮನೆಗೆ ಬಂದಿದ್ದಾರೆ. ಅವರೆಲ್ಲ ಮನೆ ಪ್ರವೇಶಿಸುತ್ತಿದ್ದಂತೆ ಇಬ್ಬರು ಮಹಿಳೆಯರು ಮೈತುಂಬ ರಕ್ತದಲ್ಲಿ ಬಾಗಿಲು ಮುಂಭಾಗ ಬಿದ್ದಿರುವುದನ್ನು ಗಮನಿಸಿದರು. ತಕ್ಷಣ ಗಾಯಗೊಂಡ ಈರ್ವರನ್ನು ಸ್ಥಳೀಯರ ನೆರವಿನೊಂದಿಗೆ ಆಸ್ಪತ್ರೆಗೆ ದಾಖಲಿಸಲಾಗಿದೆ.
Click this button or press Ctrl+G to toggle between Kannada and English