ಉಜಿರೆ: ಇಂದಿನ ಯುವಜನತೆ ಹಾಗೂ ಮುಂದಿನ ತಲೆಮಾರಿಗೆ ಯಕ್ಷಗಾನದ ಸೊಗಡನ್ನು ಪರಿಚಯಿಸುವ ದೃಷ್ಟಿಯಿಂದ ಕಾಲಮಿತಿಯ ಯಕ್ಷಗಾನ ಪ್ರದರ್ಶನ ಅಪೇಕ್ಷಣಿಯವಾಗಿದೆ. ಇದರಲ್ಲಿ ಕೆಲವು ಸಣ್ಣಪುಟ್ಟ ಸಮಸ್ಯೆಗಳಿದ್ದರೂ ಅದನ್ನು ಸುಲಭದಲ್ಲಿ ಪರಿಹರಿಸಬಹುದು ಎಂದು ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ ಅಧ್ಯಕ್ಷ ಪ್ರೊ. ಎಂ. ಎಲ್. ಸಾಮಗ ಹೇಳಿದರು.
ಧರ್ಮಸ್ಥಳದಲ್ಲಿ ಮಂಗಳವಾರ ಆಯೋಜಿಸಲಾದ ಯಕ್ಷಗಾನ ಪ್ರದರ್ಶನದ ಬಗ್ಯೆ ಚಿಂತನಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಬದಲಾದ ಆಧುನಿಕ ಜೀವನ ಶೈಲಿ ಹಾಗೂ ಕಾಲಧರ್ಮಕ್ಕೆ ಅನುಗುಣವಾಗಿ ಯಕ್ಷಗಾನ ಪ್ರದರ್ಶನದಲ್ಲಿ ಕೆಲವು ಆಂತರಿಕ ಮತ್ತು ಬಾಹ್ಯ ಬದಲಾವಣೆಗಳನ್ನು ಮಾಡಿಕೊಂಡು ಮಹಿಳೆಯರು, ಮಕ್ಕಳು ಮತ್ತು ವಿದ್ಯಾರ್ಥಿಗಳು ಯಕ್ಷಗಾನ ಕಲೆಯ ಸೊಗಡನ್ನು ಆಸ್ವಾದಿಸುವಂತೆ ಮಾಡಬೇಕು. ಯಕ್ಷಗಾನದ ಮೂಲ ಸತ್ವ ಮತ್ತು ತತ್ವವನ್ನು ಉಳಿಸಿಕೊಳ್ಳಬೇಕು. ಇದಕ್ಕಾಗಿ ನಮ್ಮಲ್ಲಿ ಮಾನಸಿಕ ಸಿದ್ಧತೆ ಅಗತ್ಯ ಎಂದು ಅವರು ಕಿವಿಮಾತು ಹೇಳಿದರು.
ಪರಿವರ್ತನೆ ಅಗತ್ಯ ಮತ್ತು ಅನಿವಾರ್ಯ: ಡಾ. ಹೆಗ್ಗಡೆ
ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಮಾತನಾಡಿ ಬದಲಾದ ಕಾಲಧರ್ಮಕ್ಕೆ ಅನುಗುಣವಾಗಿ ಇಂದು ಯಕ್ಷಗಾನ ಪ್ರದರ್ಶನದಲ್ಲಿ ಸೂಕ್ತ ಪರಿವರ್ತನೆ ಅಗತ್ಯ ಮತ್ತು ಅನಿವಾರ್ಯವಾಗಿದೆ. ಈ ಬಗ್ಯೆ ಮುಕ್ತ ಮನಸ್ಸಿನಿಂದ ಚರ್ಚಿಸಿ ಅಭಿಪ್ರಾಯ ಸಂಗ್ರಹಕ್ಕಾಗಿ ಚಿಂತನಾ ಸಭೆ ಆಯೋಜಿಸಲಾಗಿದೆ. ವಿವಿಧ ಮೇ:ಳಗಳ ಯಜಮಾನರುಗಳು, ವಿದ್ವಾಂಸರು, ಚಿಂತಕರು, ಖ್ಯಾತ ಯಕ್ಷಗಾನ ಕಲಾವಿದರು ಹಾಗೂ ಪ್ರೇಕ್ಷಕರು ಸಭೆಯಲ್ಲಿ ಭಾಗವಹಿಸಿ ಉತ್ತಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯವನ್ನು ಮುಕ್ತ ಮನಸ್ಸಿನಿಂದ ನೀಡಿರುವುದು ತನಗೆ ಹೆಚ್ಚಿನ ಸಂತೋಷವನ್ನುಂಟುಮಾಡಿದೆ.
ಇದು ಮೊದಲ ಹಂತದ ಸಭೆಯಾಗಿದ್ದು ಇನ್ನೊಮ್ಮೆ ಎರಡನೇ ಹಂತದಲ್ಲಿ ಎಲ್ಲರ ಸಭೆ ಕರೆದು ಕಾಲಮಿತಿ ಯಕ್ಷಗಾನ ಪ್ರದರ್ಶನದ ಬಗ್ಯೆ ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.
ಖ್ಯಾತ ಯಕ್ಷಗಾನ ಕಲಾವಿದರಾದ ಕುಂಬ್ಳೆ ಸುಂದರರಾವ್, ಕೆ. ಗೋವಿಂದ ಭಟ್, ಉಜಿರೆ ಅಶೋಕ ಭಟ್, ಉಬರಡ್ಕ ಉಮೇಶ ಶೆಟ್ಟಿ, ಡಾ. ಎಂ. ಪ್ರಭಾಕರ ಜೋಶಿ ತಮ್ಮ ಅಭಿಪ್ರಾಯ ಮಂಡಿಸಿದರು. ಕಟೀಲು ಅಸ್ರಣ್ಣರು, ಕಿಶನ್ ಹೆಗ್ಡೆ, ಕರುಣಾಕರ ಶೆಟ್ಟಿ, ಪ್ರೊ. ಪ್ರಭಾಕರ ಶಿಶಿಲ, ಡಾ. ಚಂದ್ರಶೇಖರ ದಾಮ್ಲೆ ಮೊದಲಾದವರು ಸೂಕ್ತ ಸಲಹೆ – ಸೂಚನೆ ನೀಡಿದರು.
ಧರ್ಮಸ್ಥಳ ಮೇಳದ ಸಂಚಾಲಕ ಡಿ. ಹರ್ಷೇಂದ್ರ ಕುಮಾರ್ ಉಪಸ್ಥಿತರಿದ್ದರು.
Click this button or press Ctrl+G to toggle between Kannada and English