ಮಂಗಳೂರಿನಲ್ಲಿ ಎಲ್ಲೆಲ್ಲೂ ದೀಪಗಳ ತೋಪು

3:57 PM, Friday, November 5th, 2010
Share
1 Star2 Stars3 Stars4 Stars5 Stars
(No Ratings Yet)
Loading...

ದೀಪಗಳ ತೋಪುಮಂಗಳೂರು: ದ.ಕ ಜಿಲ್ಲೆಯ ನಾನಾ ಭಾಗಗಳಲ್ಲಿ ಈಚೆಗೆ ನಡೆದ ದಸರಾ-ನವರಾತ್ರಿ ಹಬ್ಬಗಳ ಬಗ್ಗೆ ನೀವು ತಿಳಿದಿರುವಿರಿ. ಈಗ ದೀಪಾವಳಿ ಮೆಲುಗಾಲಿನಲ್ಲಿ ಈ ಕೃಷ್ಣಪಕ್ಷದಲ್ಲಿ ಕಾಲಿಟ್ಟಿದೆ (ನವೆಂಬರ್ 5,6,7). ಈ ಮೂರು ದಿನಗಳು ರಜಾದಿನಗಳಾಗಿ ಪರಿಣಮಿಸಿದರೆ ಆಶ್ಚರ್ಯವಿಲ್ಲ. ಗುರುವಾರ ಸಂಜೆಯೇ ಮರುದಿನ ಬೆಳಗ್ಗಿನ ಎಣ್ಣೆ ಸ್ನಾನಕ್ಕಾಗಿ ಬಾವಿಯಿಂದ ನೀರು ತುಂಬುವ ಸಡಗರ ಆಗಿಹೋಗಿದೆ. ಹಂಡೆಗೆ ಹೂವಿನ ಅಲಂಕಾರ, ಶುಭಾಶಯದ ಬಿಳಿ, ಕೆಂಪು ಗೆರೆಗಳು ಮುದ್ರೆಗಳು ಬಿದ್ದಿವೆ. ಹುಡುಗರು ನೀರು ತುಂಬುವಲ್ಲಿ ಜಾಗಟೆ ಬಾರಿಸಿದ್ದೂ ಹೌದು.

ದೀಪಗಳ ತೋಪುಶುಕ್ರವಾರ ಬೆಳಗ್ಗಿನ ಉಷೆಯಿನ್ನೂ ಸೂರ್ಯನ ಸ್ವಾಗತಕ್ಕೆ ಕಾದಿರುವಾಗ ಸಂಪ್ರದಾಯವಿರುವ ಮನೆಗಳಲ್ಲಿ ಮಕ್ಕಳನ್ನೆಬ್ಬಿಸಿ, ಮೈಗೆ ಹಳದಿ-ತೆಂಗಿನೆಣ್ಣೆ ಹಚ್ಚಿ ಬಿಸಿನೀರಿನ ಸ್ನಾನ ಮಾಡಿಸುವ ರೂಢಿ ಈಗಲೂ ಇದೆ. ಸೂರ್ಯ ಎದ್ದು ಬಂದರೂ ಮಲಗುವವರಿದ್ದಾರೆ. ಅವರಿಗೆ ರಾತ್ರಿ ಜಾಗರಣ ಪಟಾಕಿ ಹಾರಿಸಿ ದಣಿವು ಉಂಟಾಗಿದ್ದು ಬೆಳಗ್ಗಿನ ಕಾಫಿ ಬೇಡವಾಗಿದೆಯೆಂದೇ ಲೆಕ್ಕ. ಮನೆಯೊಡತಿ ಎಲ್ಲರ ನಂತರ ಸ್ನಾನಕ್ಕಿಳಿಯುತ್ತಾಳೆ, ಆದರೆ ಕೆಲಸ ಜಾಸ್ತಿ.
ಹೊಸ ಬಟ್ಟೆ ತೊಟ್ಟ ಮಕ್ಖಳು ಸಂಭ್ರಮದಿಂದ ಹತ್ತಿರದ ದೇವಸ್ಥಾನಗಳಿಗೆ ಧಾವಿಸುವುದುಂಟು. ಮನೆಯಜಮಾನ ಎದ್ದು ಆಕಳಿಸುತ್ತಾ ಹಲ್ಲುಜ್ಜಿ, ಎಣ್ಣೆಸ್ನಾಸ ಮುಗಿಸಿ, ದೇವರಿಗೆ ಮನೆಯಲ್ಲೇ ಕೈಮುಗಿದು, ತಿಂಡಿ-ಕಾಫಿಗೆ ಮನೆಯಾಕೆಯನ್ನು ಓಲೈಸಿದರೆ ಅದು ತಪ್ಪಲ್ಲ. ಎಲ್ಲೆಲ್ಲೂ ಸಂಭ್ರಮ, ತಳಿರು,ತೋರಣ, ಮನೆಬಾಗಿಲಲ್ಲಿ-ಅಂಗಳದಲ್ಲಿ-ಬೀದಿಯಲ್ಲಿ-ಗೋಡೆಗಳ ಮೇಲೆ ಹಣತೆ ದೀಪಗಳ ಸಾಲುಗಳು ಕಂಗೊಳಿಸುತ್ತವೆ. ಪಟಾಕಿಗಳ ಸದ್ದು ಗುರುವಾರ ರಾತ್ರಿ ಪ್ರಾರಂಭವಾದರೂ, ಶುಕ್ರವಾರ ಬೆಳಗ್ಗೆ ಕೇಳಿಸದೆ ಇರುವಂತಿಲ್ಲ. ಸಿಹಿತಿಂಡಿಗಳ ಪೆಟ್ಟಿಗೆ ಬಿಚ್ಚುವ, ಆಸೆಪಡುವ, ಮೆಲ್ಲುವ ಪರಿ ಇದ್ದದ್ದೇ.

ದೀಪಗಳ ತೋಪುಮಂಗಳೂರಿನಲ್ಲಿ ರಾತ್ರಿ ಹನ್ನೊಂದು ಗಂಟೆಯನಂತರ ಬಿರಿಯುವ ಪಟಾಕಿಗಳ ಸದ್ದು ಇಳಿದು, ಆಕಾಶಕ್ಕೆ ನೆಗೆಯುವ ಮತ್ತು ನೆಲದಲ್ಲೇ ಸಿಡಿಯುವ ಹೂ ಜ್ಯಾಲರಿಗಳನ್ನು ನಗರ ಪೋಲೀಸರು ಅದುಮಿಲ್ಲ. ಸದ್ದು ಮಾತ್ರ 80 ಡೆಸಿಬಲ್ ಮೀರಬಾರದು, ಕಣ್ಣು ಕಿವಿಗಳಿಗೆ ನೋವಾಗಬಾರದು ಎನ್ನುತ್ತದೆ ಕಾಯಿದೆ, ಅತ್ಯುನ್ನತ ನ್ಯಾಯಾಲಯದ ಅಣತಿ.
ಪಣತಿಗಳಿಗೆ ಲೆಕ್ಕವಿಲ್ಲ. ಇಡೀ ರಾತ್ರಿ ಉರಿದರೂ ಆದೀತು. ಇನ್ನು ಗೂಡು ದೀಪಗಳ ವೈಭವವೋ, ಕೇಳಬೇಡಿ. ನೋಡುತ್ತಾ ತಿರುಗಾಡಿ ಅವುಗಳ ಸ್ಪರ್ಧೆ ಕೌತುಕ ಪಡುವಂತಿದೆ. ಈ ಗೂಡು ದೀಪಗಳು ಎಲ್ಲೆಲ್ಲೂ ನೇತಾಡಿಕೊಂಡಿರುವುದು ಕಂಡುಬರುತ್ತದೆ. ದೀಪಗಳ ಸೊಗಸಿನ ಹಬ್ಬಕ್ಕೆ ಯಾರೂಬೇಡವೆನ್ನುವುದಿಲ್ಲ. ಲಕ್ಷ ದೀಪಗಳಿದ್ದರೂ ಸೈ. ಬೃಹತ್ ಗೂಡುದೀಪಗಳು ಗಾಳಿಯಲ್ಲಿ ತೂಗಾಡುತ್ತದೆ. ಅವುಗಳ ವೈಖರಿ, ತಾಜಾತನ, ಬಣ್ಣಗಳ ಸೌಷ್ಠವಕ್ಕೆ ಎಲ್ಲರೂ ಮಾರುಹೋಗುತ್ತಾರೆ.

ದೀಪಗಳ ತೋಪುಪೊಲೀಸರ ಮಹಾಧಿಕಾರಿ (ಮಂಗಳೂರು) ಅವರೇ ಪಂಥಕ್ಕೆ ಆಹ್ವಾನ ಮಾಡಿ ಗೂಡುದೀಪಗಳ ಸರಮಾಲೆ ಊರಿಡೀ ಹಾಕಿಸಿದ್ದಾರೆ. ಸೀಮಂತಕುಮಾರರ ಶ್ರೀಮಂತಿಕೆಯನ್ನು ಮೆಚ್ಚಬೇಕು. ಹಾಗಾದರೆ ಪೊಲೀಸ್ ಕಾಲೊನಿಯ ತುಂಬಾ ಮನೆಮನೆಗಳಲ್ಲಿ ಗೂಡುದೀಪಗಳ ಕಾವಲು ರಾತ್ರಿಯಿಡೀ ಇರಬಹುದೇ? ನಿಜ. ಅವರೂ ಮುಂದೆ ಹೋಗಿದ್ದಾರೆಂದು ಮ.ನ.ಪಾ (ಲೇಡಿ) ಮೇಯರ್ ರಜನಿ ದುಗ್ಗಣ್ಣ ಸುಮ್ಮಗಿರುವಂತಿಲ್ಲ. ರಜನಿ ಅಂದರೆ ಕತ್ತಲು, ರಜನಿಕಾಂತ ಅಂದರೆ ಚಂದ್ರ, ಆದರೆ ಈಗ ಅಮಾವಾಸ್ಯೆಯ ಸರದಿ. ಭಾನುವಾರದ ಬಳಿಕ ಚಂದ್ರನ ಗೆರೆಯ ಬೆಳಕು ವೃದ್ಧಿಸುವುದು. ಮಾತೀಗ ಕತ್ತಲಿನದು. ಕತ್ತಲೆ ಬೆಳಕಿನ ಸ್ಪರ್ಧೆಯದು. ಗೂಡುದೀಪಗಳ ಚೆಲುವಿನ ಚಿತ್ತಾರದ ನಿಗಿನಿಗಿ ಹೊಳಪಿನದು. ಎಲ್ಲರೂ ಸೇರಿ ದೀಪಗಳ ಉತ್ಸವ ಮನೆಮನೆಗಳಲ್ಲಿ, ಬೀದಿಬೀದಿಗಳಲ್ಲಿ, ವಸತಿ ಸಮುಚ್ಚಯಗಳಲ್ಲಿ ಮಹಾನಗರ ಪಾಳಿಕೆಯ ವಿಸ್ತೀರ್ಣಗಳಲ್ಲಿ ಬಿಸಿಬಿಸಿಯಾಗಿ, ಕಸಿವಿಸಿಯಿಲ್ಲದೆ, ಮುಸಿಮುಸಿ ನಗುತ್ತಾ, ಸದ್ದಿನ ಪ್ರವಾಹಗಳಲ್ಲಿ ತೇಲಿಹೋಗದೆ, ಆಚರಿಸೋಣ, ಬನ್ನಿ. ಬಡವರೂ ಇದ್ದಾರೆ. ಅವರಿಗೂ ದೀಪಾವಳಿಯ ಸಂದೇಶ ತಲುಪಬೇಕು. ದೀಪವೇ ರೂಪಿತವಾದ ಜ್ಞಾನ, ಅರಿವು, ಆನಂದ.

ಲೇ: ಪ್ರೇಮಾಂಶು ರಾಯ, ಮಂಗಳೂರು

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English