ಮಂಗಳೂರು: ಪಡೀಲ್ ಹೋಂ ಸ್ಟೇ ದಾಳಿ ಪ್ರಕರಣಕ್ಕೆ 1 ವರ್ಷವಾಗಿದ್ದು, 2012 ಜುಲೈ 28 ರಂದು ಶನಿವಾರ ಮಧ್ಯಾಹ್ನ ನೂರಾರು ಹಿಂದೂ ಸಂಘಟನೆಯ ಕಾರ್ಯಕರ್ತರು ದಾಳಿ ಮಾಡಿ ಅಲ್ಲಿ ಬರ್ತ್‌ಡೇ ಪಾರ್ಟಿಯಲ್ಲಿ ನಿರತರಾಗಿದ್ದವರ ಮೇಲೆ ಹಲ್ಲೆ ನಡೆಸಿದ್ದರು.
ಪ್ರಕರಣದಲ್ಲಿ 44 ಮಂದಿ ಆರೋಪಿಗಳ ಪೈಕಿ 38 ಮಂದಿಯನ್ನು ಬಂಧಿಸಲಾಗಿದ್ದು, 6 ಮಂದಿ ಇನ್ನೂ ತಲೆ ಮರೆಸಿಕೊಂಡಿದ್ದಾರೆ. ಬಂಧಿತ 38 ಮಂದಿಯಲ್ಲಿ ಮೂವರನ್ನು ಹೊರತು ಪಡಿಸಿ ಉಳಿದ 35 ಮಂದಿ ಜಾಮೀನಿನಲ್ಲಿ ಬಿಡುಗಡೆ ಹೊಂದಿದ್ದಾರೆ.
ಇದೇ ಜು. 21 ರಂದು ಮೂಡಬಿದ್ರೆಯಲ್ಲಿ ಬಂಧಿತನಾಗಿರುವ ಮನೋಜ್ ಮತ್ತು ಪ್ರಮುಖ ಆರೋಪಿಗಳಾದ ಸುಭಾಸ್ ಪಡೀಲ್ ಮತ್ತು ಗಣೇಶ್ ಯಾನೆ ಮುನ್ನಾ, ಮಾತ್ರ ಈಗ ನ್ಯಾಯಾಂಗ ಬಂಧನದಲ್ಲಿದ್ದಾರೆ. 17 ಮಂದಿ ಆರೋಪಿಗಳಿಗೆ ಜು. 25 ರಂದು ಒಂದೇ ದಿನ ಜಾಮೀನು ಮಂಜೂರಾಗಿತ್ತು.
ವಿಜಯ ಕುಮಾರ್ ಮತ್ತು ಅವರ ಸ್ನೇಹಿತ ಗುರುದತ್ತ್ ಸಹಿತ 5 ಮಂದಿ ವಿದ್ಯಾರ್ಥಿಗಳು ಮತ್ತು 8 ಮಂದಿ ವಿದ್ಯಾರ್ಥಿನಿಯರ ಸಹಿತ 13 ಮಂದಿ ವಿದ್ಯಾರ್ಥಿನಿಯೋರ್ವಳ ಬರ್ತ್‌ಡೇ ಪಾರ್ಟಿ ಅಲ್ಲಿ ಆಯೋಜಿಸಲಾಗಿತ್ತು. ಎಲ್ಲಾ ವಿದ್ಯಾರ್ಥಿ- ವಿದ್ಯಾರ್ಥಿನಿಯರ ಮೇಲೆ ಅಮಾನುಷ ರೀತಿಯಲ್ಲಿ ಹಲ್ಲೆ ನಡೆದಿದ್ದು, ಇದು ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾಗಿತ್ತು.
ಅಂತಿಮವಾಗಿ ಪೊಲೀಸರು 44 ಮಂದಿಯ ಮೇಲೆ ಆರೋಪ ಪಟ್ಟಿಯನ್ನು ದಾಖಲಿಸಿ ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ದಾಳಿ ಘಟನೆಯನ್ನು ಚಿತ್ರೀಕರಿಸಲು ತೆರಳಿದ್ದ ಇಬ್ಬರು ಮಾಧ್ಯಮದ ವ್ಯಕ್ತಿಗಳ ಹೆಸರನ್ನು ಕೂಡಾ ಅವರು ಪೊಲೀಸರಿಗೆ ಮಾಹಿತಿ ನೀಡಲಿಲ್ಲ ಎಂಬ ಕಾರಣಕ್ಕಾಗಿ ಆರೋಪ ಪಟ್ಟಿಯಲ್ಲಿ ಸೇರಿಸಲಾಗಿತ್ತು.
Click this button or press Ctrl+G to toggle between Kannada and English