ಮಹಿಳೆಯನ್ನು ಮಗುವಿನ ಎದುರೇ ಬರ್ಬರವಾಗಿ ಇರಿದು ಕೊಲೆ

3:19 PM, Saturday, August 3rd, 2013
Share
1 Star2 Stars3 Stars4 Stars5 Stars
(5 rating, 5 votes)
Loading...

jyothiಬೆಂಗಳೂರು: ವೆಂಕಟಾದ್ರಿ ಲೇಔಟ್ ಎರಡನೇ ಅಡ್ಡರಸ್ತೆ  ಮಹಿಳೆಯೊಬ್ಬರನ್ನು ಅವರ ಐದು ವರ್ಷದ ಮಗುವಿನ ಎದುರೇ ಬರ್ಬರವಾಗಿ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಜೆ.ಪಿ.ನಗರ ಸಮೀಪ ಗುರುವಾರ ರಾತ್ರಿ ನಡೆದಿದೆ.

ದುಷ್ಕರ್ಮಿಯೊಬ್ಬ ರಾತ್ರಿ  ಮನೆಗೆ ನುಗ್ಗಿ ಜ್ಯೋತಿಲಕ್ಷ್ಮಿಯ ಕತ್ತು ಮತ್ತು ಹೊಟ್ಟೆಗೆ ಚಾಕುವಿನಿಂದ ಇರಿದಿದ್ದಾನೆ. ಆಗ ಅವರು ಜೀವ    ರಕ್ಷಣೆಗಾಗಿ  ಕೂಗಿಕೊಂಡರು. ಈ ವೇಳೆ ನಡುಮನೆಯಲ್ಲಿ ಟಿ.ವಿ ನೋಡುತ್ತಾ ಕುಳಿತಿದ್ದ ಜಾಗೃತಿ, ತಾಯಿಯ ಚೀರಾಟ ಕೇಳಿ ಕೊಠಡಿಯೊಳಗೆ ಹೋಗಿದ್ದಾಳೆ. ಈ ಸಂದರ್ಭದಲ್ಲಿ ದುಷ್ಕರ್ಮಿ ಆಕೆಯನ್ನು ತಳ್ಳಿ ಪರಾರಿಯಾಗಿದ್ದಾನೆ. ಈ ಸಂಗತಿ ಜಾಗೃತಿಯ ವಿಚಾರಣೆಯಿಂದ ಗೊತ್ತಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವೆಂಕಟಾದ್ರಿ ಲೇಔಟ್ ಎರಡನೇ ಅಡ್ಡರಸ್ತೆ ನಿವಾಸಿ ಜ್ಯೋತಿಲಕ್ಷ್ಮಿ (33) ಕೊಲೆಯಾದವರು. ಪತಿ ಹೇಮಚಂದ್ರ ಅವರಿಂದ ಎರಡು ವರ್ಷಗಳ ಹಿಂದೆ ವಿಚ್ಛೇದನ ಪಡೆದುಕೊಂಡಿದ್ದ ಅವರು ಮಗಳು ಜಾಗೃತಿ ಜತೆ ಪ್ರತ್ಯೇಕವಾಗಿ ವಾಸವಾಗಿದ್ದರು.

ಆರೋಪಿಯು ತಳ್ಳಿದ ರಭಸಕ್ಕೆ ಕೆಳಗೆ ಬಿದ್ದು ಗಾಯಗೊಂಡ ಜಾಗೃತಿ, ಪ್ರಜ್ಞೆ ತಪ್ಪಿದ್ದಾಳೆ. ತೀವ್ರ ರಕ್ತಸ್ರಾವವಾಗಿ ಅಸ್ವಸ್ಥಗೊಂಡ ಜ್ಯೋತಿಲಕ್ಷ್ಮಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಪೋಷಕರು ರಾತ್ರಿ 9.30ರ ಸುಮಾರಿಗೆ ರಾಜಾಜಿನಗರ ಬಳಿಯ ಮರಿಯಪ್ಪನಪಾಳ್ಯದಲ್ಲಿ ವಾಸವಿರುವ ಜ್ಯೋತಿಲಕ್ಷ್ಮಿ ಮೊಬೈಲ್‌ಗೆ ಏಳೆಂಟು ಬಾರಿ ಕರೆ ಮಾಡಿದ್ದಾರೆ. ಆದರೆ, ಅವರು ಕರೆ ಸ್ವೀಕರಿಸಿಲ್ಲ. ಇದರಿಂದ ಅನುಮಾನಗೊಂಡ ಪೋಷಕರು ವೆಂಕಟಾದ್ರಿ ಲೇಔಟ್‌ನಲ್ಲಿರುವ ಸುಶೀಲಮ್ಮ ಎಂಬ ಸಂಬಂಧಿಕರಿಗೆ ಕರೆ ಮಾಡಿ ಮಗಳ ಮನೆಯ ಬಳಿ ಹೋಗಿ ನೋಡುವಂತೆ ತಿಳಿಸಿದ್ದಾರೆ. ಅದೇ ರೀತಿ ಸುಶೀಲಮ್ಮ ಅವರು ಶುಕ್ರವಾರ ಬೆಳಿಗ್ಗೆ ಜ್ಯೋತಿಲಕ್ಷ್ಮಿಯ ಮನೆಗೆ ಹೋದಾಗ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಹುಳಿಮಾವು ಸಮೀಪದ ಖಾಸಗಿ ಶಾಲೆಯಲ್ಲಿ ಜಾಗೃತಿ ಯು.ಕೆ.ಜಿ ಓದುತ್ತಿದ್ದಾಳೆ. ಜ್ಯೋತಿಲಕ್ಷ್ಮಿ, ಮಗಳನ್ನು ಪ್ರತಿನಿತ್ಯ ಬೆಳಿಗ್ಗೆ ಒಂಬತ್ತು ಗಂಟೆಗೆ ಶಾಲಾ ವಾಹನದಲ್ಲಿ ಶಾಲೆಗೆ ಕಳುಹಿಸಿ ಬಳಿಕ ಕೆಲಸಕ್ಕೆ ಹೋಗುತ್ತಿದ್ದರು. ಸಂಜೆ ನಾಲ್ಕು ಗಂಟೆಗೆ ಶಾಲೆಯಿಂದ ವಾಪಸ್ ಬರುತ್ತಿದ್ದ ಜಾಗೃತಿ, ಮನೆಯ ಸಮೀಪದ ಡೇ-ಕೇರ್‌ನಲ್ಲಿ ಇರುತ್ತಿದ್ದಳು. ಜ್ಯೋತಿಲಕ್ಷ್ಮಿ, ಸಂಜೆ ಆರು ಗಂಟೆಗೆ ಕಚೇರಿಯಿಂದ ಹಿಂದಿರುಗಿದ ನಂತರ ಮಗಳನ್ನು ಮನೆಗೆ ಕರೆದುಕೊಂಡು ಬರುತ್ತಿದ್ದರು. ಆದರೆ, ಅವರು ಗುರುವಾರ ಮಗಳನ್ನು ಶಾಲೆಗೆ ಕಳುಹಿಸಿದ ಬಳಿಕ ಕಚೇರಿಗೆ ಹೋಗಿರಲಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

ಎಂಬಿಎ ಪದವೀಧರೆಯಾದ ಜ್ಯೋತಿಲಕ್ಷ್ಮಿ, ಜೆ.ಪಿ.ನಗರ ಐದನೇ ಹಂತದಲ್ಲಿನ ಸಾಫ್ಟ್‌ವೇರ್ ಕಂಪೆನಿಯೊಂದರ ಮಾನವ ಸಂಪನ್ಮೂಲ ವಿಭಾಗದಲ್ಲಿ ಉದ್ಯೋಗಿಯಾಗಿದ್ದರು. ಅವರಿಂದ ವಿಚ್ಛೇದನ ಪಡೆದುಕೊಂಡ ಬಳಿಕ ಹೇಮಚಂದ್ರ ಅವರು ಮತ್ತೊಂದು ಮದುವೆಯಾಗಿ ಜೆ.ಪಿ.ನಗರ ಬಳಿಯ ಆರ್‌ಬಿಐ ಲೇಔಟ್‌ನಲ್ಲಿ ಎರಡನೇ ಪತ್ನಿಯೊಂದಿಗೆ ಪ್ರತ್ಯೇಕವಾಗಿ ವಾಸವಾಗಿದ್ದಾರೆ.

`ವಿಚ್ಛೇದನದ ನಂತರ ಜ್ಯೋತಿಲಕ್ಷ್ಮಿಗೂ ಮತ್ತು ನನಗೂ ಯಾವುದೇ ಸಂಪರ್ಕವಿರಲಿಲ್ಲ. ಘಟನೆ ಬಗ್ಗೆ ನನಗೆ ಏನೂ ಗೊತ್ತಿಲ್ಲ’ ಎಂದು ಹೇಮಚಂದ್ರ ಸುದ್ದಿಗಾರರಿಗೆ ತಿಳಿಸಿದರು.

`ಮಗಳ ಮೊಬೈಲ್‌ಗೆ ರಾತ್ರಿ ಹಲವು ಬಾರಿ ಮಾಡಿದರೂ ಆಕೆ ಕರೆ ಸ್ವೀಕರಿಸಲಿಲ್ಲ. ಅವಳನ್ನು ಯಾರು ಕೊಲೆ ಮಾಡಿದರು ಮತ್ತು ಕೊಲೆಗೆ ಕಾರಣವೇನು ಎಂಬುದು ಗೊತ್ತಿಲ್ಲ. ಮಗಳು ವಾರಾಂತ್ಯದಲ್ಲಿ ಮಗುವಿನ ಜತೆ ಮನೆಗೆ ಬರುತ್ತಿದ್ದಳು’ ಎಂದು ಮೃತರ ತಂದೆ ನರಸಯ್ಯ ಹೇಳಿದರು. ಜೆ.ಪಿ.ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.

`

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English