ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯ ಮಹಾಕಾಳಿ ಪಡ್ಪು ಹಾಗೂ ಪಡೀಲ್ ಬಜಾಲ್ ಬಳಿಯ ರೈಲ್ವೇ ಕೆಳ ಸೇತುವೆಗಳ ಕಾರ್ಯ ವಿಳಂಬಗೊಳ್ಳಲು ಮಹಾನಗರಪಾಲಿಕೆಯ ಆಡಳಿತ ಕಾರಣ ಎಂದು ರೈಲ್ವೆ ಪಾಳ್ಗಾಡ್ ವಿಭಾಗದ ಮ್ಯಾನೇಜರ್ ಶ್ರೀ ಎಸ್. ಕೆ ರೈನಾ ಈ ವಿಷಯವನ್ನು ಸ್ಪಷ್ಟಪಡಿಸಿದ್ದು, ಈ ಸಂದರ್ಭದಲ್ಲಿ ಮಹಾಕಾಳಿ ಪಡ್ಪು ಬಳಿಯ ಕೆಳ ಸೇತುವೆ ನಿರ್ಮಾಣಕ್ಕೆ ಸಂಪೂರ್ಣ ವೆಚ್ಚವನ್ನು ನಗರ ಪಾಲಿಕೆಯು ಭರಿಸಬೇಕೆಂದು ಈ ಬಗ್ಗೆ ಅನೇಕ ವರ್ಷಗಳಿಂದ ಈ ಪ್ರದೇಶದ ಜನರ ಬೇಡಿಕೆಗಳಿದ್ದರೂ, ಈ ನಗರ ಪಾಲಿಕೆ ಯಾವುದೇ ನಿರ್ಧಿಷ್ಟ ಯೋಜನೆಯನ್ನು ಕೈಗೊಳ್ಳದೆ, ಈ ಬಗ್ಗೆ ಹಣವನ್ನು ಬಿಡುಗಡೆ ಮಾಡದೇ ಸುಮ್ಮನೆ ಕುಳಿತಿರುವುದು ಮತ್ತು ಕಳೆದ 15 ವರ್ಷಗಳಿಂದ ಬಿಜೆಪಿ ಪಕ್ಷದ ಲೋಕಸಭಾ ಸದಸ್ಯರು ಮತ್ತು ಶಾಸಕರು ಇವತ್ತು ಆಗುತ್ತದೆ, ನಾಳೆ ಆಗುತ್ತದೆ ಎಂದು ಜನರಿಗೆ ಭರವಸೆ ನೀಡಿಕೊಂಡು, ಜನರನ್ನು ಮೋಸ ಮಾಡುವ ಬಗ್ಗೆ ಸ್ಪಷ್ಟವಾದ ಉತ್ತರ ಲಭಿಸಿದೆ. ಎಂದು ಕಾಂಗ್ರೇಸ್ ಮುಖಂಡ ಐವನ್ ಡಿ’ಸೋಜ ಕಾಂಗ್ರೇಸ್ ಕಛೇರಿಯಲ್ಲಿ ಶುಕ್ರವಾರ ಸಂಜೆ ಕರೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಈ ಬಗ್ಗೆ ಕೂಡಲೇ ಅಧಿಕಾರಿಗಳ ಸಭೆ ಕರೆದು, 15 ದಿವಸದೊಳಗೆ ಸ್ಪಷ್ಟವಾದ ಯೋಜನೆಯನ್ನು ಪ್ರಕಟಿಸದೇ ಇದ್ದಲ್ಲಿ ರಸ್ತೆ ಬಂದ್ ಜೊತೆಗೆ ಲೋಕಸಭಾ ಶಾಸಕರು ಮತ್ತು ಮೇಯರುಗಳ ಮನೆಯ ಮುಂದೆ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗುವುದು ಎಂದು ಅವರು ಹೇಳಿದರು.
ಪಡೀಲ್ ಬಜಾಲ್ ಕೆಳಸೇತುವೆ ಪ್ರದೇಶದಲ್ಲಿ ಅನೇಕ ವರ್ಷಗಳಿಂದ ಜನರು ಪ್ರತಿಭಟನೆ ನಡೆಸುತ್ತಿದ್ದರೂ ಈ ವರೆಗೆ ಯಾವುದೇ ಕ್ರಮವನ್ನು ಕೈಗೊಳ್ಳಲಿಲ್ಲ. ರಾಜ್ಯ ಮತ್ತು ನಗರಪಾಲಿಕೆಯ ಆಡಳಿತವು ಜನರಿಗೆ ಸೌಕರ್ಯಗಳನ್ನು ದೊರಕಿಸಿಕೊಡುವಲ್ಲಿ ಸಂಪೂರ್ಣವಾಗಿ ವಿಫಲವಾಗಿದ್ದು, ರಸ್ತೆ, ನೀರು ಮತ್ತು ವಿದ್ಯುತ್ತ್ ನ್ನು ನೀಡದೇ ಜನರಿಗೆ ಮೋಸಗೊಳಿಸಿದೆ. ನಗರ ಪಾಲಿಕೆಯ ಜನರಿಗೆ ಕೇವಲ ಸ್ವಯಂ ಘೋಷಿತ ಆಸ್ತಿ, ತೆರಿಗೆ ಜಾರಿಗೆ ತಂದು, ತೆರಿಗೆಯನ್ನು ಕಟ್ಟಿ ಎಂದು ಜನರ ಮೇಲೆ ತೆರಿಗೆ ಹೊರೆಯನ್ನು ಹಾಕಿದರೇ ಹೊರತು, ಯಾವುದೇ ರಸ್ತೆಯನ್ನು ದುರಸ್ತಿ ಪಡಿಸಲಿಲ್ಲ ಎಂದು ಆರೋಪಿಸಿದರು.
ನಗರದ ಹೃದಯ ಭಾಗದಿಂದ ಜಿಲ್ಲೆಯ ಉದ್ದಗಲಕ್ಕೂ ರಸ್ತೆಗಳ ನಿರ್ಮಾಣವು ಸಂಪೂರ್ಣವಾಗಿ ನಿರ್ಲಕ್ಷಿಸಿ, ಜನರನ್ನು ಮೋಸಮಾಡುವ ತಂತ್ರವನ್ನು ಅನುಸರಿಸುವುದುದನ್ನು ವಿರೋಧಿಸಿ, ಹಿಂದಿನ ದಿನದಲ್ಲಿ ಜಿಲ್ಲಾದ್ಯಂತ ಬಂದ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು ಎಂದು ಶ್ರೀ ಐವನ್ ಡಿ ಸೋಜಾರವರು ಘೋಷಿಸಿದರು. ಮುಂದಿನ ಜಿ.ಪಂ ಮತ್ತು ತಾ.ಪಂ ಚುನಾವಣೆಯಲ್ಲಿ ಈ ಬಗ್ಗೆ ಮತದಾರರು ಸರಿಯಾದ ಪಾಠವನ್ನು ಬಿಜೆಪಿ ಪಕ್ಷಕ್ಕೆ ಕಲಿಸಲಿದ್ದು, ಅಭಿವೃದ್ಧಿಯನ್ನು ಮರೆತು, ಕೇವಲ ಅಧಿಕಾರಕ್ಕಾಗಿ ಹೋರಾಟ ನಡೆಸುತ್ತಿರುವ ಬಿಜೆಪಿಯ ನಿಜ ಬಣ್ಣ ಬಯಲು ಮಾಡಲು ಕಾಂಗ್ರೆಸ್ ಪಕ್ಷವು ಕಾರ್ಯಕ್ರಮವನ್ನು ಕೈಗೊಳ್ಳುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೇಸ್ ಮುಖಂಡರಾದ ಸದಾಶಿವ ಉಳ್ಳಾಲ್, ಟಿ.ಕೆ. ಸುಧೀರ್, ಪ್ರವೀಣ್ ಆಳ್ವಾ, ಉಮೇಶ್ ದೇವಾಡಿಗ, ಕಾರ್ಪೋರೇಟರ್ ಅಪ್ಪಿ, ಅಬ್ದುಲ್ ರವೂಫ್ ಮತ್ತಿತರರು ಉಪಸ್ಥಿತರಿದ್ದರು.
Click this button or press Ctrl+G to toggle between Kannada and English