ಮಂಗಳೂರು : ಅಖಿಲ ಭಾರತ ಕಾರ್ಮಿಕ ಸಂಘದ ರಾಜ್ಯ ಘಟಕ ಪ್ರಧಾನ ಕಾರ್‍ಯದರ್ಶಿ ಸುದತ್ತ ಜೈನ್ ಶಿರ್ತಾಡಿ ಅವರ ನೇತೃತ್ವದಲ್ಲಿ ದ.ಕ. ಜಿಲ್ಲೆಯ ಎಲ್ಲ ವ್ಯಾಪ್ತಿಗೆ ಇ.ಎಸ್.ಐ.ಸಿ. ಸೌಲಭ್ಯ ಒದಗಿಸುವಂತೆ ಅಗ್ರಹಿಸಿ ಹಾಗೂ ಕದ್ರಿಯ ಇ.ಎಸ್.ಐ. ಆಸ್ಪತ್ರೆಯನ್ನು ಸಂಪೂರ್ಣ ಕೇಂದ್ರ ಸರಕಾರ ವಹಿಸಿಕೊಳ್ಳುವಂತೆ ನಗರದ ಜಿಲ್ಲಾಧಿಕಾರಿ ಕಚೇರಿಯ ಮುಂಭಾಗದಿಂದ ಪಾದಯಾತ್ರೆಯಲ್ಲಿ ಸಾಗಿ ಕದ್ರಿ ಶಿವಭಾಗ್‌ನ ಇ.ಎಸ್.ಐ. ಆಸ್ಪತ್ರೆ ಎದುರು ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಪ್ರಾರಂಭಿಸಿದರು.
ಉಪವಾಸ ಸತ್ಯಾಗ್ರಹವನ್ನುದ್ದೇಶಿಸಿ ಮಾತನಾಡಿ ಜಿಲ್ಲೆಯಲ್ಲಿ ಇಂದು ಅನೇಕರು ಅಸುರಕ್ಷಿತ ಸ್ಥಳಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಕಾರ್ಮಿಕರಿಗೆ ಇ.ಎಸ್.ಐ.ಸಿ. ಭದ್ರತೆ ಮತ್ತು ಉದ್ಯೋಗ ಭದ್ರತೆ ನೀಡಬೇಕು. ಬೀಡಿ ಕಾರ್ಮಿಕರಿಗೆ ಆಸ್ಪತ್ರೆ ಇಲ್ಲದ ಕಾರಣ ಇ.ಎಸ್.ಐ. ಆಸ್ಪತ್ರೆಯಲ್ಲಿ ಚಿಕಿತ್ಸೆ ಒದಗಿಸಬೇಕು. ಇದಾಗಲೇ 10 ವೈದ್ಯರ ಶಿಫಾರಸ್ಸುಗೊಂಡಿದ್ದರೂ ಆಸ್ಪತ್ರೆಯಲ್ಲಿ ಸೌಲಭ್ಯಗಳ ಕೊರತೆಯ ಕಾರಣ ಒಬ್ಬ ವೈದ್ಯನೂ ಆಸ್ಪತ್ರೆಗೆ ಬಂದಿಲ್ಲ ಎಂದು ಹೇಳಿದರು.
ಕದ್ರಿಯ ಇ.ಎಸ್.ಐ. ಆಸ್ಪತ್ರೆ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದೆ. ದಂತ ಚಿಕಿತ್ಸಾ ವಿಭಾಗದಲ್ಲಿ ಸರಿಯಾದ ವ್ಯವಸ್ಥೆ ಇಲ್ಲದೇ ಪರದಾಡುವ ಸ್ಥಿತಿ ಇಲ್ಲಿಯ ರೋಗಿಗಳಿಗೆ ಬಂದಿದೆ. ಆಂಬುಲೆನ್ಸ್ ಇದ್ದರೂ ಚಾಲಕರಿಲ್ಲದ ದುಃಸ್ಥಿತಿ ಇದೆ. ಇ.ಎಸ್.ಐ. ಆಸ್ಪತ್ರೆ ಹಾಗೂ ಖಾಸಗಿ ಆಸ್ಪತ್ರೆಗಳೊಂದಿಗೆ ಒಡಂಬಡಿಕೆಯಿದ್ದು, ಇದರ ಬದಲು ಕೇಂದ್ರ ಸರಕಾರವೇ ಸಂಪೂರ್ಣ ವಹಿಸಿಕೊಂಡು ಆಸ್ಪತ್ರೆಯನ್ನು ಸುಧಾರಿಸಿ ಕಾರ್ಮಿಕರ ಹಿತ ಕಾಯಬೇಕು ಎಂದರು.
ಪಾದಯಾತ್ರೆಯಲ್ಲಿ ಉಳ್ಳಾಲ ವಲಯಾಧ್ಯಕ್ಷ ಎಚ್. ಇಸ್ಮಾಯಿಲ್ ಶಾಫಿ ಬಬ್ಬುಕಟ್ಟೆ, ನಗರಾಧ್ಯಕ್ಷ ರಿತೇಶ್ ಕಾರ್ಕಳ, ಗಂಜಿಮಠ ವಲಯಾಧ್ಯಕ್ಷ ಗೋಪಾಲ್, ಅಖಿಲ ಭಾರತ ಕಾರ್ಮಿಕ ಸಂಘದ ಜಿಲ್ಲಾ ಪ್ರಧಾನ ಕಾರ್‍ಯದರ್ಶಿ ನವೀನ್‌ಚಂದ್ರ ಕೊಲ್ಯ, ಹರೀಶ್ ಕುಮಾರ್ ಶೆಟ್ಟಿ ಜಕ್ರಿಬೆಟ್ಟು, ಮತ್ತಿತರರು ಉಪಸ್ಥಿತರಿದ್ದರು.
Click this button or press Ctrl+G to toggle between Kannada and English