ಮಂಗಳೂರು : ಕೇಂದ್ರದ ಯುಪಿಎ ಸರಕಾರವು ನಿರಂತರವಾಗಿ ಡೀಸೆಲ್, ಪೆಟ್ರೋಲ್ ಮತ್ತು ಗ್ಯಾಸ್ ಬೆಲೆಗಳನ್ನು ಏರಿಸುವ ಮೂಲಕ ಜನಸಾಮಾನ್ಯರ ದೈನಂದಿನ ಬದುಕಿನ ಜೊತೆ ಚೆಲ್ಲಾಟವಾಡುತ್ತಿರುವ ಜನವಿರೋಧಿ ನೀತಿಯನ್ನು ಖಂಡಿಸಿ ದ.ಕ. ಜಿಲ್ಲಾ ಬಿಜೆಪಿ ಸಮಿತಿ ವತಿಯಿಂದ ಸೋಮವಾರ ಸಂಜೆ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಯಿತು.
ಕೇಂದ್ರದ ಯುಪಿಎ ಸರಕಾರದ ಅಸಮರ್ಪಕವಾದ ಆರ್ಥಿಕ ನೀತಿಗಳಿಂದಾಗಿ ಡಾಲರ್ ಬೆಲೆಯೆದುರು ರೂಪಾಯಿಯ ಮೌಲ್ಯ ನಿರಂತರ ಅಪಮೌಲ್ಯಕ್ಕೀಡಾಗುತ್ತಿದೆ. ಇದರಿಂದಾಗಿ ತೈಲ ಬೆಲೆಗಳು ಏರಿಕೆಯಾಗಿದೆ ಎಂಬ ಸಬೂಬನ್ನು ಹೇಳುವ ಸರಕಾರ ರೂಪಾಯಿಯ ಮೌಲ್ಯ ಕುಸಿತದ ತಡೆಗೆ ಅಗತ್ಯವಾದ ಸುಧಾರಣಾ ಕ್ರಮಗಳನ್ನು ಕೈಗೊಳ್ಳದಿರುವ, ಸ್ವತ: ಆರ್ಥಿಕ ತಜ್ಙರಾದ ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಅನುಭವಿ ಹಣಕಾಸು ಮಂತ್ರಿ ಪಿ.ಚಿದಂಬರಂ ದೇಶದ ಆರ್ಥಿಕ ವ್ಯವಸ್ಥೆಯ ನಿರ್ವಹಣೆಯಲ್ಲಿ ಸಂಪೂರ್ಣವಾಗಿ ವಿಫಲವಾಗಿದ್ದಾರೆ ಎಂದು ಎಂಎಲ್ ಸಿ ಮೊನಪ್ಪ ಭಂಡಾರಿ ಹೇಳಿದರು.
ಕಳೆದ ಎರಡು ತಿಂಗಳಿನಲ್ಲಿ ಯುಪಿಎ ಸರಕಾರ ಪೆಟ್ರೋಲ್ ಬೆಲೆಗಳನ್ನು 6 ಬಾರಿ ಏರಿಸಿದೆ. ಜನವರಿ 17 ರಿಂದ ಪೆಟ್ರೋಲ್ ಬೆಲೆಯನ್ನು 8 ಬಾರಿ ಏರಿಸಿದೆ. ಗ್ಯಾಸ್ ಸಿಲಿಂಡರ್ ಬೆಲೆಯನ್ನು ಕಳೆದ 8 ತಿಂಗಳಿನಿಂದ ಸುಮಾರು 100 ರೂಗಳಷ್ಟು ಏರಿಸಲಾಗಿದೆ. ಪೆಟ್ರೋಲ್ ಮತ್ತು ಡಿಸೇಲ್ ಬೆಲೆ ಏರಿಕೆಯಿಂದಾಗಿ ಮಾರುಕಟ್ಟೆಯಲ್ಲಿ ದಿನನಿತ್ಯದ ವಸ್ತುಗಳು ಗಣನೀಯವಾಗಿ ಏರಿಕೆಯಾಗಿದೆ. ಎಲ್ಲಾ ರೀತಿಯ ಪ್ರಯಾಣ ದರ ಹೆಚ್ಚಳವಾಗಿದೆ. ಹಣದುಬ್ಬರ ಏರಿಕೆಯಾಗುತ್ತಿದೆ. ಇವೆಲ್ಲದರಿಂದ ಮಧ್ಯಮ ವರ್ಗದ ಜನರು ಜೀವನ ನಡೆಸುವುದೇ ಕಷ್ಟವಾಗಿದೆ. ಕೇಂದ್ರದ ತಪ್ಪು ಆರ್ಥಿಕ ನೀತಿಗಳ ಪರಿಣಾಮವನ್ನು ಬಳಕೆದಾರರಿಗೆ ನೇರ ಕಡಿವಾಣ ಹಾಕುವ ಮೂಲಕ ನಿಯಂತ್ರಿಸಲು ಕೇಂದ್ರ ಸರಕಾರ ಮುಂದಾಗದಿರುವುದು ಖಂಡನೀಯ ಎಂದು ಹೇಳಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಪ್ರತಾಪ ಸಿಂಹ ನಾಯಕ ಮಾತನಾಡಿ ಬಹುಕೋಟಿ ಹಗರಣ, ಭ್ರಷ್ಟಾಚಾರಗಳಂತಹ ರಾಷ್ಟ್ರವಿರೋಧಿ ನೀತಿಗಳಲ್ಲಿ ಮುಳುಗಿರುವ ಕೇಂದ್ರದ ನಾಯಕರು ಜನಸಾಮಾನ್ಯರ ಈ ಭವಣೆಯನ್ನು ಅರಿಯುವಲ್ಲಿ ಸಂಪೂರ್ಣವಾಗಿ ವಿಫಲವಾಗಿದ್ದಾರೆ. ಜನಸಾಮಾನ್ಯರ ಹಿತಕಾಯದ ಆಡಳಿತ, ಜನರ ಬದುಕನ್ನು ಬರ್ಭರಗೊಳಿಸುತ್ತಿರುವುದರ ಜೊತೆಗೆ ದೇಶವನ್ನು ಸಂಕಷ್ಟಕ್ಕರ ತಳ್ಳುತ್ತಿದೆ. ದೇಶದ ಆರ್ಥಿಕ ವ್ಯವಸ್ಥೆಯ ನಿರ್ವಹಣೆಯಲ್ಲಿ ವಿಫಲವಾದ ಕೇಂದ್ರದ ಯುಪಿಎ ಸರಕಾರ ಅಧಿಕಾರದಲ್ಲಿರಲು ಅನರ್ಹವಾಗಿದೆ ಎಂದರು.
ಕೂಡಲೇ ಕೇಂದ್ರ ಸರಕಾರ ಬೆಲೆಯನ್ನು ಮತ್ತು ಹಣದುಬ್ಬರ ತಡೆಗಟ್ಟಲು ಅಗತ್ಯ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು. ಡೀಸೆಲ್, ಪೆಟ್ರೋಲ್ ಮತ್ತು ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆ ನಿರ್ಧರವನ್ನು ಕೂಡಲೇ ಹಿಂತೆಗೆದುಕೊಳ್ಳಬೇಕು, ತಪ್ಪಿದ್ದಲ್ಲಿ ಕೇಂದ್ರ ಸರಕಾರವನ್ನು ವಜಾಗೊಳಿಸಬೇಕೆಂದು ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಆಗ್ರಹಿಸುತ್ತೆವೆ ಎಂದು ಸುಲೋಚನಾ ಭಟ್ ಹೇಳಿದರು.
ಈ ಪ್ರತಿಭಟನೆಯಲ್ಲಿ ಬಿಜೆಪಿ ಜಿಲ್ಲಾಧ್ಯಾಕ್ಷ ಪ್ರತಾಪ್ಸಿಂಹ ನಾಯಕ, ಪದ್ಮನಾಭ ಕೊಟ್ಟಾರಿ, ಸುಧಿರ್ ಶೆಟ್ಟಿ ಕಣ್ಣೂರು ಮತ್ತಿತರು ಉಪಸ್ಥಿತರಿದ್ದರು.
Click this button or press Ctrl+G to toggle between Kannada and English