ವಾಜಪೇಯಿ ಆರೋಗ್ಯ ಶ್ರೀ ಯೋಜನೆ ಅತ್ಯಂತ ಪ್ರಮುಖವಾದುದುಃ ಯು.ಟಿ.ಖಾದರ್
3:24 PM, Friday, September 13th, 2013
Loading...
ಮಂಗಳೂರು : ವಾಜಪೇಯಿ ಆರೋಗ್ಯ ಶ್ರೀ ಯೋಜನೆ ಅತ್ಯಂತ ಪ್ರಮುಖವಾದ ಹಾಗೂ ಮಹತ್ವದ ಯೋಜನೆಗಳಲ್ಲಿ ಒಂದಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್ ಶುಕ್ರವಾರ ನಗರದ ಐ.ಎಂ.ಎ ಸಭಾಭವನದಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದರು.
ರಾಜ್ಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಡಿಯಲ್ಲಿ ಸಾರ್ವಜನಿಕ ಆರೋಗ್ಯ ಸೇವೆಗಾಗಿ ಹಲವಾರು ಯೋಜನೆಗಳನ್ನು ಅನುಷ್ಟಾನಗೊಳಿಸಲಾಗುತ್ತಿದೆ, ಈ ಯೋಜನೆಯ ಮುಖ್ಯ ಉದ್ದೇಶವೆಂದರೆ ದುಬಾರಿ ವೆಚ್ಚದ ಮಾರಣಾಂತಿಕ ಕಾಯಿಲೆಗಳಾದ ಹೃದ್ರೋಗ, ಕ್ಯಾನ್ಸರ್, ನರರೋಗ ಮೂತ್ರಪಿಂಡದ ಕಾಯಿಲೆ ಮುಂತಾದ ಗಂಭೀರ ಸ್ವರೂಪದ ಆಘಾತಕಾರಿ ಕಾಯಿಲೆಗಳಿಂದ ನರಳುವ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳ ಜನರಿಗೆ ಅತ್ಯುತ್ತಮ ದರ್ಜೆಯ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳಲ್ಲಿ ಉಚಿತ ಶಸ್ತ್ರ ಚಿಕಿತ್ಸೆ ಮತ್ತು ಆರೈಕೆಯ ಸೌಲಭ್ಯ ದೊರಕಿಸಿಕೊಡುವುದು ಎಂದರು.
ಈ ಯೋಜನೆಯು ಪ್ರತಿ ಬಿಪಿಎಲ್ ಕುಟುಂಬದ ೫ಮಂದಿ ಸದಸ್ಯರಿಗೆ ದೊರೆಯುತ್ತದೆ. ಒಂದು ವರ್ಷಕ್ಕೆ ರೂ.1.50ಲಕ್ಷ ಮೌಲ್ಯದ ಚಿಕಿತ್ಸಾ ಸೌಲಭ್ಯ ದೊರೆಯುತ್ತದೆ. ಇದಕ್ಕಿಂತ ಹೆಚ್ಚಿನ ಮೊತ್ತ ಅವಶ್ಯವಿದ್ದಲ್ಲಿ ಹೆಚ್ಚುವರಿ ಮೊತ್ತ ರೂಪಾಯಿ 50000 ಮೌಲ್ಯದ ಚಿಕಿತ್ಸಾ ಸೌಲಭ್ಯವನ್ನು ನೀಡಲಾಗುವುದು. ಮುಂದಿನ ದಿನಗಳಲ್ಲಿ ಈ ಯೋಜನೆಯನ್ನು ಎ.ಪಿ.ಎಲ್ ಕಾರ್ಡುದಾರರಿಗೆ ವಿಸ್ತರಿಸಲಾಗುವುದು.ರೋಗಗಳಿಗೆ ಸಂಬಂಧಿಸಿದಂತೆ 447 ಬಗೆಯ ಚಿಕಿತ್ಸೆಗಳನ್ನು ಮತ್ತು 50 ಬಗೆಯ ಅನುಸರಣಾ ಚಿಕಿತ್ಸೆಯನ್ನು ವಾಜಪೇಯಿ ಆರೋಗ್ಯಶ್ರೀ ಯೋಜನೆಯಡಿಯಲ್ಲಿ ನೀಡಲಾಗುವುದು ಎಂದು ತಿಳಿಸಿದರು.
ಗಂಭೀರ ಸ್ವರೂಪದ ಖಾಯಿಲೆಗಳಿಗೆ ಚಿಕಿತ್ಸೆ ಒದಗಿಸಲು ಸ್ಪೆಷಾಲಿಟಿ ಆಸ್ಪತ್ರೆಗಳ ಒಂದು ಜಾಲವನ್ನು ರಚಿಸಲಾಗಿದೆ. ಈ ಯೋಜನೆಗೆ ನಗರದ 10 ಖಾಸಾಗಿ ಆಸ್ಪತ್ರೆಗಳು ನೊಂದಾಯಿಸಿದ್ದು, ರೋಗ ಪತ್ತೆ ಪರೀಕ್ಷೆಗಳಿಂದ ಹಿಡಿದು ಶಸ್ತ್ರ ಚಿಕಿತ್ಸೆಯು ಸೇರಿದಂತೆ ಎಲ್ಲಾ ಸೌಲಭ್ಯಗಳನ್ನು ನಗದುರಹಿತವಾಗಿ ನೀಡಲಾಗುವುದು. ಯೋಜನೆಯ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ಒದಗಿಸಲು ಪ್ರತಿ ಆಸ್ಪತ್ರೆಯಲ್ಲಿ ಆರೋಗ್ಯ ಮಿತ್ರ ಎಂಬ ಕೌಂಟರನ್ನು ತೆರೆಯಲಾಗುವುದು ಎಂದರು.
ರಕ್ತದ ಕೊರತೆಯನ್ನು ನೀಗಿಸಲು ನೆರೆಹೊರೆ ಸ್ಥಳಗಳಿಂದ ರಕ್ತವನ್ನು ವರ್ಗಾಯಿಸುವ ಯೋಜನೆಯನ್ನು ಮುಂದಿನ ದಿನಗಳಲ್ಲಿ ಪ್ರಾರಂಭಿಸಲಾಗುವುದು ಎಂದು ಯು.ಟಿ.ಖಾದರ್ ತಿಳಿಸಿದರು.
ಪತ್ರಿಕಾಗೋಷ್ಟಿಯಲ್ಲಿ ಕಾರ್ಯಕಾರಿ ನಿರ್ದೇಶಕರಾದ ಡಾ.ಪಿ.ಬೋರೇಗೌಡ, ಡಾ.ರಮೇಶ್ ಉಪಸ್ಥಿತರಿದ್ದರು.